For the best experience, open
https://m.samyuktakarnataka.in
on your mobile browser.

ಪದತ್ಯಾಗದ ಹಿಂದಿನ ತರ್ಕ

02:00 AM Jun 08, 2024 IST | Samyukta Karnataka
ಪದತ್ಯಾಗದ ಹಿಂದಿನ ತರ್ಕ

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಬೆನ್ನ ಹಿಂದೆಯೇ ಸಿಬಿಐ ಕೂಡಾ ತನಿಖೆ ಆರಂಭಿಸಿರುವ ಹಿನ್ನೆಲೆಯಲ್ಲಿ ಪರಿಶಿಷ್ಟ ಪಂಗಡಗಳ ಖಾತೆ ಸಚಿವ ಸ್ಥಾನಕ್ಕೆ ನಾಗೇಂದ್ರ ಅವರು ರಾಜೀನಾಮೆ ನೀಡಿರುವ ಹಿಂದೆ ಇರುವ ಕಾರಣಗಳು ಹಲವಾರು. ತಾವು ನಿರ್ದೋಷಿ, ಈ ಅಕ್ರಮದಲ್ಲಿ ಯಾವುದೇ ಪಾತ್ರವಿಲ್ಲ ಎಂದು ಘಂಟಾಘೋಷವಾಗಿ ಸಾರಿದ್ದ ನಾಗೇಂದ್ರ ಅವರು ಕೇವಲ ನಾಲ್ಕೈದು ದಿನಗಳ ಹಿಂದಷ್ಟೆ ರಾಜೀನಾಮೆ ನೀಡಲು ಹಿಂದೇಟು ಹಾಕಿದ್ದನ್ನು ಸ್ಮರಿಸಿದರೆ ಈ ಅವಧಿಯಲ್ಲಿ ಜರುಗಿರುವ ಬೆಳವಣಿಗೆಗಳು ಗಮನಾರ್ಹ ಎಂಬುದನ್ನು ಗುರುತಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸೂಚನೆಯ ಮೇರೆಗೆ ತನಿಖೆಯನ್ನು ಕೈಗೆತ್ತಿಕೊಂಡ ಎಸ್‌ಐಟಿ ಹಲವಾರು ಅಕ್ರಮದ ದಾಖಲೆಗಳು ಹಾಗೂ ವ್ಯಕ್ತಿಗಳನ್ನು ದಸ್ತಗಿರಿ ಮಾಡುವ ಹೊತ್ತಿಗೆ ಸರಿಯಾಗಿ ಸಿಬಿಐ ಕೂಡಾ ತನಿಖೆಗೆ ರಂಗ ಪ್ರವೇಶ ಮಾಡಿರುವುದು ಸಾಮಾನ್ಯವಾದ ಬೆಳವಣಿಗೆಯಲ್ಲ. ಇದರ ಜೊತೆಗೆ ೧೮೭ ಕೋಟಿ ರೂಪಾಯಿ ಅಕ್ರಮಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಮೂಲದ ವ್ಯಕ್ತಿ ಸೃಷ್ಟಿಸಿರುವ ನಕಲಿ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಯಾಗಲು ಪ್ರೇರಕ ಶಕ್ತಿ ಇರಲೇಬೇಕು. ಸಿಬಿಐ ತನಿಖೆಯನ್ನು ನಿರ್ಬಂಧಿಸುವುದು ಕಷ್ಟ. ಅಗತ್ಯ ಬಿದ್ದರೆ ಮಂತ್ರಿಯೂ ಸೇರಿದಂತೆ ಯಾರನ್ನೇ ಆಗಲೀ ದಸ್ತಗಿರಿ ಮಾಡಲು ಸಿಬಿಐ ಹಿಂಜರಿಯುವುದಿಲ್ಲ. ಹೀಗೇನಾದರೂ ಆದರೆ ಸಿದ್ದರಾಮಯ್ಯ ಸರ್ಕಾರದ ಮೊದಲ ವರ್ಷದ ವರ್ಧಂತಿ ಆಚರಣೆಗೆ ಕಳಂಕ ತಟ್ಟುವ ಅಪಾಯವೂ ಇದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ನಾಗೇಂದ್ರ ಅವರ ರಾಜೀನಾಮೆ ನಿರ್ಧಾರ ಕೈಗೊಳ್ಳುವ ಪರಿಸ್ಥಿತಿ ನಿರ್ಮಾಣವಾಯಿತು ಎಂಬ ಮಾತುಗಳನ್ನು ಸಾರಾಸಗಟಾಗಿ ತಿರಸ್ಕರಿಸುವುದು ಸರಿಯಾಗದೇನೋ.
ನಾಗೇಂದ್ರ ಅವರು ರಾಜೀನಾಮೆ ನೀಡುವ ಮೊದಲು ಕೂಡಾ ಗುಣಾಕಾರ ಭಾಗಾಕಾರ ಹಾಕುತ್ತಲೇ ಕೂಡಿ ಕಳೆದು ನಂತರ ಲೆಕ್ಕಾಚಾರ ಮುಗಿಯದೇ ಹೋದಾಗ ಅನಿವಾರ್ಯವಾಗಿ ತಮ್ಮ ತ್ಯಾಗಪತ್ರವನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು ಎನ್ನಲು ಗುರುವಾರ ಮುಂಜಾನೆಯಿಂದ ಸಂಜೆಯವರೆಗೆ ನಡೆದ ಚಟುವಟಿಕೆಗಳೇ ಆಧಾರ. ಏನೇ ಆದರೂ, ನೈತಿಕ ದೃಷ್ಟಿಯಿಂದ ನಾಗೇಂದ್ರ ಅವರು ರಾಜೀನಾಮೆ ನೀಡಿರುವುದು ಸ್ವಾಗತಾರ್ಹ. ಹಾಗೇನಾದರೂ ಎಸ್‌ಐಟಿ ಹಾಗೂ ಸಿಬಿಐ ತನಿಖೆಗಳಲ್ಲಿ ನಿರ್ದೋಷಿ ಎಂದು ಸಾಬೀತಾದರೆ ಮತ್ತೆ ಸಂಪುಟ ಸೇರ್ಪಡೆಗೆ ಯಾರ ಅಭ್ಯಂತರವೂ ಇರಲಾರದು. ಆದರೆ, ಸಂಪುಟ ಸೇರ್ಪಡೆ ನಿರ್ಧಾರದ ಪರಮಾಧಿಕಾರ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನಸ್ಸು ಮಾಡಬೇಕಷ್ಟೆ. ಈ ಹಿಂದೆ ಕೆ.ಜೆ. ಜಾರ್ಜ್ ಅವರು ಗೃಹ ಮಂತ್ರಿಯಾಗಿದ್ದಾಗ ಡಿವೈಎಸ್‌ಪಿ ಮಟ್ಟದ ಅಧಿಕಾರಿಯೊಬ್ಬರ ಆತ್ಮಹತ್ಯೆಗೆ ಸಂಬಂಧಿಸಿದಂತೆ ನಡೆದ ತನಿಖೆಯಲ್ಲಿ ನಿರ್ದೋಷಿ ಎಂದು ಸಾಬೀತಾದ ಮೇಲೆ ಸಂಪುಟ ಸೇರ್ಪಡೆಯಾದದ್ದನ್ನು ಮರೆಯುವಂತಿಲ್ಲ. ಇಂತಹ ಘಟನಾವಳಿಗಳು ಸಾಕಷ್ಟು ನಡೆದಿವೆ. ಹೀಗಾಗಿ ರಾಜೀನಾಮೆ ನೀಡಿರುವ ನಾಗೇಂದ್ರ ಅವರು ಮತ್ತೆ ಸಂಪುಟ ಸೇರ್ಪಡೆಯಾಗುವ ಸಾಧ್ಯತೆಗಳು ಮುಕ್ತವಾಗಿವೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಬೆಳಕಿಗೆ ಬರುತ್ತಿದ್ದಂತೆಯೇ ಜಾತಿ ಆಧಾರಿತ ನಿಗಮಗಳ ಕಾರ್ಯ ನಿರ್ವಹಣೆಯ ಬಗ್ಗೆ ನಾನಾ ರೀತಿಯ ಸಂಶಯಗಳು ಕೇಳಿಬರಲಾರಂಭಿಸಿವೆ. ಭೋವಿ ಸಮಾಜದ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಗೂಳಿಹಟ್ಟಿ ಶೇಖರ್ ಅವರು ಬಹಿರಂಗವಾಗಿಯೇ ಈ ನಿಗಮದಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ವ್ಯವಹಾರವಾಗಿದೆ ಎಂದು ದೂರಿರುವುದನ್ನು ಸರ್ಕಾರ ಗಮನಿಸಬೇಕು. ಜೊತೆಗೆ ಉಳಿದ ನಿಗಮಗಳ ಕಾರ್ಯ ನಿರ್ವಹಣೆಯ ಬಗ್ಗೆಯೂ ಕಣ್ಗಾವಲು ಇಡುವಂತಹ ಕ್ರಮ ಆರಂಭವಾಗುವುದು ಸೂಕ್ತ. ಇಂತಹ ವಿಚಾರದಲ್ಲಿ ರಾಜಕಾರಣ ಸುಳಿಯಬಾರದು. ಏಕೆಂದರೆ, ಸರ್ಕಾರದ ಹಣ ತಲುಪಬೇಕಾದದ್ದು ಫಲಾನುಭವಿಗಳಿಗೇ ವಿನಃ ಪಟ್ಟಭದ್ರರಿಗಲ್ಲ. ಯಾವುದೇ ಪಕ್ಷದ ಎಷ್ಟೇ ದೊಡ್ಡವರಾದರೂ ಕೂಡಾ ಅವರ ವಿರುದ್ಧ ಕ್ರಮ ಜರುಗಿಸುವುದು ಸೂಕ್ತವಾದ ನಿರ್ಧಾರ.
ಲೋಕಸಭಾ ಚುನಾವಣೆಯ ಪರ್ವ ಮುಗಿದು ಗದ್ದಲ ಅಡಗುತ್ತಿದ್ದಂತೆಯೇ ಈ ಅಕ್ರಮದ ಆರೋಪಗಳು ಒಂದೊಂದಾಗಿ ಬೆಳಕಿಗೆ ಬರಲು ಆರಂಭಿಸಿರುವ ಬೆಳವಣಿಗೆ ಒಂದರ್ಥದಲ್ಲಿ ಒಳ್ಳೆಯದೇ. ಆದರೆ, ಈ ಅಕ್ರಮಗಳು ನಡೆಯದಂತೆ ತಡೆಗಟ್ಟುವ ಮುನ್ನೆಚ್ಚರಿಕಾ ಕ್ರಮ ರೂಪಿಸುವುದು ಈಗ ಸರ್ಕಾರದ ವಿವೇಚನೆಗೆ ಬಿಟ್ಟಿರುವ ಸಂಗತಿ. ಲೋಕಾಯುಕ್ತ ಇಲ್ಲವೇ ಸಿಐಡಿ ತನಿಖೆಗೆ ಈ ಅಕ್ರಮಗಳನ್ನು ಒಪ್ಪಿಸುವ ಬದಲು ನಿಗಮಗಳ ಕಾರ್ಯ ನಿರ್ವಹಣೆಯ ಅಕ್ರಮಗಳ ವಿಚಾರಣೆಗೆ ಪ್ರತ್ಯೇಕ ಘಟಕವನ್ನು ರೂಪಿಸುವುದು ಯೋಗ್ಯವಾದ ಕ್ರಮವಾದೀತೇನೋ.