ಪರಮೋಚ್ಚ ಸ್ಥಾನದಲ್ಲಿರುವವರ ಬಗ್ಗೆ ಕಾಂಗ್ರೆಸ್‌ಗೆ ಗೌರವವಿಲ್ಲ
ಬೆಂಗಳೂರು: ಪರಮೋಚ್ಚ ಸ್ಥಾನದಲ್ಲಿರುವವರ ಬಗ್ಗೆ ಕಾಂಗ್ರೆಸ್‌ಗೆ ಗೌರವವಿಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ದೇಶದ ರಾಷ್ಟ್ರಪತಿಗಳಿಗೆ ಏಕವಚನದಲ್ಲಿ ಸಿದ್ದರಾಮಯ್ಯ ಅವರು ಮಾತನಾಡಿರುವುದನ್ನು ಖಂಡಿಸಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು "ಸಿದ್ದರಾಮಯ್ಯನವರೇ, ನಿಮಗೂ ನಿಮ್ಮ ಪಕ್ಷಕ್ಕೂ ಯಾವ ಮಂಕು ಬಡಿದಿದೆಯೋ ತಿಳಿಯುತ್ತಿಲ್ಲ. ಸಂವಿಧಾನದ ಪರಮೋಚ್ಚ ಸ್ಥಾನದಲ್ಲಿರುವವರ ಬಗ್ಗೆ ಕಾಂಗ್ರೆಸ್‌ಗೆ ಗೌರವವಿಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಿದೆ.
ದೇಶದ ಪ್ರಥಮ ಪ್ರಜೆ ಬಗ್ಗೆ ಅಪಮಾನಕಾರಿ ಮಾತುಗಳನ್ನಾಡುವುದಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಸ್ಪರ್ಧೆ ಇದ್ದಂತಿದೆ. ಅಧೀರ ರಂಜನ್ ಚೌಧರಿ ನಂತರ ಈಗ ನಿಮ್ಮ ಸರಧಿ…. ಅಷ್ಟೇ ಅಲ್ಲ, ಕೆಲವೇ ದಿನಗಳ ಹಿಂದೆ ನಿಮ್ಮ ಮೈತ್ರಿಯ ಪಟಾಲಂ ಉಪರಾಷ್ಟ್ರಪತಿಗಳನ್ನು ಸಂಸತ್ ಆವರಣದಲ್ಲೇ ಅಪಹಾಸ್ಯ ಮಾಡಿ ಕಲಾಪದಿಂದ ಬಹಿಷ್ಕರಿಸಲಾಗಿತ್ತು. ನೀವು ದೇಶದ ಪ್ರಧಾನಿಗೆ ಏಕವಚನದಲ್ಲಿ ಕರೆಯೋ ಶೋಕಿ ಮಾಡುತ್ತೀರಿ. ಈಗ ದೇಶದ ರಾಷ್ಟ್ರಪತಿಗಳಿಗೆ ಏಕವಚನದಲ್ಲಿ ಬಹಿರಂಗವಾಗಿ ಒಂದು ಸಭೆಯಲ್ಲಿಯೇ ಮಾತನಾಡುತ್ತೀರಿ. ಇದೇನಾ ನಿಮ್ಮ ಸಂಸ್ಕೃತಿ? ಇದಾ ನಿಮ್ಮ ಸಭ್ಯತೆ?
ದೇಶದ ರಾಷ್ಟ್ರಪತಿಗಳಿಗೆ ಅದರಲ್ಲೂ ಓರ್ವ ಮಹಿಳಾ ರಾಷ್ಟ್ರಪತಿಗಳಿಗೆ ಇದಾ ನೀವು ಕೊಡುವ ಗೌರವ?
ನಿಮ್ಮ ಎಲುಬಿಲ್ಲದ ನಾಲಿಗೆಯನ್ನು ಹತೋಟಿಯಲ್ಲಿಟ್ಟುಕೊಳ್ಳಿ, ಈ ದುರಹಂಕಾರ ನಿಮ್ಮ ಹಾಗೂ ನಿಮ್ಮ ಪಕ್ಷದ ಅವನತಿಗೆ ಬುನಾದಿಯಾಗಲಿದೆ ಮರೆಯದಿರಿ.
ಮಾತೆತ್ತಿದರೆ ಸಂವಿಧಾನ ಎಂದು ಹೇಳುವ ಸಿದ್ದರಾಮಯ್ಯ ತಮ್ಮ ಈ ಮಾತು ಹಿಂಪಡೆದು ತಪ್ಪೊಪ್ಪಿಕೊಳ್ಳಬೇಕು. ಇಂತಹ ಬೇಜವಾಬ್ದಾರಿ ನಡವಳಿಕೆ ಪ್ರಜಾಪ್ರಭುತ್ವಕ್ಕೆ ಅತ್ಯಂತ ಮಾರಕ" ಎಂದಿದ್ದಾರೆ.