ನ್ಯಾಯಾಲಯದ ಆವರಣದಲ್ಲೇ ಯುವಕನ ಮೇಲೆ ಮಾರಣಾಂತಿಕ ಹಲ್ಲೆ: ಮೂವರ ಬಂಧನ
ಕಲಬುರಗಿ: ನ್ಯಾಯಾಲಯದ ಆವರಣದಲ್ಲಿಯೇ ಯುವಕನೋರ್ವನಿಗೆ ಮೂವರು ಸೇರಿಕೊಂಡು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಬುಧವಾರ ಜೇವರ್ಗಿ ಪಟ್ಟಣದಲ್ಲಿ ನಡೆದಿರುವುದು ವರದಿಯಾಗಿದೆ.
ಯಾತನೂರ್ ಗ್ರಾಮದ ನಿವಾಸಿ ದೇವಿಂದ್ರ ತಂದೆ ಗುಂಡಪ್ಪ ಯಾತನೂರ್(27) ಹಲ್ಲೆಗೆ ಒಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಅದೇ ಗ್ರಾಮದ ನಿವಾಸಿಗಳಾದ ಸಿದ್ದು ಮಲ್ಲಪ್ಪ ಪೋಲಿಸ್‌ಪಾಟೀಲ್ ಯಾತನೂರ್, ಶಿವಲಿಂಗಪ್ಪ ನಿಂಗಪ್ಪ ಪೋಲಿಸ್‌ಪಾಟೀಲ್ ಯಾತನೂರ್ ಮತ್ತು ಶ್ರೀಶೈಲ್ ಕುರನಳ್ಳಿ ಎಂಬಾತರೆ ಹಲ್ಲೆ ಮಾಡಿರುವ ಆರೋಪಿಗಳು ಎಂದು ತಿಳಿದುಬಂದಿದೆ.
ಕಳೆದ ನಾಲ್ಕು ವರ್ಷಗಳ ಹಿಂದೆ ಯುವಕ ದೇವಿಂದ್ರ ಯಾತನೂರ್ ಹಲ್ಲೆಕೋರರಲ್ಲಿ ಒಬ್ಬನಾದ ಶಿವಲಿಂಗಪ್ಪ ಪೋಲಿಸ್‌ಪಾಟೀಲ್ ಯಾತನೂರ್ ಅವರ ಸಹೋದರ ಸಂಗಪ್ಪ ಎಂಬಾತನಿಗೆ ಕೊಲೆ ಮಾಡಿದ ಪ್ರಕರಣದಲ್ಲಿ ಜೈಲು ಸೇರಿದ್ದ. ತನ್ನ ತಾಯಿಗೆ ಹುಷಾರಿಲ್ಲದ ಕಾರಣ ನೀಡಿ, ಜಾಮೀನಿನ ಮೇಲೆ ಎರಡ್ಮೂರು ತಿಂಗಳು ಹೊರಗೆ ಬಂದಿದ್ದ. ಅಷ್ಟೇ ಅಲ್ಲದೇ ಅವರ ಕುಟುಂಬದ ಯುವತಿಗೆ ದೇವಿಂದ್ರನು ಪ್ರೀತಿ ಮಾಡಲು ಆರಂಭಿಸಿದ ಎನ್ನಲಾಗಿದೆ. ಇದರಿಂದಾಗಿ ಹಲ್ಲೆಗೈದ ಆರೋಪಿಗಳು ಆತನ ಮೇಲೆ ಹಲ್ಲೆ ಮಾಡಿ ಆಟೋದಲ್ಲಿ ಅಪಹರಿಸಲು ಯತ್ನಿಸಿದ್ದು ಪ್ರತಿರೋಧ ನಡುವೆ ಮಾರಣಾಂತಿಕ ಹಲ್ಲೆ ನಡೆದಿದೆ ಎನ್ನಲಾಗಿದೆ.
ಗಾಯಾಳುವನ್ನು ಕಲಬುರಗಿ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಸದ್ಯ ಹಲ್ಲೆ ಮಾಡಿರುವ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.