ನೇಹಾ ಹತ್ಯೆ ಪ್ರಕರಣ ವಿಚಾರ: ಸಿಎಂ, ಹೋಂ ಮಿನಿಸ್ಟರ್ ಹೇಳಿಕೆ ಮಾನ ಮರ್ಯಾದೆ ಇಲ್ಲದ್ದು
ಹುಬ್ಬಳ್ಳಿ: ಕಾಂಗ್ರೆಸ್ ಕಾರ್ಪೊರೇಟರ್‌ನ ಅಮಾಯಕ ಮಗಳ ಹತ್ಯೆಯಾಗಿದೆ. ಅವರಿಗೆ ಸಾಂತ್ವನ ಹೇಳುವ ಬದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹತ್ಯೆ ವೈಯಕ್ತಿಕ ಕಾರಣದಿಂದ ಆಗಿದೆ ಎಂದು ಹೇಳಿದರೆ, ಗೃಹ ಸಚಿವ ಪರಮೇಶ್ವರ ಪ್ರೀತಿ ಮಾಡಿದ್ದರು. ಅದಕ್ಕೆ ಹತ್ಯೆ ಆಗಿದೆ ಎಂದು ಹೇಳಿಕೆ ನೀಡಿರುವುದು ಖಂಡನೀಯ ಎಂದು ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಟೀಕಿಸಿದರು.
ನೇಹಾ ಕುಟುಂಬಕ್ಕೆ ಸಾಂತ್ವನ ಹೇಳಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೃಹ ಸಚಿವರಾಗಿ ಅಧಿಕಾರಿಗಳಿಂದ ಮಾಹಿತಿ ತೆಗೆದುಕೊಳ್ಳಲಾರದೇ ಮನಸೋ ಇಚ್ಛೆ ಹೇಳಿಕೆ ನೀಡಿರುವುದು ಬೇಜವಾಬ್ದಾರಿತನದಿಂದ ಕೂಡಿದೆ. ಹಿಂದೆ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾಗಲೂ ಇದೇ ರೀತಿ ಹೇಳಿಕೆ ನೀಡಿದ್ದರು. ಗೃಹ ಸಚಿವರಿಗೆ ಮಾನ ಮರ್ಯಾದೆ ಇಲ್ಲ. ಗೃಹ ಸಚಿವರಾಗಿ ಮುಂದುವರಿಯಲು ಅರ್ಹರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಮ್ಮ ಪಕ್ಷದ ಕಾರ್ಪೊರೇಟರ್ ಮಗಳಿಗೆ ರಕ್ಷಣೆ ಮಾಡಲು ಆಗಿಲ್ಲ. ಕರ್ನಾಟಕದಲ್ಲಿ ಹಿಂದೂ ಹೆಣ್ಣುಮಕ್ಕಳು ಹೊರಗಡೆ ಬರಲಾರದಂತಹ ಪರಿಸ್ಥಿತಿ ತಂದಿಟ್ಟಿದ್ದಾರೆ. ಮತ ಬ್ಯಾಂಕ್ ಅಷ್ಟೇ ಬೇಕು. ರಾಜ್ಯದ ಎಲ್ಲ ಸಮುದಾಯ ಸಮಾನ ರೀತಿ ನೋಡದೇ ಒಂದು ಕೋಮಿನ ಪರವಾಗಿ ವರ್ತಿಸುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂಗಳಿಗೆ ರಕ್ಷಣೆ ಮಾಡಲು ಆಗದೇ ಇದ್ದರೆ ಹೇಳಿ ಬಿಡಲಿ. ಅವರನ್ನು ಅವರು ರಕ್ಷಣೆ ಮಾಡಿಕೊಳ್ಳುತ್ತಾರೆ ಎಂದು ಹೇಳಿದರು.
ನ್ಯಾಯ ಕೊಡಿಸಲಿ
ಇಂತಹ ಹತ್ಯೆ ಪ್ರಕರಣದಲ್ಲಿ ಕನಿಷ್ಠ ೩ ತಿಂಗಳಲ್ಲಿ ತನಿಖೆ ನಡೆಸಿ ಶಿಕ್ಷೆ ಕೊಡಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶವಿದೆ. ಹೀಗಾಗಿ, ಸರ್ಕಾರ ತನಿಖೆ ನಡೆಸಿ ಕೊಲೆ ಮಾಡಿದವನಿಗೆ ಗಲ್ಲು ಶಿಕ್ಷೆಯಾಗುವಂತೆ ಮಾಡಬೇಕು ಎಂದು ಆಗ್ರಹಿಸಿದರು.
ಕೊಲೆ ಮಾಡಿದ ವ್ಯಕ್ತಿ ಮನೆಗೆ ಕಾಂಗ್ರೆಸ್ ಸರ್ಕಾರ ರಕ್ಷಣೆ ಕೊಡುತ್ತದೆ ಎಂದರೆ ಎಷ್ಟರ ಮಟ್ಟಿಗೆ ಒಲೈಕೆ ಮಾಡುತ್ತಿದೆ ಎಂಬುದು ಅರ್ಥವಾಗುತ್ತದೆ ಎಂದು ಹೇಳಿದರು.
ಅಮಾಯಕಳಿಗೆ ತಪ್ಪು ಅಭಿಪ್ರಾಯ ಮೂಡಿಸುವ ಷಡ್ಯಂತ್ರ ನಡೆದಿದೆ. ಇದು ಲವ್ ಜಿಹಾದ್ ಪ್ರಕರಣ ಅಲ್ಲ. ವಿನಾಕಾರಣ ಸಾಮಾಜಿಕ ಜಾಲ ತಾಣಗಳಲ್ಲಿ, ಹೇಳಿಕೆಗಳ ಮೂಲಕ ತಪ್ಪು ಸಂದೇಶ ರವಾನಿಸುವ ಕೆಲಸ ಆಗುತ್ತಿದೆ. ಇಂಥ ಕೃತ್ಯ ಯಾರೂ ಮಾಡಬಾರದು ಎಂದು ಹೇಳಿದರು.