ಪದೇ ಪದೆ ಕಾಡಿದ ಹಾವು, ಪಾಪ ಪರಿಹಾರಕ್ಕೆ ದೇವಸ್ಥಾನ ನಿರ್ಮಾಣ
ಹುಬ್ಬಳ್ಳಿ: ವಿಚಿತ್ರ ಆದರೂ ಸತ್ಯ ಇರಬಹುದು ಎನ್ನಬೇಕು ಈ ಘಟನೆ ಬಗ್ಗೆ ನೀವು ತಿಳಿದಾಗ. ನಾಗರ ಪಂಚಮಿಯ ದಿನ ಹಿತ್ತಲದಲ್ಲಿ ಹಾವು ಹೊಡೆದಿದ್ದಕ್ಕೆ ಮತ್ತೊಂದು ಹಾವು ಅದೇ ಹಿತ್ತಲದಲ್ಲಿ ಬಂದಿದ್ದಕ್ಕೆ ಭಯಗೊಂಡ ಮನೆಯವರು ಪಾಪ ಪರಿಹಾರಕ್ಕಾಗಿ ಹಾವು ಕೊಂದ ಸ್ಥಳದಲ್ಲಿ ನಾಗರ ದೇವಸ್ಥಾನ ನಿರ್ಮಾಣ ಮಾಡಿದ್ದು, ಕಳಶ ಇಟ್ಟು ಪೂಜೆ ನಡೆಯುತ್ತಿದೆ. ಗ್ರಾಮಸ್ಥರೂ ಭೇಟಿ ನೀಡುತ್ತಿದ್ದಾರೆ.
ಹೀಗೆ ನಿರ್ಮಾಣವಾದ ದೇವಸ್ಥಾನ ಇರುವುದು ಕಲಘಟಗಿ ತಾಲೂಕಿನ ಗಳಗಿ ಹುಲಕೊಪ್ಪ ಗ್ರಾಮದಲ್ಲಿ. ಗ್ರಾಮದ ಹನುಮಂತ ಎಂಬುವವರು ನಾಗರ ಪಂಚಮಿ ದಿನ ಹಿತ್ತಲಿನಲ್ಲಿ ಹಾವು ಹೊಡೆದಿದ್ದರಂತೆ. ಈಚೆಗೆ ಅದೇ ಹಿತ್ತಲಿನಲ್ಲಿ ಮನೆಯ ಮಕ್ಕಳಿಗೆ ಒಂದು ಹಾವು ಕಾಣಿಸಿಕೊಂಡಿತ್ತಂತೆ. ಅಕ್ಕಪಕ್ಕದ ಮನೆಯ ಮಕ್ಕಳಿಗೂ ಹಾವು ಕಾಣಿಸಿಕೊಂಡಿತ್ತಂತೆ. ಗಂಡು ನಾಗರ ಕೊಂದಿರಬಹುದು. ಹೆಣ್ಣು ನಾಗರ ಸೇಡು ತೀರಿಸಿಕೊಳ್ಳಲು ಬಂದಿದೆ ಎಂದು ವಿಷಯ ತಿಳಿದ ಗ್ರಾಮದ ಕೆಲವರು ಹನುಮಂತ ಅವರಿಗೆ, ಅವರ ಮನೆಯವರಿಗೆ ಹೇಳಿದ್ದರಂತೆ. ಪಾಪ ಪರಿಹಾರಕ್ಕಾಗಿ ಹನುಮಂತ ಅವರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗಿ ಪೂಜೆ ಮಾಡಿಸಿದ್ದರಂತೆ. ದೋಷ ಪರಿಹಾರಕ್ಕೆ ದೇವಸ್ಥಾನ ನಿರ್ಮಾಣಕ್ಕೆ ಅರ್ಚಕರು ಹೇಳಿದ್ದರಂತೆ. ಅವರ ಮಾತಿನ ಪ್ರಕಾರ ಈಗ ದೇವಸ್ಥಾನವನ್ನು ನಿರ್ಮಾಣ ಮಾಡಿದ್ದಾರೆ. ಪಾಪ ಪ್ರಜ್ಞೆ ಮತ್ತು ನಂಬಿಕೆ ಪರಿಣಾಮ ದೇವಸ್ಥಾನ ನಿರ್ಮಾಣಗೊಂಡಿದೆ.