For the best experience, open
https://m.samyuktakarnataka.in
on your mobile browser.

ನಿರಂತರ ಕ್ರಿಯಾಶೀಲತೆಯೇ ಜೀವನ

01:34 PM Dec 19, 2023 IST | Samyukta Karnataka
ನಿರಂತರ ಕ್ರಿಯಾಶೀಲತೆಯೇ ಜೀವನ

ಆಧುನಿಕ ಜಗತ್ತಿನಲ್ಲಿ ತಂತ್ರಜ್ಞನಿಗೆ ಅಂದರೆ; ತಂತ್ರಜ್ಞಾನ ಬಲ್ಲವನಿಗೆ ಚೆನ್ನಾಗಿ ಬದುಕುವ ಅವಕಾಶವಿದೆ. ಇದರಲ್ಲೇನೂ ಸಂದೇಹವಿಲ್ಲ. ಆದರೇನು..? ತಂತ್ರಜ್ಞನಾದವನು ಬದುಕಿನ ಅತ್ಯಂತ ಸಂಕೀರ್ಣ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಬಲ್ಲನೇ..? ವೃತ್ತಿಯೆಂಬುದು ಬದುಕಿನ ಒಂದು ಭಾಗ ಮಾತ್ರಾ. ಸುಪ್ತವಾಗಿಯೂ, ನಿಗೂಢವಾಗಿಯೂ ಮತ್ತು ಸೂಕ್ಷ್ಮವಾಗಿಯೂ ಇರುವ ಇನ್ನೆಷ್ಟೋ ಅಂಶಗಳು ಬದುಕಿನಲ್ಲಿ ಒಳಗೊಂಡಿವೆ. ಯಾವುದೋ ಒಂದಕ್ಕೆ ಮಹತ್ವನೀಡಿ ಉಳಿದವುಗಳನ್ನು ನಿರಾಕರಿಸುವುದಾಗಲೀ ಅಥವಾ ಕಡೆಗಣಿಸುವುದಾಗಲೀ ನಿಶ್ಚಯವಾಗಿಯೂ ಅಸಂತುಲಿತ ಮತ್ತು ವಿಘಟಿತ ಚಟುವಟಿಕೆಗೆ ಕಾರಣವಾಗುತ್ತದೆ. ಈ ಹೊತ್ತು ಜಗತ್ತಿನಲ್ಲಿ ಆಗುತ್ತಿರುವುದು ಇದೇ. ಸಂಘರ್ಷ, ಗೊಂದಲ, ಯಾತನೆ……..
ನಿರಂತರ ಕ್ರಿಯಾಶೀಲತೆಯೇ ಜೀವನ. ಇದೇ ಜೀವನೋತ್ಸಾಹ. ಶಂಕರಾಚಾರ್ಯರು, ವಿವೇಕಾನಂದರು ಬದುಕಿದ್ದು ಕೇವಲ ೩೦ರ ಆಸುಪಾಸು ವರ್ಷಗಳು. ಆದರೆ ಸಾಧನೆ ಶತಮಾನಗಳ ಕಾಲ ನಿಲ್ಲುವಂಥಾದ್ದು. ಇದು ಸಾಧ್ಯವಾದುದು ನಿರಂತರ ಕ್ರಿಯಾಶೀಲತೆಯಿಂದ! ನಂಬಿಕೆಯಿಲ್ಲದೆ ಒಂದಷ್ಟು ಪ್ರಮಾಣದ ಬೌದ್ಧಿಕ ತಿಳಿವಳಿಕೆಯನ್ನು ಪಡೆಯಬಹುದು. ಆದರೆ ನಂಬಿಕೆಯಿಂದ ಮಾತ್ರವೇ ಸೂಕ್ಷ್ಮಾತಿಸೂಕ್ಷ್ಮ ಆತ್ಮತತ್ವದ ನೆಲೆಯನ್ನು ನಾವು ಕಾಣಲು ಸಾಧ್ಯ. ಎಲ್ಲ ಆಶಾಭಂಗ ಹಾಗೂ ಅಡೆತಡೆಗಳ ನಡುವೆಯೂ ನಮ್ಮನ್ನು ಕಾಪಾಡಬಲ್ಲ ಸಾಮರ್ಥ್ಯ ದೃಢನಿರ್ಧಾರಕ್ಕಿದೆ. ವಿಶ್ವದ ಎಲ್ಲಾ ಮಹಾನ್ ವ್ಯಕ್ತಿಗಳ ಮಹತ್ಸಾಧನೆಗಳ ಹಿನ್ನೆಲೆಯಲ್ಲಿರುವುದು ಈ ಶಕ್ತಿಯೇ.
ಸಂತೋಷವಾಗಿರುವ, ಸೃಜನಶೀಲವಾಗಿರುವ, ಕಾಲದ ಕಟ್ಟಳೆಯನ್ನು ಮೀರಿನಿಂತಿದ್ದರ ಜೊತೆ ಸಂಪರ್ಕ ಸಾಧಿಸುವ ಸಾಮರ್ಥ್ಯ ನಮ್ಮ ನಿಮ್ಮ ಅಂತರಂಗದಲ್ಲೆ ಇದೆ. ಆದರೂ ಬಹಳಷ್ಟು ಮಂದಿಗೆ ಈ ಸಂತೋಷದ ಅರಿವೆಯೇ ಇಲ್ಲ! ಯಾಕೆ ಕೆಲವರು ಅನೇಕ ಆಕಸ್ಮಿಕಗಳ ಅಪಘಾತಗಳ ನಡುವೆಯೂ ಅಗಾಧತೆಯ ಜೊತೆ ಸಂಪರ್ಕವಿರಿಸಿಕೊಳ್ಳುತ್ತಾರೆ..? ಮತ್ತೇಕೆ ಕೆಲವರು ಅದರಿಂದಲೇ ನಾಶವಾಗುತ್ತಾರೆ..? ಸೃಷ್ಟಿಶೀಲ ಸಂತೋಷವು ಕೆಲವೇ ಕೆಲವರಿಗಲ್ಲ. ಅದು ಎಲ್ಲರಿಗಾಗಿ ಇದೆ. ಒಬ್ಬೊಬ್ಬರು ಒಂದೊಂದು ಬಗೆಯಲ್ಲಿ ಪ್ರಕಟಿಸುತ್ತಾರೆ. ಮಾರುಕಟ್ಟೆಯಲ್ಲಿ ಸೃಷ್ಟಿಶೀಲ ಸಂತೋಷಕ್ಕೆ ಬೆಲೆಯಿಲ್ಲ. ಅದು ಅತಿಹೆಚ್ಚು ಬೆಲೆಯನ್ನು ತೆರುವವರಿಗೆ ಮಾರಾಟಮಾಡುವ ಸರಕಲ್ಲ. ಉದಾಹರಣೆಗೆ: ಉಪಾಧ್ಯಾಯ ವೃತ್ತಿ ಬರೇ ಯಾಂತ್ರಿಕವಾದ ಉದ್ಯೋಗವಲ್ಲ. ಅದು ಚೆಲುವು ಹಾಗೂ ಸಂತಸದ ಅಭಿವ್ಯಕ್ತಿ. ಇದನ್ನು ಸಾಧನೆ ಮತ್ತು ಯಶಸ್ಸಿನ ಮಾನದಂಡದಿಂದ ಅಳೆಯಲು ಸಾಧ್ಯವಿಲ್ಲ.
ಪ್ರತಿನಿತ್ಯ ಸಾಯುವುದು, ಪ್ರತಿ ಘಳಿಗೆ ಸಾಯುವುದು, ಈಗತ ಸರಿದುಹೋದ ಘಳಿಗೆಯಲ್ಲಿ ಸಾಯುವುದು, ಕಳೆದುಹೋದ ನಿನ್ನೆಗಳಲ್ಲಿ ಸಾಯುವುದು ಎಷ್ಟೊಂದು ಅವಶ್ಯಕ! ಮರಣವಿಲ್ಲದೆ ಪುನರ್‌ ನವೀಕರಣವಿಲ್ಲ. ಸಾವು ಇಲ್ಲದೆ ಹುಟ್ಟು ಇಲ್ಲ. ನಿನ್ನೆಗಳ ಹೊರೆ ತನ್ನ ಸ್ವಾತಂತ್ರ್ಯಕ್ಕೆ ಜನ್ಮ ನೀಡುತ್ತದೆ. ನಿನ್ನೆಗಳ ಚಿಂತೆ ವರ್ತಮಾನದ ಚಿಂತೆಗಳಿಗೆ ಹೊಸ ಜನ್ಮನೀಡುತ್ತದೆ. ನಾವು ನಿನ್ನೆಯ ಸ್ಮರಣೆಯನ್ನು ಹೊತ್ತು ಸಾಗುತ್ತೇವೆ. ಅದು ನಮ್ಮ ಇರುವಿಕೆಯನ್ನು ಮಸುಕಾಗಿಸುತ್ತದೆ. ಎಲ್ಲಿಯ ತನಕ ಮನಸ್ಸು ಸ್ಮೃತಿಯ ಯಂತ್ರವಾಗಿ ಕೆಲಸಮಾಡುತ್ತದೆಯೋ ಅಲ್ಲಿಯ ತನಕ ಅದಕ್ಕೆ ವಿಶ್ರಾಂತಿಯ, ಪ್ರಶಾಂತತೆಯ ಏಕಾಂತದ ಅರಿವಿರುವುದಿಲ್ಲ. ಅದು ದುಡಿಯುತ್ತ ಬಳಲುತ್ತದೆ. ಮರುಹುಟ್ಟು ಪಡೆವ ಶಕ್ತಿಹೊಂದಿದ್ದರೂ ನಿರಂತರ ಚಟುವಟಿಕೆಯಲ್ಲಿ ತೊಡಗಿ ಬಳಲಿ ಬೆಂಡಾಗಿ ನಿರುಪಯುಕ್ತವಾಗುತ್ತದೆ. ನೀರಸೆಲೆ ಚಿಮ್ಮುವುದು ಕೊನೆಯಲ್ಲಿ. ಸಾವು ಬದುಕಿನಷ್ಟೇ ಸಮೀಪ. ಉತ್ತು ಬಿತ್ತಿದ ಬಳಿಕ ನಿಶ್ಚಲವಾಗಿರುವುದೆಂದರೆ ಹೊಸ ಸೃಷ್ಟಿಗೆ ಜನ್ಮನೀಡುವುದು. “ಅನಾಯಾಸೇನ ಮರಣಂ, ವಿನಾ ದೈನ್ಯೇನ ಜೀವನಂ” ಎಂದು ಸಜ್ಜನರು ಪರಮಾತ್ಮನಲ್ಲಿ ಪ್ರಾರ್ಥಿಸುತ್ತಾರೆ. ಮರಣವಂತೂ ಖಂಡಿತ. ಆದರೆ ಆ ಮರಣ ಸುಲಭವಾಗಿ ಬಂದರೆ ಅದೇ ಮಹಾನವಮಿ. ದೈನ್ಯವಿಲ್ಲದ ಜೀವನ, ಇದೊಂದು ಆದರ್ಶ. ಅನುಕರಣೀಯವೂ ಹೌದು. ಅನೇಕ ಸಲ ದಶಾವಿಪರ್ಯಗಳು ಉಂಟಾಗಿ, ವಿಧಿಯ ವಿಪರೀತ ಹೊಡೆತಕ್ಕೆ ಶರಣಾಗಿ ಎಂಥವರಾದರೂ ತತ್ತರಿಸಬೇಕಾಗುತ್ತದೆ.
ಬರಿದಾದುದೆಲ್ಲವೂ ಹಗುರ, ಪೂರ್ಣತೆಯೇ ಗೌರವಕ್ಕೆ ಕಾರಣ. ಮನುಷ್ಯನ ಜೀವನವೆಂದರೆ ಅಪರಿಪೂರ್ಣತೆಯಿಂದ ಪೂರ್ಣತೆಯೆಡೆಗೆ, ಕತ್ತಲಿನಿಂದ ಬೆಳಕಿನೆಡೆಗೆ, ಅಪಕ್ವತೆಯಿಂದ ಪಕ್ವತೆಯೆಡೆಗೆ ಸಾಗುವ ಒಂದು ಮಹಾಯಾತ್ರೆ. ಎಲ್ಲಾ ವ್ಯಾಖ್ಯಾನಗಳನ್ನು ಮೀರಿದ್ದೇ ಜೀವನ. ಜೀವನದಲ್ಲಿ ಸಂಪತ್ತು, ಅಧಿಕಾರ, ರೂಪ ಇವೆಲ್ಲಾ ಕ್ಷಣಿಕ. ಇವುಗಳಿಂದ ಬರುವ ಸ್ಥಾನ-ಮಾನಗಳು ನೋಡನೋಡುತ್ತಿರುವಂತೆಯೇ ಕಣ್ಮರೆಯಾಗುತ್ತವೆ! ಆದ ಕಾರಣ ಭಾರತೀಯ ಪರಂಪರೆ ಮನುಷ್ಯನ ಈ ಬಾಹ್ಯ ಉಪಾಧಿಗಳಿಗೆ ಹೆಚ್ಚಿನ ಮಹತ್ವಕೊಟ್ಟಿಲ್ಲ. ಆಂತರಿಕ ಸಂಪತ್ತೇ ನಿಜವಾಧ ನಿಧಿ. ವಿದ್ಯೆ, ವಿನಯ, ಉತ್ತಮ ಸಂಸ್ಕಾರಗಳಿಂದ ತುಂಬಿದ ಬಾಳು ಪೂರ್ಣಕುಂಭದಂತೆ ಗೌರವಕ್ಕೆ ಪಾತ್ರವಾಗುತ್ತದೆ. ಈ ಪೂರ್ಣತೆ ಅನವರತ ಸಾಧನೆಯಿಂದ ಮಾತ್ರಾ ಸಾಧ್ಯ. ನಿಸರ್ಗ ಅನೇಕ ವಿಷಯಗಳಲ್ಲಿ ಮನುಷ್ಯನಿಗೆ ಮಾರ್ಗದರ್ಶಕವಾಗಿದೆ. ನಿಸರ್ಗತತ್ವ ಮಾನವೀಯ ತತ್ವವಾದಾಗ ಮನುಷ್ಯಜೀವನಕ್ಕೆ ಅಂತಃಸತ್ವ ಪ್ರಾಪ್ತವಾಗುತ್ತದೆ. ಅನೇಕ ವಿಷಯಗಳನ್ನು ಸಂಗ್ರಹಿಸಿ ಚಲಿಸುವ ವಿಶ್ವಕೋಶವಾಗುವುದರಿಂದ, ತಜ್ಞತೆಯನ್ನು ಗಳಿಸುವುದರಿಂದ ಮನುಷ್ಯ ಮಹನೀಯನಾಗುವುದಿಲ್ಲ. ಅವನಿಗೆ ಮುಖ್ಯವಾಗಿ ಬೇಕಾದುದು ತಿಳಿವಲ್ಲ; ಪ್ರಜ್ಞೆ. ಅದಿರದವನು ಸಾರಿನಲ್ಲಿ ಸೌಟಿದ್ದಂತೆ. ಅದು ಮೂರೂ ಹೊತ್ತು ಸಾರಿನಲ್ಲಿ ಹೊಕ್ಕು ಹೊರಬರುತ್ತಿದ್ದರೂ ಅದನ್ನು ಸವಿಯುವ ಭಾಗ್ಯ ಪಡೆದಿರುವುದಿಲ್ಲ. ರುಚಿಯನ್ನು ಸವಿಯಲು ಬೇಕಾದುದು ಮರವಟ್ಟ ಸೌಟಲ್ಲ; ಜೀವಂತ ಜಿಹ್ವೆ. ಆ ಜಿಹ್ವೆಯೇ 'ಸ್ವ-ಪ್ರಜ್ಞೆ'
ಸೃಷ್ಟಿಯಲ್ಲಿ ಏಕಾಂಗಿ ಅಥವಾ ಅವ್ಯವಸ್ಥೆಯ ಯೋಜನೆ ಇರಲು ಸಾಧ್ಯವೇ ಇಲ್ಲ. ಇರುವುದು ಸರ್ವಾಂಗಸುಂದರ ಪರಿಪೂರ್ಣ ಯೋಜನೆಯೇ. ಮಗು ಹುಟ್ಟುತ್ತಲೇ ಅದರ ಹೊಟ್ಟೆಯಲ್ಲಿ ಹಸಿವಿರುತ್ತದೆ. ಅದರ ಜೊತೆಯಲ್ಲಿಯೇ ತಾಯಿಯ ಸ್ತನದಲ್ಲಿ ಹಾಲೂ ಇರುತ್ತದೆ. ಮಗುವಿಗೆ ನುಡಿಯುವ ಪ್ರೇರಣೆಯೂ ಇರುತ್ತದೆ. ದೇವರ ಕೆಲಸ ಹೀಗೆಯೇ - 'ಪರಿಪೂರ್ಣ'.
ಮನುಷ್ಯನ ಜೀವನದಲ್ಲಿ ಮೌನದ ಪಾತ್ರ ಅತ್ಯಂತ ಮಹತ್ವದ್ದು. ಮೌನ ಅಂತರಾತ್ಮಕ ಭಾಷೆ. ಮೌನ ಪರಮಾತ್ಮನು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವ ಅತ್ಯಂತ ಪ್ರಭಾವಯುಕ್ತ ಸಾಧನ. ಮೌನದಿಂದ ಕಲಿ, ಮೌನವಾಗಿ ಕೇಳು, ಮೌನವಾಗಿ ದುಡಿ. ಮಾನವನ ಎಲ್ಲಾ ತೊಂದರೆಗಳಿಗೂ ಅವನ ಬಾಯಿಯೇ ಮೂಲ. ಕತ್ತಿಯಿಂದಾಗುವ ಕೆಲಸವನ್ನು ನಾಲಿಗೆ ಮಾಡದಿರಲಿ. ಪದೇಪದೇ ಮಾತನಾಡುವವನು ಇತರರಿಗೆ ಹುಚ್ಚುಹಿಡಿಸುವನು. ಮೌನದಿಂದ ಮೆಚ್ಚಿದರೆ ಮಾತ್ರ ಸಾಲದು; ಮೌನದಿಂದ ಬಾಳು. ಮೌನ ಎದುರಾಳಿಯನ್ನು ನೋಯಿಸುವುದೇ ಅಪರೂಪ. ಮಾತನಾಡುವವನು ತೊಂದರೆಯನ್ನು ಬಿತ್ತುತ್ತಾನೆ. ಶಾಂತಿಯಿಂದಿರುವವನು ಪುಣ್ಯ ಶೇಖರಿಸುತ್ತಾನೆ. ಶಾಂತಜೀವನ ನಡೆಸಬೇಕೆಂದಿರುವೆಯಾದರೆ ಕಿವಿಗೆ ಬಿದ್ದುದನ್ನೆಲ್ಲಾ ಕೇಳಿಕೊಂಡು, ಕಣ್ಣೆದುರಿಗಿರುವುದನ್ನೆಲ್ಲಾ ನೋಡಿಕೊಂಡು, ಇದೆಲ್ಲ ಪ್ರಕೃತಿನಿಯಮವೆಂದರಿತು ಮೌನವಾಗಿರು ಎನ್ನುತ್ತದೆ ವಿವೇಕ. ಮಾತನಾಡುವುದು ಮೂರ್ಖತನ ಅಂತೆನಿಸಿದಾಗ ಮೌನದಿಂದಿರುವುದೇ ಜಾಣತನ. ಮೌನವೇ ಸತ್ಯದ ಅಭಯಾಶ್ರಮ. ಮೌನವನ್ನು ಬಿಟ್ಟು ಬೇರೆ ರೀತಿಯ ವ್ಯವಹಾರಗಳು ಪಶ್ಚಾತ್ತಾಪಕ್ಕೆ ಮೂಲ. ಮಾತನಾಡಲೇಬೇಕಿದ್ದಲ್ಲಿ ಮೌನಕ್ಕಿಂತ ಉತ್ತಮವಾದ ಪದಗಳನ್ನು ಬಳಸು. ಕಣ್ಣು-ಕಿವಿಗಳಿಗಿಂತ ನಾಲಿಗೆಗೆ ಹೆಚ್ಚು ವಿಶ್ರಾಂತಿಕೊಡು. ಧನರಕ್ಷಣೆಗಿಂತ ನುಡಿರಕ್ಷಣೆ ಶ್ರೇಷ್ಠ. ಎಷ್ಟುಬೇಕಾದರೂ ಕೇಳು. ಆದರೆ ಸ್ವಲ್ಪವೇ ಮಾತಾಡು. ಮೌನವೂ ಒಂದು ಭಾಷೆ. ನಿರ್ದಾಕ್ಷಿಣ್ಯವಾಗಿ ನುಡಿಯುವುದಕ್ಕಿಂತ ಮೌನದಿಂದಿದ್ದು ಮೂರ್ಖನೆನಿಸಿಕೊಳ್ಳುವುದೇ ಉತ್ತಮ.
ಮೌನ ಸತ್ಯದ ತಾಯಿ. ಮಾತುಗಳು ಗಿಡಗಳ ಎಲೆಗಳಂತೆ. ಎಲೆಗಳು ಹೆಚ್ಚಿದಷ್ಟೂ ಮರೆಯಲ್ಲಿರುವ ಹಣ್ಣುಗಳು ಹೇಗೆ ಗೋಚರವಾಗುವುದು ಅಪರೂಪವೋ ಹಾಗೆಯೇ ಮಾತು ಹೆಚ್ಚಾದಷ್ಟೂ ಅದರಲ್ಲಿರುವ ಅಭಿಪ್ರಾಯವೇ ಮರೆಯಾಗಿಬಿಡುತ್ತದೆ. ಮೌನದಿಂದ ಇರಲಾರದವ ಮಾತನ್ನೂ ಆಡಲಾರ. ಮೌನವೆಂಬುದು ಮರ್ಯಾದೆಯನ್ನು ಉಳಿಸಿಕೊಳ್ಳುವ ಒಂದು ಉಪಾಯ. ಮೌನ ನಿಜವಾದ ಸತ್ಯವನ್ನು ಕಾಣಬಹುದಾದ ಒಂದೇ ಒಂದು ಸ್ಥಳ. ತಿಳಿವಳಿಕೆ ಸಾಲದವರಲ್ಲಿ ಮೌನವೇ ಒಂದು ಶೀಲ. ಮೂರ್ಖತನಕ್ಕೆ ಚೆನ್ನಾಗಿ ಒಪ್ಪುವ ಉತ್ತರವೇ ಮೌನ. ಮೌನ ಶಾಂತಮನಸ್ಸಿನ ಸಂಕೇತ.