ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಪರಿಸರ ನಾಶ ತಡೆಗೆ ದೇವರ ಕಾಡು

10:57 AM Jun 05, 2023 IST | Samyukta Karnataka

ಕವಿತಾ ಪ್ರಶಾಂತ್
ಶಿವಮೊಗ್ಗ: ಪ್ರಪಂಚದ ಕೆಲವೆ ದೇಶಗಳಲ್ಲಿ ಪರಿಸರವನ್ನು ದೇವರೆಂದು ಪೂಜಿಸುವ ಪರಿಪಾಠವಿದೆ. ಈ ಪೈಕಿ ಭಾರತೀಯರ ನಂಬಿಕೆಗಳು ವಿಶಿಷ್ಟವಾಗಿವೆ. ಪ್ರಕೃತಿಯನ್ನೆ ದೇವರೆಂದು ಕಾಣುವ, ಪೂಜಿಸುವ ಜನರ ಈ ಮನಸ್ಥಿತಿ ಇಂದಿಗೂ ಅರಣ್ಯ ಉಳಿವಿಗೆ ಕಾರಣವಾಗಿದೆ.
ಪಶ್ಚಿಮಘಟ್ಟ ವ್ಯಾಪ್ತಿಯ ಮಲೆನಾಡು ಪ್ರಾಕೃತಿಕವಾಗಿ ಸಮೃದ್ಧವಾಗಿದೆ. ಹಾಗಾಗಿ ಇಲ್ಲಿನ ಆಹಾರ, ಆಚರಣೆ, ಪದ್ಧತಿ ವಿಶೇಷ ಹಾಗೂ ವಿಭಿನ್ನ. ಮಲೆನಾಡಿನ ಹಲವು ಭಾಗಗಳಲ್ಲಿ ಇಂದಿಗೂ `ದೇವರ ಕಾಡು' ಹೆಸರಿನಲ್ಲಿ ಅರಣ್ಯ ಸಂರಕ್ಷಣೆ ಸದ್ದಿಲ್ಲದೇ ನಡೆದಿದೆ. ಪರಿಸರ ಬಗೆಗಿನ ಸ್ಥಳೀಯ ವಾಸಿಗಳ ಆಸ್ಥೆ, ಪ್ರೀತಿ, ಆಚರಣೆ, ಅವಿನಾಭಾವ ಸಂಬಂಧ, ಕಾಡಿನ ಸಂರಕ್ಷಣೆಯೊಂದಿಗೆ ಸುಸ್ಥಿರ ಬದುಕು ಕಟ್ಟಿಕೊಂಡಿರುವುದು ವಿಶೇಷ
ಶಿವಮೊಗ್ಗ ಜಿಲ್ಲೆಯ ಹೊಸನಗರ, ಸಾಗರ, ಸೊರಬ, ತೀರ್ಥಹಳ್ಳಿ, ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ ಭಾಗದಲ್ಲಿ ದೇವರ ಕಾಡು ಪರಿಕಲ್ಪನೆ ಅರಣ್ಯ ಸಂರಕ್ಷಣೆಗೆ ತನ್ನದೇ ಕೊಡುಗೆ ನೀಡಿದೆ. ಹಿಂದಿನ ತಲೆ ಮಾರುಗಳಿಂದ ಬಂದಿರುವ ದಟ್ಟ ಅರಣ್ಯಗಳನ್ನು ಪಾರಂಪರಿಕ ಜ್ಞಾನದ ನೆಲಗಟ್ಟಿನ ಮೂಲಕ ಉಳಿಸಿಕೊಳ್ಳುವಲ್ಲಿ ಈಗಿನ ತಲೆಮಾರು ಯಶಸ್ವಿಯಾಗಿದೆ.
ದೇವರ ಕಾಡುಗಳಲ್ಲಿ ಕಂಡು ಬರುವ ವಿನಾಶದ ಅಂಚಿನಲ್ಲಿರುವ ರಾಂಪತ್ರೆಯ ಮೂರು ಪ್ರಭೇದಗಳು, ಪಾಂಡವರ ಅಡಕೆ, ಘರ್ಜನೆ, ನೀರು ನೇರಳೆ, ಕತ್ತಲೆಕಾನ್ ಹೊಳೆಗೇರಲು, ಕಾನು ಬಲಿಗೆ, ಪಿಂಡಿ ಮುಂತಾದ ಸಸ್ಯಗಳು ೩೦೦ ಮಿಲಿಯನ್ ವರ್ಷಗಳ ಪುರಾತನವಾದ ಗೊಂಡ್ವಾನ ಕಾಲದ ಸಸ್ಯ ಪ್ರಬೇಧಗಳು ಎಂದೇ ಗುರುತಿಸಲಾಗಿದೆ. ಇದೆಲ್ಲವೂ ದೇವರ ಕಾಡುಗಳ ಮಹತ್ವಕ್ಕೆ ನಿದರ್ಶನವಾಗಿದೆ.
ಸ್ವಯಂ ಕಟ್ಟುಪಾಡುಗಳು: ತಲೆತಲಾಂತರದಿಂದ ಸ್ಥಳೀಯರೇ ಅನೇಕ ಕಟ್ಟುಪಾಡುಗಳನ್ನು ವಿಧಿಸಿಕೊಂಡಿದ್ದಾರೆ. ಆ ಮೂಲಕ ಕಾಡಿನ ಸಂರಕ್ಷಣೆ ಮಾಡುತ್ತಿದ್ದಾರೆ. ಇತ್ತೀಚೆಗೆ ಅರಣ್ಯ ಇಲಾಖೆ ಸಿಬ್ಬಂದಿಯೂ ಇದರಲ್ಲಿ ಕೈ ಜೋಡಿಸುತ್ತಿದ್ದಾರೆ. ಆದರೆ ಯಾವುದೇ ಹೊರಗಿನ ಒತ್ತಡಗಳಿಲ್ಲದೇ ಕಾನೂನಾತ್ಮಕ ವಿಚಾರಗಳ ಹೇರಿಕೆಯಿಲ್ಲದೇ ದೇವರ ಕಾಡುಗಳ ಸಂರ ಕ್ಷಣೆ ತಲೆಮಾರುಗಳಿಂದ ಬಳುವಳಿಯಾಗಿ ಸಾಗಿ ಬಂದಿರುವುದು ಸಣ್ಣ ಮಾತೇನಲ್ಲ.
ದೇವರ ಕಾಡುಗಳಲ್ಲಿ ಸೌದೆ ಕಡಿಯದೇ, ಮಣ್ಣು ತೆಗೆಯದೇ ಹೀಗೆ ಹತ್ತು ಹಲವು ನಿಯಮಗಳು ಯಾವುದೇ ಆಡಳಿತಾತ್ಮಕ ಒತ್ತಡಗಳಿಲ್ಲದೆ ಇಂದಿನವರೆಗೂ ಪಾಲನೆಯಾಗುತ್ತಿವೆ. ಅರಣ್ಯ ಸಂರಕ್ಷಣೆಗೆ ಸ್ಥಳೀಯರ ಸಹಭಾಗಿತ್ವ ಅತ್ಯಗತ್ಯ ಎಂಬುದಕ್ಕೆ ದೇವರ ಕಾಡುಗಳೇ ಸಾಕ್ಷಿಯಾಗಿವೆ.
ವಿಶೇಷ ಪೂಜೆ: ದೇವರ ಕಾಡಿನಲ್ಲಿ ಕಂಡು ಬರುವ ದೇವರುಗಳಿಗೆ ಸ್ಥಳೀಯರು ನಿಗದಿತ ದಿನಗಳಂದು ವಿಶೇಷ ಪೂಜೆ ಸಲ್ಲಿಸುತ್ತಾರೆ. ಭತ್ತ ಸಮರ್ಪಣೆ ಈ ಭಾಗದ ಜನರ ಸಂಪ್ರದಾಯಗಳಲ್ಲೊಂದು. ಶ್ರಾವಣ, ಕಾರ್ತೀಕ ಮುಂತಾದ ವಿಶೇಷ ಸಂದರ್ಭಗಳಲ್ಲಿ ದೇವರಿಗೆ ಹಣ್ಣು ಕಾಯಿ ಅರ್ಪಿಸುವ ಜನರು ಧನ್ಯತಾ ಭಾವ ತಾಳುತ್ತಾರೆ. ಸಾಗರ ತಾಲೂಕಿನ ಯಲಕುಂದ್ಲಿ ಗ್ರಾಮದ ರಾಚಮ್ಮ ದೇವರ ಕಾಡಿನಲ್ಲಿ ಸಾವಿರಾರು ನಾಗಸಂಪಿಗೆ ಮರಳಿವೆ. ಇಲ್ಲಿ ಬಿಡುವ ನಾಗಸಂಪಿಗೆ ಪುಷ್ಪವನ್ನು ಮುಡಿಗೇರಿಸಿಕೊಂಡು ಗ್ರಾಮದಿಂದ ಹೊರ ಹೋಗುವಂತಿಲ್ಲ ಎಂಬ ನಂಬಿಕೆ ವಿಶಿಷ್ಟವಾಗಿದೆ. ಇದು ಇಂದಿಗೂ ಚಾಲ್ತಿಯಲ್ಲಿದೆ. ಊರಿ ನಿಂದ ಹೊರ ಹೋಗುವವರು ನಾಗಸಂಪಿಗೆಯನ್ನು ಮುಡಿಯುವಂತಿಲ್ಲ. ಆ ಕಾಡಿನ ಒಂದು ಎಲೆ, ಸೌದೆಯನ್ನೂ ಯಾರೂ ಮುಟ್ಟುವಂತಿಲ್ಲ. ಅದು ಸಂಪೂರ್ಣವಾಗಿ ಮಾನವ ಹಸ್ತಕ್ಷೇಪ ರಹಿತವಾಗಿದೆ.

ಎಲ್ಲೆಲ್ಲಿ ದೇವರ ಕಾಡುಗಳು?
ಶರಾವತಿ ಜಲಾನಯನದ ಬೃಹತ್ ದೇವರ ಕಾಡುಗಳು
ಈಶ್ವರ ಕಾನು, ಹರಿಗಾರ-ಹೊಸನಗರ
ಜೇನುಕಲ್ಲಮ್ಮ ಅಮ್ಮನಘಟ್ಟ
ಕಾನು-ಹೊಸನಗರ
ಬಾಣಿಗೇಶ್ವರ ಕಾಡು-ಹೊಸನಗರ
ರಾಮೇಶ್ವರ ದೇವರ ಕಾಡು, ಹುಲ್ಕೋಡು-ಸಾಗರ
ಜಟಗಪ್ಪನ ಬನ-ಹಿಳ್ಳೋಡಿ, ಸಾಗರ
ರಾಮೇಶ್ವರ ಕಾನು-ಹುಳ್ಳೇಹಳ್ಳಿ, ಸಾಗರ
ಪಾಂಡವರ ಕೊಡ್ಲು-ಹಕ್ರೆ, ಸಾಗರ
ಕತ್ಲೇ ಕಾನು, ಮಲೇಮನೆ-ಸಿದ್ದಾಪುರ

Next Article