ನ.10 ಕ್ಕೆ ಮೀಸಲಾತಿಗೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ
ದಾವಣಗೆರೆ :ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2 ಎ ಹಾಗೂ ಲಿಂಗಾಯತ ಉಪ ಜಾತಿಗಳನ್ನು ಕೇಂದ್ರದ ಓಬಿಸಿ ಮೀಸಲಾತಿಗೆ ಶಿಫಾರಸ್ಸು ಮಾಡುವಂತೆ ಹಕ್ಕೊತ್ತಾಯಿಸಿ ನ.10ರಂದು ಇಲ್ಲಿನ ರಾಷ್ಟ್ರೀಯ ಹೆದ್ದಾರಿ ತಡೆ ಮಾಡಿ, ಅಲ್ಲಿಯೇ ಇಷ್ಟಲಿಂಗ ಪೂಜೆ ಮಾಡುವ ಮೂಲಕ ಪ್ರತಿಭಟಿಸುವುದಾಗಿ ಕೂಡಲ ಸಂಗಮದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿಗೆ 2 ಎ ಹಾಗೂ ಲಿಂಗಾಯತ ಇತರೆ ಒಳ ಪಂಗಡಗಳನ್ನು ಕೇಂದ್ರದ ಓಬಿಸಿ ಮೀಸಲಾತಿ ಕಲ್ಪಿಸಲು ಶಿಫಾರಸ್ಸು ಮಾಡುವಂತೆ ದಾವಣಗೆರೆಯಲ್ಲಿ ಹೋರಾಟ ನಡೆಸಲಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಪ್ರವಾಸ ಮಾಡುವ ಮೂಲಕ ಸಮಾಜ ಬಾಂಧವರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಿದ್ದೇವೆ ಎಂದರು.
ಬಿಜೆಪಿ ಸರ್ಕಾರವು ಮೀಸಲಾತಿ ಘೋಷಣೆ ಮಾಡಿದ್ದರೂ, ಚುನಾವಣಾ ನೀತಿ ಸಂಹಿತೆಯಿಂದಾಗಿ 2 ಡಿ ಮೀಸಲಾತಿ ಅನುಷ್ಟಾನಕ್ಕೆ ಬರಲಿಲ್ಲ. ಈಗಿನ ಕಾಂಗ್ರೆಸ್ ಸರ್ಕಾರದ ಮೇಲೆ ಪಂಚಮಸಾಲಿ ಸಮಾಜದ ಋಣ ಇದೆ. ಸರ್ಕಾರದ ಮನೆ ಬಾಗಿಲಿಗೆ ಹೋಗಿ ಕೇಳುವುದಕ್ಕಿಂತ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋರಾಟ ಮಾಡಿ, ಇಷ್ಟಲಿಂಗ ಪೂಜೆ ಮೂಲಕ ಪ್ರತಿಭಟಿಸುವುದು ಲೇಸು ಅಂದುಕೊಂಡಿದ್ದೇವೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದು, ಕೆಲವೇ ತಿಂಗಳಾಗಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕೂತು ಹೋರಾಟದ ಜೊತೆಗೆ ಇಷ್ಟಲಿಂಗ ಪೂಜೆ ಮೂಲಕ ಹೋರಾಟವನ್ನು ಮತ್ತೆ ಶುರು ಮಾಡಲಿದ್ದೇವೆ. ಸರ್ಕಾರವು ಗ್ಯಾರಂಟಿ ಯೋಜನೆಗಳ ಬಗ್ಗೆಯೇ ಯೋಚಿಸದೇ, ನಮ್ಮ ಸಮಾಜದ ಬೇಡಿಕೆಗಳಿಗೂ ಪ್ರಥಮಾದ್ಯತೆ ಮೇಲೆ ಸ್ಪಂದಿಸಬೇಕು ಎಂದು ಅವರು ಆಗ್ರಹಿಸಿದರು.
ಕುರುಬ ಸಮಾಜವೂ ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಒತ್ತಾಯಿಸುತ್ತಿದೆ. ನಮ್ಮ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ, ಲಿಂಗಾಯತ ಸಮಾಜದ ಒಳ ಪಂಗಡಗಳನ್ನು ಕೇಂದ್ರದ ಓಬಿಸಿ ಮೀಸಲಾತಿಗೆ ತರುವಂತೆ ಶಿಫಾರಸ್ಸು ಮಾಡಬೇಕೆಂಬುದು ನಮ್ಮ ಬೇಡಿಕೆಯಾಗಿದೆ. ಇನ್ನು ಕೆಲವೇ ದಿನಗಳಿಗೆ ಲೋಕಸಭೆ ಚುನಾವಣೆ ಬರಲಿದೆ. ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ, ಚುನಾವಣಾ ಫಲಿತಾಂಶದ ಮೇಲೂ ಹೊಡೆತ ಬೀಳಲಿದೆ ಎಂದು ಅವರು ಸೂಚ್ಯವಾಗಿ ಎಚ್ಚರಿಸಿದರು.
ಸರ್ಕಾರವು ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡಲು ಯಾವುದೇ ವಿರೋಧವೂ ಇಲ್ಲ. ಲಿಂಗಾಯತ, ಒಕ್ಕಲಿಗ ಸಮಾಜದ ಮುಖಂಡರು ಸ್ವಾಮೀಜಿಗಳನ್ನು ಸೇರಿಸಿ, ಸರ್ಕಾರ ಸೂಕ್ತ ತೀರ್ಮಾನವನ್ನು ಕೈಗೊಳ್ಳಲಿ. ಸರ್ಕಾರ ಉಭಯ ಸಮಾಜದ ಶಾಸಕರನ್ನು ಸೇರಿಸಿ, ಸಭೆ ಮಾಡಿ, ಮನವರಿಕೆ ಮಾಡಿಕೊಳ್ಳಲಿ. ಲಿಂಗಾಯತ ಒಳ ಪಂಗಡವರು ಸರ್ಕಾರದ ಸೌಲಭ್ಯಗಳು ಎಲ್ಲಿ ತಪ್ಪುತ್ತವೋ ಎಂಬ ಕಾರಣಕ್ಕೆ ಲಿಂಗಾಯತವೆಂದು ಬರೆಸಿಲ್ಲ. ಇದರಿಂದ ಲಿಂಗಾಯತ ಸಮುದಾಯದ ಸಂಖ್ಯೆ ಕಡಿಮೆಯಾಗಿದೆಯೆಂಬುದು ನಮ್ಮ ಆತಂಕವಾಗಿದೆ ಎಂದು ಅವರು ತಿಳಿಸಿದರು.
ಜಾತಿ ಗಣತಿ ಪ್ರಾಮಾಣಿಕವಾಗಿರಲಿ. ಎಲ್ಲಾ ಸಮುದಾಯಕ್ಕೂ ನ್ಯಾಯ ಸಿಗಬೇಕು.2 ಎ ಮೀಸಲಾತಿ ವಿಚಾರದಲ್ಲಿ ಜಯಪ್ರಕಾಶ ಹೆಗಡೆ ಮಧ್ಯಂತರ ವರದಿ ನಮ್ಮ ಪರವಾಗಿ ಬಂದಿದೆ. ಆದರೆ, ವರದಿಯನ್ನು ಕೊಡಬೇಕಿತ್ತು. ವರದಿ ಸರ್ಕಾರಕ್ಕೆ ನೀಡದಿದ್ದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. 2 ಎ ಮೀಸಲಾತಿಯಿಂದ ಅದರಲ್ಲಿರುವ ಜಾತಿಗಳಿಗೆ ಅನ್ಯಾಯವಾಗುತ್ತದೆಂಬ ತಪ್ಪು ಗ್ರಹಿಕೆ ಇದೆ. ಆದರೆ, ಯಾರಿಗೂ ಅನ್ಯಾಯವಾಗದಂತೆ ಮೀಸಲಾತಿ ನೀಡಬೇಕು ಎಂದು ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದರು.