ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ನೀತಿ ಸಂಹಿತೆಗೂ ಬೇಕು ಮಿತಿ

06:05 AM Jun 10, 2024 IST | Samyukta Karnataka

ಏಳು ಹಂತದ ಮತದಾನದ ಹದಿನೈದನೆ ಲೋಕಸಭೆ ಚುನಾವಣೆಯ ಸುದೀರ್ಘ ಅವಧಿಯ ಚುನಾವಣೆ ಮುಗಿದು ಹೊಸ ಸರ್ಕಾರ ಅಧಿಕಾರಕ್ಕೆ ಬಂದಿರುವ ಸಂದರ್ಭದಲ್ಲಿ ಸಾರ್ವಜನಿಕ ವಲಯದಲ್ಲಿ ಇನ್ನೂ ಮುಂದುವರಿದಿರುವ ಚರ್ಚೆಯ ಸಾರವೆಂದರೆ ಇಡೀ ದೇಶದಲ್ಲಿ ೮೪ ದಿನಗಳ ನೀತಿ ಸಂಹಿತೆ ಜಾರಿಯಲ್ಲಿರುವ ಅಗತ್ಯ ಇತ್ತೇ ಎಂಬುದು. ಘೋಷಿತ ಅವಧಿಯ ನೀತಿ ಸಂಹಿತೆ ಜೊತೆಗೆ ಅದರ ಜೊತೆಗೇ ಬರುವ ಆಡಳಿತ ವ್ಯವಸ್ಥೆಯ ಜೋಭದ್ರತನವೂ ಸೇರಿದರೆ ದೇಶದ ಆಡಳಿತ ಸುಮಾರು ೧೦೦ ದಿನಗಳ ಕಾಲ ಕುಂಭಕರ್ಣ ನಿದ್ರಾವಸ್ಥೆಯಲ್ಲಿತ್ತು ಎಂಬುದನ್ನು ಪರಿಗಣಿಸುವುದಾದರೆ ಇದರಿಂದ ಸಾರ್ವಜನಿಕರಿಗೆ ಹಾಗೂ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಆಗಿರುವ ತೊಂದರೆ ಏನೆಂಬುದನ್ನು ಅಂಕಿ ಅಂಶಗಳ ಮೂಲಕ ಗುರುತಿಸುವುದು ಸೂಕ್ತವಲ್ಲ. ಏಕೆಂದರೆ, ಅಂಕಿ ಅಂಶಗಳು ಸಾರ್ವಜನಿಕರ ದುಃಖ ದುಮ್ಮಾನಗಳನ್ನು ಪ್ರತಿಬಿಂಬಿಸಲಾರವು.
ಲಕ್ಷಾಂತರ ಕೋಟಿ ರೂಪಾಯಿ ವಹಿವಾಟಿರುವ ದೇಶದಲ್ಲಿ ಆಡಳಿತ ವ್ಯವಸ್ಥೆ ನನೆಗುದಿಗೆ ಬಿದ್ದರೆ ಇದರಿಂದ ನೇರವಾಗಿ ಬೀಳುವ ಪೆಟ್ಟು ಸಾರ್ವಜನಿಕ ವ್ಯವಸ್ಥೆಯ ಮೇಲೆ. ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಸ್ಥಿತಿ ಸರ್ಕಾರದ್ದು. ಏಕೆಂದರೆ, ಈ ಅವಧಿಯಲ್ಲಿ ಮಂತ್ರಿಗಳು ಯಾವುದೇ ನಿರ್ಧಾರಗಳನ್ನು ಕೈಗೊಳ್ಳುವಂತಿಲ್ಲ. ಮಂತ್ರಿಗಳ ಸಲಹೆ ಸೂಚನೆಗಳನ್ನು ಅಧಿಕಾರವರ್ಗ ಪಾಲಿಸಲು ನಿರ್ಬಂಧ. ಇದರಿಂದ ಒಟ್ಟಾರೆ ಆಡಳಿತವೇ ಸ್ಥಗಿತ. ದೇಶದ ಸಾರ್ವಭೌಮತ್ವದ ರಕ್ಷಣೆ ಹಾಗೂ ಸುಭದ್ರತೆಯ ನಿರ್ವಹಣೆ ಮಾಡುವ ಸರ್ಕಾರದ ಖರ್ಚು ವೆಚ್ಚಗಳಿಗೆ ಹಣವನ್ನು ಹೊಂದಿಸುವುದು ಸುಲಭದ ಮಾತಲ್ಲ. ಇನ್ನು ರಾಜ್ಯ ಸರ್ಕಾರಗಳ ಸ್ಥಿತಿ ಇನ್ನೂ ಚಿಂತಾಜನಕ. ಮಂತ್ರಿಗಳು ಯಾವುದೇ ಸಭೆ ಸಮಾರಂಭದಲ್ಲಿ ಪಾಲ್ಗೊಳ್ಳಲು ನಿರ್ಬಂಧ ಇರುವ ಕಾರಣ ಅವರ ಮಾತುಗಳು ಚಲಾವಣೆ ಇಲ್ಲದ ನಾಣ್ಯದಂತೆ. ಅಧಿಕಾರಿಗಳ ಜೋಭದ್ರತನಕ್ಕೆ ಇದೊಂದು ರೀತಿಯ ಸುವರ್ಣಾವಕಾಶ. ಪ್ರಾಕೃತಿಕ ವಿಕೋಪದಿಂದ ತಲೆದೋರುವ ಸಮಸ್ಯೆಗಳ ನಿವಾರಣೆಗೆ ಹಣ ವಿನಿಯೋಗಿಸಲು ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರವಿಲ್ಲ. ಇರುವ ಸಿಬ್ಬಂದಿಯನ್ನೇ ಬಳಸಿಕೊಂಡರೂ ಇದಕ್ಕೆ ಅಗತ್ಯವಾದ ಸಾಧನಾ ಸಾಮಗ್ರಿಗಳನ್ನು ಖರೀದಿಸುವ ಸ್ಥಿತಿಯಲ್ಲಿ ಇರುವುದಿಲ್ಲ. ಇನ್ನು ನೀರಾವರಿ ಯೋಜನೆಗಳ ಸ್ಥಿತಿಯಂತೂ ದೇವರಿಗೇ ಪ್ರೀತಿ. ಇದೆಲ್ಲದರ ಒಟ್ಟಾರೆ ಪರಿಣಾಮವೆಂದರೆ ವಿವಿಧ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಿರುವ ಗುತ್ತಿಗೆದಾರರಿಗೆ ಸಾವಿರಾರು ಕೋಟಿ ರೂಪಾಯಿ ಪಾವತಿ ಮಾಡದೇ ಬಾಕಿ ಉಳಿಸಿಕೊಂಡಿರುವ ಸ್ಥಿತಿ ಒಳ್ಳೆಯ ಆಡಳಿತದ ಲಕ್ಷಣವಲ್ಲ. ಇದಕ್ಕೆ ಸರ್ಕಾರಗಳು ಕಾರಣವಲ್ಲ. ಚುನಾವಣಾ ಆಯೋಗ ಜನತಾ ಪ್ರಾತಿನಿಧ್ಯ ಕಾಯ್ದೆಯ ಮೂಲಕ ರೂಪಿಸಿಕೊಂಡಿರುವ ನೀತಿ ಸಂಹಿತೆ ಜಾರಿ. ಇಂತಹ ನೀತಿ ಸಂಹಿತೆ ಜಾರಿ ಹೊಸದೇನೂ ಅಲ್ಲ. ಸ್ವತಂತ್ರ ಭಾರತದ ಇತಿಹಾಸದಲ್ಲಿ ೪೦ರಿಂದ ೫೦ ದಿನಗಳ ಅವಧಿಯ ಒಳಗೆ ನೀತಿ ಸಂಹಿತೆ ಜಾರಿಯಲ್ಲಿರುತ್ತಿತ್ತು. ಈ ಕಿರು ಅವಧಿಯಲ್ಲಿ ಅಷ್ಟಾಗಿ ಸಮಸ್ಯೆಗಳು ಉದ್ಭವವಾಗದಂತೆ ಮುನ್ನೆಚ್ಚರಿಕೆ ವಹಿಸಲು ಅವಕಾಶವಿತ್ತು. ಇದೇ ಮೊದಲ ಬಾರಿಗೆ ಏಳು ಹಂತದ ಮತದಾನದ ಅವಕಾಶ ಕಲ್ಪಿಸಿ ಲೋಕಸಭಾ ಚುನಾವಣೆಯನ್ನು ಘೋಷಿಸಿದ್ದು ಈ ದುಸ್ಥಿತಿಗೆ ಕಾರಣ.
ಇವಿಎಂ ಪದ್ಧತಿ ಜಾರಿಗೆ ಬರುವ ಮೊದಲು ಮತಪತ್ರ (ಬ್ಯಾಲೆಟ್) ಪದ್ಧತಿ ಜಾರಿಯಲ್ಲಿದ್ದಾಗಲೂ ಕೂಡಾ ಚುನಾವಣೆಯ ಒಟ್ಟಾರೆ ಅವಧಿ ಆರು ವಾರಗಳನ್ನು ಮೀರುತ್ತಿರಲಿಲ್ಲ. ಈಗ ತಂತ್ರಜ್ಞಾನದ ಯುಗ. ಇವಿಎಂ ಪದ್ಧತಿ ಜಾರಿಗೆ ಬಂದ ಮೇಲೆ ಪರಿಸ್ಥಿತಿ ಬದಲು. ಹೀಗಾಗಿ ಚುನಾವಣೆ ಪ್ರಕ್ರಿಯೆ ತಜ್ಞರು ಅಭಿಪ್ರಾಯಪಡುವಂತೆ ನಾಲ್ಕು ವಾರದಲ್ಲಿಯೇ ಚುನಾವಣೆ ಪ್ರಕ್ರಿಯೆ ಮುಗಿದು ನೀತಿ ಸಂಹಿತೆ ಅವಧಿಯನ್ನು ಮೊಟಕುಗೊಳಿಸಲು ಮುಕ್ತ ಅವಕಾಶವಂತೂ ಉಂಟು. ಮನಸ್ಸಿದ್ದರೆ ಮಾರ್ಗವಂತೆ.
ಈ ಕಹಿ ಅನುಭವದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಜಾಗೃತಗೊಂಡು ನೀತಿ ಸಂಹಿತೆ ಜಾರಿಗೊಳಿಸುವ ಅವಧಿಯ ಬಗ್ಗೆ ರಾಜಕೀಯ ಪಕ್ಷಗಳ ಜೊತೆ ಸಮಾಲೋಚಿಸಿ ನಿರ್ಧಾರಕ್ಕೆ ಬರುವುದು ಸೂಕ್ತ. ಅಗತ್ಯ ಬಿದ್ದರೆ ಜನತಾ ಪ್ರಾತಿನಿಧ್ಯ ಕಾಯ್ದೆಗೆ ಸೂಕ್ತ ತಿದ್ದುಪಡಿ ಮಾಡಿ ಸಂಸತ್ತಿನಲ್ಲಿ ವಿಧೇಯಕದ ಮೂಲಕ ಶಾಸನದ ಬದಲಾವಣೆ ತಂದು ನೀತಿ ಸಂಹಿತೆ ಅವಧಿಗೆ ಲಗಾಮು ಹಾಕುವುದು ಇನ್ನೂ ಒಳ್ಳೆಯ ಪರಿಣಾಮಕಾರಿ ಮಾರ್ಗ. ಆಡಳಿತ ಪಕ್ಷದವರೂ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳ ಮುಖಂಡರಿಗೂ ಇಷ್ಟೊಂದು ಸುದೀರ್ಘ ಅವಧಿಯ ನೀತಿ ಸಂಹಿತೆ ಬಗ್ಗೆ ಅತೃಪ್ತಿಗಿಂತ ಆಕ್ರೋಶದ ಭಾವನೆ ಇದೆ. ಇದೊಂದು ಪಕ್ಷಾತೀತವಾದ ಸಮಸ್ಯೆ.
ಇದಕ್ಕೆ ಸಮಾನಾಂತರವಾಗಿ ಚುನಾವಣಾ ಆಯೋಗ ವಿಧಾನಸಭೆ ಅಥವಾ ಲೋಕಸಭಾ ಚುನಾವಣೆಯ ಘೋಷಣೆಯ ಪೂರ್ವದಲ್ಲಿ ನೀತಿ ಸಂಹಿತೆ ಅವಧಿಯ ಬಗ್ಗೆ ಸಾರ್ವಜನಿಕರ ಅಭಿಪ್ರಾಯವನ್ನು ಆಹ್ವಾನಿಸುವುದು ಯೋಗ್ಯವಾದ ಕ್ರಮ. ನೀತಿ ಸಂಹಿತೆ ಅವಧಿಗೆ ಶಾಸನದಲ್ಲಿ ಅಸ್ಪಷ್ಟತೆ ಇರುವುದರಿಂದ ಚುನಾವಣಾ ಆಯೋಗ ತನ್ನ ವಿವೇಚನೆಗೆ ತಕ್ಕಂತೆ ಇದನ್ನು ನಿಷ್ಕರ್ಷೆ ಮಾಡುತ್ತಿರುವುದು ಸರಿಯಾದ ಮಾರ್ಗವಲ್ಲ. ಹಲವಾರು ಸಂದರ್ಭಗಳಲ್ಲಿ ನೀತಿ ಸಂಹಿತೆಯನ್ನು ಪ್ರಶ್ನಿಸಿ ನ್ಯಾಯಾಲಯಗಳಲ್ಲಿ ಮೊಕದ್ದಮೆ ದಾಖಲಾಗಿದ್ದೂ ಉಂಟು. ಆದರೆ, ನ್ಯಾಯಾಲಯಗಳು ಚುನಾವಣೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಧ್ಯಪ್ರವೇಶಿಸಲು ಬಯಸುವುದಿಲ್ಲ. ಹೀಗಾಗಿ ಏಕಪಕ್ಷೀಯವಾದ ಕ್ರಮ ಜಾರಿಗೆ ಬರಲು ಸಾಧ್ಯವಾಗಿದೆ. ಆದದ್ದು ಆಯಿತು. ಇನ್ನು ಮುಂದೆ ಅಂತಹ ಸ್ಥಿತಿ ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸುವುದು ಈಗ ಸೂಕ್ತವಾದ ಮಾರ್ಗ.

Next Article