ನಿವೃತ್ತ ತಹಶೀಲ್ದಾರ್ ಮನೆಗೆ ಬೆಂಕಿ: ಹಾನಿ
ಕುಷ್ಟಗಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ನಿವೃತ್ತ ತಹಶೀಲ್ದಾರ್ ಸಿ.ಎಂ. ಹಿರೇಮಠ ಅವರ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿದೆ.
ಕೆಳ ಮಹಡಿಯ ಮನೆಗೆ ಬೆಂಕಿ ತಗುಲಿದ್ದು, ಮನೆಯಲ್ಲಿದ್ದ ಗೃಹೋಪಯೋಗಿ ಸಾಮಗ್ರಿ ಸೇರಿದಂತೆ ಕೃಷಿ ಉಪಕರಣಗಳು ಸುಟ್ಟ ಕರಲಾಗಿವೆ.
ಪಟ್ಟಣದ ಬುತ್ತಿ ಬಸವೇಶ್ವರ ನಗರದ ಪೊಲೀಸ್ ಠಾಣೆಯ ಹಿಂಭಾಗದ ಮಹಾಂತ ನಿವಾಸದಲ್ಲಿ ಸಿ.ಎಂ. ಹಿರೇಮಠ ವಾಸವಾಗಿದ್ದರು. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿ ದಟ್ಟ ಹೊಗೆ ಕಾಣಿಸಿಕೊಂಡಿದೆ. ಗಾಬರಿಗೊಂಡ ಸಿ.ಎಂ. ಹಿರೇಮಠ ಕುಟುಂಬದವರು ಹೊರಗೆ ಓಡಿಬಂದಿದ್ದಾರೆ.
ಎಂಟು ಮಹಡಿಯ ಕಾಂಪ್ಲೆಕ್ಸ್ ಇದಾಗಿದ್ದು, ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಪ್ರತಿ ಮಹಡಿಯಲ್ಲಿದ್ದವರು ಹೆದರಿ ಹೊರಗಡೆ ಓಡಿ ಬಂದಿದ್ದಾರೆ ಎನ್ನಲಾಗಿದೆ. ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಕಟ್ಟಡದಲ್ಲಿದ್ದ ಡ್ರಿಪ್ ಪೈಪ್ ಬಂಡಲ್‌ಗಳಿಗೆ ಬೆಂಕಿ ತಗುಲಿದ್ದರಿಂದ ತೀವ್ರತೆ ಹೆಚ್ಚಾಗಿದೆ.
ಬೆಂಕಿ ನಂದಿಸಲು ಸ್ಥಳೀಯರು ಬಕೆಟ್, ಕೊಡಗಳಿಂದ ನೀರು ಎರಚಿದ್ದಾರೆ. ಆದರೂ, ಬೆಂಕಿ ದಟ್ಟವಾಗಿದೆ. ನಂತರ ಕುಷ್ಟಗಿ ಅಗ್ನಿಶಾಮಕ ವಾಹನದ ಮೂಲಕ ಬೆಂಕಿ ನಂದಿಸಲಾಗಿದೆ.
ಪೀಠೋಪಕರಣಗಳು ಬೆಂಕಿಯಲ್ಲಿ ಸುಟ್ಟಿವೆ. ಸುಮಾರು ೧ ಕೋಟಿ ರೂ.ಗೂ ಅಧಿಕ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ತಹಶೀಲ್ದಾರ್ ಶ್ರುತಿ ಮಳ್ಳಪ್ಪಗೌಡ್ರು, ಸಿಪಿಐ ಯಶವಂತ ಬಿಸನಳ್ಳಿ, ಪಿಎಸೈ ಮುದ್ದುರಂಗಸ್ವಾಮಿ, ಕ್ರೈಂ ಪಿಎಸೈ ಮಾನಪ್ಪ ವಾಲ್ಮೀಕಿ ಸೇರಿದಂತೆ ಅಗ್ನಿಶಾಮಕ ಠಾಣಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಅಗ್ನಿಶಾಮಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.