For the best experience, open
https://m.samyuktakarnataka.in
on your mobile browser.

ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಿದ ಅಧಿಕಾರಿಗಳನ್ನು ಅಮಾನತು ಮಾಡಿ

03:51 PM Dec 11, 2024 IST | Samyukta Karnataka
ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಿದ ಅಧಿಕಾರಿಗಳನ್ನು ಅಮಾನತು ಮಾಡಿ

ಬೆಂಗಳೂರು: ಮೀಸಲಾತಿ ವಿಚಾರದಲ್ಲಿ ಕಾನೂನು ಬದ್ದವಾಗಿ ನಾವು ಮಾಡಿರುವ ಆದೇಶವನ್ನು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥವಾಗಿ ವಾದ ಮಂಡಿಸಿ ನಾವು ಮಾಡಿರುವ ಹೊಸ ಮೀಸಲಾತಿಯನ್ನು ಸಂಪೂರ್ಣವಾಗಿ ಜಾರಿಗೊಳಿಸಲು ಎಲ್ಲ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಪಂಚಮಸಾಲಿ ಸಮಾಜ ಲಿಂಗಾಯತರಲ್ಲಿಯೇ ಅತ್ಯಂತ ದೊಡ್ಡ ಸಮಾಜ. ರೈತಾಪಿ ಕುಟುಂಬ ಹೊಂದಿರುವ ಸಮಾಜ, ನಾಡಿಗೆ ಅನ್ನಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಸಮಾಜ, ಕಿತ್ತೂರು ಚನ್ನಮ್ಮ, ಬೆಳವಡಿ ಮಲ್ಲಮ್ಮ ಈ ಸಮಾಜಕ್ಕೆ ಸೇರಿದವರಾಗಿದ್ದರು. ಸಂಗೊಳ್ಳಿ ರಾಯಣ್ಣ ಹಾಲು ಮತದ ಸಮಾಜಕ್ಕೆ ಸೇರಿದವರಾಗಿದ್ದರೂ ಕಿತ್ತೂರು ಚನ್ನಮ್ಮಳ ಬಲಗೈ ಬಂಟ ಆಗಿದ್ದನ್ನು ನಾವು ಇಲ್ಲಿ ಸ್ಮರಿಸಬಹುದು. 2011-12 ರಲ್ಲಿ ಪಂಚಮಸಾಲಿ ಸಮಾಜವನ್ನು ಹಿಂದುಳಿದ ವರ್ಗಕ್ಕ ಸೇರಿಸುವ ಕೆಲಸವನ್ನು ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ನಮ್ಮ ಬಿಜೆಪಿ ಸರ್ಕಾರ ಮಾಡಿದ್ದು ಗಮನಾರ್ಹ ಎಂದು ತಿಳಿಸಿದ್ದಾರೆ.
2016ರಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜ ಸಮಿತಿ ಮುಂದೆ ಪಂಚಮಸಾಲಿ ಸಮಾಜವನ್ನು ಪ್ರವರ್ಗ 2ಎ ಗೆ ಸೇರಿಸಬೇಕೆಂಬ ಬೇಡಿಕೆ ಇತ್ತು. ಆಗ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇತ್ತು. ಆಗ ಕಾಂತರಾಜ್ ಸಮಿತಿ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ 2 ಎ ಗೆ ಸೇರಿಸಲು ಸಂಪೂರ್ಣವಾಗಿ ತಿರಸ್ಕಾರ ಮಾಡಿದ್ದು ಪಂಚಮಸಾಲಿ ಸಮುದಾಯದ ವಿರುದ್ದ ಅಂದಿನ ಸರ್ಕಾರಕ್ಕೆ ಇದ್ದ ಮನೋಭಾವ ಸ್ಪಷ್ಟವಾಗುತ್ತದೆ.
ಧರ್ಮದ ಆಧಾರದ ಮೇಲೆ ಮೀಸಲಾತಿ ಇಲ್ಲ ಎನ್ನುವುದು ಸಂವಿಧಾನದಲ್ಲಿ ಸ್ಪಷ್ಟವಾಗಿದೆ. ಅದರ ಅನುಗುಣವಾಗಿ ರಾಜ್ಯದಲ್ಲಿ ಅಲ್ಪ ಸಂಖ್ಯಾತರಿಗೆ ಪ್ರವರ್ಗ 2ಬಿ ಯಲ್ಲಿ ನೀಡಿದ್ದ ಶೇ 4% ರಷ್ಟು ಮೀಸಲಾತಿಯನ್ನು ನಾವು ಸಂವಿಧಾನ ಬದ್ದವಾಗಿ, ಕಾನೂನಾತ್ಮಕವಾಗಿ ಪ್ರವರ್ಗ 3ಸಿ ಮತ್ತು 3ಡಿ ಮಾಡಿ ವೀರಶೈವ ಲಿಂಗಾಯತ ಮತ್ತು ವಕ್ಕಲಿಗ ಸಮುದಾಯಗಳಿಗೆ ಹಂಚಿಕೆ ಮಾಡಿದ್ದೇವೆ. ಆಂಧ್ರದ ವಿಚಾರದಲ್ಲಿ ಧರ್ಮಾಧಾರಿತ ಮೀಸಲಾತಿಗೆ ಅವಕಾಶ ಇಲ್ಲ ಅನ್ನುವುದನ್ನು ಆಂಧ್ರಪ್ರದೇಶ ಹೈಕೋರ್ಟ್ ಕೂಡ ಎತ್ತಿ ಹಿಡಿದಿದೆ. ಈಗ ಪಶ್ಚಿಮ ಬಂಗಾಲ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಧರ್ಮಾಧಾರಿತ ಮೀಸಲಾತಿ ನೀಡಲು ಅವಕಾಶ ಇಲ್ಲ ಅಂತ ಬಹಳ ಸ್ಪಷ್ಟವಾಗಿ ಹೇಳಿದೆ. ಹೀಗಿದ್ದರೂ ಕೂಡ ರಾಜ್ಯ ಸರ್ಕಾರ ನಾವು ಮಾಡಿರುವ ತೀರ್ಮಾನಕ್ಕೆ ಬೆಂಬಲ ಕೊಡಲು ನಿರಾಕರಿಸುತ್ತಿದೆ ಎಂದು ತಿಳಿಸಿದ್ದಾರೆ‌.

ನಮ್ಮ ಆದೇಶ ವಾಪಸ್ ಪಡೆಯುವುದಾಗಿ ಹೇಳಿಲ್ಲ
ಕೆಲವು ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ಬೆಂಬಲಿಗರು ನಮ್ಮ ಸರ್ಕಾರದ ಆದೇಶದ ವಿರುದ್ದ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ವಿಚಾರಣೆ ಬಂದಾಗ ವಿಧಾನಸಭಾ ಚುನಾವಣೆ ಘೊಷಣೆ ಆಗಿತ್ತು ಮತ್ತು ಚುನಾವಣೆ ನೀತಿ ಸಂಹಿತೆ ಇತ್ತು. ಅದಕ್ಕಾಗಿ ಮಧ್ಯಂತರ ಆದೇಶ ಕೊಡುವುದು ಬೇಡ ನಾವು ಪೂರ್ಣ ಪ್ರಮಾಣದ ವಾದ ಮಾಡುತ್ತೇವೆ ಎಂದು ನಮ್ಮ ವಕೀಲರು ಹೇಳಿದ್ದರು. ಅದಕ್ಕೆ ಸುಪ್ರೀಂ ಕೋರ್ಟ್ ಮುಂದಿನ ದಿನಾಂಕ ನೀಡುತ್ತೇವೆ. ಅಲ್ಲಿಯವರೆಗೂ ಈ ಆದೇಶ ಜಾರಿ ಮಾಡಬೇಡಿ ಅಂತ ಹೇಳಿತ್ತು. ಕೋರ್ಟ್ ಸೂಚನೆಯಂತೆ ನಾವು ಮುಂದಿನ ವಿಚಾರಣೆವರೆಗೆ ಮಾತ್ರ ಆದೇಶ ಜಾರಿ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇವೆ. ಮತ್ತೊಂದು ವಿಚಾರಣೆ ಬಂದಾಗಲೂ ನಾವು ಮುಂದಿನ ವಿಚಾರಣೆವರೆಗೆ ಮಾತ್ರ ಜಾರಿ ಮಾಡುವುದಿಲ್ಲ ಅಂತ ಹೇಳಿದ್ದೇವು. ನಮಗೆ ಪೂರ್ಣ ಪ್ರಮಾಣದ ವಾದ ಮಾಡಲು ಕೊರ್ಟ್ ಅವಕಾಶ ನೀಡಿದ ಹಿನ್ನೆಲೆಯಲ್ಲಿ ನಾವು ಹೇಳಿದ್ದೇವು ಹೊರತು ನಾವು ನಮ್ಮ ಆಜ್ಞೆಯನ್ನು ಪೂರ್ಣ ಪ್ರಮಾಣದಲ್ಲಿ ವಾಪಸ್ ತೆಗೆದುಕೊಳ್ಳುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ. ಇದನ್ನು ಮುಖ್ಯಮಂತ್ರಿಗಳು ತಿರುಚುವ ಪ್ರಯತ್ನ ಮಾಡುತ್ತಿರುವುದು ಅತ್ಯಂತ ಖೇದಕರ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ‌.
ಈಗ ರಾಜ್ಯ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಬೆಂಬಲಿಗರು ಸುಪ್ರೀಂ ಕೋರ್ಟ್‌ನಲ್ಲಿ ಹಾಕಿರುವ ಅರ್ಜಿ ವಾಪಸ್ ಪಡೆಯುವಂತೆ ಸೂಚಿಸಬೇಕು. ಇಲ್ಲದಿದ್ದರೆ. ಕಾನೂನು ಬದ್ದವಾಗಿ ನಾವು ಮಾಡಿರುವ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥವಾಗಿ ವಾದ ಮಂಡಿಸಿ ನಾವು ಮಾಡಿರುವ ಹೊಸ ಮೀಸಲಾತಿಯನ್ನು ಸಂಪೂರ್ಣವಾಗಿ ಜಾರಿಗೊಳಿಸಲು ಎಲ್ಲ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸೌಹಾರ್ದತೆಯಿಂದ ಬಗೆಹರಿಸಲಿ. ಅಲ್ಲದೇ ನಿನ್ನೆ ಪಂಚಮಸಾಲಿ ಸಮುದಾಯದ ಹೋರಾಟದಲ್ಲಿ ಹಿಂಸಾಚಾರ ಆಗಿರುವುದು ಅಲ್ಲಿಯ ಅಧಿಕಾರಿಗಳ ಧಾಷ್ಟ್ಯ, ದುರ್ನಡತೆ ಮತ್ತು ದರ್ಪ ಕಾರಣ. ಮುಖ್ಯಮಂತ್ರಿಗಳಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದ್ದರೆ, ಮತ್ತು ಪ್ರಜಾಪ್ರಭುತ್ವದಲ್ಲಿ ನಮ್ಮ‌ಹಕ್ಕು ಕೇಳಲು ಸ್ವತಂತ್ರರು ಅನ್ನುವ ಬಗ್ಗೆ ಅವರಿಗೆ ನಂಬಿಕೆ ಇದ್ದರೆ, ಕೂಡಲೇ ಲಾಠಿ ಚಾರ್ಜ್ ಮಾಡಿರುವ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಹಾಗೂ ಪಂಚಮಸಾಲಿ ಸಮಾಜದ ಮುಖಂಡರು ಮತ್ತು ಹಿರಿಯರನ್ನು ಮಾತುಕತೆಗೆ ಕರೆಯಿಸಿ ಸೌಹಾರ್ದತೆಯಿಂದ ಬಗೆ ಹರಿಸಲು ಪ್ರಮಾಣಿಕ ಪ್ರಯತ್ನ ಮಾಡಬೇಕು ಎಂದು ಆಗ್ರಹಿಸಿದ್ದಾರೆ.