ಪರಶುರಾಮ ಥೀಂ ಪಾರ್ಕ್ ಹಗರಣ: ಅರುಣ್ ಕುಮಾರ್ ಅಮಾನತು
ಉಡುಪಿ : ಕಾರ್ಕಳದ ಪರಶುರಾಮ ಥೀಂ ಪಾರ್ಕ್ ನಿರ್ಮಾಣ ಕಾಮಗಾರಿಯಲ್ಲಿನ ಅವ್ಯವಹಾರದಲ್ಲಿ ಕಾಮಗಾರಿಯನ್ನು ನಿರ್ವಹಿಸಿದ ನಿರ್ಮಿತ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಅವರನ್ನು ಅಮಾನತುಗೊಳಿಸಿ ಉಡುಪಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಪ್ರಕರಣ ಸದ್ಯ ತನಿಖಾ ಹಂತದಲ್ಲಿದ್ದು, ಅರುಣ್ ಕುಮಾರ್ ಅವರು ತನಿಖೆಯಲ್ಲಿ ಹಸ್ತಕ್ಷೇಪ ಮಾಡುವ ಸಾಧ್ಯತೆಗಳಿರುವ ಕಾರಣದಿಂದ ಅವರನ್ನು ಅಮಾನತು ಮಾಡಲಾಗಿದೆ. ಇವರ ಸ್ಥಾನಕ್ಕೆ ಸಹಾಯಕ ಯೋಜನಾ ನಿರ್ದೇಶಕ ಪಿ.ದಿವಾಕರ್ ಅವರನ್ನು ನೇಮಿಸಲಾಗಿದೆ.
ಸದ್ರಿ ಕಾಮಗಾರಿ ಪೂರ್ಣಗೊಳಿಸದೇ, ಸಂಬಂದಪಟ್ಟ ಇಲಾಖೆಗೆ ಹಸ್ತಾಂತರ ಮಾಡದೇ ಉದ್ಘಾಟನಾ ಕಾರ್ಯಕ್ರಮವನ್ನು ಮಾಡಿರುವುದರಿಂದ ನಿರ್ಮಾಣದ ಗುಣಮಟ್ಟದ ಬಗ್ಗೆ, ಮತ್ತು ಧಾರ್ಮಿಕ ಭಾವನೆಗಳಿಗೆ ಅಪಚಾರವಾಗುತ್ತಿರುವ ಬಗ್ಗೆ, ಪರ/ವಿರೋಧ ಚರ್ಚೆಗಳು ನಡೆಯುತ್ತಿರುವ ಕುರಿತು ವಿವಿಧ ಪತ್ರಿಕೆ /ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದು ಕಾಮಗಾರಿಯ ಬಗೆ ಪೊಲೀಸ್ ಇಲಾಖೆ ಮತ್ತು ನ್ಯಾಯಮೂರ್ತಿ ಹೆಚ್ ಎನ್ ನಾಗಮೋಹನ್ ದಾಸ್ ವಿಚಾರಣಾ ಆಯೋಗದಲ್ಲಿ ತನಿಖಾ ಹಂತದಲ್ಲಿದ್ದು ಹಾಗೂ ಮಾನ್ಯ ಉಚ್ಚ ನ್ಯಾಯಲಯದಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ತನಿಖೆಗೆ ಅಡ್ಡಿ ಉಂಟು ಮಾಡುವ ಅಥವಾ ತನಿಖೆಯಲ್ಲಿ ಹಸ್ತಾಕ್ಷೇಪ ಮಾಡುವ ಸಾಧ್ಯತೆಗಳಿರುವುದರಿಂದ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಇವರನ್ನು ಅಮಾನತುಗೊಳಿಸಿ ಉಡುಪಿ ಜಿಲ್ಲಾಧಿಕಾರಿ ಡಾಕ್ಟರ್ ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ. ಇವರ ಸ್ಥಾನಕ್ಕೆ ದಿವಾಕರ ಪಿ. ಸಹಾಯಕ ಯೋಜನಾ ನಿರ್ದೇಶಕರು, ನಿರ್ಮಿತಿ ಕೇಂದ್ರ ಉಡುಪಿ ಇವರನ್ನು ಯೋಜನಾ ನಿರ್ದೇಶಕರು, ನಿರ್ಮಿತಿ ಕೇಂದ್ರ ಉಡುಪಿ ಹುದ್ದೆಗೆ ಹೆಚ್ಚುವರಿ ಪ್ರಭಾರ ನೀಡಿ ಆದೇಶಿಸಿದೆ. ಕೆಲ ದಿನಗಳ ಹಿಂದೆ ವಿಧಾನಸೌಧದ ಮುಂಭಾಗದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಕಾರ್ಕಳ ಶಾಸಕ ಸುನಿಲ್ ಕುಮಾರ್ ವಿರುದ್ದ ಪ್ರತಿಭಟನೆ ನಡೆಸಲಾಗಿತ್ತು.