For the best experience, open
https://m.samyuktakarnataka.in
on your mobile browser.

ಪಕ್ಷೇತರರಿಗೆ ಮಣೆ ಹಾಕದ ಕ್ಷೇತ್ರದಲ್ಲಿ ದಿಂಗಾಲೇಶ್ವರ ಶ್ರೀ ಸ್ಪರ್ಧೆ ಘೋಷಣೆ!

04:30 AM Apr 09, 2024 IST | Samyukta Karnataka
ಪಕ್ಷೇತರರಿಗೆ ಮಣೆ ಹಾಕದ ಕ್ಷೇತ್ರದಲ್ಲಿ ದಿಂಗಾಲೇಶ್ವರ ಶ್ರೀ ಸ್ಪರ್ಧೆ ಘೋಷಣೆ

ರಮೇಶ ಅಳವಂಡಿ
ಹುಬ್ಬಳ್ಳಿ: ಧಾರವಾಡ ಲೋಕಸಭಾ ಚುನಾವಣೆ ಅಖಾಡಕ್ಕೆ ಶಿರಹಟ್ಟಿ ಫಕ್ಕೀರೇಶ್ವರಸ್ವಾಮಿ ಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಇಳಿಯುತ್ತಿರುವುದರಿಂದ ಯಾರ ಮತಬುಟ್ಟಿಗೆ ಸ್ವಾಮೀಜಿ ಕೈ ಹಾಕಲಿದ್ದಾರೆ?
ಈಗಾಗಲೇ ಬಿಜೆಪಿಯಿಂದ ಪ್ರಲ್ಹಾದ ಜೋಶಿ, ಕಾಂಗ್ರೆಸ್‌ನಿಂದ ವಿನೋದ ಅಸೂಟಿ ಅವರಿಗೆ ಟಿಕೆಟ್ ಲಭಿಸಿದ್ದು, ಹಿಂದಿನ ಚುನಾವಣೆಗಳಂತೆಯೇ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆಯೇ ಮತ್ತೆ ನೇರ ಹಣಾಹಣಿ ಎಂದೇ ಕ್ಷೇತ್ರದಲ್ಲಿ ವಾತಾವರಣ ಇತ್ತು. ಆದರೆ, ಈಗ ಸ್ವಾಮೀಜಿ ಸ್ಪರ್ಧೆ ಮಾಡುವ ಘೋಷಣೆ ಕ್ಷೇತ್ರದಲ್ಲಿ ಸಹಜವಾಗಿ ಕುತೂಹಲ ಸೃಷ್ಟಿಸಿದೆ.
ಮಾತೆಗೂ ಮಣೆಹಾಕಿರಲಿಲ್ಲ!
ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣೆ ಇತಿಹಾಸದ ಪುಟಗಳನ್ನು ತೆರೆದು ನೋಡಿದರೆ ಈ ಕ್ಷೇತ್ರದಲ್ಲಿ ಮತದಾರ ಪ್ರಭು ಪಕ್ಷೇತರ ಅಭ್ಯರ್ಥಿಗಳಿಗೆ ಎಂದೂ ಮಣೆ ಹಾಕಿಲ್ಲ! ಕನ್ನಡ ನಾಡು ಪಕ್ಷದಿಂದ ಮಾತೆ ಮಹಾದೇವಿ ಅವರೇ ಸ್ಪರ್ಧೆ ಮಾಡಿದ್ದಾಗಲೂ ಕ್ಷೇತ್ರದ ಜನರು ಅವರಿಗೆ ಮಣೆ ಹಾಕಿರಲಿಲ್ಲ. ಭಕ್ತಿಯೇ ಬೇರೆ, ಸಿದ್ಧಾಂತವೇ ಬೇರೆ, ರಾಜಕೀಯವೇ ಬೇರೆ ಎಂಬ ರೀತಿ ನಿಲುವು ತಾಳಿದ್ದರು. ಹೀಗಾಗಿ ಮಾತೆ ಮಹಾದೇವಿಯವರು ಪರಾಭವಗೊಂಡಿದ್ದರು.
ಪಕ್ಷಗಳದ್ದೇ ಪಾರುಪತ್ಯ
ಈ ಕ್ಷೇತ್ರದಲ್ಲಿ ಏನಿದ್ದರೂ ಮತದಾರ ರಾಜಕೀಯ ಪಕ್ಷಗಳ ಅಭ್ಯರ್ಥಿಗಳನ್ನೇ ಬೆಂಬಲಿಸಿಕೊಂಡು ಬಂದಿದ್ದಾನೆ. ಮುಂಬೈ ಕರ್ನಾಟಕ ಸಂದರ್ಭದಲ್ಲಿ ಅಂದರೆ ೧೯೫೨ರಲ್ಲಿ ಕಾಂಗ್ರೆಸ್‌ನಿಂದ ದತ್ತಾತ್ರೇಯ ಕರಮರಕರ (ಡಿ.ಪಿ. ಕರಮರಕರ), ಮೈಸೂರು ಕರ್ನಾಟಕದ ಆಡಳಿತ ಅವಧಿಯಲ್ಲಿ ಕರಮರಕರ ಮತ್ತೊಂದು ಅವಧಿಗೆ ಆಯ್ಕೆಯಾಗಿದ್ದರು.
ಬಳಿಕ ಸರೋಜಿನಿ ಮಹಿಷಿ(೧೯೬೨-೧೯೭೭- ನಾಲ್ಕು ಬಾರಿ) ಡಿ.ಕೆ ನಾಯ್ಕರ್ (೧೯೮೦, ೮೪,೮೯ ಹಾಗೂ ೧೯೯೧- ನಾಲ್ಕು ಬಾರಿ), ಬಿಜೆಪಿಯಿಂದ ವಿಜಯ ಸಂಕೇಶ್ವರ (ಮೂರು ಬಾರಿ), ೨೦೦೪ ರಿಂದ ಈವರೆಗೆ ಪ್ರಲ್ಹಾದ ಜೋಶಿ ಆಯ್ಕೆ ಆಗಿದ್ದಾರೆ. ಹೀಗಾಗಿ ಈ ಕ್ಷೇತ್ರ ಪಕ್ಷೇತರರಿಗೆ ಅಲ್ಲ; ಇಲ್ಲೇನಿದ್ದರೂ ಪ್ರಬಲ ರಾಜಕೀಯ ಪಕ್ಷಗಳ ರಾಜಕೀಯ ಮೇಲಾಟಕ್ಕಾಗಿಯೇ ಹೇಳಿ ಮಾಡಿಸಿದ ವೇದಿಕೆ ಎಂಬುದು ಸಾಬೀತಾಗಿದೆ. ಈಗ ಇಂತಹ ಕ್ಷೇತ್ರದಲ್ಲಿ ದಿಂಗಾಲೇಶ್ವರ ಶ್ರೀಗಳು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗೆ ಸಿದ್ಧರಾಗಿದ್ದು ವಿಶೇಷ.
ಆದರೆ ಸ್ವಾಮೀಜಿ ಸ್ಪರ್ಧೆಯನ್ನು ಕಾಂಗ್ರೆಸ್ ಅಭ್ಯರ್ಥಿಯಾಗಲಿ ಅಥವಾ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಗಂಭೀರವಾಗಿ ಪರಿಗಣಿಸಿದಂತಿಲ್ಲ. ಆಶೀರ್ವಾದ ಎಂದು ಪ್ರಚಾರದಲ್ಲಿ ಮಗ್ನರಾಗಿದ್ದಾರೆ. ಆದರೆ ಸ್ವಾಮೀಜಿಯ ಈ ಸ್ಪರ್ಧೆಯ ಆಶೀರ್ವಾದ ಯಾರಿಗೆ ಲಭಿಸುತ್ತದೊ…. ಕಾದು ನೋಡಬೇಕಾಗಿದೆ.

ದಿಂಗಾಲೇಶ್ವರ ಸ್ಪರ್ಧೆ ಏಕೆ?
ಲಿಂಗಾಯತರಿಗೆ ಬಿಜೆಪಿ ಟಿಕೆಟ್ ಕೊಡಲಿಲ್ಲ ಎಂಬ ಕಾರಣಕ್ಕೊ ಅಥವಾ ಕ್ಷೇತ್ರದ ಜನರ ಏಳ್ಗೆ, ಅಭಿವೃದ್ದಿಗಾಗಿಯೊ? ಅದೂ ನೇರವಾಗಿಯೇ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಅವರ ವಿರುದ್ಧ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಪಕ್ಷೇತರರಾಗಿ ಸ್ಪರ್ಧೆ ಮಾಡಿ ಬಿಜೆಪಿ ವರಿಷ್ಠರು, ರಾಜ್ಯ ಮುಖಂಡರಿಗೆ ಸಮುದಾಯದ ತಾಕತ್ ತೋರಿಸುವ ಇರಾದೆ ಸ್ವಾಮೀಜಿಯವರದ್ದು. ಆದರೆ, ಸ್ವಾಮೀಜಿಯವರ ಈ ನಿಲುವಿಗೆ ಇಡೀ ಲಿಂಗಾಯತ ಸಮುದಾಯ ಹೇಗೆ ಚುನಾವಣೆಯಲ್ಲಿ ಸ್ಪಂದಿಸೀತು? ಬರೀ ಲಿಂಗಾಯತ ಸಮುದಾಯವಷ್ಟೇ ಸ್ವಾಮೀಜಿ ಬೆಂಬಲಕ್ಕಿದ್ದರೆ ಸಾಕೇ? ಬೇರೆ ಸಮುದಾಯದವರು ಬೇಡವೇ? ಸ್ವಾಮೀಜಿ ಸ್ಪರ್ಧೆಯ ಉದ್ದೇಶವೇ ಅಸ್ಪಷ್ಟವಾಗಿದೆ. ಅದೂ ಪಕ್ಷೇತರರಿಗೆ ನೆಲೆ ಇಲ್ಲದ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಇದರಲ್ಲಿ ಎಷ್ಟರ ಮಟ್ಟಿಗೆ ಅವರಿಗೆ ಯಶಸ್ಸು ಲಭಿಸೀತು ಎಂಬ ಚರ್ಚೆಗಳು ಸಮುದಾಯ ಮತ್ತು ರಾಜಕೀಯ ವಲಯದಲ್ಲಿ ನಡೆದಿವೆ.