ನೀ ಹೇಗಿದ್ದಿ ಮಾಮಾ..???
ಅಮೆರಿಕದ ಬುಡ್ಯಾ ಹಾಗೂ ಸೋದಿ ಮಾಮಾ ಒಂದೇ ಓರಿಗೆಯವ ರಾದ್ದರಿಂದ ಇಬ್ಬರ ನಡುವೆ ಭಯಂಕರ ದೋಸ್ತಿ ಇತ್ತು. ಒಬ್ಬರಿಗೊಬ್ಬರು ಮರ್ಯಾದೆಗೋಸ್ಕರ ಹೆಸರಿಡಿದು ಕರೆಯುತ್ತಿರಲಿಲ್ಲ. ಸೋದಿ ಅವರಿಗೆ ಬುಡ್ಯಾ ಪ್ರೀತಿಯಿಂದ ಮಾಮಾ ಎಂದು ಕರೆದರೆ… ಸೋದಿ ಸಾಹೇಬರೂ ಸಹ ಹೇಳ್ ಬುಡ್ಯಾ ಮಾಮಾ ಅಂತಾನೇ ಕರೆಯುತ್ತಿದ್ದರು. ಬೊಳ್ಳೊಳ್ಳಿ ವ್ಯಾಪಾರಕ್ಕೆಂದು ಅಮೆರಿಕಕ್ಕೆ ಹೋದ ಬುಡ್ಡೇಸಿ ವ್ಯಾಪಾರ ಕುದುರಿ ಅಲ್ಲೇ ಸೆಟ್ಲ್ ಆದ. ಜನಪ್ರಿಯತೆ ಗಳಿಸಿ ಆ ದೇಶದ ಅಧ್ಯಕ್ಷನೂ ಆಗಿಬಿಟ್ಟ. ಈ ಕಡೆ ಸೋದಿ ಮಾಮನೂ ಸಹ ಒಂದೊಂದೇ ಪಾವಟಿಗೆ ಹತ್ತುತ್ತ… ಮುಖ್ಯ ಕುರ್ಚಿ ಮೇಲೆ ಕುಳಿತ. ಇಬ್ಬರ ಮಧ್ಯೆ ಫ್ರೆಂಡ್ ಶಿಪ್ ಮಾತ್ರ ಹಾಗೇ ಇತ್ತು. ಕಾರಹುಣ್ಣಿವೆ… ನಾಗರ ಅಮಾಸಿ ಇಂಥ ಪ್ರಮುಖ ಹಬ್ಬಗಳಲ್ಲಿ ಇಬ್ಬರೂ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದರು. ಆಗಾಗ ಇವರು ಅಲ್ಲಿಗೆ ಅವರು ಇಲ್ಲಿಗೆ ಬಂದು ಹೋಗುತ್ತಿದ್ದರು. ಚುನಾವಣೆಗಳು ನಡೆದಾಗ ಇಬ್ಬರೂ ಹೋಗಿಬಂದು ಮಾಡುತ್ತಿದ್ದರು. ಈಗ ಅಲ್ಲಿ ಚುನಾವಣೆ ನಡೆದಿವೆ. ಅದಯಾವನೋ ಟ್ರಂಪೇಸಿ ಕಿವಿಗೆ ಗುಂಡು ಹೊಡೆದಾಗ… ಇದು ಸುಖಾ ಸುಮ್ಮನೇ ನನ್ನ ಮೇಲೆ ಬರುತ್ತದೆ ಎಂದು ಕಮಲಮ್ಮಾ…. ನೀ ನಿಲ್ಲಮ್ಮಾ ಎಂದು ಆಕೆಯನ್ನು ಚುನಾವಣೆಗೆ ನಿಲ್ಲಿಸಿದ ಬುಡ್ಯಾಗೆ ಟ್ರಂಪೇಸಿ ಬಗ್ಗೆ ಪುಕುಪುಕು ಇದ್ದೇ ಇತ್ತು. ಒಂದ್ಮಾತು ಹೇಳಣ ಅಂತ ಸುಮ್ನೆ ಸೋದಿಮಾಮಾಗೆ ಇಂಗಿಂಗೆ ಅಂತ ಮೊಬೈಲ್‌ಗೆ ಮೆಸೇಜ್ ಕಳಿಸಿದ್ದೇ ತಡ… ವಸ್ತಿ ವಿಮಾನ ಹತ್ತಿ ಸೋದಿ ಮಾಮಾ ಅಲ್ಲಿಗೆ ಹೋದ…. ಮನೆಯ ಗೇಟಿನಿಂದಲೇ… ಬುಡ್ಯಾ… ಓಯ್ ಬುಡ್ಯಾ… ನಾ ಬಂದೆ… ನಾ ಬಂದೆ ಅಂದ ಕೂಡಲೇ ಅಡುಗೆ ಮನೆಯಿಂದ ಒಂದೇ ನೆಗತಕ್ಕೆ ಗೇಟ್ ಹತ್ತಿರ ಬಂದ ಬುಡ್ಯಾ… ಐಐ ಮಾಮಾ ಅಂದ… ಆ ಕಡೆಯಿಂದ ಸೋದಿ ಕೂಡ ಮಾಮಾ ಅಂತ ಒದರಿದ… ಇಬ್ಬರೂ ಮಾಮಾ ಮಾಮಾ ಅಂತ ಒದರಿ ಅಪ್ಪಿ ಕಣ್ಣೀರು ಸುರಿಸುತ್ತ ಮನೆಯೊಳಗೆ ಹೋದರು… ಕೂಡಲೇ ಸೋದಿ ಮಾಮಾ ಕೋಟಿನ ಕಿಸೆಯಿಂದ ಬುಡ್ಯಾನ ಮುಂಗೈಗೆ ಕೆಂಪುದಾರ ಕಟ್ಟಿದ… ಕಮಲಮ್ಮಳನ್ನು ಕರೆದು ಆಕೆಯ ಮುಂಗೈಗೂ ದಾರ ಕಟ್ಟಿದ. ಇನ್ನು ಚಿಂತಿ ಮಾಡಬೇಡಿ… ಈ ದಾರವನ್ನು ಕರಿಲಕ್ಷುಂಪತಿ ಮಂತ್ರಿಸಿ ಕೊಟ್ಟಿದ್ದಾನೆ… ಎದುರಿಗೆ ಟ್ರಂಪೇಸಿ ಬಂದರೂ ಬುರ್ ಬುಸ್ ಆಗುತ್ತಾನೆ… ನೋಡುತಿರಿ.. ನೋಡುತಿರಿ… ನೋಡುತಿರಿ ಎಂದು ಕೋರ್ಟಿನಲ್ಲಿ ಅನ್ನುವಂತೆ ಮೂರು ಬಾರಿ ಅಂದು ಸುಮ್ಮನೇ ಕುಳಿತ… ಈ ಯಪ್ಪಾ ಖುಣ ತೀರಿಸಲು ಆಗುವುದಿಲ್ಲ ಅಂತ ಬುಡ್ಯಾ- ಕಮಲಮ್ಮ ಕಣ್ಣೀರು ಸುರಿಸುತ್ತ ನಿಂತರು.