ನಿರ್ಜನ ಪ್ರದೇಶದಲ್ಲಿ ಪತ್ತೆಯಾದ ಕಾರು: ಪರಿಶೀಲನೆ ವೇಳೆ 1 ಕೋಟಿ ರೂ ಪತ್ತೆ!
ನಿರ್ಜನ ಪ್ರದೇಶದಲ್ಲಿ ಕಾರನ್ನು ತಂದು ನಿಲ್ಲಿಸಿದ್ದು ಏಕೆ
ಕಾರವಾರ: ನಿರ್ಜನ ಪ್ರದೇಶವೊಂದರಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ 1 ಕೋಟಿ ರೂಪಾಯಿ ಪತ್ತೆಯಾದ ಘಟನೆ ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ರಾಮನಗುಳಿ ಬಳಿ ನಡೆದಿದೆ.
ಸೋಮವಾರ ಸಂಜೆಯಿಂದ ನಿರ್ಜನ ಪ್ರದೇಶದಲ್ಲಿ ಯಾರೋ ಅಪರಿಚಿತರು ಕಾರೊಂದನ್ನು ನಿಲ್ಲಿಸಿ ಹೋಗಿದ್ದು, ಯಾರೂ ಸಹ ಪತ್ತೆಯಿರಲಿಲ್ಲ. ಇದರಿಂದ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ದೌಡಾಯಿಸಿದ ಹೈವೇ ಪೆಟ್ರೋಲ್ ಸಿಬ್ಬಂದಿ ಕಾರನ್ನು ಪರಿಶೀಲನೆ ಮಾಡಿದ್ದಾರೆ.
ಬೆಂಗಳೂರು ಪಾಸಿಂಗ್ ಹೊಂದಿರುವ ಹುಂಡೈ ಕ್ರೆಟಾ ಕಾರು ಇದಾಗಿದ್ದು, ಕಾರಿನ ಡೋರ್ ತೆಗೆದು ಒಳಗೆ ಪರಿಶೀಲಿಸಿದ ವೇಳೆ ಕಾರಿನಲ್ಲಿ 1 ಕೋಟಿ ರೂಪಾಯಿ ಇರುವುದು ಕಂಡುಬಂದಿದ್ದು, ಕಾರಿನಲ್ಲಿ ಬೇರೆ ಯಾವುದೇ ದಾಖಲೆ ಪತ್ರಗಳು ಕಂಡುಬಂದಿಲ್ಲ.
ಕೂಡಲೇ ಹೈವೇ ಪೆಟ್ರೋಲ್ ಸಿಬ್ಬಂದಿ ಹಣದ ಸಹಿತ ಕಾರನ್ನು ಅಂಕೋಲಾ ಪೊಲೀಸ್ ಠಾಣೆಗೆ ತಂದು ನಿಲ್ಲಿಸಿದ್ದಾರೆ. ಸದ್ಯ ಕಾರಿನ ಮಾಲೀಕರ ಪತ್ತೆಗೆ ಪೊಲೀಸರು ಮುಂದಾಗಿದ್ದು, ಕಾರು ಹಾಗೂ ಅದರಲ್ಲಿದ್ದ ಹಣ ಯಾರಿಗೆ ಸೇರಿದ್ದು, ನಿರ್ಜನ ಪ್ರದೇಶದಲ್ಲಿ ಕಾರನ್ನು ತಂದು ನಿಲ್ಲಿಸಿದ್ದು ಏಕೆ ಎನ್ನುವ ಕುರಿತು ತನಿಖೆ ಬಳಿಕವಷ್ಟೇ ಸತ್ಯಾಸತ್ಯತೆ ತಿಳಿದುಬರಬೇಕಿದೆ.
ಈ ಸಂಬಂಧ ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.