For the best experience, open
https://m.samyuktakarnataka.in
on your mobile browser.

ಪರಿಸರಸ್ನೇಹಿ ಹಸಿರು ಕೃಷಿಗಾಗಿ ನ್ಯಾನೊ ಗೊಬ್ಬರಗಳು

12:08 PM Nov 11, 2023 IST | Samyukta Karnataka
ಪರಿಸರಸ್ನೇಹಿ ಹಸಿರು ಕೃಷಿಗಾಗಿ ನ್ಯಾನೊ ಗೊಬ್ಬರಗಳು

ನಮ್ಮ ದೇಶದ ೧೪೦ ಕೋಟಿ ಬೃಹತ್ ಜನಸಂಖ್ಯೆಗೆ ಸುಸ್ಥಿರವಾಗಿ ಆಹಾರ ಒದಗಿಸಬೇಕಾದರೆ ಆಹಾರ ಉತ್ಪಾದನೆ ಹೆಚ್ಚಿಸುವುದು ನಿರ್ಣಾಯಕವಾಗಿದೆ. ಈ ನಿಟ್ಟಿನಲ್ಲಿ ಕೃಷಿ ಚಟುವಟಿಕೆ ಹೆಚ್ಚಿಸಬೇಕಾದರೆ, ಭೂಮಿಯ ಫಲವತ್ತತೆ ಮತ್ತು ಬೆಳೆಗಳ ಇಳುವರಿ ಸಮೃದ್ಧವಾಗಿಸಲು ರಸಗೊಬ್ಬರವು ನಿರ್ಣಾಯಕ ವಸ್ತುಗಳಲ್ಲಿ ಒಂದಾಗಿದೆ. ಕಳೆದ ೯ ವರ್ಷಗಳಲ್ಲಿ ಸಾರಜನಕ(ನೈಟ್ರೋಜನ್) ಮೂಲಕ್ಕೆ ಪ್ರಮುಖ ಗೊಬ್ಬರವಾದ ಯೂರಿಯಾದ ಉತ್ಪಾದನಾ ಸಾಮರ್ಥ್ಯ ಹೆಚ್ಚಳದ ಪ್ರಯತ್ನಗಳು ಫಲ ನೀಡಿವೆ. ೨೦೧೩-೧೪ರಲ್ಲಿ ಇದ್ದ ವಾರ್ಷಿಕ ೨೦೭.೫೪ ಲಕ್ಷ ಮೆಟ್ರಿಕ್ ಟನ್ ಯೂರಿಯಾ ಉತ್ಪಾದನೆಯು ಇದೀಗ ವಾರ್ಷಿಕ ೨೮೩.೭೪ ಲಕ್ಷ ಮೆಟ್ರಿಕ್ ಟನ್‌ಗೆ ಏರಿಕೆ ಕಂಡಿದೆ. ಅದೇ ರೀತಿ, ರಸಗೊಬ್ಬರ ಉದ್ಯಮವು(ಸಾರ್ವಜನಿಕ, ಸಹಕಾರಿ ಮತ್ತು ಖಾಸಗಿ ರಂಗ ಒಳಗೊಂಡಂತೆ ಫಾಸ್ಫೇಟ್ (ಪಿ) ಮತ್ತು ಪೊಟ್ಯಾಶ್ (ಕೆ) ಪೋಷಕಾಂಶಗಳನ್ನು ಒಳಗೊಂಡ ರಸಗೊಬ್ಬರಗಳ ಉತ್ಪಾದನೆಯನ್ನು ಪ್ರಮುಖವಾಗಿ ಮತ್ತು ಸಕ್ರಿಯವಾಗಿ ಉತ್ತೇಜಿಸುತ್ತಿದೆ. ಸುಸ್ಥಿರ ಕೃಷಿಗಾಗಿ ನೈಟ್ರೋಜನ್ ಫಾಸ್ಫರಸ್ ಮತ್ತು ಪೊಟ್ಯಾಶಿಯಂ(ಎನ್‌ಪಿಕೆ) ರಸಗೊಬ್ಬರಗಳ ಸಮತೋಲಿತ ಬಳಕೆ ಅತ್ಯಗತ್ಯ. ಆದಾಗ್ಯೂ, ಬೆಳೆಯ ಉತ್ಪಾದಕತೆ ಹೆಚ್ಚಿಸುವ ಮತ್ತು ನಿರಂತರ ಆಧಾರದ ಮೇಲೆ ಹೆಚ್ಚುತ್ತಿರುವ ಜನಸಂಖ್ಯೆಯನ್ನು ಪೋಷಿಸುವ ಅನ್ವೇಷಣೆಯಲ್ಲಿ, ರಸಗೊಬ್ಬರಗಳ ಅತಿಯಾದ ಮತ್ತು ಅಸಮತೋಲನದ ಬಳಕೆಯಿಂದಾಗಿ ಮಣ್ಣಿನ ಫಲವತ್ತತೆ, ಮಣ್ಣು ಮತ್ತು ನೀರಿನ ಸಂರಕ್ಷಣೆಯ ಪ್ರಮುಖ ವಿಚಾರದಲ್ಲಿ ರಾಜಿಯಾಗುವಂತಾಗಿದೆ. ಇದರ ಫಲವಾಗಿ ಮಣ್ಣು ರಾಸಾಯನಿಕಮುಕ್ತ ಪೋಷಕಾಂಶಗಳನ್ನು ಬಯಸುತ್ತಿದೆ, ನೀರಿಗಾಗಿ ಹಾತೊರೆಯುತ್ತಿದೆ. ಅದು ಮಣ್ಣಿನ ಫಲವತ್ತತೆಯ ಸ್ಥಿತಿಯಲ್ಲಿ ಕಾಣುತ್ತಿದೆ. ಇದು ರಸಗೊಬ್ಬರ ಬಳಕೆಯ ದಕ್ಷತೆ ಹೆಚ್ಚಿಸಲು, ಮಣ್ಣು ಮತ್ತು ಪರಿಸರ ಉಳಿಸಲು ನವೀನ ತಂತ್ರಜ್ಞಾನದ ಅವಶ್ಯಕತೆಗೆ ಕಾರಣವಾಗಿದೆ. ಹೊಸ ಯುಗದ ನ್ಯಾನೊ ತಂತ್ರಜ್ಞಾನವು ಈ ಸಮಸ್ಯೆ ಪರಿಹರಿಸಲು ಮತ್ತು ಕಡಿಮೆ ರಸಗೊಬ್ಬರ ಬಳಕೆಯಿಂದ ಹೆಚ್ಚು ಉತ್ಪಾದಿಸಲು ಅಂದರೆ ಕಡಿಮೆ ಪರಿಸರ ಮಾಲಿನ್ಯದ ಹೆಜ್ಜೆಗುರುತುಗಳೊಂದಿಗೆ ರಸಗೊಬ್ಬರ ಬಳಕೆಯ ದಕ್ಷತೆ ಹೆಚ್ಚಿಸಲು ನವೀನ ಅಥವಾ ಹೊಸತನದ ತಂತ್ರಜ್ಞಾನ ಉತ್ತರವಾಗಿ ಬಂದಿದೆ.
ಮೇಕ್ ಇನ್ ಇಂಡಿಯಾ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸ್ಪಷ್ಟವಾದ ಕರೆಯಿಂದ ಸ್ಫೂರ್ತಿ ಪಡೆದ ಭಾರತೀಯ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳು ನ್ಯಾನೊ ಯೂರಿಯಾ(ದ್ರವ ರೂಪ) ಅಭಿವೃದ್ಧಿಪಡಿಸಿದ್ದಾರೆ. ಇದು ದೇಶೀಯವಾಗಿ ಅಭಿವೃದ್ಧಿಪಡಿಸಿದ ಮೊದಲ ನ್ಯಾನೊ ಗೊಬ್ಬರವಾಗಿದೆ. ನ್ಯಾನೊ ಯೂರಿಯಾವನ್ನು ೨೦೨೧ರಲ್ಲಿ ರಸಗೊಬ್ಬರ ನಿಯಂತ್ರಣ ಆದೇಶದ ಅಡಿ, ತೀವ್ರ ತರವಾದ ಕ್ಷೇತ್ರ ಪ್ರಯೋಗ ನಡೆಸಿದ ನಂತರ ಮತ್ತು ಕಟ್ಟುನಿಟ್ಟಾದ ಜೈವಿಕ ದಕ್ಷತೆ ಮತ್ತು ಜೈವಿಕ ಸುರಕ್ಷತೆ ಪರೀಕ್ಷಾ ಕಾರ್ಯ ವಿಧಾನಗಳನ್ನು ಅಂಗೀಕರಿಸಿದ ನಂತರ ಜೈವಿಕ ತಂತ್ರಜ್ಞಾನ ಇಲಾಖೆಯ "ನ್ಯಾನೊ ಅಗ್ರಿ-ಇನ್‌ಪುಟ್(ಕೃಷಿ ಉತ್ಪಾದನೆ) ಮಾರ್ಗಸೂಚಿ" ಪ್ರಕಾರವೇ ಬಳಕೆಗೆ ಸೂಚಿಸಲಾಗುತ್ತಿದೆ. ರಾಷ್ಟçದ ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆಯನ್ನು ಶಾಶ್ವತವಾಗಿ ಖಾತ್ರಿಪಡಿಸಲು ಅಮೃತ ಕಾಲದ ಸಮಯದಲ್ಲಿ ಆತ್ಮನಿರ್ಭರ್ ಕೃಷಿ' ಮತ್ತುಆತ್ಮನಿರ್ಭರ್ ಭಾರತ್' ಅಡಿ ಕೈಗೊಂಡ ಉಪಕ್ರಮಕ್ಕೆ ಇದು ಒಂದು ಪರಿಪೂರ್ಣ ಉದಾಹರಣೆಯಾಗಿದೆ. ಸದ್ಯಕ್ಕೆ, ಗುಜರಾತ್‌ನ ಕಲೋಲ್, ಫುಲ್‌ಪುರ್ ಮತ್ತು ಉತ್ತರ ಪ್ರದೇಶದ ಅಯೋನ್ಲಾದಲ್ಲಿ ೧೭ ಕೋಟಿ ಬಾಟಲಿಗಳ ಉತ್ಪಾದನಾ ಸಾಮರ್ಥ್ಯದ ನ್ಯಾನೊ ಯೂರಿಯಾ ಘಟಕಗಳನ್ನು ಸ್ಥಾಪಿಸಲಾಗಿದೆ. ೨೦೨೫ರ ವೇಳೆಗೆ, ನಂಗಲ್, ಟ್ರಾಂಬೆ, ಬೆಂಗಳೂರು, ದಿಯೋಗರ್, ಗುವಾಹಟಿ ಮತ್ತು ಇತರ ಹಲವಾರು ಸ್ಥಳಗಳಲ್ಲಿ ಇತರ ನ್ಯಾನೊ ಸ್ಥಾವರಗಳು ತಲೆ ಎತ್ತಲಿವೆ. ಇದು ನ್ಯಾನೊ ಯೂರಿಯಾ ಉತ್ಪಾದನಾ ಸಾಮರ್ಥ್ಯವನ್ನು ವರ್ಷಕ್ಕೆ ೪೪ ಕೋಟಿ ಬಾಟಲಿಗಳಿಗೆ ಹೆಚ್ಚಿಸುತ್ತದೆ. ಇದು ೧೯೫ ಲಕ್ಷ ಮೆಟ್ರಿಕ್ ಟನ್‌ಗಿಂತ ಹೆಚ್ಚಿನ ಸಾಂಪ್ರದಾಯಿಕ ಯೂರಿಯಾಕ್ಕೆ ಸಮನಾಗಿರುತ್ತದೆ.
ನ್ಯಾನೊ ಯೂರಿಯಾದ ಬೆಲೆ ಸಾಂಪ್ರದಾಯಿಕ ಯೂರಿಯಾ ಚೀಲಕ್ಕಿಂತ ೧೬% ಕಡಿಮೆ ಇದೆ, ಇದನ್ನು ರೈತರು ತಮ್ಮ ಹೊಲಗಳಿಗೆ ಸುಲಭವಾಗಿ ಸಾಗಿಸಬಹುದು, ಹೆಚ್ಚಿನ ನ್ಯಾನೊ ಯೂರಿಯಾ ಬಾಟಲಿಗಳು ಮಾರಾಟವಾಗುತ್ತಿರುವುದನ್ನು ಹೆಚ್ಚಿನ ಯುವ ರೈತರು ಶ್ಲಾಘಿಸಿದ್ದಾರೆ. ನ್ಯಾನೊ ಯೂರಿಯಾವು ಸಾಗಣೆ ಮತ್ತು ಶೇಖರಣಾ ವೆಚ್ಚದ ವಿಷಯದಲ್ಲಿ ಪ್ರಯೋಜನ ಹೊಂದಿದೆ. ಸಾಂಪ್ರದಾಯಿಕ ರಸಗೊಬ್ಬರ ಸಾಗಿಸುವ ಒಂದು ವಾಹನ ೬೯,೬೦೦ ಬ್ಯಾಗ್‌ಗಳ ಸಾಂಪ್ರದಾಯಿಕ ಯೂರಿಯಾವನ್ನು ಹೊತ್ತೊಯ್ದರೆ, ಅದಕ್ಕೆ ಪರ್ಯಾಯವಾಗಿ ಅಥವಾ ಬದಲಾಗಿ ಅದೇ ವಾಹನ ೨೯ ಲಕ್ಷ ಬಾಟಲಿಗಳ ನ್ಯಾನೊ ಯೂರಿಯಾ ಬಾಟಲಿಗಳನ್ನು ಸಾಗಿಸುತ್ತದೆ. ಅದೇ ರೀತಿ, ೨೪ ಮೆಟ್ರಿಕ್ ಟನ್ ಸಾಮರ್ಥ್ಯದ ಒಂದು ಟ್ರಕ್ ೫೩೩ ಯೂರಿಯಾ ಬ್ಯಾಗ್‌ಗಳನ್ನು ಸಾಗಿಸಿದರೆ, ಅದೇ ಟ್ರಕ್ ೩೦,೦೦೦ ನ್ಯಾನೊ ಯೂರಿಯಾ ಬಾಟಲಿಗಳನ್ನು ಸಾಗಿಸುತ್ತದೆ. ನ್ಯಾನೊ ಯೂರಿಯಾ ಉತ್ಪಾದನಾ ಘಟಕವು ಬಂಡವಾಳ ವೆಚ್ಚವನ್ನು ಉಳಿಸುತ್ತದೆ. ಇಂಧನ ಬಳಕೆ ಮತ್ತು ಕಡಿಮೆ ಇಂಗಾಲ ಹೊರಸೂಸುವಿಕೆಯ ವಿಷಯದಲ್ಲಿ ಸಾಂಪ್ರದಾಯಿಕ ಯೂರಿಯಾ ಘಟಕಗಳಿಗಿಂತ ಹೆಚ್ಚಿನ ಪ್ರಯೋಜನಗಳನ್ನು ಹೊಂದಿದೆ. ನ್ಯಾನೊ ಯೂರಿಯಾ (ದ್ರವ) ಹೆಚ್ಚಿನ ಪೋಷಕಾಂಶಗಳ ಬಳಕೆಯ ದಕ್ಷತೆಯನ್ನು ಪ್ರದರ್ಶಿಸುತ್ತದೆ. ಅದರ ಅಳವಡಿಕೆಯು ಹೆಚ್ಚಿನ ಕೃಷಿ ಉತ್ಪಾದಕತೆ, ಉತ್ಪನ್ನಗಳ ಗುಣಮಟ್ಟ ಮತ್ತು ರೈತರಿಗೆ ಲಾಭದಾಯಕತೆ ತರುತ್ತದೆ. ಮಣ್ಣು, ನೀರು ಮತ್ತು ವಾಯುಮಾಲಿನ್ಯ, ಸಾಗಣೆ ಮತ್ತು ದಾಸ್ತಾನು(ವೇರ್ ಹೌಸಿಂಗ್) ವೆಚ್ಚ ಇಳಿಕೆಗೆ ಕಾರಣವಾಗುತ್ತದೆ. ೨೦೨೧ರ ಮುಂಗಾರು ಹಂಗಾಮಿನಲ್ಲಿ ಭಾರತೀಯ ಕೃಷಿ ಸಂಶೋಧನಾ ಮಂಡಳಿ(ಐಸಿಎಆರ್)ಯ ನ್ಯಾನೊ ಯೂರಿಯಾದೊಂದಿಗೆ ೨೦ ಸ್ಥಳಗಳಲ್ಲಿ ಅಕ್ಕಿ, ಜೋಳ, ಫಿಂಗರ್ ರಾಗಿ, ಪೇರಲ್ ರಾಗಿ, ಶುಂಠಿ ಬೆಳೆಯ ಇಳುವರಿ ಪ್ರಯೋಜನಗಳನ್ನು ಸೂಚಿಸಿದೆ, ರೈತರಿಗೆ ೨೫-೫೦% ವೆಚ್ಚ ಉಳಿತಾಯವಾಗಿದೆ.
ಕಳೆದ ೩ ಹಂಗಾಮುಗಳಲ್ಲಿ ೧೫೦ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸಾಂಪ್ರದಾಯಿಕ ಯೂರಿಯಾ ಬಳಕೆ ಪ್ರಮಾಣಕ್ಕೆ ಪರ್ಯಾಯವಾಗಿ ೧೯೨ ಲಕ್ಷ ರೈತರು ನ್ಯಾನೊ ಯೂರಿಯಾ ದ್ರವದ ೬.೫ ಕೋಟಿ ಬಾಟಲಿಗಳನ್ನು (ತಲಾ ೫೦೦ ಮಿಲಿ) ಬಳಸಿದ್ದಾರೆ. ನ್ಯಾನೊ ಯೂರಿಯಾ ಬಳಕೆಯೊಂದಿಗೆ ರೈತರ ಜಮೀನುಗಳಲ್ಲಿ ಬಹಳ ಉತ್ತೇಜಕ ಫಲಿತಾಂಶಗಳು ಸಿಕ್ಕಿವೆ. ೨೦೨೧-೨೨ಕ್ಕೆ ಹೋಲಿಸಿದರೆ ೨೦೨೨-೨೩ರ ಅವಧಿಯಲ್ಲಿ, ನ್ಯಾನೊ ಯೂರಿಯಾ ಮಾರಾಟವು ೫೫% ಹೆಚ್ಚಾಗಿದೆ.
ಆದರೆ ಸಾಂಪ್ರದಾಯಿಕ ಯೂರಿಯಾ ೪% ಕನಿಷ್ಠ ಬೆಳವಣಿಗೆ ದಾಖಲಿಸಿದೆ. ೨೦೨೨-೨೩ ರಲ್ಲಿ ಪಂಜಾಬ್, ಕೇರಳ, ತಮಿಳುನಾಡು, ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಜಾರ್ಖಂಡ್ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಸಾಂಪ್ರದಾಯಿಕ ಯೂರಿಯಾದ ಬಳಕೆಯಲ್ಲಿ ಇಳಿಕೆ ಕಂಡುಬಂದಿದೆ. ಆದರೆ ಅದಕ್ಕೆ ಪರ್ಯಾಯವಾಗಿ, ನ್ಯಾನೊ ಯೂರಿಯಾ ಬಳಕೆಯಲ್ಲಿ ಹೆಚ್ಚಳ ಕಂಡುಬಂದಿದೆ. ಉದಾಹರಣೆಗೆ, ೨೦೨೧-೨೨ಕ್ಕೆ ಹೋಲಿಸಿದರೆ, ೨೦೨೨-೨೩ರಲ್ಲಿ ನ್ಯಾನೊ ಯೂರಿ ಬಳಕೆ ಪಂಜಾಬ್‌ನಲ್ಲಿ ೨೭%, ಕೇರಳದಲ್ಲಿ ೨೦%, ಉತ್ತರಾಖಂಡದಲ್ಲಿ ೬೭%, ಜಮ್ಮು-ಕಾಶ್ಮೀರದಲ್ಲಿ ೪೯.೬% ಹೆಚ್ಚಾಗಿದೆ. ಅದೇ ರೀತಿ, ಕಳೆದ ೨೦೨೨ಕ್ಕಿಂತ ೨೦೨೩ರ ಮುಂಗಾರು ಹಂಗಾಮಿನಲ್ಲಿ ನ್ಯಾನೊ ಯೂರಿಯಾದ ಮಾರಾಟ ಹೆಚ್ಚಾಗಿದೆ. ಆದರೆ ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ ರಾಜ್ಯಗಳಲ್ಲಿ ಬೇವು ಲೇಪಿತ ಯೂರಿಯಾ ಮಾರಾಟ ಕಡಿಮೆಯಾಗಿದೆ. ೨೦೨೧-೨೨ಕ್ಕೆ ಹೋಲಿಸಿದರೆ ೨೦೨೨-೨೩ರ ಅವಧಿಯಲ್ಲಿ ಒಟ್ಟು ೧೮೯ ಜಿಲ್ಲೆಗಳು ಸಾಂಪ್ರದಾಯಿಕ ಯೂರಿಯಾ ಬಳಕೆಯಲ್ಲಿ ಇಳಿಕೆ ತೋರಿಸಿವೆ.
ಇವುಗಳಲ್ಲಿ ೧೬ ರಾಜ್ಯಗಳ ೧೩೦ ಜಿಲ್ಲೆಗಳು, ಸಾಂಪ್ರದಾಯಿಕ ಯೂರಿಯಾ ಬಳಕೆಯಲ್ಲಿ ಸರಾಸರಿ ೧೨% ಕಡಿತವಾಗಿದೆ. ಹಾಗೆಯೇ ನ್ಯಾನೊ ಯೂರಿಯಾ ಬಳಕೆಯಲ್ಲಿ ೭೬% ಹೆಚ್ಚಳ ದಾಖಲಿಸಿದೆ. ೨೦೨೨ರ ಮುಂಗಾರು ಹಂಗಾಮಿಗೆ ಹೋಲಿಸಿದರೆ ೧೧೩ ಜಿಲ್ಲೆಗಳಲ್ಲಿ ನ್ಯಾನೊ ಯೂರಿಯಾ ಬಳಕೆಯಿಂದಾಗಿ ೨೦೨೩ರ ಮುಂಗಾರು ಹಂಗಾಮಿನಲ್ಲಿ ಸಾಂಪ್ರದಾಯಿಕ ಯೂರಿಯಾ ಮಾರಾಟದಲ್ಲಿ ಇಳಿಕೆ ಕಂಡುಬಂದಿದೆ.
ಇತ್ತೀಚೆಗೆ ಸೇರಿಸಲಾದ `ನ್ಯಾನೊ ಡಿಎಪಿ' ರಸಗೊಬ್ಬರವು ಬೆಳೆ ಪೋಷಣೆಯಲ್ಲಿ ಮತ್ತೊಂದು ಗರಿಯಾಗಿದೆ, ಇದು ಸಾಂಪ್ರದಾಯಿಕ ಡಿಎಪಿಯ ಬಳಕೆಯನ್ನು ಕಡಿಮೆ ಮಾಡುತ್ತದೆ, ಇದು ಅಂತಿಮವಾಗಿ ಆಮದು ಕಡಿಮೆಯಾಗಲು ಕಾರಣವಾಗುತ್ತದೆ.
ನ್ಯಾನೊ ಎನ್‌ಪಿಕೆ, ನ್ಯಾನೊ ಜಿಂಕ್, ನ್ಯಾನೊ ಕಾಪರ್, ನ್ಯಾನೊ ಬೋರಾನ್, ನ್ಯಾನೊ ಸಲ್ಫರ್ ಇತ್ಯಾದಿಗಳ ಅಭಿವೃದ್ಧಿಗೆ ರಸಗೊಬ್ಬರ ವಲಯದಲ್ಲಿ ನಡೆಯುತ್ತಿರುವ ಹೆಚ್ಚಿನ ಸಂಶೋಧನೆಯು ಭವಿಷ್ಯದಲ್ಲಿ ಪರಿಸರಸ್ನೇಹಿ ಸುಸ್ಥಿರ ಕೃಷಿಗೆ ಕಾರಣವಾಗಲಿದೆ.
ಪರ್ಯಾಯ ರಸಗೊಬ್ಬರಗಳು ಮತ್ತು ರಾಸಾಯನಿಕ ಗೊಬ್ಬರಗಳ ಸಮತೋಲಿತ ಬಳಕೆ ಉತ್ತೇಜಿಸಲು ಪ್ರಾರಂಭಿಸಲಾದ ಭೂಮಿತಾಯಿಯ ಮರುಸ್ಥಾಪನೆ, ಜಾಗೃತಿ, ಪೋಷಣೆ ಮತ್ತು ಸುಧಾರಣೆ(ಪಿಎಂಪ್ರಣಾಮ್)ಯ ಪ್ರಧಾನ ಮಂತ್ರಿಗಳ ಕಾರ್ಯಕ್ರಮದ ಉದ್ದೇಶ ಹೆಚ್ಚಿಸಲು ಮತ್ತು ಗುರಿ ಸಾಧಿಸಲು ನ್ಯಾನೊ ರಸಗೊಬ್ಬರಗಳ ಬಳಕೆ ಸಹಾಯ ಮಾಡುತ್ತದೆ. ಹಸಿರು ಮನೆ ಅನಿಲ ಹೊರಸೂಸುವಿಕೆಯ ಕಡಿತ, ಜನರ ಸಬ್ಸಿಡಿ, ಸಾರಿಗೆ ಮತ್ತು ಇತರ ವಿವಿಧ ವೆಚ್ಚಗಳ ಉಳಿತಾಯದ ವಿಷಯದ ಒಟ್ಟಾರೆ ಪ್ರಯೋಜನಗಳು ಅಂತಿಮವಾಗಿ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುತ್ತವೆ.
ಇದಲ್ಲದೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಮತ್ತು ರೈತ ಕ್ಷೇತ್ರ ಶಾಲೆಗಳ ಅಡಿ, ಭಾರತೀಯ ಕೃಷಿ ಸಂಶೋಧನಾ ಮಂಡಳಿ(ಐಸಿಎಆರ್), ಕೃಷಿ ವಿಜ್ಞಾನ ಕೇಂದ್ರಗಳು(ಕೆವಿಕೆಗಳು), ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ (ಎಟಿಎಂಎ), ಸ್ವಸಹಾಯ ಗುಂಪುಗಳಂತಹ ಅಸ್ತಿತ್ವದಲ್ಲಿರುವ ಸಂಸ್ಥೆಗಳನ್ನು ಬಳಸಿಕೊಂಡು ಬೃಹತ್ ಜಾಗೃತಿ ಅಭಿಯಾನಗಳು ಮತ್ತು ರೈತರ ಸಂಪರ್ಕ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಕೃಷಿಕರಿಗೆ ಹೆಚ್ಚಿನ ಅರಿವು ಮೂಡಿಸುವುದರೊಂದಿಗೆ, ಉತ್ತಮವಾಗಿ ಅಭಿವೃದ್ಧಿಪಡಿಸಿದ ಡ್ರೋನ್ ಔಷಧ ಸಿಂಪಡಣೆ ಪರಿಸರ ವ್ಯವಸ್ಥೆ ಮತ್ತು ಬೆಳೆ ಆಧಾರಿತ ಔಷಧ ಸಿಂಪಡಣೆಗೆ ಯಂತ್ರಗಳು, ನ್ಯಾನೊ ಗೊಬ್ಬರಗಳ ಬಳಕೆಯು ಏಕಕಾಲದಲ್ಲಿ ಬೃಹತ್ ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ನಿಯಂತ್ರಿಸಿ, ಹೆಚ್ಚಿನ ಬೆಳೆ ಬೆಳೆಯುವ ಬೆಳವಣಿಗೆಗಳನ್ನು ಕಾಣುವ ನಿರೀಕ್ಷೆಯಿದೆ.
ನ್ಯಾನೊ ಯೂರಿಯಾ ಮತ್ತು ಇತರೆ ನ್ಯಾನೊ ರಸಗೊಬ್ಬರಗಳ ವ್ಯಾಪಕ ಅಳವಡಿಕೆಯು ರೈತರ ಲಾಭದಾಯಕತೆಗೆ ಕಾರಣವಾಗುತ್ತದೆ, ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (ಎಸ್‌ಡಿಜಿ) ಪರಿಹರಿಸುತ್ತದೆ. ದೇಶೀಯವಾಗಿ ಅಭಿವೃದ್ಧಿಪಡಿಸಿದ ನ್ಯಾನೊ ಗೊಬ್ಬರಗಳ ಸಮಗ್ರ ಪ್ರಭಾವವನ್ನು ಎಲ್ಲಾ ಪಾಲುದಾರರು ಒಗ್ಗಟ್ಟಿನಿಂದ ಅರ್ಥ ಮಾಡಿಕೊಳ್ಳುವ ಮತ್ತು ಪ್ರೋತ್ಸಾಹಿಸುವ ಸಮಯ ಇದಾಗಿದೆ. ರೈತರು ಬೆಳೆ ಉತ್ಪಾದನಾ ಕಾರ್ಯತಂತ್ರಗಳಲ್ಲಿ ನ್ಯಾನೊ ಗೊಬ್ಬರಗಳ ಸಂಯೋಜನೆಯು ಪರಿಸರ ಸ್ನೇಹಿ ಹಸಿರು ಕೃಷಿ ಮತ್ತು ಆಹಾರ ಮತ್ತು ಪೌಷ್ಟಿಕಾಂಶ ಭದ್ರತೆಯನ್ನು "ಆರೋಗ್ಯಕರ ಮತ್ತು ಸದೃಢ ಭಾರತ"ಕ್ಕಾಗಿ ಬಳಸಿಕೊಳ್ಳುವಲ್ಲಿ ನೇರವಾಗಿ ಸಹಾಯ ಮಾಡುತ್ತದೆ.