ನ್ಯಾಯ ನ್ಯಾಯವೆ, ಭರವಸೆ ಇರಲಿ ಭಯ ಬೇಡ
ತಾಯಿ ಹಿರಿಯ ಮಗನನ್ನು ಕಳೆದುಕೊಂಡ ದುಃಖದಲ್ಲಿ ಇದ್ದಳು. ಮನೆಯ ಸಂಪ್ರದಾಯದಂತೆ ಕ್ರಿಯಾ ಕರ್ಮಗಳು ಆಗಬೇಕಿತ್ತು. ಇದ್ದಕ್ಕಿದ್ದಂತೆ ಸೊಸೆ ತನ್ನ ಮಗುವನ್ನು ಕರೆದುಕೊಂಡು, ತವರುಮನೆಗೆ ಹೋಗಲು ಸಿದ್ಧಳಾದಳು. ಮಗನು ಜೀವಂತ ಇರುವಾಗ ಎಲ್ಲವೂ ಸೌಖ್ಯವಾಗಿತ್ತು. ಈಗ ಇವಳು ಹೀಗೇಕೆ ಮಾಡುತ್ತಿದ್ದಾಳೆ ಎಂದು ಮನೆಯವರು ದಿಗಿಲುಗೊಂಡರು. ಎಂದೂ ಸೊಸೆ ಎದುರು ನಿಂತು ಮಾತನಾಡಿದವಳಲ್ಲ. ಹಿರಿಯರನ್ನು ಕೂಡಿಸಿ ಸೊಸೆಗೆ ತಿಳಿಸಿ ಹೇಳಿದರು. ಎಲ್ಲ ಕಾರ್ಯಕ್ರಮಗಳು ಮುಗಿದ ನಂತರ ತವರುಮನೆಗೆ ಬಿಟ್ಟು ಬರುವ ಭರವಸೆ ನೀಡಿದರು. ನಂತರ ಮತ್ತೆ ಮಗುವನ್ನು ಕರೆದುಕೊಂಡು ಹೊರಟು ನಿಂತಳು. ಗಂಡ ಸತ್ತರೆ ಏನಾಯಿತು? ಒಳ್ಳೆಯ ಅತ್ತೆ, ಮೈದುನ ಮನೆ ತುಂಬ ಮನೆ ಜನರು ಇದ್ದಾರೆ. ನಮ್ಮ ಜೊತೆ ಇದ್ದುಬಿಡು. ಎಲ್ಲರೂ ಇಲ್ಲಿಯೇ ಬದುಕಿ ಬಾಳೋಣ ಎಂದು ಎಷ್ಟೊಂದು ಒತ್ತಾಯಿಸಿದರೂ ಬುದ್ಧಿವಾದ ಕೇಳಲಿಲ್ಲ. ತವರು ಮನೆಗೆ ಹೋಗಿಬಿಟ್ಟಳು.
ಮನೆತನದ ಮೂಲಪುರುಷ ಸೋಮಶೇಖರ, ಸುಮಾರು ಹತ್ತು ವರ್ಷಗಳ ಹಿಂದೆ ತನ್ನ ಹೆಂಡತಿ ಇಬ್ಬರೂ ಗಂಡು ಮಕ್ಕಳು ಒಬ್ಬಳು ಹೆಣ್ಣು ಮಗಳನ್ನು ಬಿಟ್ಟು ಮೃತನಾದನು. ಸೋಮಶೇಖರ ಕಡುಬಡತನದಲ್ಲಿ ಬೆಳೆದು, ಸಿವಿಲ್ ಕಂಟ್ರಾಕ್ಟರ್ ಕೆಲಸ ವೃತ್ತಿಯಿಂದ ಸಾಕಷ್ಟು ಆಸ್ತಿಗಳನ್ನು ಗಳಿಸಿದನು. ವಿದ್ಯೆ ಕಡಿಮೆಯಿದ್ದರೂ ಬುದ್ಧಿ ಆಕಾಶದಷ್ಟು ಇತ್ತು. ಸಮಾಜದಲ್ಲಿ ಒಳ್ಳೆಯ ಹೆಸರಿತ್ತು. ಅದೊಂದು ಸುಖಿ ಸಂಸಾರ. ವೃತ್ತಿ ಒತ್ತಡ ಆಸ್ತಿ ಗಳಿಸುವ ಭರದಲ್ಲಿ ಬೇರೆಯವರಿಗೆ ಮನೆ ಕಟ್ಟಿಸಿ ನೆರಳು ಮಾಡಿಕೊಟ್ಟು, ತನಗೆ ಮನೆ ಕಟ್ಟಿಕೊಂಡಿರಲಿಲ್ಲ. ಹಳೆಯ ಮನೆ ಬಾಡಿಗೆ ಪಡೆದುಕೊಂಡು ವಾಸಿಸುತ್ತಿದ್ದ. ಹಿರಿಯ ಮಗನ ಲಗ್ನ ಮಾಡಿದ. ಅವನನ್ನು ಕೂಡ ಕಂಟ್ರಾಕ್ಟರ್ ವಹಿವಾಟುಗಳಲ್ಲಿ ತೊಡಗಿಸಿದ. ಇನ್ನೊಬ್ಬ ಮಗನು ಎಂಬಿಎ ಓದುತ್ತಿದ್ದ. ಮಗಳನ್ನು ಸುಶಿಕ್ಷಿತ ವಿದ್ಯಾವಂತ ಮನೆತನಕ್ಕೆ ಕೊಟ್ಟು ಮದುವೆ ಮಾಡಿಕೊಟ್ಟಿದ್ದ. ಒಂದು ಸುಸಜ್ಜಿತವಾದ ಮನೆಯನ್ನು ಕಟ್ಟಿಸಿಕೊಳ್ಳಲು, ತಾನು ಸ್ವಯಾರ್ಜಿತವಾಗಿ ಗಳಿಸಿದ ಹತ್ತು ಎಕರೆ ಜಮೀನಿನ ಪೈಕಿ ೫ ಎಕರೆ ಫಲವತ್ತಾದ ಜಮೀನನ್ನು ಮಾರಾಟ ಮಾಡಿದನು. ಮಾರಾಟದಿಂದ ಬಂದ ಹಣದಲ್ಲಿ, ಪ್ರತಿಷ್ಠಿತ ಕಾಲೋನಿಯಲ್ಲಿ ಅಕ್ಕಪಕ್ಕದಲ್ಲಿ ಎರಡು ದೊಡ್ಡ ನಿವೇಶನಗಳನ್ನು ಒಂದು ತನ್ನ ಹೆಸರಿಗೆ ಮತ್ತೊಂದನ್ನು ಹಿರಿಯ ಮಗನ ಹೆಸರಿಗೆ ಕ್ರಯಪತ್ರ ಮಾಡಿಕೊಂಡನು. ಮಗನ ಹೆಸರಿನಲ್ಲಿರುವ ನಿವೇಶನದಲ್ಲಿ ಸುಮಾರು ಒಂದು ಕೋಟಿಯಷ್ಟು ಹಣ ಖರ್ಚು ಮಾಡಿ ಸುಸಜ್ಜಿತ ಆಧುನಿಕ ಶೈಲಿಯ ಕನಸಿನ ಮನೆ ಕಟ್ಟಿಸಿಕೊಂಡನು. ತನ್ನ ಹೆಸರಿನಲ್ಲಿಯ ನಿವೇಶನದಲ್ಲಿ ಒಂದು ಸುಂದರವಾದ ಸ್ವಂತ ಉದ್ಯಾನವನವನ್ನು ನಿರ್ಮಿಸಿದನು. ಸೋಮಶೇಖರ ತನ್ನ ಜೀವಿತಾವಧಿಯ ಸುಂದರ ಕ್ಷಣಗಳನ್ನು, ತನ್ನ ಆಸೆ-ಆಕಾಂಕ್ಷೆಗೆ ತಕ್ಕಂತೆ ಮನೆ, ಸಾಕಷ್ಟು ಆಸ್ತಿ, ಹಣ ಮಾಡಿಕೊಂಡು ಸಂಸಾರ ನಡೆಸಿದ್ದನು. ಇದ್ದದ್ದು ಇನ್ನಷ್ಟು ದಿನ ಹೇಗೆ ನಡೆದಿತ್ತು. ಎಲ್ಲವೂ ಸರಿ ಇದೆ ಅನ್ನುವ ವೇಳೆಯಲ್ಲಿ ಹೃದಯಾಘಾತದಿಂದ ಮೃತನಾದನು. ಸಂಸಾರದ ಸಾರಥಿಯಾಗಿ ಸೋಮಶೇಖರ ಎಲ್ಲವನ್ನು ನಿರ್ವಹಿಸುತ್ತಿದ್ದ. ಹೆಂಡತಿ ಮಕ್ಕಳು ವಿಚಲಿತರಾದರು. ಹಿರಿಯ ಮಗ ಸಂಸಾರದ ಸಾರಥ್ಯವನ್ನು ವಹಿಸಿಕೊಂಡನು. ಸತ್ತವರು ಸತ್ತು ಹೋಗುತ್ತಾರೆ ಯಾವುದೂ ನಿಲ್ಲುವುದಿಲ್ಲ. ಮನೆಯ ಯಜಮಾನ ಇಲ್ಲದಿದ್ದರೆ ಏನೂ ನಡೆಯುವುದಿಲ್ಲ ಎಂದು ರೋದಿಸಿ ಎಲ್ಲವನ್ನೂ ಮರೆತುಬಿಡುತ್ತಾರೆ. ಯಜಮಾನನ ಪಟ್ಟಕ್ಕೆ ಇನ್ನೊಬ್ಬ ಯಜಮಾನ ಬಂದು ಕುಳಿತ.
ತಂದೆ ಮೃತನಾದ ಒಂದು ವರ್ಷದೊಳಗೆ ಸಂಸಾರದ ಸಾರಥ್ಯ ವಹಿಸಿದ ಮಗ ಅಕಾಲಿಕವಾಗಿ ಮರಣ ಹೊಂದಿದ. ಮನೆತನಕ್ಕೆ ಮತ್ತೊಂದು ಆಘಾತ. ಇನ್ನೂ ಸುಖ ಸಂತೋಷಪಡಬೇಕಾಗಿದ್ದ ಚಿಕ್ಕ ವಯಸ್ಸಿನ ಹೆಂಡತಿ, ಪುಟ್ಟ ಮಗು ಬಿಟ್ಟುಹೋಗಿದ್ದ. ಸೊಸೆ ಪುಟ್ಟ ಮಗುವನ್ನು ಎತ್ತಿಕೊಂಡು ತವರುಮನೆ ಸೇರಿದಳು. ಕೊನೆಯ ಮಗನ ವಿದ್ಯಾಭ್ಯಾಸ ಇರುವುದರಿಂದ ಬೇರೆ ನಗರದಲ್ಲಿದ್ದನು. ಮಗಳು ಗಂಡನ ಮನೆಯಲ್ಲಿ ಮನೆ ತುಂಬ ಪುಟ್ಟ ಪುಟ್ಟ ಹೆಜ್ಜೆ ಇಡುತ್ತ ತೊದಲು ನುಡಿ ಹೇಳುತ್ತಾ ಓಡಾಡುವ ಮೊಮ್ಮಗನಿಲ್ಲದ ಮನೆ ಸ್ತಬ್ಧವಾಯಿತು. ಯಜಮಾನಿ ಅಕ್ಷರಶಃ ಅನಾಥಳಾದಳು. ಹೀಗೆ ದಿನಗಳು ಉರುಳುತ್ತಿದ್ದವು.
ಹೀಗೊಂದು ದಿನ, ಸೊಸೆ ತನ್ನ ತಂದೆ, ತಾಯಿ, ಸಹೋದರರನ್ನು ಕರೆದುಕೊಂಡು ಮನೆಗೆ ಬಂದಳು. ಸೊಸೆ, ಮೊಮ್ಮಗ ಮತ್ತೆ ಮನೆಗೆ ಬಂದರು ಎಂದು ಯಜಮಾನಿಗೆ ಹರುಷವಾಯಿತು. ಸೊಸೆ ನೇರವಾಗಿ ವಿಚಾರಕ್ಕೆ ಬಂದಳು. ಇದು ನನ್ನ ಮನೆ. ಇದರ ಯಜಮಾನತಿ ನಾನೆ. ಮನೆಯಿಂದ ಹೊರಗೆ ನಡೆಯಿರಿ. ಇನ್ನು ಮೇಲೆ ನಾನು ಇಲ್ಲೇ ಇರುತ್ತೇನೆ. ಯಜಮಾನಿ ಕುಸಿದುಹೋದಳು. ಇದೂ ನನ್ನ ಗಂಡನ ಮನೆ, ನಾನು ಸಾಯುವವರೆಗೂ ಇಲ್ಲೇ ಇರುತ್ತೇನೆ. ಹೀಗೆ ಹೇಳಲು ನೀನಾರು ಎಂದು ಚೀರಾಡಿದಳು, ಅತ್ತು ಕರೆದಳು. ಮನೆಯ ಸರ್ಕಾರಿ ದಾಖಲೆ ತನ್ನ ಹೆಸರಿನಲ್ಲಿ ಇರುವುದೆಂದು ಎದುರಿಗೆ ಹಿಡಿದಳು. ಯಜಮಾನಿಗೆ ನಿಂತ ನೆಲ ಕುಸಿದ ಹಾಗಾಯಿತು. ಎಂಥ ಮೋಸವಾಯಿತು ಎಂದು ಹಲುಬಿದಳು. ಇದು ನನ್ನ ಗಂಡ ಕಟ್ಟಿಸಿದ ಮನೆ, ನಾನು ಬಿಡುವುದಿಲ್ಲ, ಹೊರಗೆ ಹೋಗುವುದಾದರೆ ಕೇವಲ ನನ್ನ ಹೆಣ ಮಾತ್ರ ಎಂದು ಗಟ್ಟಿ ನಿರ್ಧಾರವನ್ನು ತಿಳಿಸಿದಳು. ಮಗನನ್ನು, ಮಗಳನ್ನು ಕರೆಸಿ ವಿಚಾರವನ್ನು ತಿಳಿಸಿದಳು.
ಯಜಮಾನಿಯ ಸಹೋದರ ನನ್ನ ಪರಿಚಯದವರು. ಅಂದು ನಾನು ಮಧ್ಯಾಹ್ನದ ಕೋರ್ಟ್ ಕಲಾಪದಲ್ಲಿ ಭಾಗಿಯಾಗಿದ್ದೆನು. ಎದುರಿಗೆ ಕುಳಿತ ಸಹೋದರ ನ್ಯಾಯವಾದಿಯೊಬ್ಬರು ಯಾರೋ ನಿಮ್ಮನ್ನು ನಿರೀಕ್ಷಿಸುತ್ತಿದ್ದಾರೆ ಎಂದು ಸಂಜ್ಞೆ ಮೂಲಕ ತಿಳಿಸಿದರು. ಹೊರಗೆ ಹೋಗಿ ಅವರಿಗೆ ಕಾಯುವಂತೆ ತಿಳಿಸಿ, ಕಲಾಪ ಮುಗಿದ ನಂತರ ಭೇಟಿಯಾದೆನು.
ನ್ಯಾಯಾಲಯದ ಪ್ರಶಸ್ತ ಸ್ಥಳದಲ್ಲಿ ಕೂಡಿಸಿಕೊಂಡು ಅವರು ತಂದ ಕಾಗದ ಪತ್ರಗಳನ್ನು ಸಮಗ್ರವಾಗಿ ಪರಿಶೀಲಿಸಿದೆ. ಯಜಮಾನಿ ಅವಳ ಮಕ್ಕಳು ಮನೆತನದ ಎಲ್ಲ ವಿಷಯವನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ಮೃತ ಸೋಮಶೇಖರ ತನ್ನ ಹೆಸರಿನಲ್ಲಿದ್ದ ಜಮೀನನ್ನು ಮಾರಾಟ ಮಾಡಿ ತನ್ನ ಹೆಸರಿಗೊಂದು, ಹಿರಿಯ ಮಗನ ಹೆಸರಿನಲ್ಲೊಂದು ನಿವೇಶನ ಖರೀದಿಸಿ, ಮಗನ ಹೆಸರಿನಲ್ಲಿರುವ ನಿವೇಶನದಲ್ಲಿ ಭವ್ಯ ಬಂಗಲೆ ಕಟ್ಟಿಸಿದ್ದನು. ಇತ್ತೀಚೆಗೆ ದೊಡ್ಡ ಮಗ ಮೃತನಾದನು. ಕೆಲವೇ ತಿಂಗಳಲ್ಲಿ ಇಲ್ಲದ ನೆಪ ಮಾಡಿಕೊಂಡು ಸೊಸೆ ಪುಟ್ಟ ಮಗುವಿನ ಜೊತೆ ಮನೆ ಬಿಟ್ಟು ತವರುಮನೆ ಸೇರಿದಳು. ಮಗನು ತಂದೆ ತನ್ನ ಹೆಸರಿಗೆ ಖರೀದಿಸಿ, ಭವ್ಯ ಬಂಗಲೆಯನ್ನು ಕಟ್ಟಿಸಿದ ಆಸ್ತಿಯನ್ನು ತನ್ನ ಹೆಂಡತಿಗೆ ಬಿಟ್ಟುಕೊಟ್ಟಿರುವದಾಗಿ ಯಾವುದೇ ಕಾನೂನುಬದ್ಧ ದಾಖಲೆ ಇಲ್ಲದೆ, ಹೆಸರು ನಗರಸಭೆ ದಾಖಲೆಯಲ್ಲಿ ಸೇರಿಸಿದ್ದನು.
ಇನ್ನೊಂದು ನಿವೇಶನ ಮತ್ತು ೫ ಎಕರೆ ಜಮೀನು ಮೃತ ಸೋಮಶೇಖರನ ಹೆಸರಿನಲ್ಲಿ ಇದ್ದಿತು. ಸೊಸೆಯ ಮೋಸದಿಂದ ಯಜಮಾನಿ ಜರ್ಜರಿತಳಾಗಿದ್ದಳು. ಗಂಡ ಕಟ್ಟಿಸಿದ ಮನೆ ಕೈಜಾರುತ್ತದೆ ಎನ್ನುವ ಭಯ ಯಜಮಾನಿಗೆ ಕಾಡುತ್ತಿತ್ತು. ನ್ಯಾಯ ನಿಮ್ಮ ಪರವೆಂದು ಭರವಸೆ ನೀಡಿದೆ.
ಸೊಸೆ, ಅಜ್ಞಾನಿ ಮೊಮ್ಮಗನ ಮೇಲೆ ಪಾಲು ಮತ್ತು ಪ್ರತ್ಯೇಕ ಸ್ವಾಧೀನ ಕೇಳಿ, ಯಜಮಾನಿ, ಮಗ, ಮಗಳಿಂದ ದಾವೆ ನ್ಯಾಯಾಲಯದಲ್ಲಿ ದಾಖಲಿಸಿದೆ. ಸೊಸೆ ವಕೀಲರ ಮೂಲಕ ಹಾಜರಾಗಿ, ಬಂಗಲೆ ಇರುವ ಆಸ್ತಿ ತನ್ನ ಗಂಡನ ಸ್ವಯಾರ್ಜಿತ ಆಸ್ತಿಯೆಂದು ಅದರಲ್ಲಿ ವಾದಿಯರಿಗೆ ಪಾಲು ಇಲ್ಲವೆಂದು ವಾದಿಸಿದಳು. ವಾದಿ ಪ್ರತಿವಾದಿಗಳ ಮೌಖಿಕ ಲಿಖಿತ ಸಾಕ್ಷಿಗಳು ದಾಖಲಾಗಿ, ಉಭಯ ಕಕ್ಷಿದಾರ ಪರ ವಕೀಲರು ವಾದ ಮಂಡಿಸಿದರು.
ನ್ಯಾಯಾಲಯವು ಅಂತಿಮವಾಗಿ ವಾದಿಯರಿಗೆ ಮನೆತನದ ಎಲ್ಲ ಆಸ್ತಿಗಳಲ್ಲಿ ಸಮನಾಗಿ ಹಿಸ್ಸೆ ಆದೇಶಿಸಿ ತೀರ್ಪು ನೀಡಿತು. ಮೃತ ಮಗನಿಗೆ ಯಾವುದೇ ಸ್ವಂತ ಉತ್ಪನ್ನ ಇರಲಿಲ್ಲ, ತಂದೆ ೫ ಎಕರೆ ಜಮೀನು ಮಾರಾಟ ಮಾಡಿ ಬಂದ ಹಣದಿಂದ ಹಿರಿಯ ಮಗನ ಹೆಸರಿಗೆ ನಿವೇಶನ ಖರೀದಿಸಿ ಕಟ್ಟಿಸಿದ. ಮನೆಯನ್ನು ಕಾನೂನುಬಾಹಿರವಾಗಿ ಹೆಂಡತಿ ಹೆಸರಿಗೆ ಹಸ್ತಾಂತರ ಮಾಡಿದ್ದು ಅಕ್ಷಮ್ಯ ಎಂದು ಪರಿಗಣಿಸಿ ಅಭಿಪ್ರಾಯಪಟ್ಟಿತು.
ಯಜಮಾನಿ ಅವಳ ಮಕ್ಕಳು ಸಂತೃಪ್ತಿ ನಗೆಯಿಂದ, ಭರವಸೆ ಹೆಜ್ಜೆ ಇಡುತ್ತ, ನ್ಯಾಯಾಲಯದಿಂದ ತೆರಳುತ್ತಿದ್ದ ದೃಶ್ಯ ಇನ್ನೂ ಕಣ್ಣಿಗೆ ಕಟ್ಟಿದೆ.