For the best experience, open
https://m.samyuktakarnataka.in
on your mobile browser.

ನೈಋತ್ಯ ರೈಲ್ವೆಯ ೧೩ ಸಿಬ್ಬಂದಿಗೆ ಸುರಕ್ಷತಾ ಪ್ರಶಸ್ತಿ ಪ್ರದಾನ

08:09 PM Oct 22, 2024 IST | Samyukta Karnataka
ನೈಋತ್ಯ ರೈಲ್ವೆಯ ೧೩ ಸಿಬ್ಬಂದಿಗೆ ಸುರಕ್ಷತಾ ಪ್ರಶಸ್ತಿ ಪ್ರದಾನ

ಹುಬ್ಬಳ್ಳಿ: ಇಲ್ಲಿನ ಗದಗ ರಸ್ತೆಯಲ್ಲಿರುವ ರೈಲ್ ಸೌಧ ಸಭಾಭವನದಲ್ಲಿ ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾದ ಅರವಿಂದ್ ಶ್ರೀವಾಸ್ತವ ಅವರು ಮಂಗಳವಾರ ವಿವಿಧ ಇಲಾಖೆಗಳ ಪ್ರಧಾನ ಮುಖ್ಯಸ್ಥರೊಂದಿಗೆ ಸುರಕ್ಷತಾ ಸಭೆ ನಡೆಸಿದರು.
ಬಳಿಕ ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಸಂಭವಿಸಬಹುದಾಗಿದ್ದ ಅನಾಹುತಗಳನ್ನು ತಪ್ಪಿಸಿದ, ಜಾಗರೂಕತೆ ವಹಿಸಿದ ಹಾಗೂ ಕರ್ತವ್ಯದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡ, ಅನುಕರಣೀಯ ಸುರಕ್ಷತಾ ಪ್ರಜ್ಞೆ ತೋರಿದ ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯ ಹುಬ್ಬಳ್ಳಿ, ಮೈಸೂರು ಮತ್ತು ಬೆಂಗಳೂರು ವಿಭಾಗಗಳ ನೌಕರರಿಗೆ ಪ್ರಧಾನ ವ್ಯವಸ್ಥಾಪಕ ಅರವಿಂದ್ ಶ್ರೀವಾಸ್ತವ್ ಅವರು ಉದ್ಯೋಗಿಗಳಿಗೆ “ತಿಂಗಳ ಸುರಕ್ಷತಾ ವ್ಯಕ್ತಿ” ಪ್ರಶಸ್ತಿ ನೀಡಿ ಗೌರವಿಸಿದರು.
ಈ ವೇಳೆ ಮಾತನಾಡಿದ ಅವರು, ಅಪಾಯಕಾರಿ ಸಂದರ್ಭಗಳು ಗಂಭೀರ ಅಪಘಾತಗಳಾಗಿ ಬದಲಾಗುವ ಮೊದಲು ಅದನ್ನು ನಿಲ್ಲಿಸಲು ನೌಕರರು ತ್ವರಿತವಾಗಿ ಮತ್ತು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಹೇಳುವ ಮೂಲಕ ಉದ್ಯೋಗಿಗಳ ಅತ್ಯುತ್ತಮ ಜಾಗರೂಕತೆ ಮತ್ತು ಸಮರ್ಪಣೆಯನ್ನು ಶ್ಲಾಘಿಸಿದರು, ನೈಋತ್ಯ ರೈಲ್ವೆಯಲ್ಲಿ ಸುರಕ್ಷತೆಯು ಉನ್ನತ ಆದ್ಯತೆಯಾಗಿದೆ ಎಂದು ತಿಳಿಸಿದರು.
ಪ್ರಶಸ್ತಿ ಪುರಸ್ಕೃತರ ಹೆಸರು(ಆಯಾ ವಿಭಾಗಗಳ ವ್ಯಾಪ್ತಿ ಪಟ್ಟಿ)
ಹುಬ್ಬಳ್ಳಿ ವಿಭಾಗ: ನಾರಾಯಣ್ ನಾಯಕ್(ಸಹಾಯಕ, ಕ್ಯಾಸಲ್ ರಾಕ್), ವಿನಯ್ ಕುಮಾರ್ ಚೌಧರಿ(ಸಹಾಯಕ, ಕ್ಯಾಸಲ್ ರಾಕ್), ಪ್ರಬೀಶ್ ಪಿ.(ಲೋಕೋ ಪೈಲಟ್, ವಾಸ್ಕೋ ಡ ಗಾಮಾ), ವಿಶ್ವನಾಥ್ ಮಂಜುನಾಥ್(ಹಿರಿಯ ಸಹಾಯಕ ಲೋಕೋ ಪೈಲಟ್, ವಾಸ್ಕೋ ಡ ಗಾಮಾ),, ಆರ್.ವಿ. ಹುಗ್ಗಿ(ಹೆಡ್ ಕಾನ್‌ಸ್ಟೇಬಲ್, ಆರ್ ಪಿಎಫ್ ಗದಗ), ಸುಶೀಲ್ ಕುಮಾರ್ (ಕಾನ್‌ಸ್ಟೇಬಲ್, ಆರ್‌ಪಿಎಫ್ ಪೋಸ್ಟ್ ಬೆಳಗಾವಿ).
ಬೆಂಗಳೂರು ವಿಭಾಗ: ಲಕ್ಷ್ಮೀಕಾಂತ ಎನ್.ವಿ(ಗೇಟ್ ಕೀಪರ್), ವಿಜಯ್ ಕುಮಾರ್ ಮೊಹೌರ್(ಲೋಕೋ ಪೈಲಟ್), ಸಾಕೆ ರಾಜೇಶ್(ಹಿರಿಯ ಸಹಾಯಕ ಲೋಕೋ ಪೈಲಟ್), ನಾಗರಾಜ್(ಟೆಕ್ನಿಷಿಯನ್)
ಮೈಸೂರು ವಿಭಾಗ: ಸುಭಾಷ್ ಚಂದ್ರ ಗುಪ್ತಾ(ಗೇಟ್ ಮ್ಯಾನ್), ರಾಮಗೋಪಾಲಾಚಾರಿ(ಗ್ಯಾಂಗ್ ಮೇಟ್), ಪೂರ್ಣ್ ಸಿಂಗ್ ಮೀನಾ(ಟ್ರೈನ್ ಮ್ಯಾನೇಜರ್).

Tags :