ನಿರುದ್ಯೋಗಿಗಳಿಗೆ ತಿಂಗಳಿಗೆ ೮೫೦೦ ಸ್ಟೈಪೆಂಡ್ ಘೋಷಿಸಿದ ಕಾಂಗ್ರೆಸ್
ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಗಾಗಿ ಮತದಾರರ ಸೆಳೆಯಲು ರಾಜಕೀಯ ಪಕ್ಷಗಳು ಕಸರತ್ತು ನಡೆಸುತ್ತಿರುವ ವೇಳೆಯೇ ಕಾಂಗ್ರೆಸ್ ಯುವ ನಿರುದ್ಯೋಗಿಗಳಿಗೆ ಯುವ ಉಡಾನ್ ಯೋಜನೆ ಪ್ರಕಟಿಸಿದೆ. ಈಗಾಗಲೇ ಘೋಷಣೆ ಮಾಡಿರುವ ಎರಡು ಭರವಸೆಗಳನ್ನು ಪ್ರಕಟಿಸಿರುವ ಕಾಂಗ್ರೆಸ್ ಈಗ ಯುವ ನಿರುದ್ಯೋಗಿಗಳಿಗೆ ವಾರ್ಷಿಕ ೮೫೦೦ ರೂಪಾಯಿ ನೀಡುವ ಯೋಜನೆ ಪ್ರಕಟಿಸಿದೆ.
ಈಗಾಗಲೇ ಪ್ಯಾರಿ ದೀದಿ ಯೋಜನೆಯಡಿ ಮಹಿಳೆಯರಿಗೆ ೨೫೦೦, ಜೀವನ್ ರಕ್ಷಾ ಯೋಜನೆಯಡಿ ೨೫ ಲಕ್ಷ ಉಚಿತ ಆರೋಗ್ಯ ವಿಮೆ ಒದಗಿಸುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ. ಇದೀಗ ಯುವ ಸಮುದಾಯದ ಮತಗಳನ್ನು ಸೆಳೆಯಲು ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುವ ಯುವಕ ಯುವತಿಯರಿಗೆ ಹಣಕಾಸಿನ ನೆರವು ನೀಡಲಾಗುವುದು. ಇದು ಮನೆಯಲ್ಲಿ ಕುಳಿತು ನಿರುದ್ಯೋಗಿಗಳು ಹಣ ಪಡೆಯುವ ಯೋಜನೆ ಅಲ್ಲ ಎಂದು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೊಳೆಗೇರಿಗಳ ನೆಲಸಮ: ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಎಲ್ಲಾ ಕೊಳೆಗೇರಿಗಳನ್ನು ನೆಲಸಮ ಮಾಡಲಿದೆ ಎಂದು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಆರೋಪಿಸಿದ್ದಾರೆ. ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಗೆ ಮೊದಲು ನಿಮ್ಮ ಮತಗಳು ಬೇಕು. ಚುನಾವಣೆಯ ನಂತರ ನಿಮ್ಮ ಭೂಮಿ ಮಾತ್ರ ಬೇಕು. ಬಿಜೆಪಿಯು ಸ್ಲಂ ನಿವಾಸಿಗಳ ಕಲ್ಯಾಣಕ್ಕಿಂತ ಭೂಸ್ವಾಧೀನಕ್ಕೆ ಆದ್ಯತೆ ನೀಡುತ್ತಿದೆ ಎಂದು ಟೀಕಿಸಿದರು.
೪ ಗಂಟೆಯಲ್ಲಿ ೧೦ ಲಕ್ಷ!
ಮುಖ್ಯಮಂತ್ರಿ ಮತ್ತು ಎಎಪಿ ಅಭ್ಯರ್ಥಿ ಅತಿಶಿ ಅವರು ತಮ್ಮ ಪಕ್ಷಕ್ಕೆ ಜನರು ಹಣ ನೀಡಲು ಆನ್‌ಲೈನ್ ಲಿಂಕ್ ಅನ್ನು ಬಿಡುಗಡೆ ಮಾಡುವ ಮೂಲಕ ಕ್ರೌಡ್‌ಫಂಡಿಂಗ್ ಅಭಿಯಾನ ಪ್ರಾರಂಭಿಸಿದರು. ಚುನಾವಣೆಯಲ್ಲಿ ಹೋರಾಡಲು ತನಗೆ ೪೦ ಲಕ್ಷ ರೂ. ಅಗತ್ಯವಿದೆ ಎಂದು ಸಿಎಂ ಮನವಿ ಮಾಡಿದ ಕೇವಲ ೪ ಗಂಟೆಗಳಲ್ಲಿ ೧೭೬ ದಾನಿಗಳಿಂದ ೧೦೩೨೦೦೦ ರೂಪಾಯಿ ಸಂಗ್ರಹವಾಗಿದೆ ಎಂದು ಎಎಪಿ ಮೂಲಗಳಿಂದ ತಿಳಿದುಬಂದಿದೆ. ಎಎಪಿ ಯಾವಾಗಲೂ ಸಾಮಾನ್ಯ ಜನರ ಸಣ್ಣ ದೇಣಿಗೆಯ ಸಹಾಯದಿಂದಲೇ ಚುನಾವಣೆಗಳನ್ನು ಎದುರಿಸುತ್ತಿದೆ. ಇದು ಪ್ರಾಮಾಣಿಕತೆವಾಗಿ ರಾಜಕೀಯವನ್ನು ಮುಂದುವರಿಸಲು ಸಹಾಯ ಮಾಡಿದೆ ಎಂದರು.