For the best experience, open
https://m.samyuktakarnataka.in
on your mobile browser.

ನ್ಯಾಯದ ಹಾದಿಯಲ್ಲಿ ಸಿಕ್ಕ ತೀರ್ಪು

12:43 PM May 25, 2024 IST | Samyukta Karnataka
ನ್ಯಾಯದ ಹಾದಿಯಲ್ಲಿ ಸಿಕ್ಕ ತೀರ್ಪು

ಗಣೇಶ್ ರಾಣೆಬೆನ್ನೂರು

ಚಿತ್ರ: ದಿ ಜಡ್ಜಮೆಂಟ್‌
ನಿರ್ದೇಶನ: ಗುರುರಾಜ ಕುಲಕರ್ಣಿ
ನಿರ್ಮಾಣ: ಜಿ೯ ಕಮ್ಯುನಿಕೇಷನ್ & ಮೀಡಿಯಾ ಎಂಟರ್‌ಟೈನ್‌ಮೆಂಟ್
ತಾರಾಗಣ: ರವಿಚಂದ್ರನ್, ದಿಗಂತ್, ಮೇಘನಾ ಗಾಂವ್ಕರ್, ಧನ್ಯಾ ರಾಮ್‌ಕುಮಾರ್, ಲಕ್ಷಿö್ಮ ಗೋಪಾಲ ಸ್ವಾಮಿ, ರವಿಶಂಕರ್ ಗೌಡ ಮುಂತಾದವರು.
ರೇಟಿಂಗ್ಸ್: ***

ಪಬ್ಲಿಕ್ ಪ್ರಾಸಿಕ್ಯೂಟರ್ ಗೋವಿಂದ್ (ರವಿಚಂದ್ರನ್) ಕೈಗೆತ್ತಿಕೊಂಡ ಕೇಸ್‌ಗಳೆಲ್ಲವೂ ಸಕ್ಸಸ್. ಹೀಗಾಗಿ ನಾನೇ ಬೆಸ್ಟ್... ನಾನು ನಾನೇ, ನೀನು ನೀನೇ... ಈ ಕೇಸ್ ಗೆಲ್ಲೋದು ನಾನೇ...' ಎನ್ನುತ್ತಾರೆ ಗೋವಿಂದ್. ಸಾಮಾಜಿಕ ಹೋರಾಟಗಾರ್ತಿಯೊಬ್ಬರ ಕೊಲೆ ಕೇಸ್‌ನಲ್ಲಿ ವಾದ ಮಾಡಿ, ಆರೋಪಿಯನ್ನು ಜೈಲಿಗೆ ಕಳಿಸುವಲ್ಲಿ ಯಶಸ್ವಿಯಾಗುತ್ತಾರೆ. ಈ ಪ್ರಕರಣವನ್ನು ಗೆದ್ದು ಬೀಗುತ್ತಿರುವ ಹೊತ್ತಿನಲ್ಲೇಏನೋ ಮಿಸ್ ಹೋಡೀತಿದೆ' ಎಂದೆನಿಸತೊಡಗುತ್ತದೆ. ಅದರ ಹಿಂದೆ ದೊಡ್ಡ ಷಡ್ಯಂತ್ರವಿರುವ ಬಗ್ಗೆ ತಿಳಿದು, ತಾನು ಜೈಲಿಗೆ ಕಳಿಸಿದವನ ಪರವಾಗಿಯೇ ನಿಲ್ಲುತ್ತಾರೆ ಗೋವಿಂದ್. ಈ ಘಟನೆಯಿಂದ ಸಿನಿಮಾಕ್ಕೊಂದು ತಿರುವು ಸಿಗುತ್ತದೆ. ಕುತೂಹಲವೂ ಇಮ್ಮಡಿಯಾಗುತ್ತದೆ.
ಸಾಮಾನ್ಯವಾಗಿ ಕೋರ್ಟ್ ರೂಂ ಡ್ರಾಮಾಗಳಲ್ಲಿ ವಾದ-ವಿವಾದಗಳು, ಸಾಕ್ಷ್ಯಾಧಾರ, ಕಟಕಟೆಯಲ್ಲಿ ವಿಚಾರಣೆ… ಹೀಗೇ ಸಾಗುತ್ತದೆ. ಆದರೆ, ಸಿದ್ಧಸೂತ್ರಗಳನ್ನು ಬದಿಗಿಟ್ಟು ಒಂದಷ್ಟು ಹೊಸ ಆಯಾಮದತ್ತ ಮುಖ ಮಾಡಿರುವುದೇ ದಿ ಜಡ್ಜ್ಮೆಂಟ್'ನ ವಿಶೇಷ. ಕನ್ನಡದಲ್ಲಿ ನ್ಯಾಯಕ್ಕಾಗಿ ಹೋರಾಡುವ ಅನೇಕ ಬಗೆಯ ಸಿನಿಮಾಗಳು ಬಂದಿವೆ.ದಿ ಜಡ್ಜ್ಮೆಂಟ್'ನಲ್ಲಿ ಕೆಲವು ವಿಶೇಷ ರೀತಿಯ, ಹೊಸತನದ ಎಳೆಗಳು ಮಿಳಿತವಾಗಿರುವುದರಿಂದ ಗಮನ ಸೆಳೆಯುತ್ತದೆ. ಯಾಕೆಂದರೆ ಒಂದು ಕೇಸ್‌ನಲ್ಲಿ ಅಪರಾಧಿ
ಆಗಿದ್ದವನು, ಮತ್ತೊಂದು ಕೇಸ್‌ನಲ್ಲಿ ಸಾಕ್ಷಿಯಾಗಿ ಬಂದು ನಿಲ್ಲುತ್ತಾನೆ. ಆತನನ್ನು ಎಷ್ಟರಮಟ್ಟಿಗೆ ನಂಬಬಹುದು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದನ್ನು ನ್ಯಾಯಾಂಗ ಹೇಗೆ ಸ್ವೀಕರಿಸುತ್ತದೆ ಎಂಬುದರ ಬಗ್ಗೆ ಸವಿಸ್ತಾರವಾಗಿ ತೆರೆಯ ಮೇಲೆ ಹರವಿಟ್ಟಿದ್ದಾರೆ ನಿರ್ದೇಶಕ ಗುರುರಾಜ ಕುಲಕರ್ಣಿ (ನಾಡಗೌಡ).
ಚಿತ್ರಕ್ಕೆ ಲೀಗಲ್ ಥ್ರಿಲ್ಲರ್ ಎಂಬ ಹಣೆಪಟ್ಟಿ ಇದ್ದರೂ, ನಾನಾ ವಿಷಯಗಳನ್ನು ಸರಳವಾಗಿ ಧಾಟಿಸಿದ್ದಾರೆ ಗುರುರಾಜ್. ಒಂದಷ್ಟು ಸಂಶೋಧನೆ, ಹಿಂದಿನ ಪ್ರಕರಣಗಳ ಉಲ್ಲೇಖ, ಕೆಲವು ಲೀಗಲ್ ಪಾಯಿಂಟ್ಸ್ ಚಿತ್ರದ ಅಡಿಪಾಯ. ಕೊಲೆಯಿಂದ ಶುರುವಾಗುವ ಸಿನಿಮಾ, ಕ್ರಮೇಣ ಸಮಾಜನ ಅಂಕು-ಡೊಂಕುಗಳ ಕುರಿತು ಪ್ರಸ್ತಾಪವಾಗುತ್ತದೆ. ಎಲ್ಲೂ ದಾರಿ ತಪ್ಪದಂತೆ ಒಂದಕ್ಕೊಂದು ಲಿಂಕ್ ಮಿಸ್ ಆಗದಂತೆ ಕಾಪಾಡಿಕೊಂಡಿರುವ ಜಾಣ್ಮೆ ಎದ್ದು ಕಾಣುತ್ತದೆ.
ಕೋರ್ಟ್ ಡ್ರಾಮಾ ಎಂದಮೇಲೆ ಕೊಂಚ ತಾಳ್ಮೆ ಬೇಡುತ್ತದೆ. ಇಲ್ಲಿ ಈ ಸೀನ್ ಬೇಕಿತ್ತಾ... ತುಂಬಾ ಲ್ಯಾಗ್ ಆಯ್ತು...' ಎಂದು ಆಕಳಿಸಿದರೆ ಥ್ರಿಲ್ಲರ್ ಜಾನರ್‌ಗಿರುವ ಆಸಕ್ತಿ ಕಳೆದುಹೋಗಬಹುದು. ಮುಂದೇನು ಎಂಬುದರ ಕುತೂಹಲವಿದ್ದರೆ... ಅದರ ಜತೆಗೆ ತಾಳ್ಮೆಯೂ ಮುಖ್ಯ ಎಂಬುದು ಸಿನಿಮಾ ನೋಡಿದ ನಂತರ ಸಿಗುವಜಡ್ಜ್ಮೆಂಟ್'. ಕೆಲವೊಂದು ಲೋಪದೋಷಗಳನ್ನು ಹೊರತುಪಡಿಸಿದರೆ `ಜಡ್ಜ್ಮೆಂಟ್' ನೋಡಿಸಿಕೊಂಡು ಹೋಗುತ್ತದೆ.
ಲಾಯರ್ ಪಾತ್ರದಲ್ಲಿ ರವಿಚಂದ್ರನ್ ಲೀಲಾಜಾಲವಾಗಿ ಅಭಿನಯಿಸಿದ್ದಾರೆ. ದಿಗಂತ್, ಮೇಗನಾ ಗಾಂವ್ಕರ್, ಧನ್ಯಾ, ಲಕ್ಷಿö್ಮ ಗೋಪಾಲಸ್ವಾಮಿ, ಟಿ.ಎಸ್.ನಾಗಾಭರಣ, ಪ್ರಕಾಶ್ ಬೆಳವಾಡಿ, ರವಿಶಂಕರ್ ಗೌಡ ಮುಂತಾದವರು ತಮಗೆ ಸಿಕ್ಕ ಅವಕಾಶವನ್ನು ಸಮರ್ತವಾಗಿ ಬಳಸಿಕೊಂಡಿದ್ದಾರೆ.ಅನೂಪ್ ಸೀಳಿನ್ ಸಂಗೀತ ಚಿತ್ರಕ್ಕೆ ಪೂರಕವಾಗಿದೆ.