For the best experience, open
https://m.samyuktakarnataka.in
on your mobile browser.

ನಿಸರ್ಗವನ್ನು ಪ್ರೀತಿಸುವ ಮನಸನ್ನು ಎಲ್ಲರೂ ಬೆಳೆಸಿಕೊಳ್ಳಬೇಕು

04:04 PM Jul 03, 2024 IST | Samyukta Karnataka
ನಿಸರ್ಗವನ್ನು ಪ್ರೀತಿಸುವ ಮನಸನ್ನು ಎಲ್ಲರೂ ಬೆಳೆಸಿಕೊಳ್ಳಬೇಕು

ಬೆಂಗಳೂರು: ನಿಸರ್ಗವನ್ನು ಪ್ರೀತಿಸುವ ಮನಸನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ನಿಸರ್ಗ ಕಾಪಾಡುವುದು ಕಷ್ಟವೇನಿಲ್ಲ. ಅದನ್ನು ಪ್ರೀತಿಸುವ ಪ್ರವೃತ್ತಿ ಅಗತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅವರು ಇಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ‘ಭೂ ಪರಿವರ್ತನೆ ಮತ್ತು ಒಣಭೂಮಿ ನಿರ್ವಹಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ ಪ್ರತಿದಿನವೂ ಪರಿಸರ ದಿನವನ್ನಾಗಿ ಆಚರಿಸುವ ಪ್ರವೃತ್ತಿ ಇಂದಿನ ಕಾಲಘಟ್ಟದ ಅಗತ್ಯವಾಗಿದೆ. ತಾಜ್ಯಗಳ ಸೂಕ್ತ ವಿಲೇವಾರಿ, ಮಳೆ ನೀರು ಕೊಯ್ಲು ಮುಂತಾದ ಪದ್ದತಿಗಳನ್ನು ಅಳವಡಿಸಿಕೊಳ್ಳಬೇಕು. ಇದರಿಂದ ನಮ್ಮ ಆರೋಗ್ಯವನ್ನೂ ಕಾಪಾಡಿಕೊಳ್ಳಲು ಅನುಕೂಲ. ಎಲ್ಲರೂ ಪರಿಸರ ಪ್ರೇಮಿಗಳಾಗಿ ನೈರ್ಮಲ್ಯ ಕಾಪಾಡಿಕೊಳ್ಳೋಣ. ನಿಸರ್ಗವನ್ನು ಪ್ರೀತಿಸುವ ಮನಸನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ನಿಸರ್ಗ ಕಾಪಾಡುವುದು ಕಷ್ಟವೇನಿಲ್ಲ. ಅದನ್ನು ಪ್ರೀತಿಸುವ ಪ್ರವೃತ್ತಿ ಅಗತ್ಯ. ಒಂದು ಮರ ಕಡಿದರೆ ಮತ್ತೊಂದು ನೆಡಬೇಕು. ಕಾಡು ಬೆಳೆಸಬೇಕು. ಕಳೆದ 20 ವರ್ಷಗಳಲ್ಲಿ ಪ್ರವಾಹ ಹಾಗೂ ಬರಗಾಲವನ್ನು ನಾವು ಎದುರಿಸುತ್ತಿದ್ದು ಇದರ ಕಾರಣಗಳ ಬಗ್ಗೆ ಸಂಶೋಧನೆಗಳು ಅಗತ್ಯವಾಗಿ ನಡೆಯಬೇಕಿದೆ. ಸಂಶೋಧನೆಗಳು ಸರಿಯಾದ ದಾರಿಯಲ್ಲಿ ನಡೆಯಬೇಕು ಹಾಗೂ ಸಂಶೋಧನಾ ಕೇಂದ್ರಗಳೂ ಹೆಚ್ಚಾಗಬೇಕು. ಯಾವ ಭಾಗದಲ್ಲಿ ಯಾವ ರೀತಿ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಬೇಕೆನ್ನುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಗಮನ ಹರಿಸಬೇಕು.
ಪ್ರತಿಯೊಬ್ಬರೂ ಪಾಲ್ಗೊಂಡರೆ ಮಾತ್ರ ಪರಿಸರವನ್ನು ಸಂರಕ್ಷಣೆ ಮಾಡಲು ಸಾಧ್ಯ. ಸರ್ಕಾರ ಮತ್ತು ಸಾರ್ವಜನಿಕರು ಒಟ್ಟಾಗಿ ಈ ನಿಟ್ಟಿನಲ್ಲಿ ಕೈಜೋಡಿಸಬೇಕು. ವಿದ್ಯಾರ್ಥಿ ದೆಸೆಯಿಂದಲೇ ಪರಿಸರ ಸಂರಕ್ಷಣೆಯ ಲಾಭಗಳೇನು ಎಂದು ತಿಳಿಸಿ ವಿದ್ಯಾರ್ಥಿಗಳು ಪರಿಸರ, ಕಾಡು, ಜನಜೀವನ, ಪ್ರಾಣಿ ಸಂಕುಲಗಳ ಬಗ್ಗೆ ಅರಿತುಕೊಳ್ಳಬೇಕು. ಮನುಷ್ಯರು ಬದುಕುವಂತೆ ಪ್ರಾಣಿ ಸಂಕುಲಕ್ಕೂ ಬದುಕುವ ಹಕ್ಕಿದೆ. ಅದನ್ನು ಸಂರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಆರೋಗ್ಯಕ್ಕೂ ನೈರ್ಮಲ್ಯಕ್ಕೂ ನೇರ ಸಂಬಂಧವಿದೆ. ಸ್ವಚ್ಛತೆ ಇದ್ದಾಗ ಮಾತ್ರ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯ. ಶುದ್ಧ ಕುಡಿಯುವ ನೀರು ಸರಬರಾಜು ಸರ್ಕಾರದ ಕರ್ತವ್ಯ. ಇತ್ತೀಚೆಗೆ ಕಲುಷಿತ ನೀರಿನಿಂದಾಗಿರುವ ಅನಾಹುತಗಳನ್ನು ನಾವು ನೋಡಿದ್ದೇವೆ. ಅನೇಕರು ಸಾವೀಗೀಡಾಗಿದ್ದು, ಕಾಯಿಲೆಗಳಿಗೂ ಒಳಗಾಗಿದ್ದಾರೆ. ಶುದ್ಧ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯವಾದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದೆಂದು ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಶುದ್ಧ ಕುಡಿಯುವ ನೀರಿನ ಸರಬರಾಜಿನ ಪ್ರಾಮಾಣಿಕ ಪ್ರಯತ್ನವನ್ನು ಸರ್ಕಾರ ಮಾಡಲಿದೆ. ಇತ್ತೀಚೆಗೆ ಡೆಂಘಿ ಪ್ರಕರಣಗಳು ಹೆಚ್ಚಾಗುತ್ತಿದ್ದು ಇದರ ನಿಯಂತ್ರಣಕ್ಕೆ ನಗರಪಾಲಿಕೆ, ಆರೋಗ್ಯ ಇಲಾಖೆ, ಪೌರಾಡಳಿತ ಇಲಾಖೆಗಳು ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ. ಸಾರ್ವಜನಿಕರೂ ಕೈಜೋಡಿಸಿದಾಗ ಮಾತ್ರ ಇದರ ನಿರ್ಮೂಲನೆ ಸಾಧ್ಯ ಎಂದಿದ್ದಾರೆ.