ಪರಿಶ್ರಮ ಪಟ್ಟರೆ ಗೆಲುವು ಸಾಧ್ಯ
ಬಾಗಲಕೋಟೆ(ಕುಳಗೇರಿ ಕ್ರಾಸ್): ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ. ಆಟಗಾರರು ಸೋಲಿನಿಂದ ಎದೆಗುಂದದೆ ನಿರಂತರ ಪರಿಶ್ರಮ ಪಟ್ಟರೆ ಗೆಲುವು ಸಾಧ್ಯ ಎಂದು ಜಿಲ್ಲಾಧಿಕಾರಿ ಕೆಎಂ ಜಾನಕಿ ಹೇಳಿದರು.
ಬಾಗಲಕೋಟೆ ಜಿಲ್ಲೆ ಚಿರ್ಲಕೊಪ್ಪ ಜವಾಹರ ನವೋದಯ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ೩೨ನೇ ವಲಯಮಟ್ಟ ಖೋ..ಖೋ.. ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಕ್ರೀಡೆಗೆ ಪ್ರಾಮುಖ್ಯತೆ ನೀಡುವ ಮೂಲಕ ಒಳ್ಳೆಯ ಕ್ರೀಡಾಪಟುವಾಗಿ ಹೊರಹೊಮ್ಮಬೇಕು ಎಂದು ಶುಭಹಾರೈಸಿದರು.
ಬಾದಾಮಿ ತಹಸಿಲ್ದಾರ ಜೆ.ಬಿ. ಮಜ್ಜಗಿ ಮಾತನಾಡಿ ಕ್ರೀಡಾಪಟುಗಳು ಕ್ರೀಡೆಯಲ್ಲಿ ಸ್ಪರ್ಧಿಸುವ ಮನೋಭಾವನೆ ಹೊಂದಿರಬೇಕು ಕ್ರೀಡಾಪಟುಗಳು ಉತ್ತಮ ಕ್ರೀಡಾ ಪ್ರದರ್ಶನ ಮಾಡಬೇಕು ಎಂದು ಹೇಳಿದರು.
ವಿದ್ಯಾಲಯದ ಪ್ರಾಚಾರ್ಯ ಆಸಾರಿ, ದೈಹಿಕ ಶಿಕ್ಷಕ ಎಂ.ಬಿ. ಮಠಪತಿ, ಆನಂದ ಕಾಂಬಳೆ, ಅನುಬಾಲನ್, ರಾಜೇಶ್ವರಿ, ಸಂಜು ಇಂಜೆಲ್, ಬಸವರಾಜ ಉಪಸ್ಥಿತರಿದ್ದರು. ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲಿಕರಣ ಅಧಿಕಾರಿ ಮಹಾಂತೇಶ ಕುರಿ ಪ್ರತಿಜ್ಞಾವಿಧಿ ಭೋಧಿಸಿದರು. ಮಹಾಂತೇಶ ಪಾಟೀಲ, ನ್ಯಾಮದೇವ ಬಿಲ್ಲಾರ ಇದ್ದರು.
ಹೈದರಾಬಾದ್ ವಲಯದಲ್ಲಿ ಬರುವ ಕರ್ನಾಟಕ, ಆಂಧ್ರ, ಕೇರಳ, ತೆಲಂಗಾಣ ಹೀಗೆ ಒಟ್ಟು ನಾಲ್ಕು ರಾಜ್ಯಗಳ ಒಟ್ಟು 673 ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. 30 ಜನ ತಿರ್ಪುಗಾರರು ಇದ್ದು ಮೂರು ದಿನಗಳ ಕಾಲ ಈ ಕ್ರೀಡಾಕೂಟ ನಡೆಯಲಿದೆ.