ನೈಋತ್ಯ ರೈಲ್ವೆ ವಲಯ ನೂತನ ಸಿಪಿಆರ್‌ಓ ಡಾ. ಮಂಜುನಾಥ್ ಅಧಿಕಾರ ಸ್ವೀಕಾರ
ಹುಬ್ಬಳ್ಳಿ: ಇಲ್ಲಿನ ನೈಋತ್ಯ ರೈಲ್ವೆ ವಲಯದ ಪ್ರಧಾನ ಕಚೇರಿಯಲ್ಲಿ ಸೋಮವಾರ ನೈಋತ್ಯ ರೈಲ್ವೆ ವಲಯದ ಪ್ರಧಾನ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ(ಸಿಪಿಆರ್‌ಓ) ಡಾ.ಮಂಜುನಾಥ ಕನಮಡಿ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು.
ಈವರೆಗೂ ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ ಅನೀಸ್ ಹೆಗಡೆ ಅವರು ನವದೆಹಲಿಯ ರೈಲ್ವೆ ಮಂಡಳಿಯಲ್ಲಿ ಮೂಲಸೌಕರ್ಯ(ಇನ್ಫ್ರಾ) ವಿಭಾಗದ ಜಂಟಿ ನಿರ್ದೇಶಕ ಸ್ಥಾನಕ್ಕೆ ವರ್ಗಾವಣೆಗೊಂಡಿದ್ದಾರೆ. ಸೋಮವಾರ ನೂತನ ಪ್ರಧಾನ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ ಕನಮಡಿ ಅವರಿಗೆ ಅನೀಸ್ ಹೆಗಡೆ ಅವರು ಅಧಿಕಾರ ಹಸ್ತಾಂತರಿಸಿದರು.
ನೂತನ ಸಿಪಿಆರ್‌ಓ ಡಾ.ಮಂಜುನಾಥ ಕನಮಡಿ ಅವರು ಮೂಲತಃ ಬಾಗಲಕೋಟೆ ಜಿಲ್ಲೆಯ ಜಮಖಂಡಿಯವರಾಗಿದ್ದು, ೨೦೧೩ರ ಐಆರ್‌ಟಿಎಸ್ (ಇಂಡಿಯನ್ ರೈಲ್ವೆ ಟ್ರಾಫಿಕ್ ಸರ್ವಿಸ್) ಬ್ಯಾಚಿನ ಅಧಿಕಾರಿಯಾಗಿದ್ದಾರೆ. ಅವರು ವೈದ್ಯಕೀಯ ಪದವೀಧರರಾಗಿದ್ದಾರೆ.
ಈ ಮೊದಲು ಅವರು ನೈಋತ್ಯ ರೈಲ್ವೆ ವಲಯದ ವಾಣಿಜ್ಯ ವಿಭಾಗ ಮತ್ತು ಪ್ರಯಾಣಿಕರ ವಿಭಾಗದ ಉಪ ಮುಖ್ಯ ವ್ಯವಸ್ಥಾಪಕರಾಗಿ, ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಈಗ ನೈಋತ್ಯ ರೈಲ್ವೆ ವಲಯದ ಪ್ರಧಾನ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.