ನೀಡಿದ್ದನ್ನು ಪಡೆಯುತ್ತೇವೆ
ಪ್ರಪಂಚದಲ್ಲಿ ಪ್ರತಿಯೊಬ್ಬ ಮನುಷ್ತನು ತನ್ನ ಉನ್ನತಿಯನ್ನೇ ಬಯಸುತ್ತಾನೆ. ಏನೂ ಅರಿಯದ ಮೂರ್ಖನೂ ಕೂಡ ತನ್ನ ಅವನತಿಯನ್ನು ಬಯಸುವುದಿಲ್ಲ. ಯಾವಾಗಲೂ ಇತರರಿಗೆ ಹಿತವನ್ನು ಬಯಸುವ ಮತ್ತು ಹಿತವನ್ನು ಉಂಟು ಮಾಡುವ ಸನ್ಮತಿಯುಳ್ಳ ಮನುಷ್ಯನೇ ಉನ್ನತಿಯನ್ನು ಹೊಂದುತ್ತಾನೆ. ಈ ಪ್ರಪಂಚಕ್ಕೆ ನಾವು ಏನನ್ನು ಕೊಡುತ್ತೇವೆಯೋ ಅದನ್ನೇ ಈ ಪ್ರಪಂಚ ನಮಗೆ ಮರಳಿ ನೀಡುತ್ತದೆ.
ನಮಗೆ ಒಳ್ಳೆಯದಾಗಬೇಕೆಂದರೆ, ನಾವು ಒಳ್ಳೆಯದನ್ನು ನೀಡಬೇಕು. ನಾವು ಯಾರಿಗಾದರೂ ಯಾವಾಗಲೂ ಕೆಟ್ಟದ್ದನ್ನು ಬಯಸುತ್ತಿದ್ದರೆ, ಯಾರಿಗೆ ನಾವು ಕೆಟ್ಟದ್ದನ್ನು ಬಯಸುತ್ತೇವೆಯೋ ಅವರಿಗೆ ಕೆಟ್ಟದಾಗುತ್ತದೆಯೋ ಇಲ್ಲವೋ ಹೇಳಲಾಗದು ಆದರೆ ನಮಗೆ ಮಾತ್ರ ಖಂಡಿತವಾಗಲೂ ಕೆಟ್ಟದ್ದಾಗುತ್ತದೆ. ಅದೇ ರೀತಿ ನಾವು ಯಾರಿಗಾದರೂ ಯಾವಾಗಲೂ ಒಳ್ಳೆಯದನ್ನು ಬಯಸುತ್ತಿದ್ದರೆ, ಯಾರಿಗೆ ನಾವು ಒಳ್ಳೆಯನ್ನು ಬಯಸುತ್ತೇವೆಯೋ ಅವರಿಗೆ ಒಳ್ಳೆಯದಾಗುತ್ತದೆಯೋ ಇಲ್ಲವೋ ಹೇಳಲಾಗದು, ಆದರೆ ನಮಗೆ ಮಾತ್ರ ಖಂಡಿತವಾಗಲೂ ಒಳ್ಳೆಯದಾಗುತ್ತದೆ. ಏಕೆಂದರೆ ಒಳ್ಳೆಯದಾಗಬೇಕೆಂಬ ಬೀಜ ನಮ್ಮ ಮನದಲ್ಲಿ ಬಿದ್ದಿರುತ್ತದೆ. ಬೀಜವು ಎಲ್ಲಿ ಬೀಳುತ್ತದೆಯೋ ಅಲ್ಲೇ ಮರ ಬೆಳೆದು ಬೀಜಕ್ಕೆ ತಕ್ಕನಾದ ಫಲ ಕೊಡುತ್ತದೆ. ಆದ್ದರಿಂದ ನಮ್ಮ ತಲೆಯಲ್ಲಿ ಕೆಟ್ಟ ಯೋಚನೆಗಳಿಗೆ ಅವಕಾಶ ಕೊಡದೇ ಇತರರಿಗೆ ಒಳ್ಳೆಯದನ್ನು ಬಯಸುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು.
ವಿವೇಕಾನಂದರು ರಾಮಕೃಷ್ಣ ಪರಮಹಂಸರು ಶಿವಾಧಿನರಾದ ನಂತರ ಅವರ ಧರ್ಮಪತ್ನಿ ಶಾರದಾಮಾತೆಯಲ್ಲಿಯೇ ಅವರನ್ನು ಕಾಣುತ್ತಿದ್ದರು. ಅಮೆರಿಕದಲ್ಲಿ ನಡೆಯುವ ಸರ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ವಿದೇಶಕ್ಕೆ ಹೋಗುವ ಮುನ್ನ ಶಾರದಾಮಾತೆಯ ಸಮ್ಮತಿ ಕೇಳಲು ಬರುತ್ತಾರೆ. ಆಗ "ಇನ್ನೂ ಸಮಯ ಬಂದಿಲ್ಲ ಬೇಡ" ಎಂದು ಮಾತೆಯು ನಿರಾಕರಿಸುತ್ತಾರೆ. ಸ್ನೇಹಿತರ ಆಗ್ರಹ ಹೆಚ್ಚಾದಾಗ ಎರಡನೇ ಬಾರಿ ಕೇಳಲು ಬರುತ್ತಾರೆ. ಆಗಲೂ ಮಾತೆಯು 'ಇನ್ನೂ ಸಮಯ ಬಂದಿಲ್ಲ, ಬೇಡ" ಎಂದು ಹೇಳುತ್ತಾರೆ.
ಕೆಲವು ದಿನಗಳ ನಂತರ ಮತ್ತೆ ಸ್ನೇಹಿತರು ಇನ್ನೊಮ್ಮೆ ಪ್ರಯತ್ನಿಸಿ ನೋಡು ಎಂದು ಆಗ್ರಹಿಸಿದರು. ಕೊನೆಯ ಬಾರಿ ಕೇಳಿದರಾಯಿತು ಎಂದು ಮಾತೆಯ ಹತ್ತಿರ ಬರುತ್ತಾರೆ. ಆಗ ಶಾರದಾಮಾತೆಯು ಅಡುಗೆಮನೆಯಲ್ಲಿ ಆಹಾರವನ್ನು ಸಿದ್ಧಗೊಳಿಸುತ್ತಿರುತ್ತಾರೆ. ನಮ್ರತೆಯಿಂದ ತಲೆ ಬಾಗಿ ಸ್ನೇಹಿತರು ನಿಮ್ಮ ಒಪ್ಪಿಗೆ ಕೇಳಲು ಮತ್ತೊಮ್ಮೆ ಕಳಿಸಿದ್ದಾರೆ' ಎಂದು ಹೇಳುತ್ತಾರೆ. ಆ ಸಮಯದಲ್ಲಿ ಮಾತೆಯ ಕೈಯ್ಯಲ್ಲಿಯ ಚಾಕು ಕೆಳಗೆ ಬೀಳುತ್ತದೆ. ಆಗ ಮಾತೆಯು
ವಿವೇಕ! ಮೊದಲು ಕೆಳಗೆ ಬಿದ್ದ ಚಾಕು ಕೊಡು'. ಎಂದು ಹೇಳಿದಾಗ ಆಗಲಿ ಮಾತೆ ಎಂದು ಚಾಕು ಎತ್ತಿ ಮಾತೆಗೆ ಕೊಡುತ್ತಾನೆ.
ತಕ್ಷಣವೇ ವಿವೇಕ! ಸಮಯ ಬಂದಾಗಿದೆ. ನೀನು ವಿದೇಶಕ್ಕೆ ಹೋಗು. ಕೀರ್ತಿಶಾಲಿಯಾಗಿ ಬಾ ಎಂದು ಆದೇಶಿಸುತ್ತಾರೆ. ಆಗ ವಿವೇಕಾನಂದರು ನಾನು ಚಾಕು ಕೊಡುವುದಕ್ಕೂ, ಸಮಯ ಬರುವುದಕ್ಕೂ ಏನು ಸಂಬಂಧ? ಚಾಕು ಕೊಟ್ಟ ತಕ್ಷಣವೇ ಹೋಗಲು ಅಪ್ಪಣೆ ನೀಡಿದಿರಿ. ಅದಕ್ಕೆ ಕಾರಣವೇನು? ಎಂದು ಕೇಳಿದ. ಆಗ ಮಾತೆಯು ಮುಗುಳ್ನಗುತ್ತ, ನೀನು ಚಾಕು ಕೊಡುವಾಗ ಅದರ ಹಿಡಿಕೆಯನ್ನು ನನ್ನ ಕಡೆ ಮಾಡಿ, ಮುಂಭಾಗವನ್ನು ನೀನು ನಿನ್ನ ಕೈಯಲ್ಲಿ ಹಿಡಿದು ಕೊಟ್ಟೆ. ಇದರಿಂದ ಈ ಚಾಕು ಪ್ರಸಂಗವಶಾತ್ ಚುಚ್ಚಿದರೆ ನನಗೆ ಚುಚ್ಚಲಿ, ನಾನು ಯಾರಿಗೆ ಚಾಕು ಕೊಡುತ್ತಿರುವೆನೋ ಅವರಿಗೆ ಏನೂ ಆಗಬಾರದು ಎಂಬ ಪರಹಿತ ಸನ್ಮತಿ ನಿನ್ನಲ್ಲಿರುವುದರಿಂದ ನೀನು ಖಂಡಿತವಾಗಲೂ ಉನ್ನತಿಯನ್ನು ಪಡೆದುಕೊಳ್ಳುತ್ತಿಯಾ. ಎಂದು ಹೇಳಿದರಂತೆ.
ಹೀಗೆ ಇನ್ನೊಬ್ಬರಿಗೆ ಹಿತ ಬಯಸುವ ನಮ್ಮ ಸನ್ಮತಿಯೇ ನಮ್ಮ ಉನ್ನತಿಗೆ ಕಾರಣವಾಗುವುದರಿಂದ ತಮ್ಮ ಸರ್ವಾಂಗೀಣ ಉನ್ನತಿ ಬಯಸವುವವರು ಸದಾ ಇತರರ ಹಿತವನ್ನು ಬಯಸಬೇಕು.