ನೀವು ಕಾನೂನಿನ ಪಾಠ ಹೇಳುವುದು ಕಳ್ಳನೊಬ್ಬ ಸತ್ಸಂಗದಲ್ಲಿ ಪ್ರವಚನ ನೀಡಿದಂತೆ
ಬೆಂಗಳೂರು: ವಿಜಯೇಂದ್ರರವರೇ, ನೀವು ಕಾನೂನಿನ ಪಾಠ ಹೇಳುವುದು ಕಳ್ಳನೊಬ್ಬ ಸತ್ಸಂಗದಲ್ಲಿ ಪ್ರವಚನ ನೀಡಿದಂತೆ ಭಾಸವಾಗುತ್ತದೆ! ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಖರ್ಗೆ ಕುಟುಂಬ ಮುಡಾ ಹಗರಣದ ರೂವಾರಿ ಸಿದ್ದರಾಮಯ್ಯನವರ ಹಾದಿಯನ್ನೇ ತುಳಿದಿರುವುದು ಸಾಬೀತಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್‌ಗೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು.
ಪೋಕ್ಸೋ ಪ್ರಕರಣವನ್ನು ಎದುರಿಸುತ್ತಿರುವ ಪೂಜ್ಯ ತಂದೆಯವರ ಸುಪುತ್ರ, ಅಕ್ರಮ ಹಣ ವರ್ಗಾವಣೆ ಪ್ರಕರಣ ಎದುರಿಸುತ್ತಿರುವ ವಿಜಯೇಂದ್ರರವರು ನಿಯಮ, ಕಾನೂನು, ನೈತಿಕತೆ ಎಂಬ ಪದಗಳನ್ನು ಬಳಸುವುದು ಸ್ಟ್ಯಾಂಡ್ ಅಪ್ ಕಾಮಿಡಿ ಎನಿಸುತ್ತದೆ.
ಸಿದ್ದಾರ್ಥ ವಿಹಾರ ಟ್ರಸ್ಟ್ ನಿವೇಶನ ಹಿಂದಿರುಗಿಸಿಲ್ಲ, ನಿವೇಶನ ಹಸ್ತಾಂತರವೇ ಆಗದೆ ನಿವೇಶನ ಹಿಂದುರಿಗಿಸಲು ಸಾಧ್ಯವಾಗುವುದಿಲ್ಲ, ನಿವೇಶನಕ್ಕಾಗಿ ಸಲ್ಲಿಸಿದ್ದ ಕೋರಿಕೆಯನ್ನು ಹಿಂಪಡೆಯಲಾಗಿದೆ, ಬಿಜೆಪಿಯವರು ತಮ್ಮ ತಿಳುವಳಿಕೆಯನ್ನು, ಹೇಳಿಕೆಗಳನ್ನು ಸರಿಪಡಿಸಿಕೊಳ್ಳಲಿ.
ಸಿದ್ದಾರ್ಥ ವಿಹಾರ ಟ್ರಸ್ಟ್ ಸಿಎ ನಿವೇಶನ ಪಡೆದಿದ್ದು ಹೇಗೆ ಕಾನೂನುಬಾಹಿರವಾಗುತ್ತದೆ ಎಂಬುದನ್ನು ಇದುವರೆಗೂ ಬಿಜೆಪಿಯವರಿಗೆ ನಿರೂಪಿಸಲು ಸಾಧ್ಯವಾಗಿಲ್ಲ, ಈಗಲಾದರೂ ಹೇಳುವ ಪ್ರಯತ್ನ ಮಾಡಲಿ. ವಿಜಯೇಂದ್ರರವರೇ, RTGS ಮೂಲಕ ಪಡೆಯುವ ಲಂಚ ಹೇಗೆ ಕಾನೂನಾತ್ಮಕವಾಗುತ್ತದೆ ಎನ್ನುವುದನ್ನು ಹೇಳುವಿರಾ? ದುಬೈ, ಮಾರಿಷಸ್‌ನಲ್ಲಿ ಎಷ್ಟು ಅಕ್ರಮ ಹಣ ಹೂಡಿಕೆ ಮಾಡಿದ್ದೀರಿ ಎಂಬ ನಿಮ್ಮದೇ ಪಕ್ಷದ ಯತ್ನಾಳ್ ಅವರ ಪ್ರಶ್ನೆಗೆ ಉತ್ತರಿಸುವಿರಾ? ತಮ್ಮ ಮೇಲೆ ಅಕ್ರಮ ಹಣ ವರ್ಗಾವಣೆ ಕೇಸ್ ದಾಖಲಾಗಿದ್ದೇಕೆ ಎಂದು ವಿವರಿಸುವಿರಾ? ಪ್ರೇರಣಾ ಟ್ರಸ್ಟ್ ಹೆಸರಲ್ಲಿ ಕೊಳ್ಳೆ ಹೊಡೆದ ಭೂಮಿ ಎಷ್ಟು ಎಂಬುದನ್ನು ಬಹಿರಂಗಪಡಿಸುವಿರಾ? ಕೋವಿಡ್ ಸಮಯದಲ್ಲಿ ಕಲ್ಕತ್ತಾ ಮೂಲದ ಕಂಪೆನಿಗಳಿಂದ ನಿಮಗೆ ಸಂಬಂಧಿಸಿದ ಖಾತೆಗಳಿಗೆ ಹಣ ವರ್ಗಾವಣೆಯಾಗಿದ್ದು ಏಕೆ ಎನ್ನುವುದನ್ನು ಹೇಳುವಿರಾ?
ಎಂದು ಸರಣಿ ಪ್ರಶ್ನೆ ಮಾಡಿದ್ದಾರೆ.