ನುಸುಳುಕೋರರ ಪತ್ತೆಗೆ ಹೊಸ ಕಾನೂನು
ಸೆರೈಕೆಲಾ: ಜಾರ್ಖಂಡ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸಮಿತಿ ರಚಿಸಿ ನುಸುಳುಕೋರರನ್ನು ಪತ್ತೆ ಹಚ್ಚಲಾಗುವುದು. ಅಷ್ಟೇ ಅಲ್ಲದೆ, ನುಸುಳುಕೋರರು ಕಬಳಿಸಿರುವ ಭೂಮಿಯನ್ನು ವಶಪಡಿಸಿಕೊಳ್ಳಲಾಗುವುದು ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಸೋಮವಾರ ಜಾರ್ಖಂಡ್‌ನ ಸೆರೈಕೆಲಾದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಬುಡಕಟ್ಟು ಮಹಿಳೆಯರನ್ನು ಮದುವೆಯಾಗುವ ನುಸುಳುಕೋರರಿಗೆ ಭೂಮಿ ಹಸ್ತಾಂತರ ತಡೆಯುವುದಕ್ಕೆ ಹೊಸ ಕಾನೂನನ್ನು ತರುತ್ತೇವೆ. ಸದ್ಯದ ಜೆಜೆಪಿ ನೇತೃತ್ವದ ಸರ್ಕಾರ ಜಾರ್ಖಂಡ್‌ನಲ್ಲಿ ಬಾಂಗ್ಲಾದೇಶಿ ನುಸುಳುಕೋರರನ್ನು ಪೋಷಿಸುತ್ತಿದೆ ಎಂದು ಆರೋಪ ಮಾಡಿದ್ದಾರೆ.
ಜಾರ್ಖಂಡ್‌ನಲ್ಲಿ ಬುಡಕಟ್ಟು ಜನಸಂಖ್ಯೆ ಇಳಿಕೆಯಾಗುತ್ತಿದೆ. ನುಸಳುಕೋರರು ನಮ್ಮ ಹೆಣ್ಣುಮಕ್ಕಳನ್ನು ಮದುವೆಯಾಗುವ ಮೂಲಕ ಅವರ ಭೂಮಿ ಕಿತ್ತು ಕೊಳ್ಳುತ್ತಿದ್ದಾರೆ. ಬಿಜೆಪಿ ಅಧಿ ಕಾರಕ್ಕೆ ಬಂದರೆ ಬುಡಕಟ್ಟು ಮಹಿಳೆಯರನ್ನು ಮದುವೆಯಾದ ನುಸುಳುಕೋರರಿಗೆ ಭೂಮಿ ವರ್ಗಾಯಿಸುವುದನ್ನು ತಡೆಯಲೆಂದೇ ಹೊಸ ಕಾನೂನು ಜಾರಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಮಾಜಿ ಸಿಎಂ ಚಂಪೈ ಸೊರೇನ್ ರಾಜೀನಾಮೆ ಬಗ್ಗೆ ಮಾತನಾಡಿದ ಶಾ, ನುಸುಳುಕೋರರ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಚಂಪ್ ಸೊರೇನ್ ಅವರನ್ನು ಅವಮಾನಿಸಿದ್ದಷ್ಟೇ ಅಲ್ಲದೆ, ರಾಜೀನಾಮೆ ಕೊಡುವಂತೆ ಮಾಡಿದ್ದು ಹೇಮಂತ್ ಸೊರೇನ್. ಇದು ಇಡೀ ಬುಡಕಟ್ಟು ಜನಾಂಗಕ್ಕೆ ಮಾಡಿದ ಅವಮಾನ ಎಂದು ಕಿಡಿಕಾರಿದರು.
ಭ್ರಷ್ಟಾಚಾರದಲ್ಲಿ ತೊಡಗಿರುವ ಜೆಎಂಎಂ, ಕಾಂಗ್ರೆಸ್ ಮತ್ತು ಆರ್‌ಜೆಡಿ ನಾಯಕರು ತಮ್ಮ ವೈಯಕ್ತಿಕ ಏಳಿಗೆಗೆ ಮಾತ್ರ ಶ್ರಮಿಸುತ್ತಿದ್ದಾರೆ ಎಂದು ಗುಡುಗಿ ಶಾ, ಜೆಜೆಎಂ ನೇತೃತ್ವದ ಸರ್ಕಾರ ೧,೦೦೦ ಕೋಟಿಯ ಎಂಎನ್‌ಆರ್‌ಇಜಿಎ ಹಗರಣ, ೩೦೦ ಕೋಟಿಯ ಭೂ ಹಗರಣ, ೧೦೦೦ ಕೋಟಿ ಗಣಿಗಾರಿಕೆ ಹಗರಣ ಮತ್ತು ಬಹುಕೋಟಿ ಅಬಕಾರಿ ಹಗರಣದಲ್ಲಿ ತೊಡಗಿದ್ದಾರೆ ಎಂದು ಹೇಳಿದರು.