ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಪತಿರಾಯರ ದಿನಾಚರಣೆ

03:00 AM Sep 25, 2024 IST | Samyukta Karnataka

ವಿಶ್ವ ಬೇಸರದಿಂದ ಮನೆಗೆ ಬಂದ. ಹೋದ ಕೆಲಸ ಆಗಿರಲಿಲ್ಲ. ಮತ್ತೆ ನಾಳೆ ಹೋಗಬೇಕು. ಮಡದಿ ವಿಶಾಲು ಸುಂದರವಾಗಿ ಡ್ರೆಸ್ ಮಾಡಿಕೊಂಡು ಬಂದು ಬೇಲೂರು ಶಿಲಾಬಾಲಿಕೆ ಫೋಸಲ್ಲಿ ನಿಂತಳು.
“ಹಲೋ! ಹೌ ಆರ್ ಯೂ ಮೈ ಹಬ್ಬೀ?” ಎಂದಾಗ ಗಂಡನಿಗೆ ಆಶ್ಚರ್ಯವಾಯಿತು. ಯಾವುದು ಈ ಲವ್ಲಿ ಗುಬ್ಬಿ ಎಂದು ನೋಡಿದ. ಅವಳ ಮೋಹಕ ಸೌಂದರ್ಯಕ್ಕೆ ಮಾರುಹೋದ.
“ಆಹ್! ಇದು ನಮ್ದೇನಾ ಸರಕು?” ಎಂದು ಮತ್ತೆ ಮತ್ತೆ ಅವಳ ಮುಖ ನೋಡಿದ. ಅದೇ ವಿಶಾಲು, ಆದರೆ ಮುಖದ ಸೌಂದರ್ಯಕ್ಕೆ ಶೇಕಡ ೨೦ ಎಕ್ಸ್ಟ್ರಾ ಗ್ಲಾಮರ್ ಎಲ್ಲಿಂದ ಬಂತು?
“ಹೌ ಆರ್ ಯೂ ಡಿಯರ್ ಹಬ್ಬಿ?” ಎಂದಳು.
“ಅಲ್ಲಮ್ಮಾ, ನವೆಂಬರ್ ತಿಂಗಳು ಹತ್ರ ಬರ‍್ತಾ ಇದ್ರೆ ಇಂಗ್ಲಿಷಲ್ಲಿ ಮಾತಾಡ್ತಾ ಇದ್ದೀಯಲ್ಲ?” ಎಂದ.
“ರೀ, ಇಂಟರ್‌ನ್ಯಾಷನಲ್ ಸೆಲೆಬ್ರೇಷನ್ ಡೇ ಗಳೆಲ್ಲಾ ಇಂಗ್ಲೀಷಲ್ಲೇ ಇರುತ್ತೆ, ನಿಮಗ್ಗೊತ್ತಿಲ್ವಾ? ಕಳೆದ ತಿಂಗಳು ವೈಫ್ ಅಪ್ರಿಷಿಯೇಷನ್ ಡೇ” ಅಂತ ನೀವೇ ಮಾಡಿದ್ರಿ” “ಹೌದು, ಪ್ರಪಂಚ ಎಲ್ಲಾ ಮಾಡ್ತು, ನಾವೂ ಮಾಡಿದ್ವಿ. ಇಲ್ಲಾಂದ್ರೆ ವೈಫ್ ಸಂಘದವರು ಘೇರಾವೋ ಮಾಡಬಹುದು ಅನ್ನೋ ಭಯ” ಎಂದ ವಿಶ್ವ. “ಗಂಡು-ಹೆಣ್ಣು ಬೇರೆ ಬೇರೆ ಅಲ್ವೇ ಅಲ್ಲ. ಎರಡು ಕೈ ಸೇರಿದರೆ ಎಕ್ಸ್ಟ್ರಾ ಸೌಂಡು, ಎರಡು ಬಾಡಿ ಸೇರಿದರೆ ಇನ್‌ಟ್ರಾ ಮೈಂಡು. ದೇವರ ಮಾಯೆ ಅದು. ಗಂಡ-ಹೆಂಡತಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.ಪತಿಯೇ ಕಣ್ ಕಂಡ ದೈವಂ’ ಅಂತ ತಮಿಳು ಸಿನಿಮಾನೂ ಬಂದಿತ್ತು.”
“ಸದ್ಯ ಕಂಡ್‌ಕಂಡ ಪತಿಯೇ ದೈವಂ’ ಸಿನಿಮಾ ಬಂದಿರಲಿಲ್ಲ” ಎಂದು ವಿಶ್ವ ನಕ್ಕ. ವಿಶಾಲೂ ಮುಂದುವರೆಸಿದಳು. “ಪತಿರಾಯರ ದಿನಾಚರಣೆ ಬೇಡ್ವಾ?” “ಪುಣ್ಯತಿಥಿ ದಿನಾಚರಣೆ ಅಲ್ಲವಲ್ಲ?” ಎಂದು ವಿಶ್ವ ನಿಟ್ಟುಸಿರಿಟ್ಟ. “ಒಂದು ನಾಣ್ಯಕ್ಕೆ ಎರಡು ಮುಖ ಇರುತ್ತೆ. ಎರಡೂ ಸೇರಿದ್ರೇನೇ ನಾಣ್ಯಕ್ಕೆ ಬೆಲೆ ಬರೋದು ವಿಶಾಲೂ” ಎಂದ. “ಆದ್ರೆ ಒಂದರ ಮುಖ ಒಂದು ನೋಡೊಲ್ಲ ಅನ್ನೋದು ನೆನಪಿಟ್ಕೊಳ್ಳಿ” ಎಂದು ವಿಶಾಲೂ ಕೌಂಟರ್ ಕೊಟ್ಟಾಗ ವಿಶ್ವನಿಗೆ ಮತ್ತೆ ಷಾಕಾಯಿತು. “ಏನಮ್ಮಾ ಹಿಂಗ್ಹೇಳ್ತಾ ಇದ್ದೀಯ?” “ನವಗ್ರಹಗಳು ನೋಡಿದ್ದೀರಾ?” ಎಂದಳು. ಒಂಭತ್ತು ಗ್ರಹಗಳು ಒಂದೇ ಕಡೆ ಇದ್ದರೂ ಒಂದು ಗ್ರಹ ಇನ್ನೊಂದರ ಮುಖ ನೋಡುವುದಿಲ್ಲ. ನವಗ್ರಹಗಳನ್ನು ಸುತ್ತುವ ಭಕ್ತರು ಈ ವಿಷಯವನ್ನು ಗಮನಿಸುವುದಿಲ್ಲ ಎಂದುಕೊಂಡ ವಿಶ್ವ. “ಗಂಡ ಹೆಂಡ್ತಿ ಒಟ್ಟಿಗೆ ಇದ್ರೆ ಮನೆ ದೇವಸ್ಥಾನ ಆಗುತ್ತೆ” ಎಂದಳು. “ಅದಕ್ಕೇ ಕೆಲವರು ಕಾಲಿಂಗ್‌ಬೆಲ್ ಬದಲು ಮನೆ ಮುಂದೆ ಗಂಟೆ ನೇತು ಹಾಕಿ ದಾರ ಕಟ್ಟಿರುತ್ತಾರೆ” ಎಂದ ವಿಶ್ವ. ಯಾವ್ದೇ ಹೆಂಡತಿ ಕ್ಷಮಿಸುವ ಸಂದರ್ಭಗಳನ್ನ ವಿಶ್ವ ನೆನಪು ಮಾಡಿಕೊಂಡ. ತನ್ನ ತಪ್ಪಿದ್ದಾಗ ಹೆಂಡತಿ ಗಂಡನನ್ನು ಕ್ಷಮಿಸುತ್ತಾಳೆ. ಗಂಡನ ತಪ್ಪಿದ್ದಾಗ ಬೆಂಡ್ ಎತ್ತುತ್ತಾಳೆ. ಮದುವೆಗೆ ಮುನ್ನ ನಾವು ಎಷ್ಟೆಲ್ಲ ಯೋಚನೆಗಳನ್ನ ಮಾಡ್ತೀವಿ. ನನ್ನ ಹೆಂಡತಿ ಹೀಗರ‍್ಬೇಕು, ಹಾಗರ‍್ಬೇಕು ಎಂದೆಲ್ಲ ಕಲ್ಪನೆಗಳನ್ನ ಕಟ್ತೀವಿ. ಆದರೆ ಹೆಣ್ಣು ಹುಡುಕೋವಾಗಿನ ಅನುಭವವೇ ಬೇರೆ. ಮದ್ವೆ ಮಾರ್ಕೆಟ್ ಅಂಬೋದೇ ಬಹಳ ವಿಚಿತ್ರ. ಯಾರಿಗೆ ಯಾವುದು ಬೇಕೋ ಅದು ಅವರಿಗೆ ಸಿಗೋದಿಲ್ಲ. ಮದುವೆ ಮಾರ್ಕೆಟ್ ಎಂಬೋ ಸಂತೆಗೆ ಸಾಯಂಕಾಲ ಹೋಗೋ ಹೊತ್ಗೆ ಒಳ್ಳೇ ಮಾಲು ಖರ್ಚಾಗಿರುತ್ತೆ. ಬಲಿತ ಲೇಡೀಸ್ ಫಿಂಗರ್ ಮಾತ್ರ ಇರುತ್ತೆ.ಸಿಕ್ಕಿದ್ದೇ ಸೀರುಂಡೆ’ ಅಂತ ನಾವು ಆಯ್ಕೆ ಮಾಡ್ಕೊಂಡು ಸಂಸಾರ ಮಾಡ್ಬೇಕು. ಮದ್ವೆ ಅಂಬೋದೇ ಒಂದು ಆಶ್ಚರ್ಯ. ಮದುವೆ ಆದಮೇಲೆ ಯಾಕೆ ಆದೆ ಅಂಬೋದು ಪರಮಾಶ್ಚರ್ಯ.
“ರೀ, ಇವತ್ತು ನೀವು ಹೇಳೋ ಅಡಿಗೇನೇ ಮಾಡ್ತೀನ್ರೀ” ಎಂದಳು.
“ಅಲ್ಲ ವಿಶಾಲೂ, ದಿನಾ ಗೊಡ್ಡು ಸಾರು ಮಾಡಿ ಹಾಕ್ತಾ ಇದ್ದೆ. ಇವತ್ತೇನು ವಿಶೇಷ?”
“ಗಂಡನ ದಿನಾಚರಣೆ ಅಂತ ಹೇಳಿಲ್ವಾ? ನಿಮ್ಗೆ ಹೀರೇಕಾಯಿ ಬೋಂಡ ಅಂದ್ರೆ ಇಷ್ಟ. ಆಲೂಗಡ್ಡೆ ಬದನೇಕಾಯಿ ಹುಳಿ ಅಂದ್ರೆ ಇಷ್ಟ, ಮಾಡಿ ಬಡಿಸ್ತೀನಿ” ಇದ್ಯಾವ್ದೋ ಭಾರಿ ಬೇಡಿಕೆಗೆ ಇಂಡೆಂಟ್ ಇರಬಹುದು ಎಂದು ವಿಶ್ವನಿಗೆ ದಿಗಿಲು ಆಯಿತು.
“ಯಾರು ಹೇಳಿದ್ರು ಇವತ್ತು ಗಂಡ ಹೇಳಿದ್ದೆಲ್ಲಾ ಮಾಡ್ಬೇಕು ಅಂತ?” ಎಂದು ಮತ್ತೆ ಕೇಳಿದ.
“ನಮ್ಮ ಮಹಿಳಾ ಸಂಘದಲ್ಲಿ ಒಂದು ರೆಸೊಲ್ಯೂಷನ್ ಮಾಡಿದ್ವಿ. ಅದರ ಪ್ರಕಾರ ಇವತ್ತು ಒಂದಿನ ಗಂಡನ್ನ ನಾವು ಚೆನ್ನಾಗಿ ನೋಡ್ಕೋಬೇಕು. ಇವತ್ತು ನಿಮ್ಮ ದಿನಾಚರಣೆ ಕಣ್ರೀ. ಪತಿರಾಯರ ದಿನಾಚರಣೆ ಅಂತ ನಾವು ಅದ್ದೂರಿಯಾಗಿ ಮಾಡ್ತಾ ಇದ್ದೀವಿ”
“ಆದ್ರೆ ಈ ಆಚರಣೆ ಯರ‍್ಗೂ ಗೊತ್ತಾಗೊಲ್ವಲ್ಲ?” ಎಂದು ವಿಶ್ವ ಬೇಸರಿಸಿದಾಗ ವಿಶಾಲು ನಕ್ಕಳು.
“ಗಂಡ-ಹೆಂಡ್ತಿ ನಡುವೆ ಇರೋ ಪ್ರೀತಿ ಯಾರಿಗೇಕೆ ಗೊತ್ತಾಗ್ಬೇಕು? ಬೆಡ್‌ರೂಮಲ್ಲಿ ನಡೆಯೋ ಸಂಗತಿಗಳ್ನ ಬಯಲು ಮಾಡ್ತಾರಾ? ವಿಷಯ ನಮ್ಮಲ್ಲೇ ರ‍್ಬೇಕು. ಪ್ರತಿಯೊಬ್ಬ ಹೆಂಡತಿಯೂ ತನ್ನ ಗಂಡನನ್ನ ಅತ್ಯಂತ ಪ್ರೀತಿಯಿಂದ ನೋಡ್ಕೋತಾಳೆ. ಬೆಪ್ಪು ಗಂಡನಿಗೆ ಅದು ಗೊತ್ತಾಗೊಲ್ಲ ಅಷ್ಟೇ” ಎಂದಳು.
“ನನಗ್ಯಾಕೋ ನಿನ್ನ ಮಾತಲ್ಲಿ ನಂಬಿಕೆ ರ‍್ತಾ ಇಲ್ಲ” ಎಂದ ವಿಶ್ವ.
“ನಂಬಿಕೆ ರ‍್ತಾ ಇಲ್ಲ? ನಮ್ಮ ಮಹಿಳಾ ಸಂಘದ ಪ್ರೆಸಿಡೆಂಟ್ ಇದ್ದಾಳಲ್ಲ ಮೀನಾ ಮಿಟುಕಲಾಕ್ಷಿ, ಅವಳು ತನ್ನ ಗಂಡನ್ನ ಹೆದರಿಸಿ, ಬೆದರಿಸಿ ಹೆಂಗಿಟ್ಕೊಂಡಿದ್ದಾಳೆ ಗೊತ್ತಾ?”
“ಅಷ್ಟು ಕಂಟ್ರೋಲ್ ಯಾಕೆ?”
“ಗಂಡನ್ನ ವರ್ಷ ಪೂರ್ತಿ ಅಂಕೆಯಲ್ಲಿ ಇಟ್ಕೋಬೇಕಂತೆ. ಗಂಡನ ಕುತ್ತಿಗೆಯ ಬೆಲ್ಟ್ ಬಿಚ್ಚಿ ಬಯಲಿಗೆ ಬಿಟ್ರೆ ಅಂಕೆ ತಪ್ಪಿ ಆಮಶಂಕೆ ಆಗುತ್ತಂತೆ. ಅವನು ಕಾಂಪೌಂಡ್ ಹಾರೋಕೆ ಪ್ರಯತ್ನಿಸಬಹುದು ಅಂತ ಮಹಿಳಾ ಸಂಘದ ಮಿಟುಕಲಾಕ್ಷಿ ಹೇಳಿದ್ರು.”
“ಇನ್ನೇನು ಹೇಳಿದ್ರು?”
“ಮದ್ವೆ ಅಂಬೋದು ದೊಡ್ಡ ಕಾಡು ಇದ್ಹಾಗೆ. ಈ ಮ್ಯಾರೇಜ್ ಫಾರೆಸ್ಟಲ್ಲಿ ಭಯಂಕರವಾದ, ಬಲಿಷ್ಠವಾದ ಸಿಂಹಗಳಿರುತ್ತೆ. ಪ್ರೀತಿಯ ಜಿಂಕೆಗಳೂ ಇರುತ್ತೆ. ಬಲಿಷ್ಠ ಸಿಂಹಗಳನ್ನ ಪಳಗಿಸೋ ಶಕ್ತಿ ಜಿಂಕೆಗಳಿಗೆ ಮಾತ್ರ ಇರುತ್ತೆ” ಎಂದಳು.
“ವಿಶಾಲೂ, ನೀನು ತಪ್ಪು ತಿಳೀಲಿಲ್ಲ ಅಂದ್ರೆ ಮೊನ್ನೆ ಒಂದು ಪುಸ್ತಕ ಓದ್ತಾ ಇದ್ದೆ. ಅದ್ರಲ್ಲಿದ್ದ ವಿಷ್ಯ ಹೇಳ್ತೀನಿ” ಎಂದ.
“ಇವತ್ತು ಎಲ್ಲಕ್ಕೂ ಮಾಫಿ ಇದೆ. ಹೇಳಿ ಪರವಾಗಿಲ್ಲ” ಎಂದಳು.
“ಒಬ್ಬ ದೊಡ್ಡ ಫಿಲಾಸಫರ್ ಹೇಳ್ತಾನೆ. ಮದ್ವೆ ಆದ್ಮೇಲೆ ಹೆಂಡ್ತಿ ಮಿಸ್ಟ್ರೆಸ್ ಆಗ್ತಾಳೆ ಅಂತ”
“ಖಂಡಿತ ನಿಜ, ನಾನು ಮಿಸ್ಟ್ರೆಸ್ಸೇ” ಎಂದಳು.
“ಆ ತತ್ವಜ್ಞಾನಿ ಹೇಳ್ತಾನೆ, ಮೊದಲ ವರ್ಷ ಮಾತ್ರ ಮಿಸ್ಸು, ಆಮೇಲೆ ಬರೀ ಸ್ಟ್ರೆಸ್ಸು ಅಂತ ವಿವರಿಸಿದ್ದಾನೆ”.
ವಿಶಾಲೂಗೆ ಸಿಟ್ಟು ಬಂದು ಸೌಟನ್ನು ಕೆಳಗೆ ಎಸೆದು ಹೇಳಿದಳು.
“ಪಾಪ ಅಂತ ನೈಸ್ ಮಾಡಿದ್ರೆ ಓವರ್ ಆಗಿ ಆಡ್ತೀರಾ? ಇವತ್ತು ನಾನು ಅಡಿಗೆ ಮಾಡೊಲ್ಲ, ನೀವೇ ಮಾಡ್ಕೊಳ್ಳಿ.”
“ಎಲ್ಲ ಕೆಲ್ಸ ನಾನೇ ಯಾಕೆ ಮಾಡ್ಬೇಕು?”
“ಯಾಕೇಂದ್ರೆ ಇವತ್ತು ಹಬ್ಬೀಸ್ ಡಿಪ್ರಿಷಿಯೇಷನ್ ಡೇ!” ಎಂದು ಉಲ್ಟಾ ಹೊಡೆದಳು.

Next Article