ನೆಲ್ಲಿತೀರ್ಥ ಶ್ರೀ ಸೋಮನಾಥೇಶ್ವರ ಗುಹಾಲಯ, ಗುಹಾತೀರ್ಥ ಸ್ನಾನಕ್ಕೆ ಚಾಲನೆ
ಕಟೀಲು: ಜಾಬಾಲಿ ಮಹರ್ಷಿಗಳ ತಪೋವನವೆಂದೆ ಪ್ರಖ್ಯಾತಿಯಾಗಿರುವ ತುಳುನಾಡಿನ ಪ್ರಸಿದ್ಧ ಗುಹಾಲಯ ನೆಲ್ಲಿತೀರ್ಥ ಶ್ರೀ ಸೋಮನಾಥೇಶ್ವರ ಗುಹಾಲಯದಲ್ಲಿ ಪವಿತ್ರ ಗುಹಾಪ್ರವೇಶ ಗುಹಾತೀರ್ಥ ಸ್ನಾನಕ್ಕೆ ತುಲಾ ಸಂಕ್ರಮಣದ ಸಂದರ್ಭ ಧಾರ್ಮಿಕ ಹಾಗೂ ಸಾಂಪ್ರದಾಯಿಕ ವಿಧಿಗಳೊಂದಿಗೆ ಚಾಲನೆ ನೀಡಲಾಯಿತು.
ಬ್ರಹ್ಮಶ್ರೀ ಸುಬ್ರಹ್ಮಣ್ಯ ತಂತ್ರಿಯವರ ನೇತೃತ್ವದಲ್ಲಿ ಶ್ರೀ ಜಗದ್ಗುರು ಮಧ್ವಾಚಾರ್ಯ ಸಂಸ್ಥಾನ ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಸ್ವಾಮೀಜಿಯವರು ದೀಪ ಪ್ರಜ್ವಲನೆಯೊಂದಿಗೆ ಚಾಲನೆ ನೀಡಿದರು. ಈ ವೇಳೆ ಶ್ರೀ ಸೋಮನಾಥೇಶ್ವರ ಶ್ರೀ ಮಹಾಗಣಪತಿ ದೇವರು ಹಾಗೂ ಶ್ರೀ ಜಾಬಾಲಿ ಮಹರ್ಷಿ ಅವರ ಸನ್ನಿಧಿಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
ಕಟೀಲು ದೇವಳದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಡಾ.ಹರಿಕೃಷ್ಣ ಪುನರೂರು, ಪ್ರದೀಪ ಕುಮಾರ್ ಕಲ್ಕೂರ, ಕೊಡೆತ್ತೂರು ಭುವನಾಭಿರಾಮ ಉಡುಪ, ವಸಂತ ಭಟ್ ನೆಲ್ಲಿತೀರ್ಥ, ದೇಗುಲದ ಅರ್ಚಕ ಗಣಪತಿ ಭಟ್, ಅನಂತಕೃಷ್ಣ ಅಡಿಗ ಪುತ್ತಿಗೆ, ಎನ್.ವಿ. ವೆಂಕಟರಾಜ ಭಟ್, ಜಿ.ಕೆ. ಭಟ್, ಪ್ರಸನ್ನ ಭಟ್ ನೆಲ್ಲಿತೀರ್ಥ, ಆನಂದ ಕಾವ, ಕೃಷ್ಣಪ್ಪ ಪೂಜಾರಿ, ಸುಂದರ ಪೂಜಾರಿ, ಹನುಮಂತ ಕಾಮತ್ ನರೇಶ್ ಶೆಣೈ ಮಂಗಲ್ಪಾಡಿ, ಗ್ರಾಮಸ್ಥರು ಉಪಸ್ಥಿತರಿದ್ದರು.
ಗುಹಾಪ್ರವೇಶಕ್ಕೆ ಮುಂಚಿತವಾಗಿ ಕ್ಷೇತ್ರದ ನಾಗಪ್ಪ ಕೆರೆಯಲ್ಲಿ ಮಿಂದು ಕ್ಷೇತ್ರದ ತಂತ್ರಿಗಳ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆಯೊಂದಿಗೆ ಗುಹಾಪ್ರವೇಶ ಆರಂಭ ಮಾಡಲಾಯಿತು.
ಆ. 17 ತುಲಾ ಸಂಕ್ರಮಣದಂದು ಪ್ರಾರಂಭಗೊಂಡ ಗುಹಾಪ್ರವೇಶ-ಗುಹಾ ತೀರ್ಥ ಸ್ನಾನ ಏಪ್ರೀಲ್ ತಿಂಗಳ ಮೇಷ ಸಂಕ್ರಮಣದವರೆಗೂ ಪ್ರತಿದಿನ ಬೆಳಿಗ್ಗೆ 7ರಿಂದ ಮಧ್ಯಾಹ್ನ 1 ಗಂಟೆಯವರೆಗೂ ಗುಹಾತೀರ್ಥ ಸ್ನಾನಕ್ಕೆ ಅವಕಾಶವಿದೆ. ಹುಣ್ಣಿಮೆಯ ಸಂದರ್ಭ ಹುಣ್ಣಿಮೆ ತೀರ್ಥ ಸ್ನಾನ ಇಲ್ಲಿ ವಿಶೇಷ.