For the best experience, open
https://m.samyuktakarnataka.in
on your mobile browser.

ನಿರ್ಭೀತ ಸ್ವಾತಂತ್ರ್ಯದ ಸಂಸ್ಕೃತಿ ನಮ್ಮದಾಗಲಿ

05:22 PM Aug 15, 2024 IST | Samyukta Karnataka
ನಿರ್ಭೀತ ಸ್ವಾತಂತ್ರ್ಯದ ಸಂಸ್ಕೃತಿ ನಮ್ಮದಾಗಲಿ

ಮೂಡುಬಿದಿರೆ: ವ್ಯಕ್ತಿ, ಸಮುದಾಯ, ದೇಶ ಸೇರಿದಂತೆ ಸರ್ವರಲ್ಲಿ ನಿರ್ಭೀತ ಸ್ವಾತಂತ್ರ‍್ಯದ ಸಂಸ್ಕೃತಿ ನಮ್ಮದಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಆಶಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ವಿದ್ಯಾಗಿರಿಯ ಸುಂದರಿ ಆಳ್ವ ಆವರಣದ ಕೆ.ವಿ. ಸುಬ್ಬಣ್ಣ ರಂಗಮಂದಿರದಲ್ಲಿ ಗುರುವಾರ ಹಮ್ಮಿಕೊಂಡ ೭೮ನೇ ಸ್ವಾತಂತ್ರ‍್ಯೋತ್ಸವ ಆಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
'ದೇಶವನ್ನು ಆರ್ಥಿಕ, ಸಾಮಾಜಿಕ, ಸಾಮುದಾಯಿಕವಾಗಿ ಎಲ್ಲರೂ ಸೇರಿ ಕಟ್ಟೋಣ' ಎಂದ ಅವರು, 'ವೈಯಕ್ತಿಕ ಸ್ವಾತಂತ್ರ‍್ಯದ ಉಳಿವೂ ಇಂದಿನ ಅವಶ್ಯಕತೆ. ಸ್ವಾತಂತ್ರ‍್ಯವನ್ನು ಯಾರದೇ ಪಾದಕ್ಕೆ ಸಮರ್ಪಿಸಬೇಡಿ' ಎಂದು ಯುವ ಸಮುದಾಯವನ್ನು ಎಚ್ಚರಿಸಿದ ಅವರು ಯಾವುದೂ ಅಸಾಧ್ಯ ಎಂಬುದು ಇಲ್ಲ. ಪ್ರಕೃತಿ ಪೂರಕ ಸಂಸ್ಕೃತಿ ಬೆಳೆಯಬೇಕು. ಸ್ವಾತಂತ್ರ‍್ಯದ ಸಂಸ್ಕೃತಿ ನಮ್ಮದಾಗಬೇಕು. ಅದಕ್ಕೆ ಪ್ರತಿ ವ್ಯಕ್ತಿಯೂ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದರು.
ದೇಶದ ದ್ವಜವೇ ನಮ್ಮ ಏಕತೆಯ ಸಂಕೇತ. ಕೇಸರಿ ಧೈರ್ಯ, ಬಲ, ತ್ಯಾಗವಾದರೆ, ಬಿಳಿ ಶಾಂತಿಯ ಸಂಕೇತ. ಹಸಿರು ಸಮೃದ್ಧಿಯ ಸಂಕೇತ. ಅಶೋಕ ಚಕ್ರದ ೨೪ಗೆರೆಗಳು ದಿನದ ಗಂಟೆಯಂತೆ ನಮ್ಮ ಸಮಯ ಪ್ರಜ್ಞೆ ಜಾಗೃತವಾಗಿಡುತ್ತವೆ. ಹೋರಾಟದಿಂದ ಬಂದ ಸ್ವಾತಂತ್ರ‍್ಯವನ್ನು ನಾವೆಲ್ಲ ಉಳಿಸಬೇಕು ಎಂದರು.
ದೇಶದಲ್ಲಿ ಅನೇಕ ಜಾತಿ-ಧರ್ಮಗಳಿವೆ. ಆದರೆ ವೈವಿಧ್ಯತೆಯ ನಡುವೆ ಐಕ್ಯತೆ ಹಾಗೂ ಸಾಮರಸ್ಯ ಇದೆ. ದೇಶದಲ್ಲಿನ ನದಿಗಳು ಸಮುದ್ರ ಸೇರಿದಂತೆ, ಇಲ್ಲಿ ಯಾರ ಪಾಲು ಎಷ್ಟು ಎಂದು ಕೇಳಬಾರದು. ದೇಶ ನಿರ್ಮಾಣಕ್ಕೆ ಸಮರ್ಪಣ ಭಾವ ಬೇಕು. ಮಾಧುರ್ಯ, ಸಮತೆ, ಸಮಾನತೆ ಪಡೆದ ದೇಶ ಭಾರತ ಎಂದು ಬಣ್ಣಿಸಿದರು.
ಸಂವಿಧಾನ ಯಂತ್ರದ ಹಾಗೆ. ಅದನ್ನು ಕಾರ್ಯಗೊಳಿಸುವವರು ಜೀವಂತಿಕೆ ನೀಡುತ್ತಾರೆ. ನಮ್ಮಲ್ಲಿ ಧೈರ್ಯ ಹಾಗೂ ಸ್ಥೈರ್ಯ ಬೇಕು. ಶೋಷಣೆಯ ವಿರುದ್ಧ ಪ್ರತಿಭಟಿಸಬೇಕು. ಆಗ ಸ್ವಾತಂತ್ರ‍್ಯ ಸಾರ್ಥಕವಾಗುತ್ತದೆ. ಎಲ್ಲರಲ್ಲೂ ನಿರ್ಭೀತಿ ಮನೋಭೂಮಿಕೆ ಬೇಕು ಎಂದರು.
ಭಾರತದ ಪ್ರಜಾಪ್ರಭುತ್ವಕ್ಕೆ ಹಿರಿಯರು ಸದೃಢ ಅಡಿಪಾಯ ಹಾಕಿದ್ದಾರೆ. ಇದರಿಂದ ದೇಶವು ರಾಜಕೀಯ ಸಬಲತೆ, ಸದೃಢತೆಯಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ತಲೆ ಎತ್ತಿ ನಿಂತಿದೆ ಎಂದರು.
"ವಿಶ್ವ ಸಂಸ್ಕೃತಿಯ ಮಹಾಯಾನ' ಬರೆಯುತ್ತಿದ್ದೇನೆ. ಇದು ಸಂಸ್ಕೃತಿಯ ಸಾರ. ಸಂಸ್ಕೃತಿಯು ಪ್ರಕೃತಿಗೆ ಪೂರಕವಾಗಿ ಇರಬೇಕು ಎಂದರು.
ಮಾಜಿ ಸಚಿವರಾದ ಕೆ. ಅಭಯಚಂದ್ರ ಜೈನ್, ಪಿ.ಜಿ.ಆರ್ ಸಿಂಧ್ಯಾ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಉದ್ಯಮಿ ಶ್ರೀಪತಿ ಭಟ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹಾಗೂ ಡಾ ವಿನಯ ಆಳ್ವ ಉಪಸ್ಥಿತರಿದ್ದರು.
ಧ್ವಜಾರೋಹಣದ ತಕ್ಷಣ ರಾಷ್ಟ್ರ ಗೀತೆ ಹಾಡಿ, ದೇಶಪ್ರೇಮ ವ್ಯಕ್ತಪಡಿಸಲಾಯಿತು. ಇದಕ್ಕೂ ಮೊದಲು ಅತಿಥಿಗಳು ಕಾಲೇಜಿನ ಎನ್ ಸಿಸಿ ತಂಡಗಳಿಂದ ಗೌರವ ರಕ್ಷೆ ಸ್ವೀಕರಿಸಿದರು. ಎನ್‌ಸಿಸಿ ಸೀನಿಯರ್ ಅಂಡರ್ ಆಫೀಸರ್ ಜೊನಾಥನ್ ಡಿಸೋಜ ನೇತೃತ್ವದಲ್ಲಿ ಗೌರವ ರಕ್ಷೆ ನೀಡಲಾಯಿತು. ಬಳಿಕ 'ವಂದೇ ಮಾತರಂ' ಹಾಡಲಾಯಿತು. 'ಕೋಟಿ ಕಂಠೋ ಸೇ..' ಗಾನಕ್ಕೆ ವೇದಿಕೆ ಹಾಗೂ ಸಭಾಂಗಣದಲ್ಲಿ ಶಿಸ್ತು ಬದ್ಧವಾಗಿ ನಿಂತ ವಿದ್ಯಾರ್ಥಿಗಳು ಧ್ವಜ ಹಾರಡಿಸಿದರೆ, ಕೇಸರಿ, ಬಿಳಿ, ಹಸಿರು ಬಣ್ಣಗಳ ರಂಗು ಬ್ಲೋವರ್ ಮೂಲಕ ಗಾಳಿಯಲ್ಲಿ ತೇಲಿ ಬಂತು. ಕೇಸರಿ,ಬಿಳಿ, ಹಸಿರು ಬಣ್ಣದ ಪುರುಲಿಯಾ ಸಿಂಹಗಳು ವಿಶೇಷ ಮೆರುಗು ನೀಡಿದವು. ಉಪನ್ಯಾಸಕ ರಾಜೇಶ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.