For the best experience, open
https://m.samyuktakarnataka.in
on your mobile browser.

ನೀರೊಳಗೆ ೩೭ ಸೆಕೆಂಡ್ಸ್‌ನಲ್ಲಿ ೨೬ ಪಲ್ಟಿ - ವಿಶ್ವ ದಾಖಲೆ

04:52 PM Aug 10, 2024 IST | Samyukta Karnataka
ನೀರೊಳಗೆ ೩೭ ಸೆಕೆಂಡ್ಸ್‌ನಲ್ಲಿ ೨೬ ಪಲ್ಟಿ   ವಿಶ್ವ ದಾಖಲೆ

ಮಂಗಳೂರು: ಈಜುಕೊಳದ ನೀರೊಳಗೆ ಉಸಿರು ಬಿಗಿಹಿಡಿದು ೩೭ ಸೆಕೆಂಡ್ಸ್‌ಗಳಲ್ಲಿ ೨೬ ಸೋಮರ್ ಸಾಲ್ಟ್ಸ್ (ಪಲ್ಟಿ)ಗಳ ಮೂಲಕ ಮಂಗಳೂರಿನ ೧೩ರ ಹರೆಯದ ಪೋರ ನೊಬೆಲ್ ವಿಶ್ವ ದಾಖಲೆ ಸೃಷ್ಟಿಸಿದ್ದಾನೆ.

ಮಂಗಳೂರಿನ ಕಾರ್ಮೆಲ್ ಸಿಬಿಎಎಸ್ ಸಿ ಶಾಲೆಯ ೮ನೆ ತರಗತಿಯ ವಿದ್ಯಾರ್ಥಿಯಾಗಿರುವ ಹ್ಯಾಡ್ರಿಯನ್ ವೇಗಸ್ ಈ ನೂತನ ವಿಶ್ವ ದಾಖಲೆಯನ್ನು ಶನಿವಾರ ನಗರದ ಎಮ್ಮೆಕೆರೆ ಅಂತಾರಾಷ್ಟ್ರೀಯ ಈಜುಕೊಳದಲ್ಲಿ ಸೃಷ್ಟಿಸಿದ್ದಾನೆ. ೧೫ ವರ್ಷದೊಳಗೆ ಈ ನೀರೊಳಗಿನ ಪಲ್ಟಿ ಸಾಹಸ ಪ್ರಥಮ ದಾಖಲೆ ಎನ್ನಲಾಗಿದ್ದು, ಖ್ಯಾತ ಈಜುಪಟು ಚಂದ್ರಶೇಖರ ರೈ ಎಂಬವರು ಈ ಹಿಂದೆ ಹಿರಿಯ ವಿಭಾಗದಲ್ಲಿ ನೀರೊಳಗೆ ೧ ನಿಮಿಷ ೨ ಸೆಕೆಂಡುಗಳಲ್ಲಿ ೨೮ ಪಲ್ಟಿ ಹೊಡೆದಿರುವ ದಾಖಲೆ ಮಾಡಿದ್ದರು.
ನೊಬೆಲ್ ವಲ್ಡ್ ರೆಕಾರ್ಡ್ಸ್‌ನ ರಾಜ್ಯ ನಿರ್ದೇಶಕ ಡಾ. ಕೃಷ್ಣಮೂರ್ತಿ ಅವರು ಹ್ಯಾಡ್ರಿಯನ್ ಅವರ ಪಲ್ಟಿ ಸಾಹಸವನ್ನು ದಾಖಲಿಸಿಕೊಂಡರು.
‘ಸಾಮಾನ್ಯವಾಗಿ ಈಜುಕೊಳದ ಅಂಚು ಹಿಡಿದುಕೊಂಡು ಪಲ್ಟಿ ಹಾಕಲಾಗುತ್ತದೆ. ಆದರೆ ಈಜುಕೊಳದ ಮಧ್ಯ ನೀರಿನಲ್ಲಿ ಏಕಕಾಲಕ್ಕೆ ೨೬ ಪಲ್ಟಿ ಹೊಡೆಯುವುದು ಹ್ಯಾಡ್ರಿಯನ್ ಅವರ ದಾಖಲೆಯಾಗಿದ್ದು, ಆತನಿಗೆ ತರಬೇತಿ ನೀಡಿದ ನನಗೂ ಹೆಮ್ಮೆಯ ವಿಚಾರ’ ಎದು ಸ್ವಿಮ್ಮಿಂಗ್ ಕೋಚ್ ಅರೋಮಲ್ ಎ.ಎಸ್. ಸಂತಸ ವ್ಯಕ್ತಪಡಿಸಿದರು.
ನೊಬೆಲ್ ವಿಶ್ವದಾಖಲೆಯನ್ನು ದಾಖಲು ಮಾಡುವ ಸಂದರ್ಭ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ನ ಜಿಎಂ ಅರುಣ್ ಪ್ರಭಾ, ಕ್ರೀಡಾ ಇಲಾಖೆಯ ಪ್ರವೀಣ್ ಡಿಸೋಜಾ, ಪ್ರೆಸ್ಟೀಜ್ ಇಂಟರ್ ನ್ಯಾಷನಲ್ ಶಾಲೆ, ಕಾರ್ಮೆಲ್ ಸಿಬಿಎಸ್ ಸಿ ಶಾಲೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಗಿನ್ನೆಸ್ ವಿಶ್ವ ದಾಖಲೆಯ ಗುರಿ…
‘ನನಗೆ ಸ್ವಿಮ್ಮಿಂಗ್ ಎಂದರೆ ತುಂಬಾ ಇಷ್ಟ. ಬೇಸಿಗೆ ರಜೆಯಲ್ಲಿ ನಾನು ಈಜು ತರಬೇತಿಗಾಗಿ ಬಂದಿದ್ದೆ. ಅಲ್ಲಿ ಅರೋಮಲ್ ನೀರೊಳಗೆ ಪಲ್ಟಿ ಬಗ್ಗೆ ಹೇಳಿಕೊಟ್ಟರು. ನಿರಂತರ ಅಭ್ಯಾಸ ಮಾಡಿದೆ. ಆರಂಭದಲ್ಲಿ ಏಳೆಂಟೆ ಪಲ್ಟಿ ಮಾಡುತ್ತಾ ತರಬೇತಿ ಅವಧಿಯಲ್ಲಿ ೨೩ ಪಲ್ಟಿ ಹೊಡೆಯಲು ಅಭ್ಯಾಸ ಮಾಡಿದ್ದೆ. ಇವತ್ತು ೨೬ ಪಲ್ಟಿ ಹೊಡೆದ ಬಗ್ಗೆ ಹೆಮ್ಮೆ ಆಗಿದೆ. ಮುಂದೆ ಗಿನ್ನೆಸ್ ವಿಶ್ವ ದಾಖಲೆ ಮಾಡುವ ಗುರಿ ಇದೆ’ ಎಂದಿದ್ದಾರೆ ಹ್ಯಾಡ್ರಿಯನ್ ವೇಗಸ್.