ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ನ್ಯಾಯಾಂಗ ಕ್ಷೇತ್ರದ ಸೂರ್ಯ ಅಸ್ತಂಗತ

01:45 AM Feb 22, 2024 IST | Samyukta Karnataka

ಫಾಲಿನಾರಿಮನ್ ಅವರು ನ್ಯಾಯಾಂಗ ಕ್ಷೇತ್ರದ ಸೂರ್ಯನಂತಿದ್ದ ವ್ಯಕ್ತಿ. ಈಗ ಅಸ್ತಂಗತನಾಗಿದಂತಾಗಿದೆ. ವಕೀಲರ ಸಮುದಾಯದ ಭೀಷ್ಮ ಪಿತಾಮಹನಂತಿದ್ದ ವ್ಯಕ್ತಿಯ ನಿಧನದಿಂದ ನ್ಯಾಯ ನಿರ್ಣಯದ ವ್ಯವಸ್ಥೆಯ ಒಬ್ಬ ಪ್ರತಿಭಾನ್ವಿತ ವ್ಯಕ್ತಿ ಮರೆಯಾದರೂ ಅವರ ಹೆಜ್ಜೆ ಗುರುತುಗಳು ಸದಾ ದಾರಿದೀಪ. ಅನೇಕ ಪರಿಸ್ಥಿತಿಗಳಲ್ಲಿ ತಮ್ಮ ನಿಷ್ಠುರ ಮತ್ತು ನೇರ ನಡವಳಿಕೆಗಳಿಂದ ಹೆಸರನ್ನು ಪಡೆದಿದ್ದ ವ್ಯಕ್ತಿ. ನಂಬಿದ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿ ಅದರಂತೆ ಬಾಳಿದ ಮಹಾನುಭಾವ.
ನಾರಿಮನ್ ಅವರು ಸತತವಾಗಿ ಜ್ಞಾನಾರ್ಜನೆಗೆ ಮುಖ ಮಾಡಿ ಜೀವಿಸಿದಂಥ ವ್ಯಕ್ತಿ. ವಿಭಿನ್ನ ವಿಷಯಗಳ ಮೇಲೆ ಪುಸ್ತಕಗಳನ್ನು ಓದುವ ಪರಿಪಾಠ ಹೊಂದಿದ್ದರು. ೧೯೫೦ ನವಂಬರ್ ತಿಂಗಳಲ್ಲಿ ವಕೀಲಿವೃತ್ತಿಯನ್ನು ಮುಂಬೈನಲ್ಲಿ ಪ್ರಾರಂಭಿಸಿದರು ಮೊದಲ ಬಾರಿಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ೧೯೬೦ರಲ್ಲಿ ದಪ್ತರಿ ಅವರ ಜೊತೆ ಹಾಜರಾಗಿದ್ದರು. ನ್ಯಾಯಮೂರ್ತಿ ಶಾ ಅವರ ಮುಂದೆ ಹಾಜರಾಗಿದ್ದಾಗ ನ್ಯಾಯಾಧೀಶರು ಒಂದು ಕಾನೂನಿನ ವಿಷಯದ ಬಗ್ಗೆ ಅಭಿಪ್ರಾಯ ಮಂಡಿಸಿದರು ಆ ಅಭಿಪ್ರಾಯ ಮುಂಬೈ ಕೋರ್ಟ್ನಲ್ಲಿ ಅವರೇ ನ್ಯಾಯಮೂರ್ತಿಗಳಾಗಿದ್ದಾಗ ನೀಡಿದ ಅಭಿಪ್ರಾಯಕ್ಕೆ ತದ್ವಿರುದ್ಧವಾಗಿತ್ತು. ನಾರಿಮನ್ ಅವರು ದಪ್ತರಿ ಅವರಿಗೆ ನ್ಯಾಯಮೂರ್ತಿಗಳ ಗಮನಕ್ಕೆ ಈ ವಿಷಯ ತನ್ನಿ ಎಂದಾಗ ದಪ್ತರಿಯವರು ನ್ಯಾಯಮೂರ್ತಿಗಳಿಗೆ ಹೇಳಿದರು "ಮುಂಬೈ ಹೈಕೋರ್ಟ್ನ ಏಕ ನ್ಯಾಯಮೂರ್ತಿಗಳ ತೀರ್ಪು ಈ ವಿಷಯದಲ್ಲಿ ಇದೆ. ಆದರೆ ತಮಗೆ ಅದಕ್ಕೆ ತದ್ವಿರುದ್ಧವಾಗಿ ಹೇಳಿ ಪಶ್ಚಾತ್ತಾಪ ಪಡುವುದಕ್ಕೆ ಅವಕಾಶ ಇದೆ". ಹಾಗೆ ಹೇಳಿದಾಗ ನ್ಯಾಯಮೂರ್ತಿಗಳು ಅತ್ಯಂತ ಮುಜುಗರಕ್ಕೆ ಒಳಗಾದರು. ಹೀಗೆ ದಪ್ತರಿ ಅವರು ತಮ್ಮ ಹಾಸ್ಯ ಪ್ರಜ್ಞೆಗೆ ಹೆಸರಾಗಿದ್ದರು. ಅದಲ್ಲದೆ ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಸಹ ಬದ್ಧರಾಗಿದ್ದರು. ಈ ವಿಷಯವನ್ನು ನಾರಿಮನ್ ಅವರೇ ಒಂದು ಕಡೆ ಹೇಳಿದ್ದಾರೆ. ಹೀಗೆಯೇ ಇದ್ದಂಥ ವ್ಯಕ್ತಿ ನಾರಿಮನ್ ಸಹಾ. ದಪ್ತರಿಯವರು ಹೇಳಿದ ಒಂದು ವಿಷಯವನ್ನು ನಾನು ವೃತ್ತಿಯಲ್ಲಿ ಅಳವಡಿಸಿಕೊಂಡಿದ್ದೇನೆ ಎಂದು ನಾರಿಮನ್ ಅವರು ಒಂದು ಕಡೆ ಹೇಳಿದ್ದಾರೆ "ಯಾವಾಗಲೂ ನೆನಪಿಟ್ಟುಕೋ ಫಾಲಿ ಒಂದು ಫೈಲಿನ ಮಾಹಿತಿಯನ್ನು ಓದುವುದಕ್ಕಿಂತ ಹೆಚ್ಚಿಗೆ ಸಮಯವನ್ನು ಅದರ ಬಗ್ಗೆ ಆಲೋಚನೆ ಮತ್ತು ಮನನ ಮಾಡುವುದರಲ್ಲಿ ಕಳೆಯಬೇಕು"
ಫಾಲಿ ನಾರಿಮನ್ ವಕೀಲರ ಸಮುದಾಯದ ಭೀಷ್ಮ ಪಿತಾಮಹನಂತಿದ್ದ ವ್ಯಕ್ತಿ. ಅನೇಕ ಪರಿಸ್ಥಿತಿಗಳಲ್ಲಿ ತಮ್ಮ ನಿಷ್ಠುರ ಮತ್ತು ನೇರ ನಡವಳಿಕೆಗಳಿಂದ ಹೆಸರನ್ನು ಪಡೆದಿದ್ದವರು. ನಂಬಿದ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿ ಅದರಂತೆ ಬಾಳಿದ ಮಹಾನುಭಾವ.
೧೯೭೧ ರಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಹಿರಿಯ ನ್ಯಾಯವಾದಿಗಳಾಗಿ ಅನೇಕ ಪ್ರಮುಖಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು ಮತ್ತು ಕಾನೂನಿನ ಕ್ಲಿಷ್ಟ ಸಮಸ್ಯೆಗಳಪರಿಹಾರಕ್ಕೆ ಕಾರಣೀಭೂತರಾದರು. ಭೋಪಾಲ್ ಅವಘಡದ ಸಮಸ್ಯೆಯಲ್ಲಿ ಯೂನಿಯನ್ ಕಾರ್ಬೈಡ್ ಪರವಾಗಿ ಹಾಜರಾಗಿದ್ದರೂ ನಂತರದ ದಿನಗಳಲ್ಲಿ ಅವರು ಈ ತೀರ್ಮಾನ ಸರಿಯಾಗಲಿಲ್ಲ ಎಂಬ ಅಭಿಪ್ರಾಯ ಹೊಂದಿದ್ದರು. TMA Pai ಮೊಕದ್ದಮೆಯಲ್ಲಿ ಅಲ್ಪಸಂಖ್ಯಾತ ಸಂಸ್ಥೆಗಳ ಹಿತ ರಕ್ಷಣೆ ಮಾಡುವುದರಲ್ಲಿ ಯಶಸ್ವಿಯಾದರು. ಅರುಣಾಚಲ ಪ್ರದೇಶದ ರಾಜಕೀಯ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ರಾಜ್ಯಪಾಲರ ಮತ್ತು ಮಂತ್ರಿಮಂಡಲದ ಅಧಿಕಾರದ ಬಗ್ಗೆ ವಾದ ಮಾಡಿ ನಬಾಂ ರಬಿಯಾ ಮೊಕದ್ದಮೆಯಲ್ಲಿ ಗೆದ್ದು ಯಶಸ್ವಿಯಾದರು. ಇದಲ್ಲದೆ ಕರ್ನಾಟಕಕ್ಕೆ ಸಂಬಂಧಿಸಿದ ಕಾವೇರಿ ಜಲ ವಿವಾದದಲ್ಲಿ ಸುಮಾರು ಮೂರು ದಶಕಗಳಷ್ಟು ರಾಜ್ಯದ ಹಿತ ಸಂರಕ್ಷಣೆ ಮಾಡುವುದರಲ್ಲಿ ಸಾಕಷ್ಟು ಶ್ರಮ ವಹಿಸಿದರು.‌

ನಾರಿಮನ್ ಅವರು ವಕೀಲರು ಮತ್ತು ಲೋಕಸಭಾ ಸದಸ್ಯರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿ ಅನೇಕ ರೀತಿಯಲ್ಲಿ ಅವರಲ್ಲಿ ಸಮಾನತೆ ಇದೆ ಎಂದು ಹೇಳಿದ್ದರು. ಅಂದರೆ ಸಾರ್ವಜನಿಕರಲ್ಲಿ ವಕೀಲರು ಮತ್ತು ಸಂಸತ್ ಸದಸ್ಯರ ನೈತಿಕ ಮಟ್ಟದ ಬಗ್ಗೆ ಸದಭಿಪ್ರಾಯ ಇಲ್ಲ ಎಂದಿದ್ದರು. ಹಾಗಾಗಿ ವಕೀಲ ವೃತ್ತಿಯಲ್ಲಿ ನೈತಿಕತೆಯ ಸುಧಾರಣೆ ಅತ್ಯಂತ ಅವಶ್ಯ ಎಂದವರ ಅಭಿಪ್ರಾಯ ರಾಜ್ಯಸಭೆಯಲ್ಲಿ ಅವರದೇ ಆದ ಒಂದು ಪ್ರೈವೇಟ್ ಬಿಲ್ಲನ್ನು ಮಂಡಿಸಿದ್ದರು ಅದರಲ್ಲಿ ಯಾರು ಕೆಲಸ ಮಾಡುವುದಿಲ್ಲವೋ ಅವರಿಗೆ ಸಂಭಾವನೆ ಇರತಕ್ಕದ್ದಲ್ಲ ಎಂದು ತಿಳಿಸಿದ್ದರು ಆದರೆ ಈ ಬಿಲ್ ಜಾರಿಯಾಗಲಿಲ್ಲ. ರಾಜ್ಯಸಭೆಯಲ್ಲಿ ಒಂದು ಕಾಯಕ ನೀತಿ ಸಂಹಿತೆ (work ethics) ತರುವ ಅವರ ಪ್ರಯತ್ನ ಸಫಲವಾಗಲಿಲ್ಲ. ಹಾಗಾಗಿ ರಾಜಕೀಯದಲ್ಲಿ ನೈತಿಕತೆ ತರುವ ನನ್ನ ಪ್ರಯತ್ನ ವಿಫಲವಾಯಿತು ಎಂದರು.
ಅಟಲ್ ಬಿಹಾರಿ ವಾಜಪೇಯಿ ಅವರು ಸಂಸತ್ತನ್ನು ನಿಭಾಯಿಸುತ್ತಿದ್ದ ರೀತಿಯನ್ನು ನಾರಿಮನ್ ಅವರು ಪ್ರಶಂಸಿಸಿದ್ದಾರೆ. ಅವರ ಸಂಸತ್ತಿನ ಅನುಭವದಲ್ಲಿ ಹೇಳುವುದಾದರೆ ವಿರೋಧಿಗಳನ್ನು ಬಗ್ಗು ಬಡಿಯಲು ಕೋಪದ ಪ್ರದರ್ಶನ ಸರಿಯಾದದ್ದಲ್ಲ. ಅದನ್ನು ಬುದ್ಧಿವಂತಿಕೆಯಿಂದ ಮತ್ತು ಹಾಸ್ಯಪ್ರಜ್ಞೆಯಿಂದ ನಿಭಾಯಿಸತಕ್ಕದ್ದು ಎಂದರು ನಾರಿಮನ್. ರಾಜಕೀಯದಲ್ಲಿ ನೈತಿಕ ಮಟ್ಟವನ್ನು ಕಾಪಾಡಿಕೊಂಡು ಬಂದ ವ್ಯಕ್ತಿಗಳ ಬಗ್ಗೆ ಹೇಳುವಾಗ ನಾರಿಮನ್ ಅವರು ವಾಜಪೇಯಿ ಅವರ ಹೆಸರನ್ನು ಹೇಳುತ್ತಿದ್ದರು.
ಒಮ್ಮೆ ವಾಜಪೇಯಿ ಅವರು ಪ್ರಧಾನಮಂತ್ರಿಗಳಾಗಿದ್ದಾಗ ಒಬ್ಬ ಮಂತ್ರಿ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಬಗ್ಗೆ ಅನವಶ್ಯಕವಾಗಿ ಟೀಕೆ ಮಾಡಿದ ಸಂದರ್ಭದಲ್ಲಿ ವಾಜಪೇಯಿ ಅವರು ತಕ್ಷಣವೇ ರಾಷ್ಟ್ರಪತಿಗಳಿಗೆ ಹೇಳಿ ಮಂತ್ರಿಮಂಡಲದಿಂದ ಅವರನ್ನು ಹೊರಹಾಕಿದರು ಹೀಗೆ ರಾಜಕಾರಣದಲ್ಲಿ ಕೆಲವು ವ್ಯಕ್ತಿಗಳು ನೈತಿಕತೆಯನ್ನು ಎತ್ತಿ ಹಿಡಿದಿದ್ದಾರೆ ಎಂದು ತಮ್ಮ ಪುಸ್ತಕದಲ್ಲಿ ತಿಳಿಸಿದ್ದಾರೆ. ಅದೇ ರೀತಿ ಎಲ್ ಕೆ ಅಡ್ವಾಣಿ ಅವರು ಸಹ ತಮ್ಮ ಮೇಲೆ ಆರೋಪ ಬಂದಾಗ ತಕ್ಷಣವೇ ರಾಜೀನಾಮೆ ಕೊಟ್ಟು ಈ ಪ್ರಕರಣ ದಿಂದ ಹೊರ ಬರುವವರೆಗೂ ತಾವು ಮಂತ್ರಿ ಮಂಡಲ ಪ್ರವೇಶಿಸುವುದಿಲ್ಲ ಎಂದು ಹೇಳಿದ್ದನ್ನು ಸಹ ಉಲ್ಲೇಖಿಸಿದ್ದಾರೆ ಸಂಸತ್ ಸದಸ್ಯರು ತಮಗಿರುವ ಅಧಿಕಾರವನ್ನು ಯಾವಾಗಲೂ ಸದುದ್ದೇಶಕ್ಕೆ ಉಪಯೋಗಿಸಬೇಕೇ ಹೊರತು ದುರುಪಯೋಗ ಮಾಡುವುದಕ್ಕಲ್ಲ ಎಂದಿದ್ದಾರೆ.
ಅವರ ಸೇವೆಯನ್ನು ಗುರುತಿಸಿ ಭಾರತ ಸರ್ಕಾರ ಅವರಿಗೆ ಪದ್ಮಭೂಷಣ ಮತ್ತು ಪದ್ಮ ವಿಭೂಷಣ ಪ್ರಶಸ್ತಿಗಳನ್ನು ನೀಡಿದೆ ಹಾಗೆಯೇ ರಾಜ್ಯಸಭಾದ ನಾಮನಿರ್ದೇಶಿತ ಸದಸ್ಯತ್ವವೂ ಪ್ರಾಪ್ತವಾಗಿತ್ತು. ಅವರ ಮಗ ರೋಹಿಂಗ್ಟನ್ ನಾರಿಮನ್ ಅವರು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ಅನೇಕ ಮಹತ್ವದ ತೀರ್ಪುಗಳನ್ನು ನೀಡಿದ್ದಾರೆ (Before memory' fades) ದಾಖಲಿಸಿದ್ದಾರೆ. ೯೫ ವರ್ಷದ ತುಂಬು ಜೀವನ ನಡೆಸಿದ ನಾರಿಮನ್ ಅವರು ತಾವು ನಂಬಿದ ಆದರ್ಶಗಳನ್ನು ಯಾವತ್ತು ಬಿಡಲಿಲ್ಲ. ಅವರ ನಿಧನದಿಂದ ನ್ಯಾಯ ಕ್ಷೇತ್ರದ ಒಂದು ಧ್ರುವತಾರೆ ಕಣ್ಮರೆಯಾದಂತಿದೆ.

Next Article