For the best experience, open
https://m.samyuktakarnataka.in
on your mobile browser.

ಪರಂಪರಾಗತ ಪಾಲಿಟಿಕ್ಸ್

03:00 AM Apr 03, 2024 IST | Samyukta Karnataka
ಪರಂಪರಾಗತ ಪಾಲಿಟಿಕ್ಸ್

ಚುರುಮುರಿಗೆ ಚಾ ಒಳ್ಳೆಯ ಕಾಂಬಿನೇಷನ್, ಇಡ್ಲಿಗೆ ಸಾಂಬಾರ್ ಇದ್ದಂತೆ, ಗಂಡನಿಗೆ ಹೆಂಡತಿ ಇದ್ದಂತೆ, ಭಾನುವಾರದ ಒಂದು ಸಂಜೆ ಚುರುಮುರಿ ತಿನ್ನುತ್ತಾ ಟೀ ಸವಿಯುತ್ತಾ ವಿಶ್ವನ ಮನೆಯಲ್ಲಿ ಕುಳಿತಿದ್ದೆ, ಹರಟೆ ಅನೇಕ ವಿಷಯಗಳನ್ನು ದಾಟಿ ರಾಜಕೀಯಕ್ಕೆ ಬಂತು.
“ಪಾಲಿಟಿಕ್ಸ್‌ಗೂ ಡಯಾಬಿಟಿಸ್‌ಗೂ ಇರುವ ಸಾಮ್ಯತೆ ಏನು?” ಎಂದು ವಿಶ್ವ ನನ್ನ ಕೇಳಿದ.
“ಬುದ್ಧಿ ಇದೆಯೇನ್ರೀ? ಎಮ್ಮೆಗೂ ಜಿಂಕೆಗೂ ಕಂಪೇರ್ ಮಾಡ್ತೀರಲ್ಲ?” ಎಂದು ವಿಶಾಲು ಗೊಣಗಿದಳು.
“ಸಾಮ್ಯತೆ ಇದೆ ವಿಶ್ವ, ಡಯಾಬಿಟಿಸ್ ಎಂದರೆ ಸಕ್ಕರೆ ಕಾಟ, ಪಾಲಿಟಿಕ್ಸ್ ಎಂದರೆ ರಾಜಕೀಯ ಆಟ” ಎಂದು ಸಮಾಧಾನ ಮಾಡಿದೆ.
“ರೋಗಾನ ರಾಜಕೀಯಕ್ಕೆ ಲಿಂಕ್ ಮಾಡ್ತೀರಲ್ಲ ಹ್ಯಾಗೆ?” ಎಂದು ವಿಶಾಲು ಕೇಳಿದಳು.
“ಡಯಾಬಿಟೀಸ್ ಕಾಯಿಲೆ ವಂಶ ಪಾರಂಪರೆಯಾಗಿ ತಂದೆಯಿಂದ ಮಗನಿಗೆ, ಮಕ್ಕಳಿಗೆ, ಮೊಮ್ಮಕ್ಕಳಿಗೆ ಜೀನ್ಸ್ನಲ್ಲಿ ಬರುತ್ತೆ. ಪಾಲಿಟಿಕ್ಸ್ನಲ್ಲಿ ಅಧಿಕಾರ ಕೂಡಾ ಹಾಗೇ ಜೀನ್ಸ್ನಲ್ಲಿ ಬರುತ್ತೆ” ಎಂದೆ.
ವಿಶಾಲು ಅದನ್ನ ಒಪ್ಪಲು ತಯಾರು ಇರಲಿಲ್ಲ. “ಒಂದು ಉದಾಹರಣೆ ಕೊಡಿ” ಎಂದಳು.
೧೯೭೩ರಲ್ಲಿ ಮದುವೆಯಾದ ಲಾಲು ಪ್ರಸಾದ್ ಯಾದವ್ ಅವರನ್ನು ಉದಾಹರಣೆಯಾಗಿ ಕೊಟ್ಟೆ.
“ಮದುವೆ ಆದಾಗ ಲಾಲು ದಂಪತಿಗಳು ಇಬ್ಬರೇ ಇದ್ರು, ಮುಕ್ಕಾಲು ಡಜನ್ ಮಕ್ಕಾಳಾದ್ವು, ಗಂಡ ಮುಖ್ಯಮಂತ್ರಿ ಆದ, ಹೆಂಡತಿ ಮುಖ್ಯಮಂತ್ರಿ ಆದ್ಲು, ಮಕ್ಕಳು ಎಂ.ಎಲ್.ಎ, ಎಂ.ಎಲ್.ಸಿ ಆದ್ರು, ಅವರ ಮನೆಯಿಂದ ಆರು ಮಂದಿ ಸಕ್ರೀಯ ರಾಜಕೀಯಕ್ಕೆ ಇಳಿದಿದ್ದಾರೆ” ಅಂದೆ.
ವಿಶಾಲುಗೆ ಆಶ್ಚರ್ಯವಾಯ್ತು, ಮೊಬೈಲ್ ಆನ್ ಮಾಡಿ ನೆಟ್‌ನಲ್ಲಿ ನೋಡಿದಳು, ನಾನು ಹೇಳಿದ್ದೆಲ್ಲ ಕರೆಕ್ಟ್ ಇದೆ ಅನ್ನಿಸ್ತು.
ಆ ವೇಳೆಗೆ ಬಾಗಿಲು ಶಬ್ದ ಆಯ್ತು, ವಿಶ್ವ ಹೋಗಿ ಬಾಗಿಲು ತೆಗೆದಾಗ ದೇವರಂತೆ ಕಾಣುವ, ಪೌರಾಣಿಕೆ ವ್ಯಕ್ತಿ ಬಂದಿದ್ದ. ನಮಸ್ಕಾರ ಮಾಡಿದ, ಅವನು ಕಾಲೇಜ್ ಹುಡುಗನೊಬ್ಬನನ್ನು ಕರೆ ತಂದಿದ್ದ.

“ನಮಸ್ಕಾರ, ಒಳಗೆ ಬರಬಹುದೇ?” ಎಂದ ಆ ದೇವರು.
“ಖಂಡಿತ ಬನ್ನಿ, ನಿಮ್ಮನ್ನ ನೋಡಿದರೆ ದೇವಲೋಕದಿಂದ ಬಂದಿದ್ದೀರ ಅನ್ಸುತ್ತೆ?”
“ಹೌದು, ನಾನು ಯಕ್ಷ, ನಿನ್ನಿಂದ ಒಂದು ಕೆಲಸ ಆಗಬೇಕು ವಿಶ್ವ”
“ನೀವು ಬಂದು ಕೇಳಿದ ಮೇಲೆ ನಾನು ಖಂಡಿತ ಮಾಡಿಕೊಡ್ತೇನೆ” ಎಂದು ವಿಶ್ವ ಅಭಿಮಾನದಿಂದ ಹೇಳಿದ.
“ಎಂ.ಪಿ. ಎಲೆಕ್ಷನ್‌ಗೆ ನಾಮಿನೇಷನ್ಸ್ ಫೈಲ್ ಆಗ್ತಿದೆ, ನಾಳೆಯೇ ಕಡೇ ದಿನ, ಈ ನಮ್ಮ ಹುಡುಗನಿಗೆ, ಒಂದು ಟಿಕೇಟ್ ಕೊಡಿಸು” ಎಂದ. ಚೂಟಿಯಾಗಿದ್ದ ಆ ಹುಡುಗ ಮುಗುಳ್ನಕ್ಕು ಕೈ ಮುಗಿದ.
“ನನ್ನ ಹೆಸರು ಸಜ್ಜನ್, ಸಜ್ಜನ ಮೂರ್ತಿ” ಎಂದ.
“ಸಜ್ಜನರಿಗೆ ಪಾಲಿಟಿಕ್ಸ್ನಲ್ಲಿ ಟಿಕೆಟ್ ಸಿಗೊಲ್ಲ, ಹತ್ತಿರಾನೂ ಬಿಟ್ಕೊಳ್ಳೊಲ್ಲ” ಎಂದೆ.
“ಯಾಕೆ ಹಾಗೆ ಹೇಳುತ್ತೀರಿ?” ಎಂದ ಯಕ್ಷ.
“ಚುನಾವಣೆಗೆ ನಿಲ್ಲಿಸೋಕೆ ನಿಮ್ಮ ಈ ಹುಡುಗನಿಗೆ ಏನಿದೆ ಕ್ವಾಲಿಫಿಕೇಷನ್ನು?” ಎಂದೆ.
ಸಜ್ಜನ ಅಭಿಮಾನದಿಂದ ಹೇಳಿದ.
“ನಾನು ರಾಜ್ಯಶಾಸ್ತ್ರದ ಮಾಸ್ರ‍್ಸ್ ಡಿಗ್ರಿಯಲ್ಲಿ ರ‍್ಯಾಂಕ್ ತಗೊಂಡಿದ್ದೇನೆ, ಅರ್ಥಶಾಸ್ತ್ರ ಓದಿದ್ದೇನೆ, ಜಾಗತಿಕ ಆರ್ಥಿಕ ಸ್ಥಿತಿಗತಿ ಬಗ್ಗೆ ಪೇರ‍್ಸ್ ಪ್ರೆಸೆಂಟ್ ಮಾಡಿ ಡಾಕ್ಟರೇಟ್ ತಗೊಂಡಿದ್ದೇನೆ” ಎಂದೆಲ್ಲ ಬಯೋಡೇಟಾ ಮುಂದಿಟ್ಟ.
“ಇವೆಲ್ಲ ರಾಜಕೀಯಕ್ಕೆ ಸಹಾಯ ಆಗೋ ವಿಷಯಗಳು ತಾನೇ” ಎಂದು ಯಕ್ಷ ಬೆಂಬಲಿಸಿದ.
“ನಿಜ, ರಾಜಕೀಯಕ್ಕೆ ಸಹಾಯ ಆಗುತ್ತೆ ಆದರೆ ನಮ್ಮಲ್ಲಿ ಆ ರೀತಿ ಇಲ್ಲ, ಇಲ್ಲಿ ಎಜುಕೇಷನ್ ಕ್ವಾಲಿಫಿಕೇಶನ್ ಕಾಲಂ ಇರೊಲ್ಲ. ಹೆಬ್ಬೆಟ್ ಹಾಕುವವರು ಸಹ ವಿದ್ಯಾಮಂತ್ರಿ ಆಗಬಹುದು. ಚಂಬಲ್ ಕಣಿವೆಯ ಡಕಾಯಿತರ ರಾಣಿ ಪೂಲನ್ ದೇವಿನ ಕುದುರೆಯಿಂದ ಇಳಿಸಿ ಎಂ.ಪಿ. ಮಾಡಿದವರು ನಾವು. ಬರೀ ಬುದ್ಧಿವಂತಿಕೆ ಇದ್ರೆ ನಿಮ್ಮ ಹುಡುಗನಿಗೆ ಟಿಕೆಟ್ ಸಿಗುವುದು ಕಷ್ಟ” ಎಂದ ವಿಶ್ವ.
“ನೀವೇ ಹಾಗ್ ಹೇಳಿದರೆ ಹ್ಯಾಗೆ? ನಿಮಗೆ ವಿಧಾನಸೌಧದ ಕಂಬಗಳೆಲ್ಲ ಗೊತ್ತು, ಪ್ರಯತ್ನ ಪಡಿ, ಹುಡುಗ ಒಳ್ಳೆಯವನು ತುಂಬಾ ಉತ್ಸಾಹದಲ್ಲಿದ್ದಾನೆ, ದೇಶಕ್ಕೆ ಈತನಿಂದ ಮುಂದೆ ಒಳ್ಳೆಯದಾಗುತ್ತೆ” ಎಂದು ಯಕ್ಷ ರೆಕ್ಮೆಂಡ್ ಮಾಡಿದ.
“ಈಗ ಕಾಲ ಬದಲಾಗಿದೆ ದೇಶದ ಬಗ್ಗೆ ಸದಾ ಚಿಂತೆ ಮಾಡುವವರು ರಾಜಕಾರಣಿ ಆಗೋಲ್ಲ, ತಮ್ಮ ದೇಹದ ಬಗ್ಗೆ, ತಮ್ಮ ಕುಟುಂಬದ ಬಗ್ಗೆ ಹಣ ಮಾಡೋ ಬಗ್ಗೆ ಆಸಕ್ತಿ ಇರಬೇಕು” ಎಂದು ವಿಶ್ವ ನೇರವಾಗಿ ಹೇಳಿದ.
ನಾನು ಸಮರ್ಥಿಸಿದೆ.
“ಹೌದು, ನಾನಾಯ್ತು ನನ್ನ ಕುಟುಂಬ ಆಯ್ತು, ನಾನು ನನ್ನ ಮಕ್ಕಳು, ಮೊಮ್ಮಕಳು ಸುರಕ್ಷಿತವಾಗಿದ್ರೆ ಸಾಕು ಅನ್ನೊರ‍್ನ ಜನ ಗೆಲ್ಲಿಸ್ತಾರೆ” ಎಂದೆ. ವಿಶಾಲುಗೆ ಒಂದು ಐಡಿಯಾ ಬಂತು. ಹುಡುಗನಿಗೆ ಸೂಚಿಸಿದಳು.
“ನಿಮ್ಮ ರಿಲೇಟೀವ್ಸ್ ಪೈಕಿ ಯಾರಾದ್ರೂ ರಾಜಕಾರಣಿ ಇದ್ರೆ ಅವರ ಮುಖಾಂತರ ಇನ್‌ಫ್ಲೂಯೆನ್ಸ್ ಮಾಡಿಸಿ ಖಂಡಿತ ಟಿಕೇಟ್ ಸಿಗುತ್ತೆ”
“ಯಾವ ಥರ ಸಂಬಂಧ ಇರಬೇಕು” ಎಂದು ಹುಡುಗ ಕೇಳಿದ.
“ರಾಜಕಾರಣಿಯ ಹೆಂಡತಿ, ನಾದಿನಿ, ಮಗ, ದೊಡ್ಡಪ್ಪ, ಸೋದರ ಮಾವ, ಸೊಸೆ, ಲವ್ವು, ಡವ್ವು ಆಗಿದ್ರೆ ಸುಲಭವಾಗಿ ಸೀಟು ಸಿಗುತ್ತೆ ಅಂತಾರೆ, ಗಂಡ ಮಂತ್ರಿ ಆಗಿದ್ರೆ ಎಳಸು ನಾದಿನಿಗೆ ಟಿಕೆಟ್ ಖಂಡಿತ ಸಿಗುತ್ತೆ” ಎಂದಳು ವಿಶಾಲು.
“ನಮ್ಮ ಪೈಕಿ ಯಾರೂ ರಾಜಕೀಯದಲ್ಲಿ ಇಲ್ಲ, ನಮ್ಮ ತಾತ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು, ಅವರು ಆ ಕಾಲದ ದೇಶ ಭಕ್ತರನ್ನೆಲ್ಲ ಹತ್ತಿರದಿಂದ ಕಂಡವರು, ಅನೇಕ ಬಾರಿ ಜೈಲು ವಾಸ ಕಂಡಿದ್ದರಂತೆ” ಎಂದು ಹುಡುಗ ಅಭಿಮಾನದಿಂದ ಹೇಳಿದ.
“ದೇಶ ಸೇವೆ ಸವಕಲು ನಾಣ್ಯ ಆಗಿದೆ, ಈಗ ದುಡ್ಡು ಎಷ್ಟು ಇಟ್ಕೊಂಡಿದ್ದೀರಾ?” ಎಂದು ಕೇಳಿದೆ.
“ಸುಮಾರು ಐದು ಸಾವಿರದಷ್ಟು ಹಣ ಇದೆ” ಎಂದ. ಎಲ್ಲರೂ ಜೋರಾಗಿ ನಕ್ಕರು.
“ಐದು ಸಾವಿರ ಒಂದು ದೇವರ ಹುಂಡಿಗೂ ಸಾಲೊಲ್ಲ, ಟೆಂಪಲ್ ರನ್ ಖರ್ಚುಗಳು ಇರುತ್ತೆ. ಒಂದು ಸಾವಿರ ಕೋಟಿ ಇದ್ದರೆ ಮಾತ್ರ ಎಂ.ಪಿ. ಎಲೆಕ್ಷನ್‌ಗೆ ನಿಲ್ಲಬಹುದು” ಎಂದೆ.
ಯಕ್ಷನಿಗೆ ಆಶ್ಚರ್ಯವಾಯ್ತು, “ನಮ್ಮದು ಪ್ರಜಾಪ್ರಭುತ್ವ ಅಲ್ವಾ? ಬಡವರೀ ಚುನಾವಣೆಗೆ ನಿಲ್ಲಬಹುದಲ್ವಾ?” ಎಂದು ಪ್ರಶ್ನೆ ಮಾಡಿದ.
“ಬಡವರು ಬೇಕಾದ್ರೂ ನಿಲ್ಲಬಹುದು. ಇಂಡಿಪೆಂಡೆಂಟ್ ಆಗಿ ನಿಂತ್ರೆ ಕ್ಯಾನ್ವಾಸ್ ಮಾಡೋಕೆ ಶಿಷ್ಯ ಕೋಟಿ ಬೇಕು, ಡೈಲಿ ಪೇಮೆಂಟ್ ಕೊಡ್ಲಿಲ್ಲಾಂದ್ರೆ ಜೈಕಾರ ಯಾರೂ ಕೂಗೊಲ್ಲ”
“ಚುನಾವಣೆಗೆ ನಿಲ್ಲೋಕೆ ಏನೇನಿರಬೇಕು?”
“ನಿಮ್ಮ ಬೆನ್ನ ಹಿಂದೆ ರಾಶಿ ರಾಶಿ ಹಿಂಬಾಲಕರಿರಬೇಕು. ನಾಮಿನೇಷನ್ ಕೊಡೋಕೆ ಮೆರವಣಿಗೇಲಿ ಹೋಗಬೇಕು”
“ಹುಡುಗ ಆಸೆಯಿಂದ ಇಲ್ಲಿಯವರೆಗೂ ಬಂದಿದ್ದಾನೆ, ಅವನಿಗೆ ಒಳ್ಳೆಯ ಸಲಹೆ ಸೂಚನೆ ಕೊಡಿ” ಎಂದ ಯಕ್ಷ.
“ನೀವು ಯಾರಾದ್ರೂ ಮಂತ್ರಿಗಳ ಹತ್ರ ಪರ್ಸನಲ್ ಸೆಕ್ರೇಟರಿ ಆಗಿ ಸೇರಿಕೊಳ್ಳಿ, ಹಣ ವಸೂಲಿ ಬಗ್ಗೆ ವಿವರ ತಿಳಿಯುತ್ತೆ, ನೀವೂ ಸ್ವಲ್ಪ ಹಣ ಮಾಡಿಕೊಳ್ಳಿ ಆಮೇಲೆ ಎಲೆಕ್ಷನ್‌ಗೆ ನಿಲ್ಲಿ” ಎಂದೆ.
“ಇಂಥ ಸ್ಥಿತಿಗೆ ಇಳಿದಿದೆಯಾ ಈ ದೇಶ? ಹೋಗ್ಲಿ ಬಿಡಿ, ಇಲ್ಲಿಗೆ ಬಂದಿದ್ದೇ ತಪ್ಪಾಯ್ತು” ಎಂದು ಹುಡುಗನನ್ನು ಕರೆದುಕೊಂಡು ಮಾಯವಾದ ಯಕ್ಷ.