ನಿಸರ್ಗದ ಗರ್ಭಪಾತಕ್ಕೆ ಕಾರಣರಾರು… ಉತ್ತರಿಸುವಿರಾ?
ತನ್ನ ತಪ್ಪಿಲ್ಲದೆ ಬೇರೆ ಯಾರೋ ಮಾಡಿದ ತಪ್ಪಿನಿಂದಾಗಿ ಸಂಭವಿಸುವ ಸಾವಿನ ನೋವು ಬಹಳ ವಿದ್ರಾವಕವಾಗಿರುತ್ತದೆ. ಅವರ ಕುಟುಂಬದವರ ಮಾನಸಿಕ ಆಕ್ರಂದನ ಹೇಳತೀರದು. ಅಂತಹ ಅನಿರೀಕ್ಷಿತ ಸಾವಿನಿಂದ ಒಂದು ಕುಟುಂಬವೇ ವಿಕಲವಾಗಿಬಿಡುತ್ತದೆ. ಆ ಸಾವಿಗೆ ನಮ್ಮ ಹೃದಯ ಮಿಡಿಯುತ್ತದೆ ಎಂದಾಕ್ಷಣ ಅಥವಾ ಹಣದ ರೂಪದಲ್ಲಿ ನೀಡಿದ ಪರಿಹಾರ ಅವರ ನೋವನ್ನು ನೀಗಿಸುವುದಿಲ್ಲ. ಕುಟುಂಬದ ವಿಕಲತೆ ಪುನಃ ಸರಿಗೂಡುವುದಿಲ್ಲ. ಹಾಗೆ ಒಂದೇ ಸ್ಥಳದಲ್ಲಿ ಒಟ್ಟು ೩೬೦ಕ್ಕೂ ಹೆಚ್ಚು ಕುಟುಂಬಗಳು ಏಕಾಏಕಿ ಬಲಿಪಶುವಾಗಿವೆ. ಅಷ್ಟರಲ್ಲಿ ಎಷ್ಟು ಜನ ಗರ್ಭಿಣಿಯರಿದ್ದಿರಬಹುದು? ಅಲ್ಲಿನ ಆಕ್ರಂದನ ಹೇಗಿರಬಹುದು?
ಪಶ್ಚಿಮಘಟ್ಟಗಳಲ್ಲಿ ಘಟಿಸುತ್ತಿರುವ ಇಂತಹ ಘಟನೆಗಳನ್ನು `ನೈಸರ್ಗಿಕ ವಿಕೋಪ' ಎಂಬ ಅಲಂಕಾರಿಕ ಪದಗಳಿಂದ ಬಣ್ಣಿಲಾಗುತ್ತದೆ. ಆದರೆ ತನ್ನ ತಪ್ಪಿಲ್ಲದೆ ಕುಟುಂಬದವರನ್ನು ಕಳೆದುಕೊಂಡವರಿಗೂ ಕೋಪ ಬರುವುದಿಲ್ಲವೆ? ಕೋಪವಿಲ್ಲದೆ ಜೀವನ ಮಾಡಬೇಕು ಎನ್ನುವುದು ಸಹಜ ಜ್ಞಾನ. ಆದರೆ ನೈಸರ್ಗಿಕ ವಿಕೋಪಕ್ಕೆ ಕಾರಣ ಯಾರು? ಅದು ಕೋಪ ಮಾಡಿಕೊಂಡಿದ್ದೇಕೆ? ಬೇರೆಯವರು ಮಾಡಿದ ತಪ್ಪಿನಿಂದಾಗಿ ಅದಕ್ಕೂ ಕೋಪ ಬಂದಿದೆ. ತಪ್ಪು ಮಾಡಿದ್ದು ಯಾರು? ಅದು ಆಡಳಿತ ವ್ಯವಸ್ಥೆಯಲ್ಲವೆ?
ಪಶ್ಚಿಮಘಟ್ಟಗಳಿಗೆ ಅಂದಾಜು ೧೪ ಕೋಟಿ ವರ್ಷಗಳ ವಯಸ್ಸಾಗಿದೆ. ಅಷ್ಟು ಕೋಟಿ ವರ್ಷಗಳ ಹಿಂದಿನಿಂದ ಅಲ್ಲಿನ ನಿಸರ್ಗ ಮಾತೆ ಗರ್ಭ ಧರಿಸಿದ್ದಳು. ಆದರೆ ಮೋಜು ಮಸ್ತಿಗಾಗಿ ಮತ್ತು ಹಣದ ದುರಾಸೆಯಿಂದ ಎಲ್ಲ ನೈತಿಕತೆಗಳನ್ನು ಗಾಳಿಗೆ ತೂರಿ ಅಲ್ಲಿನ ನಿಸರ್ಗವನ್ನು ಬೆತ್ತಲೆ ಮಾಡಿದವರಾರು? ಬೆಟ್ಟಗುಡ್ಡಗಳ ತುದಿಯಲ್ಲಿ ರೆಸಾರ್ಟ್ಗಳನ್ನು ಮಾಡಿ ನೀರಿನ ಪೂರೈಕೆ ಎಂಬ ಹೆಸರಿನಲ್ಲಿ ಬೋರ್‌ವೆಲ್ ರೂಪದಲ್ಲಿ ಅವಳ ಹೊಟ್ಟೆಯನ್ನು ಬಗೆಯಲು ಅನುಮತಿ ನೀಡಿದವರಾರು? ತೆರಿಗೆ ಎಂಬ ಹೆಸರಿನಲ್ಲಿ ಹಣ ಪಡೆದುಕೊಂಡು ಆಡಳಿತ ವ್ಯವಸ್ಥೆ ಕಣ್ಣು ಮುಚ್ಚಿ ನಿದ್ರಿಸುತ್ತಿದೆಯೇ? ಸೂಕ್ಷ್ಮ ನಿಸರ್ಗಗಳಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡುತ್ತೀರಲ್ಲ, ಇಂತಹ ಅವಿವೇಕಿತನಕ್ಕೆ ಏನು ಹೇಳುವುದು? ಅವಿವೇಕಿ ಆಡಳಿತಗಾರರ ನಿರ್ಲಕ್ಷ್ಯ, ಲಜ್ಜೆಗೇಡಿತನ ಮತ್ತು ಲಾಲಸೆಗಳಿಂದಾಗಿ ಭೂತಾಯಿಯ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡಿದ್ದರಿಂದ ಅವಳ ಗರ್ಭಪಾತವಾಗಿದೆ. ಹಣದಿಂದ ಅವಳ ಗರ್ಭಪಾತದ ನೋವನ್ನು ನೀವು ಭರಿಸಬಹುದೇ?
ಅಣೆಕಟ್ಟೆ ತುಂಬಿದಾಗ ಹೋಗಿ ಬಾಗಿನ ನೀಡಿ ನಗುತ್ತೀರಿ. ಆದರೆ ನಿಮಗೆ ಬಾಗಿನದ ಅರ್ಥದ ಅರಿವಿದೆಯೇ? ಗರ್ಭಿಣಿಯಾದ ಏಳು ತಿಂಗಳಿಗೆ ಸೀಮಂತ ಮಾಡುವುದು ರೂಢಿಯಲ್ಲಿದೆ. ಅದೇ ರೀತಿ ನದಿ ಮತ್ತು ಅಣೆಕಟ್ಟೆಗಳು ಕೂಡ ಗರ್ಭಿಣಿಯಾಗಿವೆ. ಅವಳಿಗೆ ಸೀಮಂತ ಮಾಡುತ್ತಿದ್ದೀರಿ. ಆದರೆ ಅವಳು ಅನುಭವಿಸುತ್ತಿರುವ ನೋವುಗಳನ್ನು ಗ್ರಹಿಸಿದ್ದೀರಾ? ಅವಳು ನೋವನ್ನೇ ಹೊತ್ತುಕೊಂಡು ಬಂದಿದ್ದಾಳೆ. ಆ ನೋವಿನಲ್ಲಿ ಅವಳ ರಕ್ತ ಹರಿಯುತ್ತಿದೆ. ಅವಳ ಕೋಪದಿಂದಾಗಿ ನೂರಾರು ಜನಗಳು ಸಾಯುವವರೆಗೆ ಕಾಯುತ್ತೀರಲ್ಲ, ಅದು ಸರಿಯೇ? ರೋಗಕ್ಕೆ ಚಿಕಿತ್ಸೆ ನೀಡುವುದಕ್ಕಿಂತ ರೋಗ ತಡೆಹಿಡಿಯುವುದು ಉತ್ತಮ [Prevention is better than cure] ಎನ್ನುವ ಪರಿವೇ ಆಡಳಿತ ವ್ಯವಸ್ಥೆಗಿಲ್ಲವೆ? ಪರಿಸರ ತಜ್ಞ ಮಾದವ್ ಗಾಡ್ಗಿಲ್ ಅವರ ವರದಿಯನ್ನು ಧಿಕ್ಕರಿಸಿ ಮತ್ತೊಂದು ವರದಿಯನ್ನು ಕೇಳಿದ್ದೇಕೆ? ಹೋಗಲಿ, ಅವೆರಡರಲ್ಲಿ ಯಾವುದನ್ನು ಪರಿಗಣಿಸಿದ್ದೀರಿ? ಇಂತಹ ವರದಿ ಎನ್ನುವುದು ಜನರ ಕಣ್ಣೊರೆಸುವ ನಾಟಕವಲ್ಲವೆ? ಇನ್ನೂ ಎಷ್ಟು ಜನರ ಸಾವಿಗಾಗಿ ಕಾಯುತ್ತಿರುವಿರಿ? ವಯನಾಡಿನಲ್ಲಿ ಸಾವಿರಾರು ಜನರು ನಿರ್ಗತಿಕರಾದರು. ಈ ದುರಂತಕ್ಕೆ ನಿಸರ್ಗ ಕಾರಣವೇ?
ವಯನಾಡಿನ ಗುಡ್ಡ ಕುಸಿಯುವ ಮುಕ್ಕಾಲು ಗಂಟೆಯ ಮೊದಲು ಮನೆಯಲ್ಲಿ ಸಾಕಿದ್ದ ಗಿಣಿಯು ಮಧ್ಯರಾತ್ರಿಯಲ್ಲಿ ಕೂಗಾಡುತ್ತಾ ತನ್ನ ಯಜಮಾನನನ್ನು ಕರೆದು, ನಾಲ್ಕು ಮನೆಗಳ ಜನರನ್ನು ಕಾಪಾಡಿದೆ. ಪ್ರವಾಹವಾಗಿದ್ದ ಮತ್ತೊಂದು ಪ್ರದೇಶದಲ್ಲಿ ಒಬ್ಬ ಮಹಿಳೆ ಮತ್ತು ಎರಡು ಮಕ್ಕಳು ನೀರಿನ ನಡುವೆ ಸಿಲುಕಿಕೊಂಡು ನಲುಗುತ್ತಿದ್ದರು. ಈ ದೃಶ್ಯವನ್ನು ಗ್ರಹಿಸಿದ ಒಂದು ಸಲಗ ಕಣ್ಣೀರಿಡುತ್ತಾ ರಾತ್ರಿ ಪೂರ್ತಿ ಅವರ ಕಾವಲಿಗಾಗಿ ನಿಂತು ಅವರನ್ನು ರಕ್ಷಿಸಿದ ಘಟನೆ ವರದಿಯಾಗಿದೆ. ಇಂತಹ ಪ್ರಜ್ಞಾವಂತ ಪ್ರಾಣಿಗಳ ನಾಡಿನೊಳಗೆ ರಸ್ತೆ, ರೈಲು, ಗಣಿಗಾರಿಕೆ, ಸುರಂಗ, ಪ್ರವಾಸೋದ್ಯಮ ಚಟುವಟಿಕೆ ಮಾಡುತ್ತಿರುವ ಆಡಳಿತ ವ್ಯವಸ್ಥೆಗೆ ಪ್ರಜ್ಞೆ ಇಲ್ಲವೆ?
ಸೂಕ್ಷ್ಮ ಪರಿಸರ
ಜನಸಂಖ್ಯೆ ಹೆಚ್ಚಾದ ಕಾರಣ ರಸ್ತೆ, ರೈಲು ಅನಿವಾರ್ಯ ಎನ್ನಬಹುದು! ಆದರೆ ಯಾವುದಕ್ಕೂ ಒಂದು ವೈಜ್ಞಾನಿಕ ಲೆಕ್ಕಾಚಾರವಿದೆ. ಅರಣ್ಯ ಪ್ರದೇಶಗಳ ಮಣ್ಣನ್ನು ಭದ್ರವಾಗಿ ಹಿಡಿದಿಟ್ಟಿರುವ ಮರಗಳನ್ನು ಕಡಿದು ಪರಿಸರ ಉಳಿಸುವ ಹೆಸರಿನಲ್ಲಿ ಬೇರೆಲ್ಲೋ ಹತ್ತು ಸಸಿಗಳನ್ನು ನೆಟ್ಟರೆ ಅಲ್ಲಿನ ಪರಿಸರ ಉಳಿಯುವುದಿಲ್ಲ. ಪರಿಸರ ಎಂದರೆ ಕೇವಲ ಮರಗಳಲ್ಲ. ಒಂದು ಮರದ ಹಿಂದೆ ನೂರೆಂಟು ಅದೃಶ್ಯ ಕೊಂಡಿಗಳಿವೆ.
ಒಂದು ಪ್ರದೇಶದ ಗುಡ್ಡ ಎಂದರೆ ಅದು ಆ ಪ್ರಾಂತ್ಯದ ಹೃದಯ ಅಥವಾ ಶ್ವಾಸಕೋಶ ಇದ್ದ ಹಾಗೆ. ಅದು ಅಲ್ಲಿನ ಪಂಚಭೂತಗಳನ್ನು ವ್ಯವಸ್ಥಿತವಾಗಿ ರೂಪಿಸುತ್ತಿರುತ್ತದೆ. ಅಂತಹ ಶ್ವಾಸಕೋಶವನ್ನು ಬಗೆದು ಗಣಿಗಾರಿಕೆ ಮಾಡಿದರೆ ಏನಾಗಬಹುದು ಕಲ್ಪಿಸಿಕೊಳ್ಳಿ!
ಒಂದು ಪ್ರದೇಶದ ಮಣ್ಣು ಸಾವಿರಾರು ವರ್ಷಗಳಲ್ಲಿ ರೂಪಗೊಂಡಿರುತ್ತದೆ. ನೀವು ಅಲ್ಲಿ ಹತ್ತಾರು ಬರ‍್ವೆಲ್ ಕೊರೆದಾಗ, ಒಂದು ಬರ‍್ವೆಲ್ ಜಾಗದಿಂದ ಮತ್ತೊಂದು ಬರ‍್ವೆಲ್ ನಡುವೆ ಸಂಪರ್ಕ ಬೆಳೆಯುತ್ತದೆ. ಅಂತರ್ಜಲದ ಹರಿವಿನ ವ್ಯವಸ್ಥೆ ಬದಲಾಗುತ್ತದೆ. ಅಲ್ಲಿನ ಭೂಮಿಯ ಮೇಲ್ಮೈಯಲ್ಲಿ ಬಿರುಕು ಬೀಳುತ್ತದೆ. ಯಾವುದೇ ಒಂದು ಸಣ್ಣ ಪುಟ್ಟ ಯೋಜನೆಗೆ ಅನುಮತಿ ನೀಡುವ ಮೊದಲು ಪರಿಸರದ ಸೂಕ್ಷತೆಗಳನ್ನು ಗೌರವಿಸಿ, ಪರಿಣಿತ ವಿಜ್ಞಾನಿಗಳ ಸಲಹೆಗಳಿಗೆ ಮತ್ತು ವೈಜ್ಞಾನಿಕ ವರದಿಗಳಿಗೆ ಮನ್ನಣೆ ನೀಡಿ ಪರಿಗಣಿಸಿ ಅನುಮತಿ ನೀಡುವುದನ್ನು ರೂಢಿಸಿಕೊಳ್ಳಿ. ಮುಲಾಜಿಗಾಗಿ ಅನುಮತಿ ನೀಡಿ ಬೇರೆಯವರ ಸಾವಿಗೆ ಕಾರಣರಾಗಬಾರದು. ಇಂದು ಘಟಿಸುತ್ತಿರುವ ವಿಕೋಪಗಳು ನೈಸರ್ಗಿಕವಲ್ಲ. ಸಾವುಗಳು ಸಹಜವಲ್ಲ. ಅವು ಪರೋಕ್ಷವಾಗಿ ಮಾಡಿದ ಕೊಲೆಗಳು ಎಂದರೆ ತಪ್ಪಲ್ಲ.
ಬೆಂಗಳೂರಿನ ಸುರಂಗ ರಸ್ತೆ
ಈಗ ಬೆಂಗಳೂರಿನಲ್ಲಿ ಸುರಂಗ ಮಾರ್ಗ ಮಾಡಲು ಹೊರಟಿದ್ದೀರಿ! ಬೆಂಗಳೂರು ನಗರವನ್ನು ಹೊತ್ತು ನಿಂತಿರುವ ಭೂಮಿ ತಾಯಿ ನಿಸರ್ಗವಲ್ಲವೆ? ಬೆಂಗಳೂರಿನಲ್ಲಿ ಈಗಾಗಲೇ ೪೦ ಲಕ್ಷಕ್ಕೂ ಹೆಚ್ಚು ಮನೆಗಳು ಮತ್ತು ಸಾವಿರಾರು ಬಹುಮಹಡಿ ಕಟ್ಟಡಗಳಿವೆ.
ಅಷ್ಟೊಂದು ಕಟ್ಟಡಗಳ ತೂಕವನ್ನು ಹೊರಲಾರದೆ ಭೂತಾಯಿ ನೋವು ಅನುಭವಿಸುತ್ತಿದ್ದಾಳೆ. ಈಗ ನೀವು ಅವಳ ಹೊಟ್ಟೆಯನ್ನೇ ಕೊರೆಯಲು ಹೊರಟಿದ್ದೀರಿ. ಅವಳ ನೋವಿನ ಮಾತುಗಳು ಈಗ ನಿಮಗೆ ಕೇಳಿಸುತ್ತಿಲ್ಲ. ಆದರೆ ಅವಳಿಗೆ ಯಾವಾಗ ಪ್ರಸವ ಆಗುತ್ತದೋ ಗೊತ್ತಿಲ್ಲ. ಮುಂದೊಮ್ಮೆ ಅವಳು ಕೋಪಗೊಂಡಾಗ ಅದನ್ನು `ನೈಸರ್ಗಿಕ ವಿಕೋಪ' ಎಂದು ಬಣ್ಣಿಸುತ್ತೀರಿ. ಮುಂದೆ ಆಗಬಹುದಾದ ಸಾವು ನೋವಿಗೆ ಆಡಳಿತ ವ್ಯವಸ್ಥೆಯೇ ಕಾರಣವಲ್ಲವೇ? ಇಲ್ಲಿ ಅಂತಾರಾಷ್ಟ್ರೀಯ ಮಟ್ಟದ ಪ್ರತಿಷ್ಠೆಯ ಪೈಪೋಟಿಯೇ ಮುಖ್ಯವಾಗಿ ಗೋಚರಿಸುತ್ತಿರುವುದು ವಿಷಾದನೀಯ.
ಅದಕ್ಕೂ ಮೊದಲು ಬೆಂಗಳೂರಿನ ನಗರದ ಇಂದಿನ ಆರೋಗ್ಯ ಸರಿ ಇದೆಯೇ? ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿದೆಯೇ? ಶುದ್ಧ ಕುಡಿಯುವ ನೀರಿನ ಪೂರೈಕೆ ಆಗುತ್ತಿದೆಯೇ? ಕೊಳಚೆ ನೀರಿನ ನಿರ್ವಹಣೆ ಸರಿಯಾಗಿದೆಯೇ? ಕೆರೆ ಎಂಬುದು ಒಂದು ಜೀವಮಂಡಲ. ಆದರೆ ಬೆಂಗಳೂರಿನ ಎಲ್ಲ ಕೆರೆಗಳು ವಿಷಪೂರಿತವಾಗಿ ಅವುಗಳ ಜೀವ ನಲುಗುತ್ತಿರುವುದು ನಿಮ್ಮ ಅರಿವಿಗೆ ಬಂದಿಲ್ಲವೆ? ಅಂತರ್ಜಲ ವ್ಯವಸ್ಥೆ ಎಷ್ಟು ಕೆಟ್ಟಿದೆ ಎಂಬ ಗ್ರಹಿಕೆ ಇಲ್ಲವೆ? ಕಸ ನಿರ್ವಹಣೆ ವ್ಯವಸ್ಥಿತವಾಗಿ ಆಗುತ್ತಿದೆಯೇ? ಕೊಳಗೇರಿಯಲ್ಲಿ ಲಕ್ಷಗಟ್ಟಲೆ ವಾಸಿಸುತ್ತಿರುವ ಜನರ ವ್ಯವಸ್ಥೆ ಹೇಗಿದೆ? ಅಲ್ಲಿ ಜೀವಿಸುತ್ತಿರುವ ಬಹುತೇಕರು ಪರಿಶಿಷ್ಟ ಜನಾಂಗದವರು ಎನ್ನುವುದು ಗೊತ್ತಿಲ್ಲವೇ? ಬೆಂಗಳೂರಿನ ಹೊಟ್ಟೆಯ ಒಳಗೆ ಇಷ್ಟೊಂದು ರೋಗಗಳನ್ನು ತುಂಬಿಕೊಂಡು, ಅಭಿವೃದ್ಧಿಯ ಹೆಸರಿನಲ್ಲಿ ಹೊಟ್ಟೆಯನ್ನೇ ಬಗೆಯಲು ಯೋಚಿಸುತ್ತಿರುವುದು ಸರಿಯೇ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವಿರಾ?