For the best experience, open
https://m.samyuktakarnataka.in
on your mobile browser.

ನೌಕರನಿಗೆ ಅಂತಃಕರಣದ ಟಾನಿಕ್ ನೀಡಿ ಪ್ಲೀಸ್!

03:38 AM Oct 10, 2024 IST | Samyukta Karnataka
ನೌಕರನಿಗೆ ಅಂತಃಕರಣದ ಟಾನಿಕ್ ನೀಡಿ ಪ್ಲೀಸ್

ಇಂದು ವಿಶ್ವ ಮಾನಸಿಕ ಆರೋಗ್ಯ ದಿನ

ಇತ್ತೀಚಿನ ದಿನಗಳಲ್ಲಿ ಮನೋ ವೈದ್ಯರು ಕೆಲಸದಲ್ಲಿಯ ಒತ್ತಡದಿಂದ ಉದ್ಭವಿಸುವ ಅನೇಕ ಮಾನಸಿಕ ಕಾಯಿಲೆಗಳನ್ನು ತಮ್ಮ ಪ್ರಾಕ್ಟೀಸ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೋಡುತ್ತಿರುವುದು ಒಂದು ರೀತಿಯಲ್ಲಿ ಸುಖಕರವಾದ ಬೆಳವಣಿಗೆ ಅಲ್ಲ. ಬೆಂಗಳೂರು ಹಾಗೂ ಇತರ ಪ್ರದೇಶಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಾಫ್ಟ್ವೇರ್ ಇಂಜಿನಿಯರ್‌ಗಳ ಒತ್ತಡವಂತೂ ಅತೀ ಹೆಚ್ಚಿನದ್ದು. ಇಂತಹವರು ಪ್ರತಿದಿನ ೧೦ ರಿಂದ ೧೨ ಗಂಟೆ ತಮ್ಮ ಆಫೀಸಿನಲ್ಲಿಯೇ ಒಂಟಿಯಾಗಿ ಕುಳಿತುಕೊಂಡು ಕೆಲಸ ಮಾಡುವುದರಿಂದ ಇಂತಹವರಲ್ಲಿ ಆತಂಕ, ಖಿನ್ನತೆ, ನಿದ್ರಾಹೀನತೆ, ಮಾದಕ ವಸ್ತುಗಳ ಮೇಲೆ ಅವಲಂಬನೆ ಜಾಸ್ತಿಯಾಗುತ್ತದೆ. ಮೇಲಾಗಿ ಹಲವರಲ್ಲಿ ವಿಪರೀತ ಟೆನ್ಷನ್‌ದಿಂದ ತಲೆಶೂಲೆ, ಬೆನ್ನು ನೋವು, ಜಿಗುಪ್ಸೆ ಕಂಡುಬರುತ್ತಲಿದೆ.
ಎಲ್ಲೆ ಮೀರಿದ ಕಾರ್ಯ ಒತ್ತಡದಿಂದ ಹಲವರು ಮದ್ಯವ್ಯಸನಿ, ಸಿಗರೇಟು, ತಂಬಾಕು ವ್ಯಸನಿಗಳಾಗುವದು ಖೇದಕರ. ಕಾರ್ಯ ಕ್ಷೇತ್ರದಲ್ಲಿ ಜನರಿಗೆ ಪೂರಕ ವಾತಾವರಣ, ಪರಿಸರ ಅತ್ಯಂತ ಅಗತ್ಯ. ಬಾಸ್‌ಗಳ ಜೊತೆ ಹೊಂದಾಣಿಕೆ ಇಲ್ಲದಿದ್ದರೆ, ತುರ್ತು ಪರಿಸ್ಥಿತಿಯಲ್ಲಿ ರಜೆ ನೀಡದಿದ್ದರೆ, ಸಹೋದ್ಯೋಗಿಗಳು ಸಹಕಾರ ನೀಡದಿದ್ದರೆ ಅನೇಕರು ಡಿಪ್ರೆಶನ್, ಹಿಸ್ಟೇರಿಯಾ ಮುಂತಾದ ಕಾಯಿಲೆಗಳಿಗೆ ಒಳಗಾಗುವುದು ಸಾಮಾನ್ಯವಾಗಿದೆ.
ಈಗಿನ ದಿನಗಳಲ್ಲಿ ಕೆಲಸ ಮಾಡುವವರು ಬರೀ ಸಂಬಳ ನೋಡುವದಿಲ್ಲ. ಬದಲಾಗಿ ನೌಕರದಾರರ ಬಗ್ಗೆ ಉದ್ಯೋಗದಾತನಲ್ಲಿ ಇರುವ ಅಂತಃಕರಣ, ಕಳಕಳಿ, ಪ್ರೀತಿ ವಿಶ್ವಾಸ ಇವುಗಳನ್ನು ನೋಡಿ ಕೆಲಸವನ್ನು ಸೇರಿಕೊಳ್ಳುತ್ತಾರೆ. ಏಕೆಂದರೆ ಎಲ್ಲರಿಗೂ ಬೇಕು "ಕೆಲಸದಲ್ಲಿ ಮಾನಸಿಕ ಆರೋಗ್ಯ".
ಬಾಸ್ ಜೊತೆ ಭೇಟಿಯಾದಾಗ, ಚರ್ಚೆ ನಡೆಯುವಾಗ ಹಲವರಿಗೆ ಎದೆಯಲ್ಲಿ ಢವ ಢವ, ಗಾಬರಿ, ತಲೆಶೂಲೆ, ಆತಂಕ ಕಂಡುಬರಬಹುದು. ಉದ್ಯೋಗದಾತನು ಇಂತಹ ಲಕ್ಷಣಗಳನ್ನು ಗಮನಿಸಿದರೆ ನೌಕರಿ ಮಾಡುವವನಿಗೆ ಕೂಡಲೇ ಶಾಂತವಾಗಿ ಇರಲು, ಅವನ ಮನಸ್ಥಿತಿಯನ್ನು ಹಗುರ ಮಾಡಿಸಲು ಪ್ರಯತ್ನಿಸಬೇಕು. ಯಾವತ್ತೂ ಗಂಟು ಮುಖ ಹಾಕಿ ಇತರರೊಡನೆ ಮಾತನಾಡುವುದು, ಅತೀ ಸ್ಟ್ರಿಕ್ಟ್ ಅನಿಸಿಕೊಳ್ಳುವುದು, ಸಮಯ ಪರಿಪಾಲನೆಗೆ ಎಲ್ಲೆ ಮೀರಿ ಒತ್ತು ನೀಡುವುದು-ಇಂತಹ ಸನ್ನಿವೇಶಗಳು ಕಾರ್ಯಕ್ಷೇತ್ರಗಳಲ್ಲಿ ಆತಂಕ, ಗಾಬರಿ, ಹೆದರಿಕೆ ತರಬಲ್ಲದು.
ಅತಿಯಾದ ಕೆಲಸದ ಒತ್ತಡ, ಮಿತಿ ಮೀರಿದ "ಟಾರ್ಗೆಟ್"ಗಳು, ಮೇರು ವೇಗದಲ್ಲಿ ಕೆಲಸ ಮಾಡಬೇಕೆಂಬ ತವಕ, ಸ್ವಲ್ಪೇ ಅವಧಿಯಲ್ಲಿ ಬಹಳ ಹಣ ಗಳಿಸಬೇಕೆಂಬ ಆತುರ, ಯೋಗ್ಯತೆಗೆ ತಕ್ಕಂತೆ ಸಿಗದ ಸಂಬಳ/ಸಂಭಾವನೆ, ಬಾಸ್‌ನ ಸಿಡಿಮಿಡಿತನ, ಅಶ್ಲೀಲ ಪದಗಳಿಂದ ಬೈಯುವದು, ಅವಾಚ್ಯ ಶಬ್ದಗಳ ಪ್ರಯೋಗ, ಓವರ್ ಟೈಮ್ ದುಡಿಸಿಕೊಳ್ಳುವುದು-ಇವೆಲ್ಲವೂ ಮಾನಸಿಕ ಅನಾರೋಗ್ಯಕ್ಕೆ ನಾಂದಿಯಾಗಬಹುದು.
ಕಾರ್ಯತತ್ಪರತೆಯಲ್ಲಿ ಕ್ಷೀಣಿಸುವಿಕೆ, ಕೆಲಸದ ಮೇಲೆ ಏಕಾಗ್ರತೆ ಇಲ್ಲದಿರುವುದು, ಹಸಿವು ಮತ್ತು ನಿದ್ರೆಯಲ್ಲಿ ಏರುಪೇರು, ಚಟುವಟಿಕೆಗಳಲ್ಲಿ ನಿರುತ್ಸಾಹ, ಬೇಸರಿಕೆ, ಹೆದರಿಕೆ, ಭಯ, ಸಿಟ್ಟು, ಆಕ್ರೋಶ, ಆತಂಕ, ಅತೀಯಾದ "ಸೂಕ್ಷತೆ", ಕಾರಣವಿಲ್ಲದೇ ಮೈ ಕೈ ನೋವು, ತಲೆಶೂಲೆ, ಬೆನ್ನು ನೋವು ಮೊದಲಾದವು ಕಂಡುಬರತೊಡಗಿದರೆ ಕೆಲಸದ ಸ್ಥಳದಲ್ಲಿ ವ್ಯಕ್ತಿ ಒತ್ತಡಕ್ಕೆ ಒಳಗಾಗಿ ಮಾನಸಿಕ ಯಾತನೆ ಅನುಭವಿಸುತ್ತಿದ್ದಾನೆ ಎಂದೇ ಅರ್ಥ.
ಉದ್ಯೋಗದಾತನು ಕೆಲಸಗಾರರೊಂದಿಗೆ ಶಾಂತಚಿತ್ತದಿಂದ ಮಾತನಾಡುವುದು, ಅವರ ಕಷ್ಟ ಕಾರ್ಪಣ್ಯಗಳನ್ನು ಕಳಕಳಿಯಿಂದ ಆಲಿಸುವುದು, ಅವರಲ್ಲಿ ಆತ್ಮವಿಶ್ವಾಸ ತುಂಬುವುದು, ಅವರ ಜೊತೆಗೆ ಸಕಾರಾತ್ಮಕವಾಗಿ ಸ್ಪಂದಿಸುವುದು ಈ ಸಮಸ್ಯೆಯನ್ನು ಪರಿಹರಿಸಬಲ್ಲವು. ಕೆಲಸ ಮಾಡಿದವರಿಗೆ ಸೂಕ್ತ ಪ್ರಶಂಸೆ, ಸಮಾಧಾನ, ಸಂಭಾವನೆ ನೀಡಿದಲ್ಲಿ ಮಾನಸಿಕ ಉದ್ವೇಗ ಕಡಿಮೆಯಾಗಲು ಸಾಧ್ಯ. ಮಿತಿ ಮೀರಿದ "ವರ್ಕ್ ಲೋಡ್" ಕೂಡಾ ಹಾಕಬಾರದು.