ಪತ್ರಕರ್ತರು ಸಮತೋಲನ ಬರವಣಿಗೆ ಸಾಧಿಸಬೇಕು
ಧಾರವಾಡ: ಪತ್ರಕರ್ತರು ವರದಿ ಮಾಡುವಾಗ ಹೊಗಳಿ ಅಟ್ಟಕೇರಿಸುವ, ತೆಗಳಿ ಪಾತಾಳಕ್ಕಿಳಿಸುವ ಪ್ರಯತ್ನಕ್ಕೆ ಹೋಗದೇ ಸಮತೋಲನ ಬರವಣಿಗೆಯನ್ನು ಸಾಧಿಸಬೇಕು ಎಂದು `ಸಂಯುಕ್ತ ಕರ್ನಾಟಕ' ಸಮೂಹ ಸಂಪಾದಕ ಹುಣಸವಾಡಿ ರಾಜನ್ ಹೇಳಿದರು.
ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ೪೦ನೇ ವರುಷದ ಸಂಭ್ರಮಾಚರಣೆ ಮತ್ತು ಸಂವಹನ ಕೂಟ ಆಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು. ಪತ್ರಿಕೋದ್ಯಮ ಬರವಣಿಗೆ ಎಂಬುದು ಬಹುದೊಡ್ಡ ಸವಾಲಾಗಿದೆ. ಬರವಣಿಗೆಯಲ್ಲಿ ಸ್ಪಷ್ಟ ಭಾಷೆ, ಗುಣವಾಚಕಗಳು, ಕ್ರಿಯಾವಿಶೇಷಣಗಳನ್ನು ಬಳಸಿಕೊಂಡು ಬರವಣಿಗೆಯನ್ನು ರೂಢಿಸಿಕೊಳ್ಳಬೇಕು. ಲೋಕದೃಷ್ಟಿ ಮತ್ತು ಲೋಕನಿಷ್ಠೆ ಪತ್ರಿಕೋದ್ಯಮದ ಬಹುಮುಖ್ಯ ಅಂಶಗಳು ಎಂದು ಹೇಳಿದರು.
ಜೀವನದಲ್ಲಿ ಮನೋಧರ್ಮ ದೊಡ್ಡದು. ಪತ್ರಕರ್ತರು ತಮ್ಮ ವೃತ್ತಿ ಜೀವನದಲ್ಲಿ ಇದನ್ನು ಗಂಭೀರವಾಗಿ ಅಳವಡಿಸಿಕೊಳ್ಳಬೇಕು, ಜೀವನದಲ್ಲಿ ಎದುರಾಗುವ ಪರಿಶ್ರಮದ ಮೆಟ್ಟಿಲುಗಳನ್ನು ಒಂದೊಂದಾಗಿ ಹತ್ತಿ ಸಾಧನೆಯು ಶಿಖರವನ್ನು ತಲುಪಬೇಕು ಎಂದು ಆಶಿಸಿದರು.
ಪತ್ರಿಕೋದ್ಯಮದಲ್ಲಿ ವರ್ತಮಾನ ವಿಷಯಗಳ ಅರಿವು ಬಹುಮುಖ್ಯ. ಅವುಗಳ ಕುರಿತು ಸಮತೋಲಿತ ಮನೋಭಾವ ಹೊಂದಿ ಸಮಾಜಕ್ಕೆ ಪ್ರಸ್ತುತಪಡಿಸಬೇಕು ಎಂದು ಹೇಳಿದರು.
ಸ್ಥಾನಿಕ ಸಂಪಾದಕ ಷಣ್ಮುಖ ಕೋಳಿವಾಡ ಮಾತನಾಡಿ, ಬದುಕೆನ್ನುವುದು ಹೋರಾಟದ ದಾರಿ. ಅದರಲ್ಲಿ ಯಶಸ್ವಿಯಾಗಲು ಪರಿಶ್ರಮ ಮುಖ್ಯ. ಪತ್ರಿಕೋದ್ಯಮ ವಿದ್ಯಾರ್ಥಿಗಳು ಶಬ್ದ ಮತ್ತು ಜ್ಞಾನ ಭಂಡಾರ ವೃದ್ಧಿಸಿಕೊಂಡು ಪವಿತ್ರ ವೃತ್ತಿಯಲ್ಲಿ ಸೇವೆಗೈಯ್ಯುವ ಬದ್ಧತೆ ಬೆಳೆಸಿಕೊಳ್ಳಬೇಕು ಎಂದರು. ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಹುಣಸವಾಡಿ ರಾಜನ್ ಅವರನ್ನು ವಿಭಾಗದ ಮುಖ್ಯಸ್ಥ ಡಾ.ಜೆ.ಎಂ.ಚಂದುನವರ ಸನ್ಮಾನಿಸಿದರು.
ಅಧ್ಯಕ್ಷತೆಯನ್ನು ವಹಿಸಿದ ವಿಭಾಗದ ಮುಖ್ಯಸ್ಥರಾದ ಡಾ.ಜೆ.ಎಂ.ಚಂದುನವರ ಮಾತನಾಡಿ, ಸಂಯುಕ್ತ ಕರ್ನಾಟಕ ಎಂಬ ಪದದಲ್ಲಿ ಅಖಂಡ ಕರ್ನಾಟಕದ ಕಲ್ಪನೆ ಇದೆ. ಬ್ರಿಟಿಷರ ವಿರುದ್ಧ ಹೋರಾಟ ಮತ್ತು ಕರ್ನಾಟಕ ಏಕೀಕರಣ ಚಳವಳಿಗೆ ಅದರದೇ ಆದ ಕೊಡುಗೆಯನ್ನು ಪತ್ರಿಕೆ ನೀಡಿದೆ. ಸಂಯುಕ್ತ ಕರ್ನಾಟಕದ ಬೇರುಗಳು ಕರುನಾಡಿನ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಂ.ಕ. ಉಪಸಂಪಾದಕ ಸುನಿಲ್ ಪಾಟೀಲ್, ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಂಕರ ಸನ್ನಟ್ಟಿ ನಿರೂಪಿಸಿದರು. ಆದಿತ್ಯ ಸ್ವಾಗತಿಸಿದರು. ವೀರೇಶ್ ವಂದಿಸಿದರು.
ಸಂಯುಕ್ತ ಕರ್ನಾಟಕ ದಿನಪತ್ರಿಕೆ ಆರಂಭದಿಂದಲೂ ಲೋಕದೃಷ್ಟಿ ಮತ್ತು ಲೋಕನಿಷ್ಠೆ ತತ್ವದಲ್ಲಿ ಕಾರ್ಯನಿರತವಾಗಿದೆ. ಅದು ಜ್ಞಾನದ ಹಸಿವನ್ನು ತಣಿಸುತ್ತದೆ. ರಾಷ್ಟ್ರೀಯ ಪ್ರಜ್ಞೆಯ ಜೊತೆಗೆ ಕರ್ನಾಟಕದ ಬೆಳವಣಿಗೆ ಆಗು ಹೋಗುಗಳ ಬಗ್ಗೆ ಸದಾ ಜಾಗೃತಿ ಮೂಡಿಸುವಲ್ಲಿ ಪತ್ರಿಕೆ ಮುಂಚೂಣಿಯಲ್ಲಿದೆ.
-ಹುಣಸವಾಡಿ ರಾಜನ್