ನಿಮ್ಮ ಪರಿಸರದ ಸೃಷ್ಟಿಕರ್ತ ನೀವೇ…
ಅನುಭವ ಮತ್ತು ಆಲೋಚನೆಯ ತೀವ್ರತೆಗೆ ಅನುಗುಣವಾಗಿ ಮೆದುಳಿನ ಉಷ್ಣತೆಯು ಹೆಚ್ಚಾಗುತ್ತದೆ ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ. ಮೆದುಳಿನಲ್ಲಿ ಒಮ್ಮೆ ಬಿಡುಗಡೆಯಾದ ಕಂಪನಶಕ್ತಿಯು ಅಥವಾ ಯೋಚನಾ ತರಂಗಗಳು ಇತರ ತಿಳಿದಿರುವ ಶಕ್ತಿಯ ರೂಪಗಳ (ಬೆಳಕು, ಶಾಖ, ಕಾಂತೀಯತೆ, ವಿಕಿರಣಶೀಲತೆ ಇತ್ಯಾದಿ) ಹೊರಹೊಮ್ಮುವಿಕೆಯ ರೀತಿಯಲ್ಲಿಯೇ ಮೆದುಳಿನಿಂದ ಹೊರಹೊಮ್ಮಬೇಕು. ವಿದ್ಯುತ್ತು ಮತ್ತು ಅಯಸ್ಕಾಂತೀಯ ಶಕ್ತಿಯ ಅಭಿವ್ಯಕ್ತಿಯಂತೆಯೇ ಯೋಚನಾಶಕ್ತಿಯ ಕಂಪನಗಳೂ ಮೆದುಳಿನಿಂದ ಹೊರಕ್ಕೆ ಅಭಿವ್ಯಕ್ತಗೊಳ್ಳುತ್ತವೆ.
ವ್ಯಕ್ತಿಯ ಮನಸ್ಸಿನಲ್ಲಿ ಅಥವಾ ಮೆದುಳಿನಲ್ಲಿ ಒಂದು ಆಲೋಚನೆ ಅಥವಾ ಭಾವನೆಯು ಉತ್ಪತ್ತಿಯಾದಾಗ, ಉತ್ಪತ್ತಿಯಾಗುವ ಕಂಪನಶಕ್ತಿಯು ವ್ಯಕ್ತಿಯ ಮೆದುಳಿನಿಂದ ಮಾನಸಿಕ ಅಲೆಗಳ ರೂಪದಲ್ಲಿ ಹೊರಹರಿಯುತ್ತದೆ. ಇದು ಆ ವ್ಯಕ್ತಿಯ ಯೋಚನಾ ವಿಧಾನ, ಆಳ ಮತ್ತು ತೀವ್ರತೆಗೆ ಅನುಗುಣವಾಗಿ ಉತ್ಪತ್ತಿಯಾಗುವ ಕಂಪನಗಳು ತನ್ನಿಂದ ತಕ್ಷಣದ ಪರಿಸರಕ್ಕೆ ಬಿಡುಗಡೆಯಾಗುತ್ತದೆ ಮತ್ತು ಈ ಪರಿಸರದೊಳಗೆ ಬರುವ ಇತರ ವ್ಯಕ್ತಿಗಳ ಮನಸ್ಸಿನಲ್ಲಿಯೂ ಇದೇ ರೀತಿಯ ಕಂಪನಗಳನ್ನು ಜಾಗೃತಗೊಳಿಸುವ ಗುಣವನ್ನು ಹೊಂದಿರುತ್ತದೆ. ಅಂದರೆ; ಪರೋಕ್ಷವಾಗಿ ಇತರರ ಆಲೋಚನೆಗಳ ಮೇಲೂ ಪ್ರಭಾವ ಬೀರುತ್ತದೆ! ಮಾನಸಿಕ ಅಲೆಗಳು ವಿವಿಧ ರೂಪಗಳಲ್ಲಿ ಮತ್ತು ಹಂತಗಳಲ್ಲಿ ಪ್ರಕಟಗೊಳ್ಳುತ್ತವೆ. ಕೆಲವೊಂದು ಬಾರಿ ಚಿಂತಕನ ಮನಸ್ಸಿನಿಂದ ಅವರಿಗೆ ಅರಿವಿಲ್ಲದೆ ಮತ್ತು ನಿರ್ದಿಷ್ಟ ಉದ್ದೇಶವಿಲ್ಲದೆ; ಸಾಮಾನ್ಯವಾಗಿ ಹೆಚ್ಚು ಬಲವಿಲ್ಲದೆ ಹೊರಹೊಮ್ಮುವ ಅಲೆಗಳಾಗಿರುತ್ತವೆ. ಇನ್ನು ಕೆಲವೊಂದು ಸಂದರ್ಭಗಳಲ್ಲಿ ನಿರ್ದಿಷ್ಟ ವ್ಯಕ್ತಿ ಅಥವಾ ಪರಿಸರವನ್ನು ಗುರಿಯಾಗಿರಿಸಿಕೊಂಡು ಹೆಚ್ಚಿನ ತೀವ್ರತೆ, ಶಕ್ತಿಯಿಂದ ದೂರದ ಪ್ರದೇಶಕ್ಕೆ ನಿರ್ದೇಶಿಸಲ್ಪಟ್ಟಿದ್ದರೆ ಅದು ನೇರವಾಗಿ ಹಾಗೂ ವೇಗವಾಗಿ ಆ ಗುರಿಯನ್ನು ತಲುಪುತ್ತದೆ. ಗುರಿ ತಲುಪಿದ ಯೋಚನಾ ತರಂಗಗಳು ಬೀರಬಹುದಾದ ಪ್ರಭಾವ ಅವುಗಳನ್ನು ನಿರ್ದೇಶಿಸಿದ ವ್ಯಕ್ತಿಯ ಚಿಂತನೆಯ ತೀವ್ರತೆ ಹಾಗೂ ಉದ್ದೇಶಗಳನ್ನು ಅವಲಂಬಿಸಿರುತ್ತದೆ.
ಒಂದು ಬಾರಿ ಬಿಡುಗಡೆಗೊಳಿಸಲ್ಪಟ್ಟ ಯೋಚನಾ ತರಂಗಗಳು ಗುರಿ ಪಲುಪಿದ ನಂತರದಲ್ಲಿ ಅದೇ ಪರಿಸರದಲ್ಲಿ ಬಹಳ ಸಮಯದವರೆಗೆ ಅಸ್ತಿತ್ವದಲ್ಲಿರುತ್ತವೆ. ಒಲೆಯ ಬೆಂಕಿ ಆರಿದ ನಂತರವೂ ಶಾಖವಿರುವಂತೆ; ಹೂವನ್ನು ತೆರವುಗೊಳಿಸಿದ ನಂತರವೂ ಇರುವ ಹೂವಿನ ಸುಗಂಧದಂತೆ; ನಕ್ಷತ್ರದ ಪತನದ ಶತಮಾನಗಳ ನಂತರವೂ ಅದರ ಬೆಳಕು ಬಾಹ್ಯಾಕಾಶದಲ್ಲಿ ಲಕ್ಷಾಂತರ ಮೈಲುಗಳಷ್ಟು ದೂರ ಮತ್ತು ದೀರ್ಘಾವಧಿಯಲ್ಲಿ ಸಂಚರಿಸುವಂತೆ ಯೋಚನಾ ತರಂಗಗಳು ಪರಿಸರದಲ್ಲಿ ತಮ್ಮ ಅಸ್ತಿತ್ವವನ್ನು ಕಾಯ್ದುಕೊಳ್ಳುತ್ತವೆ. ದೇಹದಾಚೆಗೆ ಹಾದುಹೋದ ಮತ್ತು ಬಹುಕಾಲದಿಂದಲೂ ಮನಸ್ಸುಗಳ ಆಲೋಚನಾ ಕಂಪನಗಳಿಂದ ತುಂಬಿದ ಅನೇಕ ಸ್ಥಳಗಳು ಈ ಭೂಮಿ ಮೇಲಿವೆ. ಅನೇಕ ಸ್ಥಳಗಳು ಬಹಳ ಹಿಂದಿನಿಂದಲೂ ದುರಂತಗಳ ಸರಣಿಯನ್ನು ಕಂಡಿದ್ದು ಆ ಸ್ಥಳಗಳು ಸಹಜವಾಗಿಯೇ ಋಣಾತ್ಮಕ ಕಂಪನಗಳಿಂದ ಪ್ರಭಾವಿತವಾಗಿರುತ್ತವೆ. ಪ್ರತಿಯೊಂದು ಸ್ಥಳವೂ ತನ್ನದೇ ಆದ ಮಾನಸಿಕ ವಾತಾವರಣವನ್ನು ಹೊಂದಿರುವಲ್ಲಿ ಈ ಯೋಚನಾ ತರಂಗಗಳ ಪಾತ್ರ ಹಿರಿದಾಗಿರುತ್ತದೆ ಮತ್ತು ಅಲ್ಲಿ ವಾಸಿಸುತ್ತಿರುವ ಅಥವಾ ಈ ಹಿಂದೆ ವಾಸಿಸಿದ್ದ ಜನಸಮೂಹದ ಚಿಂತನಾ ವಿಧಾನಗಳು ಆಯಾ ಸ್ಥಳದ ಅಥವಾ ನಗರದ ವಾತಾವರಣವನ್ನು ನಿರ್ಧರಿಸಿರುತ್ತವೆ! ಕೆಲವೊಂದು ಪ್ರದೇಶಗಳು ಉತ್ಸಾಹಭರಿತ ಜನಸಮುದಾಯದಿಂದ ಕೂಡಿದ್ದರೆ; ಇನ್ನು ಕೆಲವು ಮಂದ, ಪ್ರಗತಿಪರ, ಉತ್ಸಾಹಹೀನ, ನೈತಿಕ ಅಥವಾ ಅನೈತಿಕ, ಹಿಂಸಾಪ್ರವೃತ್ತಿಯ-ಹೀಗೆ ತರಹೇವಾರಿ ಪ್ರಭಾವಗಳಿಗೆ ಸಾಕ್ಷಿಯಾಗಿರುತ್ತವೆ. ಇಂತಹ ಪ್ರಭಾವಿತ ಪ್ರದೇಶಗಳಲ್ಲಿ ವಾಸಿಸುವ ಅಥವಾ ಹೊಸದಾಗಿ ಆ ಪ್ರದೇಶಕ್ಕೆ ಆಗಮಿಸುವ ಮಂದಿಗೆ ಇದರ ಪ್ರಭಾವಗಳು ಅನುಭವಕ್ಕೆ ಬರುತ್ತವೆ. ಹೊಸದಾಗಿ ಬಂದ ವ್ಯಕ್ತಿಯು ಮಾನಸಿಕವಾಗಿ ದುರ್ಬಲನಾಗಿದ್ದು ಅಥವಾ ಜೀವನದಲ್ಲಿ ಆಶಾಭಾವನೆಯನ್ನು ಕಳಕೊಂಡಿದ್ದರೆ ಅಂತಹ ವ್ಯಕ್ತಿ ಸದಾ ಉತ್ಸಾಹಭರಿತವಾಗಿರುವ ಪ್ರದೇಶದಲ್ಲಿ ವಾಸಿಸಲು ಪ್ರಾರಂಭಿಸಿದಾಗ ಆತನ ಜೀವನದ ದಿಕ್ಕೇ ಬದಲಾಗುವ ಸಂಭಾವ್ಯತೆ ಇರುತ್ತದೆ. ಅದು ವೈಯಕ್ತಿಕ ಜೀವನವಾಗಿರಬಹುದು; ವ್ಯಾವಹಾರಿಕ ಬದುಕಾಗಿರಬಹುದು; ವೃತ್ತಿ ಬದುಕಾಗಿರಬಹುದು ಸದ್ಯೋಭವಿಷ್ಯದಲ್ಲಿ ಗಮನಾರ್ಹ ಬದಲಾವಣೆಯನ್ನು ಗುರುತಿಸಬಹುದು. ಇಂತಹ ಪ್ರದೇಶಗಳಲ್ಲಿನ ಜನರ ಆಲೋಚನಾ ವಿಧಾನಗಳಿಂದ ಹೊರಹೊಮ್ಮುವ ಸಕಾರಾತ್ಮಕ ಮಾನಸಿಕ ಅಲೆಗಳು ಮತ್ತು ಘಟಿಸುವ ದಿನನಿತ್ಯದ ವಿದ್ಯಮಾನಗಳಿಗೆ ನೇರ ಸಂಬಂಧವಿದೆ.
ಇದೇ ರೀತಿಯ ವಿದ್ಯಮಾನಗಳನ್ನು ಮನೆಗಳಲ್ಲೂ ಕಾಣಬಹುದು. ನೀವು ಭೇಟಿ ನೀಡಿದ ಮನೆಗಳಲ್ಲಿನ ವಾತಾವರಣವನ್ನು ಗಮನಿಸಿದ್ದರೆ ನಿಮಗೆ ಈ ವ್ಯಾಖ್ಯಾನದ ಅರಿವಾಗಬಹುದು. ಕೆಲವು ಮನೆಗಳಲ್ಲಿ ಸಾಮರಸ್ಯದ ವಾತಾವರಣದ ಅನುಭವವಾಗಿದ್ದರೆ; ಕೆಲವು ಕಡೆಗಳಲ್ಲಿ ಸಂಘರ್ಷಮಯ ಪರಿಸ್ಥಿತಿ. ಕೆಲವರು ಮಾನಸಿಕ ಅಸಮತೋಲನವನ್ನು ಪ್ರಕಟಪಡಿಸಿದರೆ; ಇನ್ನು ಕೆಲವರು ಮಂಜುಗಡ್ಡೆಯಂತೆ ತಣ್ಣಗಿನ ಮನಃಸ್ಥಿತಿ ಪ್ರಕಟಿಸಿರುತ್ತಾರೆ. ಮನೆಯನ್ನು ಸಂದರ್ಶಿಸಿದ ವ್ಯಕ್ತಿಯ ಮಾನಸಿಕ ಸಮತೋಲನ ಹಾಗೂ ಇಚ್ಛಾಶಕ್ತಿಗೆ ಅನುಗುಣವಾಗಿ ಇಂತಹ ವಿವಿಧ ಅನುಭವಗಳು ಗೋಚರಿಸುತ್ತವೆ. ಪೂಜಾಸ್ಥಳಗಳಿಂದ ಆವೃತವಾಗಿರುವ, ಸಸ್ಯಶ್ಯಾಮಲೆಯಾದ, ಸಂಗೀತ, ಉಪನ್ಯಾಸವೇ ಮುಂತಾದ ಸಾತ್ವಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರುವ, ಶಿಕ್ಷಣ ಸಂಸ್ಥೆಗಳಿಂದ ತುಂಬಿರುವ ಪ್ರದೇಶಗಳು ಸಹಜವಾಗಿಯೇ ಅತ್ಯುನ್ನತಮಟ್ಟದ ಧನಾತ್ಮಕ ಕಂಪನಗಳಿಂದ ತುಂಬಿದ್ದು ವ್ಯಕ್ತಿಯ ಪ್ರಭಾವಳಿಯನ್ನು ಇನ್ನಷ್ಟು ಎತ್ತರಕ್ಕೆ ಎತ್ತರಿಸಲು ಸಹಕರಿಸುತ್ತದೆ. ಪ್ರಕೃತಿಯ ಈ ರಹಸ್ಯವನ್ನು ಅರಿತುಕೊಂಡವನಿಗೆ ತನ್ನನ್ನು ತಾನು ಸಂರಕ್ಷಿಸಿಕೊಳ್ಳಲು, ಸಾಧನೆಯ ಶಿಖರವನ್ನು ತಲುಪಲು ಶಕ್ತನಾಗುತ್ತಾನೆ. ಅದೇ ಇದಕ್ಕೆ ತದ್ವಿರುದ್ಧವಾದ ವಾತಾವರಣವನ್ನು ಹೊಂದಿರುವ ಪ್ರದೇಶಗಳಲ್ಲಿ ಸಮುದಾಯದ ಅಥವಾ ಗುಂಪಿನ ಮುಖ್ಯ ಸದಸ್ಯರುಗಳ ನಡುವಿನ ಮುನಿಸು, ಮನಸ್ತಾಪ, ಜಗಳಗಳು ಉಳಿದವರಲ್ಲಿ ಒಂದು ಬಗೆಯ ಚಡಪಡಿಕೆ, ಅಸ್ಥಿರತೆ ಹುಟ್ಟುಹಾಕುತ್ತವೆ. ಅವರವರ ನಡುವಿನ ಸಂಬಂಧದಲ್ಲಿ ಏರುಪೇರಾಗಿ ಗುಂಪಿನೊಳಗೆ ಒಂದು ವಿಚಿತ್ರ ಸಂಚಲನೆಗೆ ನಾಂದಿ ಹಾಡುತ್ತದೆ. ನಿರಂತರವಾಗಿ ತಮ್ಮೊಳಗೇ ಕಚ್ಚಾಡುತ್ತಾ, ವೈರತ್ವ ಸಾಗಿಸುವ ಜನಾಂಗಗಳು ನಾಮಾವಶೇಷವಾಗಿವೆ. ಇದು ಚಾರಿತ್ರಿಕ ಸತ್ಯ.
ಮನುಷ್ಯನು ತಾನು ಏನು ಯೋಚಿಸುತ್ತೇನೆ ಎಂಬುದನ್ನು ಅರಿತಿರಬೇಕು. ಏಕೆಂದರೆ; ಆತನ ಯೋಚನೆಗಳೇ ಆತನನ್ನು ನಿರ್ಮಿಸುತ್ತಿರುತ್ತವೆ! ಪ್ರಕಾಶಮಾನವಾದ, ಹರ್ಷಚಿತ್ತದಿಂದ, ಸಂತೋಷದಿಂದ, ಆತ್ಮವಿಶ್ವಾಸದಿಂದ, ಧೈರ್ಯದಿಂದ ಕೂಡಿದ ಚಿಂತನೆಗಳಾಗಿದ್ದರೆ ಅದೇ ಮನಃಸ್ಥಿತಿಯ ನಿರ್ಮಾಣ ನಡೆದಿರುತ್ತದೆ. ಅದೇ ಭಯ, ಚಿಂತೆ, ಹತಾಶೆಯ ಆಲೋಚನೆಗಳಿಂದ ಕೂಡಿದ್ದರೆ ಅದೇ ತೆರನ ಮನಃಸ್ಥಿತಿ ಅಥವಾ ಭವಿಷ್ಯ ಆತನದ್ದಾಗುತ್ತದೆ. ನೆನಪಿರಲಿ; ಆಲೋಚನೆಯ ಮೂಲಕ ನೀವು ನಿಮ್ಮ ಸುಪ್ತಪ್ರಜ್ಞೆಯ ಉಗ್ರಾಣವನ್ನು ತುಂಬಿಸುತ್ತಿದ್ದೀರಿ ಮತ್ತು ಅದುವೇ ಭವಿಷ್ಯದಲ್ಲಿ ವಾಸ್ತವವಾಗಿ ನಿಮ್ಮ ಮುಂದಿರುತ್ತದೆ ಎಂಬುದನ್ನು!
ಪ್ರಕೃತಿಯು ನಮ್ಮ ಮನಸ್ಸನ್ನು ಎಷ್ಟು ಸುಂದರವಾಗಿ ಮತ್ತು ಅದ್ಭುತವಾಗಿ ವಿನ್ಯಾಸಗೊಳಿದೆಯೆಂದರೆ; ನಮ್ಮ ಭವಿಷ್ಯದ ಕಾರ್ಯಚಟುವಟಿಕೆಗಳ ಬಗ್ಗೆ ನಮಗೆ ಯಾವುದೇ ಅರಿವಿರದಿದ್ದರೂ ಅದಕ್ಕೆ ಪೂರಕವಾದ ಭದ್ರವಾದ ಅಡಿಪಾಯವನ್ನು ಮನಸ್ಸು ನಿರ್ಮಿಸುತ್ತದೆ. ಕೆಲವೊಂದು ಅತ್ಯಂತ ಅನಿವಾರ್ಯ ಸಂದರ್ಭಗಳಲ್ಲಿ ಅಪರಿಚಿತರು ನಮ್ಮ ಸಹಾಯಕ್ಕೆ ಧಾವಿಸುವಂತೆ ನಮ್ಮ ಅರಿವಿನ ಆಳಕ್ಕೆ ಸಿಲುಕದ ನಮ್ಮ ಆತ್ಮವು ನಮಗೆ ಇಂತಹ ಸಹಾಯಹಸ್ತವನ್ನು ಚಾಚುವಂತೆ ಮತ್ತು ಭವಿಷ್ಯದ ಸೂಚನೆಗಳನ್ನು ಪೂರ್ಣವಾಗಿ ಬೆಳೆದ ಹಣ್ಣುಗಳನ್ನು ನಮ್ಮ ಮಡಿಲಿನಲ್ಲಿ ಹಾಕುವಂತೆ ಸೃಷ್ಟಿಸಿದೆ!