For the best experience, open
https://m.samyuktakarnataka.in
on your mobile browser.

ಪಂಚಮಸಾಲಿ ಸಂಘರ್ಷ ಮಾತುಕತೆಯೇ ಪರಿಹಾರ

02:30 AM Dec 12, 2024 IST | Samyukta Karnataka
ಪಂಚಮಸಾಲಿ ಸಂಘರ್ಷ ಮಾತುಕತೆಯೇ ಪರಿಹಾರ

ಬೆಳಗಾವಿ ಸುವರ್ಣಸೌಧದ ಮುಂಭಾಗ ಪಂಚಮಸಾಲಿ ಮೀಸಲಾತಿ ಹೋರಾಟ ಸಂಘರ್ಷಕ್ಕೆ ತಿರುಗಿದ್ದು ನಿಜಕ್ಕೂ ದುರ್ದೈವ. ಪಂಚಮಸಾಲಿ ಮೀಸಲಾತಿಗೆ ಕೆಲವು ಸಮಸ್ಯೆಗಳಿವೆ. ಹೋರಾಟ ನಡೆಸುವ ಮಠಾಧೀಶರು ಮತ್ತು ಸಮಾಜದ ಪ್ರಮುಖರಲ್ಲಿ ಸ್ಪಷ್ಟತೆ ಕಂಡು ಬರುತ್ತಿಲ್ಲ. ಸರ್ಕಾರ ಬದಲಾದಂತೆ ಹೋರಾಟದ ಮುಂಚೂಣಿಯಲ್ಲಿರುವ ಸಮಾಜದ ನಾಯಕರು ಬದಲಾಗಿ ಬಿಡುತ್ತಾರೆ. ಅದೇರೀತಿ ಸರ್ಕಾರ ಬದಲಾದಂತೆ ನಿಲುವು ಬದಲಾಗುತ್ತವೆ. ಇದೇ ರೀತಿ ಪಕ್ಕದ ಮಹಾರಾಷ್ಟ್ರದಲ್ಲೂ ಮರಾಠ ಮೀಸಲಾತಿ ಸಮಸ್ಯೆ ಹಾಗೇ ಉಳಿದಿದೆ. ಈಗ ಮೀಸಲಾತಿ ಸಮಸ್ಯೆಗೆ ಪರಿಹಾರ ಹುಡುಕಬೇಕು ಎಂದರೆ ಹೋರಾಟಗಾರರು ಮತ್ತು ಸರ್ಕಾರದಲ್ಲಿರುವವರು ಮುಕ್ತ ಮನಸ್ಸಿನಿಂದ ಚರ್ಚಿಸಬೇಕು. ಇದು ರಾಜಕೀಯ ರಹಿತವಾಗಿ ನಡೆಯಬೇಕು. ಪಕ್ಷ ರಾಜಕಾರಣ ಬಂದಲ್ಲಿ ಪರಿಹಾರ ಸಿಗುವುದಿಲ್ಲ. ಹಿಂದೆ ಬಸವರಾಜ ಬೊಮ್ಮಾಯಿ ಸರ್ಕಾರ ಅಲ್ಪಸಂಖ್ಯಾತರ ಕೋಟಾ ಕಡಿಮೆ ಮಾಡಿ ಪಂಚಮಸಾಲಿಯವರಿಗೆ ನೀಡಲು ಯೋಜಿಸಿತು. ಇದನ್ನು ಸುಪ್ರೀಂ ಕೋರ್ಟ್ ಒಪ್ಪಲಿಲ್ಲ. ಈಗಲೂ ಅದೇ ಪರಿಸ್ಥಿತಿ ಮುಂದುವರಿದಿದೆ. ಇಂಥ ಪರಿಸ್ಥಿತಿಯಲ್ಲಿ ಸಂಘರ್ಷ ಫಲಕಾರಿಯಾಗದು. ಉತ್ತರ ಕರ್ನಾಟಕದ ಜನ ಶಾಂತಿಪ್ರಿಯರು. ಅಷ್ಟೇ ಮುಗ್ಧರು. ಸರ್ಕಾರದ ನಿಯಮಗಳನ್ನು ಎಂದೂ ಮೀರಿದವರಲ್ಲ. ಅಲ್ಲದೆ ಹಿಂಸಾಕೃತ್ಯಕ್ಕೆ ಎಂದೂ ಬೆಂಬಲ ನೀಡಿದವರಲ್ಲ. ಸರ್ಕಾರ ಅವರ ಬೇಡಿಕೆಗಳಿಗೆ ಸಹಾನುಭೂತಿಯಿಂದ ಸ್ಪಂದಿಸಬೇಕು. ಮೀಸಲಾತಿ ಅತ್ಯಂತ ಜಟಿಲ ಎಂಬುದು ಎಲ್ಲರಿಗೂ ಗೊತ್ತಿದೆ. ಸುಪ್ರೀಂ ಕೋರ್ಟ್ಗೆ ಸರಳ ಸೂತ್ರ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಎಲ್ಲ ರೀತಿಯ ಮೀಸಲಾತಿಗೂ ಒಂದೇ ನಿಯಮ ಅನ್ವಯಯಿಸುವುದಕ್ಕೆ ಬರುವುದಿಲ್ಲ. ಪಂಚಮಸಾಲಿ ಸಮಾಜದ ಬೇಡಿಕೆ ಹಲವು ವರ್ಷಗಳಿಂದ ಮುಂದುವರಿಯುತ್ತ ಬಂದಿದೆ. ಸರ್ಕಾರಗಳು ಬದಲಾದರೂ ಸಮಸ್ಯೆ ಮಾತ್ರ ಹಾಗೆ ಉಳಿದುಕೊಂಡು ಬಂದಿದೆ.
ಇದಕ್ಕೆ ಸಮಾನಮನಸ್ಕರು ಒಟ್ಟಿಗೆ ಕುಳಿತು ಮುಕ್ತ ಮನಸ್ಸಿನಿಂದ ಚರ್ಚಿಸಿ ಪರಿಹಾರ ಕಂಡು ಹಿಡಿಯಬೇಕು. ಮೀಸಲಾತಿ ಎಂದರೆ ಒಬ್ಬರಿಗೆ ನೀಡಿದ್ದ ಸವಲತ್ತನ್ನು ಕಡಿಮೆ ಮಾಡಿ ಬೇರೆಯರಿಗೆ ಕೊಡುವುದು ಎಂದಾಗಬಾರದು. ಒಟ್ಟು ಮೀಸಲಾತಿಗೆ ಸುಪ್ರೀಂ ಕೋರ್ಟ್ ಹಾಕಿರುವ ಲಕ್ಷ್ಮಣರೇಖೆಯನ್ನು ಮೀರಲು ಬರುವುದಿಲ್ಲ. ಸೀಮಿತ ಚೌಕಟ್ಟಿನಲ್ಲಿ ಪರಿಹಾರ ಕಂಡುಕೊಳ್ಳುವುದು ಅನಿವಾರ್ಯ. ಸರ್ಕಾರ ರಾಜಕೀಯ ಬದಿಗೊತ್ತಿ ನೊಂದ ಸಮಾಜಗಳೊಂದಿಗೆ ಮಾತುಕತೆ ನಡೆಸಲು ಮುಂದಾಗಬೇಕು. ಅದೇರೀತಿ ಸಮುದಾಯದ ನಾಯಕರು ಸ್ವಪ್ರತಿಷ್ಠೆಯನ್ನು ಬದಿಗಿಟ್ಟು ಸರ್ಕಾರದೊಂದಿಗೆ ಚರ್ಚಿಸಿ ಒಮ್ಮತಕ್ಕೆ ಬರಬೇಕು. ಯಾವುದೇ ತೀರ್ಮಾನ ಕೈಗೊಂಡರೂ ಅದು ಸುಪ್ರೀಂ ಕೋರ್ಟ್ ಹಾಕಿರುವ ಚೌಕಟ್ಟಿನಲ್ಲಿ ಬರುವ ಹಾಗೆ ಇರಬೇಕು.
ಉತ್ತರ ಕರ್ನಾಟಕದಲ್ಲಿ ಪಂಚಮಸಾಲಿ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬಹುತೇಕ ರೈತಾಪಿ ಜನಾಂಗ. ಹಳ್ಳಿಗಳಲ್ಲಿ ವಾಸಿಸುವವರು. ಅವರಿಗೆ ಸರ್ಕಾರದ ನೆರವು ನಿಜವಾಗಲೂ ಬೇಕು. ಆದರೆ ಎಷ್ಟು ಕೊಡಬೇಕು. ಬೇರೆ ಜನಾಂಗಕ್ಕೆ ಅನ್ಯಾಯವಾಗುವಂತೆ ನೋಡಿಕೊಳ್ಳುವುದೂ ಸರ್ಕಾರದ ಕರ್ತವ್ಯ. ಇದಕ್ಕೆ ಶಾಂತಿಯುತ ಮುಕ್ತ ಚರ್ಚೆಯೇ ಮಾರ್ಗ. ಪ್ರಜಾಪ್ರಭುತ್ವದಲ್ಲಿ ಹೋರಾಟ ಎಲ್ಲರ ಹಕ್ಕು. ಆದರೆ ಎಲ್ಲದ್ದಕ್ಕೂ ಸಂಘರ್ಷವೇ ಪರಿಹಾರವಲ್ಲ. ಅದೊಂದು ಅಸ್ತ್ರ ಅಷ್ಟೆ. ಸಮಾಜ ಪರಿಪಕ್ವಗೊಂಡಂತೆ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ತನ್ನದೇ ಆದ ರೀತಿಯಲ್ಲಿ ಪರಿಹಾರ ಕಂಡುಕೊಳ್ಳುತ್ತದೆ. ಉತ್ತರ ಕರ್ನಾಟಕದಲ್ಲಿ ಖಾಸಗಿ ಬಂಡವಾಳ ಹೂಡಿಕೆ ಕಡಿಮೆ. ಸರ್ಕಾರದ ಯೋಜನೆಗಳು ಲಕ್ಷಾಂತರ ಜನರ ಜೀವನಕ್ಕೆ ಆಸರೆ. ಉದ್ಯೋಗ ಮತ್ತು ಶಿಕ್ಷಣದಲ್ಲಿ ಹೆಚ್ಚಿನ ಸವಲತ್ತು ನಮ್ಮ ಮಕ್ಕಳಿಗೆ ಸಿಗಬೇಕೆಂದು ಬಯಸುವುದು ತಪ್ಪೇನಲ್ಲ. ಈಗ ಯುವ ಪೀಳಿಗೆಗೆ ಇಡೀ ವಿಶ್ವವೇ ತೆರೆದ ಬಾಗಿಲು. ಅವರು ಜಾಗತಿಕ ಮಟ್ಟದಲ್ಲಿ ಪೈಪೋಟಿ ಎದುರಿಸಬೇಕು ಎಂದರೆ ಉತ್ತಮ ಶಿಕ್ಷಣ ಲಭಿಸಬೇಕು. ಇದಕ್ಕೆ ಸರ್ಕಾರದ ನೆರವು ಬೇಕೇ ಬೇಕು. ಇದನ್ನು ಪಡೆಯಲು ಅವರು ಮೀಸಲಾತಿ ಬಯಸುತ್ತಿದ್ದಾರೆ ಅಷ್ಟೆ. ಅದಕ್ಕೆ ಪಂಚಮಸಾಲಿ ಎಂಬುದು ಒಂದು ಮಾನದಂಡ ಅಷ್ಟೆ. ಇಂದಿನ ಆಧುನಿಕ ಸಮಾಜದಲ್ಲಿ ಶಿಕ್ಷಣಕ್ಕೆ ಎಷ್ಟು ಬೆಲೆ ಎಷ್ಟಿದೆ ಎಂಬುದು ಪ್ರತಿಯೊಬ್ಬರಿಗೂ ಗೊತ್ತಿದೆ. ಅದಕ್ಕೆ ಅವರು ಸಾಲಸೋಲ ಮಾಡಿ ಹೊಟ್ಟೆಬಟ್ಟೆ ಕಟ್ಟಿ ನಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ಬಯಸುತ್ತಾರೆ. ಇದು ಜನಾಂಗದ ಆಶಯ. ಇದನ್ನು ಈಡೇರಿಸುವುದು ಹೇಗೆ ಎಂಬುದನ್ನು ಸರ್ಕಾರ ಚಿಂತಿಸಬೇಕು. ಇದಕ್ಕೆ ನಿರ್ಮಲ ಮನಸ್ಸಿನಿಂದ ಚಿಂತಿಸುವುದು ಅಗತ್ಯವೇ ಹೊರತು ಬೀದಿ ಹೋರಾಟವಲ್ಲ. ಮುಕ್ತ ವಾತಾವರಣದಲ್ಲಿ ಚರ್ಚೆ ನಡೆಸಲು ಬೇಕಾದ ವೇದಿಕೆ ಸಿದ್ಧಪಡಿಸುವುದು ಜನಪ್ರತಿನಿಧಿಗಳ ಕರ್ತವ್ಯವೂ ಹೌದು. ಬಸವ ಕ್ರಾಂತಿ ಒಂದು ದಿನದಲ್ಲಿ ನಡೆದದ್ದಲ್ಲ. ಅದೇರೀತಿ ಪಂಚಮಸಾಲಿ ಸಮಸ್ಯೆಗೂ ಪರಿಹಾರ ಕಂಡು ಹಿಡಿಯುವುದೂ ಕಷ್ಟದ ಕೆಲಸವೇನಲ್ಲ. ಜನಪರ ಮನಸ್ಸುಗಳು ಒಂದುಗೂಡಿದಲ್ಲಿ ಸಮಸ್ಯೆಗಳು ಮಂಜಿನಂತೆ ಕರಗಿಹೋಗುವುದರಲ್ಲಿ ಸಂದೇಹವಿಲ್ಲ. ಆರ್ಥಿಕ ಪ್ರಗತಿಯತ್ತ ಸಾಗುತ್ತಿರುವ ರಾಜ್ಯಕ್ಕೆ ಮೀಸಲಾತಿ ಅಡ್ಡಿಯಾಗಬಾರದು. ಮುಂದಿನ ಜನಾಂಗ ಇದೆಲ್ಲವನ್ನು ಮೀರಿ ಬೆಳೆಯುವುದರಲ್ಲಿ ಸಂದೇಹವಿಲ್ಲ. ಹೇಗಿದ್ದರೂ ವಿಧಾನಸಭೆ ಮುಂದುವರಿದ ಅಧಿವೇಶನದಲ್ಲಿ ಮುಕ್ತ ಚರ್ಚೆ ನಡೆಸಿ ಸರ್ವ ಸಮ್ಮತ ನಿರ್ಣಯ ಕೈಗೊಳ್ಳುವುದು ಸೂಕ್ತ. ನಮ್ಮ ವಿಧಾನಮಂಡಲ ಅನುಭವ ಮಂಟಪವಾಗಲಿ. ಬಸವಣ್ಣನವರ ಕಾಲದಲ್ಲಿ ತಲೆಎತ್ತಿದ ಜನತಂತ್ರ ವ್ಯವಸ್ಥೆ ಇಂದಿಗೂ ಅರ್ಥಪೂರ್ಣವಾಗಿ ಮುಂದುವರಿದಿದೆ ಎಂಬುದನ್ನು ಬೆಳಗಾವಿ ಅಧಿವೇಶನ ತೋರಿಸಿಕೊಡಲಿ.