ಪತ್ನಿಯ ಪ್ರೇಮದಾಟಕ್ಕೆ ಪತಿ ಬಲಿ
ಬೆಳಗಾವಿ: ಹನ್ನೊಂದು ತಿಂಗಳ ಹಿಂದೆ ನಡೆದ ಅಸಹಜ ಸಾವಿನ ಪ್ರಕರಣ ಬೇಧಿಸಿರುವ ಪೊಲೀಸರು ಈಗ ಕೊಲೆ ಎಂದು ದಾಖಲಿಸಿ ಕ್ರಮ ತೆಗೆದುಕೊಂಡಿದ್ದಾರೆ.
ಕಳೆದ ವರ್ಷ ಡಿಸೆಂಬರ ತಿಂಗಳಲ್ಲಿ ಅಥಣಿ ತಾಲೂಕಿನ ಕೃಷ್ಣಾ ನದಿಯಲ್ಲಿ ಅನಾಮಧೇಯ ವ್ಯಕ್ತಿಯೊಬ್ಬನ ಶವ ಸಿಕ್ಕಿತ್ತು. ಆಗ ಇದನ್ನು ಸತ್ತ ವ್ಯಕ್ತಿ ಯಾರು ಎನ್ನುವುದರ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು.
ಆದರೆ ಈಗ ಅದು ಕೊಲೆ ಎನ್ನುವುದು ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಮೇಲಾಗಿ ಇಲ್ಲಿ ಪತ್ನಿಯೇ ತನಗೆ ಅಡ್ಡಿಯಾಗುತ್ತಿದ್ದ ಪತಿಗೆ ಯಮಲೋಕಕ್ಕೆ ಕಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಳು ಎನ್ನುವುದು ಬೆಳಕಿಗೆ ಬಂದಿದೆ.
ಹಾರೂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಇಟ್ನಾಳ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಕಾಣೆಯಾಗಿದ್ದಾನೆ ಎನ್ನುವ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಇದರ ಬಗ್ಗೆ ಕುಟುಂಬದವರು ದೂರು ಸಹ ಕೊಟ್ಟಿರಲಿಲ್ಲ.
ಅದರ ಜಾಡನ್ನು ಹಿಡಿದು ವಿಚಾರಣೆ ನಡೆಸಿದಾಗ ಕಾಣೆಯಾದ ವ್ಯಕ್ತಿ ಇಟ್ನಾಳ ಗ್ರಾಮದ ಮಲ್ಲಪ್ಪ ಕುಂಬಾರ ಎನ್ನುವುದು ಗೊತ್ತಾಗುತ್ತದೆ.
ಆದರೆ ಪತಿ ಕಾಣೆಯಾದ ಬಗ್ಗೆ ಪತ್ನಿ ಏಕೆ ದೂರು ಕೊಡಲಿಲ್ಲ ಎನ್ನುವುದರ ಬಗ್ಗೆ ಪೊಲೀಸರು ಆಕೆಯನ್ನು ಕರೆದು ವಿಚಾರಣೆ ನಡೆಸಿದಾಗ ಕೊಲೆಯ ಹಿಂದಿನ ಸತ್ಯಾಸತ್ಯತೆ ಬಯಲಿಗೆ ಬಂದಿತು ಎಂದು ಎಸ್ಪಿ ಗುಳೇದ್ ಹೇಳಿದರು.
ಈ ಪ್ರಕರಣದಲ್ಲಿ ಮೃತನ ಪತ್ನಿಯನ್ನು ಪೊಲೀಸರು ವಿಚಾರಣೆ ನಡೆಸಿದಾಗ ನೀಡಿದ ಹೇಳಿಕೆಗಳ ಬಗ್ಗೆಯೇ ಪೊಲೀಸರಿಗೆ ಮತ್ತಷ್ಟು ಅನುಮಾನ ಬರುತ್ತದೆ. ಅಷ್ಟೇ ಅಲ್ಲ ಈ ಮಹಿಳೆ ಕಳೆದ ಒಂದೂವರೆ ವರ್ಷದ ಹಿಂದೆ ಓಡಿ ಹೋಗಿದ್ದರ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ. ನಂತರ ಮಹಿಳೆ ತಾನಾಗಿಯೇ ವಾಪಸು ಬಂದು ಠಾಣೆಗೆ ಗಂಡನ ಕಾಟಕ್ಕೆ ಬೇಸತ್ತು ಓಡಿ ಹೋಗಿದ್ದಾಗಿ ಹೇಳಿಕೆ ನೀಡಿದ್ದಳು.
ಆದರೆ ಇಲ್ಲಿ ಮಹಿಳೆ ಮತ್ತೊಬ್ಬನ ಸಂಗಡ ಓಡಿ ಹೋಗಿದ್ದು ಪತಿಗೆ ಗೊತ್ತಾಗಿತ್ತು. ಈ ವಿಚಾರದಲ್ಲಿ ತನ್ನ ಪ್ರೇಮಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಕೊಲೆ ಮಾಡಿಸಿದಳು ಎನ್ನುವುದು ಇಲ್ಲಿ ಸ್ಪಷ್ಟವಾಗುತ್ತದೆ ಎಂದು ಎಸ್ಪಿ ಭೀಮಾಶಂಕರ ಗುಳೇದ ವಿವರಿಸಿದರು.