For the best experience, open
https://m.samyuktakarnataka.in
on your mobile browser.

ನಿಯಮ ಮೀರಿ ಕೆಟ್ಟ ಸಂಪ್ರದಾಯ ಹುಟ್ಟು ಹಾಕಲು ಸಿದ್ಧನಿಲ್ಲ…

07:02 PM Jul 29, 2024 IST | Samyukta Karnataka
ನಿಯಮ ಮೀರಿ ಕೆಟ್ಟ ಸಂಪ್ರದಾಯ ಹುಟ್ಟು ಹಾಕಲು ಸಿದ್ಧನಿಲ್ಲ…

ಮಂಗಳೂರು: ಮೈಸೂರಿನ ಮೂಡಾ ಹಗರಣ ವಿಚಾರದಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ವಾದ-ಪ್ರತಿವಾದ ಆಲಿಸಿಯೇ ರೂಲಿಂಗ್ ನೀಡಿದ್ದೇನೆ. ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಗಳ ಪ್ರಕಾರ ಕಾರ್ಯನಿರ್ವಹಿಸಬೇಕಾಗುತ್ತದೆಯೇ ಹೊರತು, ವಿಮರ್ಶೆಗಳ ಮರ್ಜಿಗೆ ಅನುಗುಣವಾಗಿ ಅಲ್ಲ. ನಿಯಮ ಮೀರಿ ಕೆಟ್ಟ ಸಂಪ್ರದಾಯ ಹುಟ್ಟುಹಾಕುವುದಕ್ಕೆ ನಾನು
ಸಿದ್ಧನಿಲ್ಲ ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಡಾ ವಿಚಾರದಲ್ಲಿ ಕಲಾಪದಲ್ಲಿ ಚರ್ಚೆಗೆ ಆಸ್ಪದ ನೀಡಿಲ್ಲ ಎಂದು ವಿಪಕ್ಷಗಳ ಆರೋಪವನ್ನು ನಿರಾಕಸಿರಿ, ಸ್ಪಷ್ಟನೆ ನೀಡಿದರು.
ಮುಡಾ ಹಗರಣದ ಸಂಬಂಧ ಶಾಸಕರು ಮಂಡಿಸಿದ ನಿಲುವಳಿ ಸೂಚನೆಗೆ ನಿಯಮಗಳ ಪ್ರಕಾರ ಚರ್ಚೆಗೆ ಅವಕಾಶ ನೀಡಲಾಗಲ್ಲ. ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆ ನಿಯಮ
೬೨(೭)ರ ಪ್ರಕಾರ ‘ನಿಲುವಳಿ ಸೂಚನೆಯು ಭಾರತದ ಯಾವುದೇ ಭಾಗದಲ್ಲಿ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ನ್ಯಾಯಾಲಯದ ಮುಂದೆ ವಿಚಾರಣೆಯಲ್ಲಿರುವ ಯಾವುದೇ ವಿಷಯಕ್ಕೆ
ಸಂಬಂಧಿಸಿ ಇರಬಾರದು’ ಎಂದು ಹೇಳುತ್ತದೆ.
ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮ ೬೩ರ ಪ್ರಕಾರ ‘ನ್ಯಾಯಾಧಿಕರಣಗಳು, ಆಯೋಗಗಳು ಮುಂತಾದವುಗಳ ಮುಂದಿರುವ ವಿಷಯಗಳ ಕುರಿತು ಚರ್ಚಿಸಲು
ನಿಲುವಳಿ ಸೂಚನೆ ತರುವುದು, ಯಾವುದೇ ನ್ಯಾಯಿಕ ಅಥವಾ ನ್ಯಾಯಿಕ ಸ್ವರೂಪದ ಪ್ರಕಾರಗಳನ್ನು ನಿರ್ವಹಿಸುತ್ತಿರುವ ಶಾಸನಬದ್ಧ ನ್ಯಾಯಾಧಿಕರಣ ಅಥವಾ ಶಾಸನ
ಪ್ರಾಧಿಕಾರದ ಮುಂದೆ ಅಥವಾ ಯಾವುದೇ ವಿಷಯದ ವಿಚಾರಣೆ, ತನಿಖೆ ನಡೆಸಲು ಆಯೋಗ ಅಥವಾ ವಿಚಾರಣಾ ನ್ಯಾಯಾಲಯದ ಮುಂದೆ ಬಾಕಿ ಇರುವ ವಿಷಯದ ಕುರಿತು ಚರ್ಚಿಸಲು ಸೂಚನೆಯನ್ನು ತರಲು ಅವಕಾಶವನ್ನು ಕೊಡಬಾರದು’ ಎಂದಿದೆ. ಸರ್ಕಾರ ಚರ್ಚೆಗೆ ಸಿದ್ದವಿದ್ದರೂ, ಸಿದ್ದವಿಲ್ಲದಿದ್ದರೂ ನಿಯಮಾವಳಿಗಳನ್ನು ಮುರಿಯುವುದು ಎಷ್ಟು ಸರಿ ಎಂದು ಅವರು
ಪ್ರಶ್ನಿಸಿದರು.
ಮುಡಾ ಹಗರಣದ ತನಿಖೆಗೆ ಈಗಾಗಲೇ ನಿವೃತ್ತ ನ್ಯಾಯಾಧೀಶರ ಆಯೋಗವನ್ನು ರಚನೆ ಮಾಡಲಾಗಿದೆ ಎಂಬ ಮಾಹಿತಿಯನ್ನು ಸರ್ಕಾರ ಸ್ಪೀಕರ್ ಪೀಠಕ್ಕೆ ನೀಡಿದೆ. ಸದನದಲ್ಲಿ ವಿಷಯ ಚರ್ಚೆಯಾದರೆ ನ್ಯಾಯಾಧಿಕರಣ, ಆಯೋಗದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಹಾಗಾಗಿ ಆಯೋಗದ ಎದುರು ನಿಮ್ಮ ಹೇಳಿಕೆ ನೀಡಬಹುದು ಎಂದು ತನ್ನ ನಿಲುವು ಸಮರ್ಥಿಸಿಕೊಂಡರು.
ಸದನದ ಎಲ್ಲ ಸದಸ್ಯರಿಗೂ ಕಲಾಪದಲ್ಲಿ ಮಾತನಾಡುವ ಮುಕ್ತ ಅವಕಾಶ ಇದೆ. ಕಾನೂನು ರಚಿಸುವ ಹುದ್ದೆಯಲ್ಲಿರುವ ವಿಧಾನಸಭಾ ಸದಸ್ಯರು ನಿಯಮ ಮೀರಿ ಚರ್ಚಿಸುವ ಕೆಟ್ಟ ಪರಂಪರೆ ಹುಟ್ಟು
ಹಾಕಬಾರದು. ಯಾವುದೇ ನ್ಯಾಯ ಪ್ರಕ್ರಿಯೆ ಕಾನೂನು, ನಿಯಮ ಬದ್ಧವಾಗಿಯೇ ನಡೆಯಬೇಕು. ಜನರು ಬಯಸುತ್ತಾರೆ ಎಂದೋ, ಬಹುಮತ ಇದೆಯೆಂದೋ ನಿಯಮಾವಳಿ, ಕಾನೂನು ಮೀರಬಾರದು ಎಂಬ ಪ್ರಜ್ಞೆ ನಮಗಿರಬೇಕು. ಮುಕ್ತ ಮಾತುಕತೆಗೆ ಸದನದಲ್ಲಿ ಬಿಎಸಿ (ಬ್ಯುಸಿನೆಸ್ ಅಡ್ವೈಸರಿ ಕಮಿಟಿ) ಇದೆ. ಆ ಸಮಿತಿಯಲ್ಲಿ ಪ್ರತಿಪಕ್ಷದ ನಾಯಕರು, ಎಲ್ಲ ಪಕ್ಷಗಳ ಶಾಸಕಾಂಗ ನಾಯಕರೂ, ಮುಖ್ಯಮಂತ್ರಿ, ಸಚಿವರು ಇರುತ್ತಾರೆ. ಬಿಎಸಿ ಸಮಿತಿಯಲ್ಲಿ ಈ ವಿಷಯವನ್ನು ಚರ್ಚಿಸಿ ನಿಯಮಾವಳಿಗಳಂತೆ ಬೇರೊಂದು ನಿಯಮ ಸಂಖ್ಯೆಯಡಿಯಲ್ಲಿ ಚರ್ಚಿಸುವ ಅವಕಾಶವನ್ನು
ಸರ್ವಾನುಮತದ ನಿರ್ಧಾರಕ್ಕೆ ಬರುವ ’ಮಾದರಿ’ ಅವಕಾಶ ಇದ್ದೇ ಇದೆ ಎಂದರು.
ವಿಧಾನಸಭಾ ಅಧ್ಯಕ್ಷರ ಪೀಠವು ಅತ್ಯುನ್ನತ ಸಾಂವಿಧಾನಿಕ ಹುದ್ದೆಗಳಲ್ಲಿ ಒಂದು. ಇಂತಹ ಪೀಠ ಜನಪ್ರಿಯ ಮಾದರಿಯ ಗೋಜಲಿಗೆ ಸಿಲುಕದೆ ನಿಯಮದಂತೆ ಕೆಲಸ ಮಾಡಬೇಕಾಗುತ್ತದೆ. ನಿಯಮ
ಮೀರುವುದು ಮುಂದಿನ ಪೀಳಿಗೆಗೆ ಕೆಟ್ಟ ಪರಂಪರೆ ಹಾಕಿಕೊಟ್ಟಂತಾಗುತ್ತದೆ. ಅದು ಮುಂದುವರಿಯಬಾರದು ಎಂದು ಚರ್ಚೆಗೆ ಆಸ್ಪದ ನೀಡಿಲ್ಲ ಎಂದರು.