For the best experience, open
https://m.samyuktakarnataka.in
on your mobile browser.

ನಿರಂತರ ಮಳೆ: ನದಿ ನೀರಿನ ಮಟ್ಟ ಏರಿಕೆ

06:34 PM Jul 16, 2024 IST | Samyukta Karnataka
ನಿರಂತರ ಮಳೆ  ನದಿ ನೀರಿನ ಮಟ್ಟ ಏರಿಕೆ

ಮಂಗಳೂರು: ಘಟ್ಟದ ತಪ್ಪಲಿನಲ್ಲಿ ಹಾಗೂ ದ.ಕ ಜಿಲ್ಲೆಯಾದ್ಯಂತ ಸುರಿಯುತ್ತಿವ ನಿರಂತರ ಮಳೆಯಿಂದಾಗಿ ಎಲ್ಲಾ ನದಿಗಳು ತುಂಬಿ ಹರಿಯುತ್ತಿವೆ. ಭಾರೀ ಮಳೆಯಿಂದಾಗಿ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಕುಮಾರಧಾರ ಸ್ನಾನಘಟ್ಟ ಮುಳುಗಡೆಯಾಗಿದೆ. ಪಶ್ಚಿಮ ಘಟ್ಟ ಪ್ರದೇಶ, ಕುಮಾರಪರ್ವತ ಸೇರಿದಂತೆ ಸುಬ್ರಹ್ಮಣ್ಯ ಭಾಗಗಳಲ್ಲಿ ಭಾನುವಾರ ರಾತ್ರಿಯಿಂದ ನಿರಂತರ ಮಳೆಯಾಗುತ್ತಿರುವುದರಿಂದ ಕುಮಾರಧಾರಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಪರಿಣಾಮ ೨ನೇ ಸಲ ಕುಮಾರಧಾರ ಸ್ನಾನಘಟ್ಟ ಮುಳುಗಡೆಯಾಗಿದೆ.
ನೀರಿನ ಮಟ್ಟ ಏರಿಕೆಯಾಗಿರುವ ಹಿನ್ನೆಲೆ ಕುಮಾರಧಾರ ನದಿಗೆ ಇಳಿಯದಂತೆ ಭಕ್ತಾದಿಗಳಿಗೆ ಸೂಚಿಸಲಾಗಿದ್ದು, ನದಿ ದಡದಲ್ಲಿ ಡ್ರಮ್ಗಳಲ್ಲಿ ನೀರು ಸಂಗ್ರಹಿಸಿ ತೀರ್ಥ ಸ್ನಾನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಕುಮಾರಧಾರ ನದಿ ತೀರದಲ್ಲಿ ಮುಂಜಾಗ್ರತಾ ದೃಷ್ಟಿಯಿಂದ ದೇವಳದ ಭದ್ರತಾ ಸಿಬ್ಬಂದಿ ಹಾಗೂ ಹೋಮ್‌ಗಾರ್ಡ್‌ಗಳನ್ನು ನಿಯೋಜಿಸಲಾಗಿದೆ. ನಿನ್ನೆ ಇಡೀ ದಿನ ಸುರಿದ ಕುಕ್ಕೆ ಪರಿಸರದಲ್ಲಿ ಧಾರಕಾರ ಮಳೆಯಾಗಿದ್ದು, ಪರಿಸರದ ನದಿ, ತೋಡುಗಳು ತುಂಬಿ ಹರಿಯುತ್ತಿವೆ. ಇನ್ನು ಕುಮಾರಧಾರ ಕಿಂಡಿ ಅಣೆಕಟ್ಟು ಸಂಪೂರ್ಣ ಮುಳುಗಡೆಯಾಗಿದ್ದು, ಕುಮಾರಧಾರ ಉಪನದಿ ದರ್ಪಣ ತೀರ್ಥ ತುಂಬಿ ಹರಿಯುತ್ತಿದೆ.