For the best experience, open
https://m.samyuktakarnataka.in
on your mobile browser.

ನೀವು ನಿದ್ರೆಯಿಂದ ಇನ್ನೂ ಎಚ್ಚೆತ್ತುಕೊಳ್ಳದಿರುವುದೇ ದೌರ್ಭಾಗ್ಯ

03:20 PM Jan 17, 2024 IST | Samyukta Karnataka
ನೀವು ನಿದ್ರೆಯಿಂದ ಇನ್ನೂ ಎಚ್ಚೆತ್ತುಕೊಳ್ಳದಿರುವುದೇ ದೌರ್ಭಾಗ್ಯ

ಬೆಂಗಳೂರು: ನೀವು ನಿದ್ರೆಯಿಂದ ಇನ್ನೂ ಎಚ್ಚೆತ್ತುಕೊಳ್ಳದಿರುವುದೇ ಕರ್ನಾಟಕ ಜನರ ದೌರ್ಭಾಗ್ಯ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ದಿವಸಕ್ಕೆ ಹದಿನೆಂಟು ತಾಸು ದೇಶಕ್ಕಾಗಿ ಕೆಲಸ‌ ಮಾಡುವ ಒಂಭತ್ತುವರೆ ವರ್ಷದಲ್ಲಿ ಒಂದು ದಿನವೂ ರಜೆ ತೆಗೆದುಕೊಳ್ಳದೆ ಕಠಿಣ ಪರಿಶ್ರಮಿ, ಅಪ್ಪಟ ದೇಶಭಕ್ತ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಇತಿಹಾಸದಲ್ಲಿ ದಾಖಲೆಯ ಅಭಿವೃದ್ಧಿ ಯನ್ನು ಮಾಡಿದ್ದು, ಅವರ ಬಗ್ಗೆ ಗಾಢ ನಿದ್ರೆ ಎಂದು ಮಾತನಾಡುವ ಸಿದ್ದರಾಮಯ್ಯ ತಮ್ಮ ಗಾಢ ನಿದ್ರೆಯಿಂದ ಈಗ ಎಚ್ಚೆತ್ತುಕೊಂಡಂತೆ ಕಾಣಿಸುತ್ತದೆ.
1) ಯುಪಿಎ 2004-2014 ರ ಹತ್ತು ವರ್ಷದ ಆಡಳಿತದಲ್ಲಿ ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ 81,795.19 ಕೋಟಿ ರೂ. ಹಾಗೂ ಅನುದಾನ ಹಂಚಿಕೆ ರೂಪದಲ್ಲಿ 60779.84 ಕೋಟಿ ರೂ. ಹಣ ಬಂದರೆ. ಮೋದಿ ಅವಧಿಯಲ್ಲಿ 2014-2023 ಡಿಸೆಂಬರ್ ವರೆಗೆ ತೆರಿಗೆ ಹಂಚಿಕೆಯಲ್ಲಿ 2,82,791 ಕೋಟಿ ರೂ. ಬಂದರೆ, ಅನುದಾನ ಹಂಚಿಕೆಯಲ್ಲಿ 2,08,882.02 ಕೋಟಿ ರೂ. ಬಂದಂತಹ ಹಣ ಇವರ ಕಣ್ಣಿಗೆ ಕಾಣುತ್ತಿಲ್ಲ.
ಮೇ ತಿಂಗಳಲ್ಲಿ 360, ಕೋಟಿ ರೂ. ಬಿಡುಗಡೆಯಾಗಿದ್ದು, ಈಗ ಮತ್ತೆ 348 ಕೋಟಿ ರೂ. ಬಿಡುಗಡೆಗೆ ತೀರ್ಮಾನಿಸಿದೆ. ಇಷ್ಟಾದರೂ ಕೂಡ ರೈತರಿಗೆ ಬಿಡಿಗಾಸು ಕೊಡಲು ಸಾಧ್ಯವಾಗಿಲ್ಲ. ಪೂರ್ಣ ಪ್ರಮಾಣದಲ್ಲಿ ಪರಿಹಾರ ಕೊಡಲು ನಿಮ್ಮ ಬೊಕ್ಕಸ ಖಾಲಿಯಾಗಿದೆಯೇ ?
2) ಕೃಷ್ಣಾ ಮೆಲ್ದಂಡೆ ಹಾಗೂ ಮಹಾದಾಯಿ ಎರಡೂ ಸುಪ್ರೀಂ ಕೋರ್ಟ್ ನಲ್ಲಿ ವ್ಯಾಜ್ಯ ಇರುವುದು ಗೊತ್ತಿದ್ದರೂ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂಡಿಸುವ ರಾಜಕಾರಣ ಏಕೆ ? ಈ ವರ್ಷ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೊಟಿ ರೂ. ಕೇಂದ್ತದ ಬಜೆಟ್ ನಲ್ಲಿದ್ದು ಅದನ್ನು ಪಡೆದುಕೊಳ್ಳಲಾಗದೇ ಗಾಢ ನಿದ್ರೆಯಲ್ಲಿದ್ದವರಾರು ?
3) ಕಳೆದ ಐದು ವರ್ಷದಲ್ಲಿ 30 ಸಾವಿರ ಕೋಟಿ ರಾಷ್ಟ್ರೀಯ ಹೆದ್ದಾರಿಗೆ ಮೋದಿ ಸರ್ಕಾರ ಹಣ ಒದಗಿಸಿದೆ. ನೀವು ಓಡಾಡುವ ಬೆಂಗಳೂರು ಮೈಸೂರು ಹೈವೆ ನಿರ್ಮಾಣದ ಸಂಪೂರ್ಣ ವೆಚ್ಚ ಮೋದಿ ಸರ್ಕಾರ ಒದಗಿಸಿರುವುದು ನಿಮ್ಮ ಅನುಭವಕ್ಕೆ ಬಂದಿಲ್ಲವೇ ? ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ 1327.43 ಕೋಟಿ ರೂ. ಬಿಡುಗಡೆಯಾಗಿದೆ. ಇದೇ ರೀತಿ ರೈಲ್ವೆ, ಬಂದರು, ಅಭಿವೃದ್ಧಿಗೆ ಮೋದಿಯ ಪಾಲು ನಿಮಗೆ ಕಾಣುತ್ತಿಲ್ಲವೇ ? ಕಿಸಾನ್ ಸಮ್ಮಾನ್ ಯೋಜನೆಯಲ್ಲಿ 10990 ಕೋಟಿ ರೂ. ಆಯುಷ್ಮಾನ್ ಭಾರತ ಯೋಜನೆ ಅಡಿಯಲ್ಲಿ 62 ಲಕ್ಷ ಜನರಿಗೆ ಆರೋಗ್ಯದ ಚಿಕಿತ್ಸೆ ಕೊಟ್ಟಿರುವ ಮೋದಿಯವರ ನಿರಂತರ ಪರಿಶ್ರಮ ಹಾಗೂ ಕ್ರಿಯಾಶೀಲತೆಗೆ ಸಾಕ್ಷಿ. ಕೊರೊನಾ ಸಂದರ್ಭದಲ್ಲಿ ರಾಜ್ಯದಲ್ಲಿ 10 ಕೋಟಿ ಡೋಸ್ ಲಸಿಕೆ ಹಾಕಿಸಿದ್ದು ನಿದ್ರೆಯಲ್ಲಿರುವ ನಿಮಗೆಲ್ಲಿ ಕಾಣಿಸುತ್ತದೆ.
ಕರ್ನಾಟಕವನ್ನು ಅಭಿವೃದ್ಧಿ ಶೂನ್ಯ ಮಾಡಿ ಅಧೊಗತಿಗೆ ತೆಗೆದುಕೊಂಡು ಹೋಗಿರುವ ನೀವು ನಿದ್ರೆಯಿಂದ ಇನ್ನೂ ಎಚ್ಚೆತ್ತುಕೊಳ್ಳದಿರುವುದೇ ಕರ್ನಾಟಕ ಜನರ ದೌರ್ಭಾಗ್ಯ ಎಂದಿದ್ದಾರೆ.