For the best experience, open
https://m.samyuktakarnataka.in
on your mobile browser.

ಪರಿಸ್ಥಿತಿ ನಿಯಂತ್ರಣಕ್ಕೆ ಅವರು ಏನು ಮಾಡಬೇಕು?

07:52 PM Jan 29, 2024 IST | Samyukta Karnataka
ಪರಿಸ್ಥಿತಿ ನಿಯಂತ್ರಣಕ್ಕೆ ಅವರು ಏನು ಮಾಡಬೇಕು

ಬೆಂಗಳೂರು: ನಿನ್ನೆ ಚಿತ್ರದುರ್ಗದಲ್ಲಿ ಅಹಿಂದ ಸಮಾವೇಶದಿಂದಾಗಿ ಬಿಜೆಪಿಯವರಿಗೆ ಲೋಕಸಭಾ ಚುನಾವಣೆಯಲ್ಲಿ ಸೋಲುತ್ತೇವೆ ಎಂಬ ಭಯ ಹುಟ್ಟಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡುವ ಮೂಲಕ ಮಂಡ್ಯದ ಕೆರಗೋಡಿನಲ್ಲಿ ರಾಷ್ಟ್ರಧ್ವಜಕ್ಕೆ ಅಗೌರವ ತೋರಿರುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಿಜೆಪಿಯೊಂದಿಗೆ ಕೈಜೋಡಿಸಿರುವುದರಿಂದ ಈಗವರು ಬಿಜೆಪಿಯ ವಕ್ತಾರರಾಗಿದ್ದಾರೆ, ಬಿಜೆಪಿಯನ್ನು ಹಾಡಿ ಹೊಗಳುತ್ತಿದ್ದಾರೆ. ತಮ್ಮ ಪಕ್ಷದ ಹೆಸರಿನ ಜೊತೆಗೆ ಜಾತ್ಯತೀತ ಎಂದು ಇಟ್ಟುಕೊಂಡಿದ್ದಾರೆ. ಜಾತ್ಯತೀತ ಎಂದರೆ ಏನು? ಬಿಜೆಪಿ ಅವರೊಂದಿಗೆ ಸೇರಿಕೊಂಡರೆ ಇವರನ್ನು ಏನೆಂದು ಕರೆಯಬೇಕು? ಕುಮಾರಸ್ವಾಮಿಯವರು ಮೊದಲು ನಡವಳಿಕೆ ಕಲಿತು ಆಮೇಲೆ ಬೇರೆಯವರಿಗೆ ಹೇಳಲಿ.
ಮಂಡ್ಯದ ಕೆರಗೋಡು ಗ್ರಾಮದಲ್ಲಿ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ್ದರ ಪರವಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಪ್ರತಿಭಟನೆ ಮಾಡಲು ಹೋಗುತ್ತಾರೆ ಎಂದರೆ ಇದು ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯಲು ಹಾಗೂ ಪ್ರಚೋದನೆ ನೀಡಲು ಮಾಡುತ್ತಿರುವ ರಾಜಕೀಯ ಕುತಂತ್ರ. ಇದರಲ್ಲಿ ಸರ್ಕಾರದ ವೈಫಲ್ಯ ಇಲ್ಲ.
ರಾಷ್ಟ್ರಧ್ವಜ ಅಥವಾ ಕನ್ನಡ ಧ್ವಜ ಹಾರಿಸುತ್ತೇವೆ, ಯಾವುದೇ ಧರ್ಮದ ಧ್ವಜವನ್ನು ಹಾಕುವುದಿಲ್ಲ ಎಂದು ಹೇಳಿ, ಅದನ್ನು ಉಲ್ಲಂಘಿಸಿ ಭಗವಾಧ್ವಜವನ್ನು ಹಾರಿಸಿದ್ದಾರೆ. ಅವರೇ ಬರೆದುಕೊಟ್ಟ ಮುಚ್ಚಳಿಕೆಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ.
ಇಂದು ಪ್ರತಿಭಟನೆ ನಡೆಸುವ ವೇಳೆ ಕಲ್ಲು ತೂರಾಟ ನಡೆಸಿದ್ದಾರೆ, ಪೋಲಿಸರಿಗೆ ಹೊಡೆದಿದ್ದಾರೆ ಎಂಬ ಮಾಹಿತಿ ಇದೆ. ಪೊಲೀಸರಿಗೆ ಹೊಡೆದರೆ ಪರಿಸ್ಥಿತಿ ನಿಯಂತ್ರಣಕ್ಕೆ ಅವರು ಏನು ಮಾಡಬೇಕು? ನಿನ್ನೆ ಚಿತ್ರದುರ್ಗದಲ್ಲಿ ಅಹಿಂದ ಸಮಾವೇಶದಿಂದಾಗಿ ಬಿಜೆಪಿಯವರಿಗೆ ಲೋಕಸಭಾ ಚುನಾವಣೆಯಲ್ಲಿ ಸೋಲುತ್ತೇವೆ ಎಂಬ ಭಯ ಹುಟ್ಟಿದೆ. ಅದಕ್ಕೆ ಈ ರೀತಿ ಹೇಳಿಕೆ ನೀಡುತ್ತಾರೆ. ಯಾವುದೇ ವಿಷಯವಿಲ್ಲದಿರುವ ಕಡೆ ಕೋಮು ವಿಷಯಗಳನ್ನು ಮುಂದಕ್ಕೆ ತರುತ್ತಾರೆ ಎಂದಿದ್ದಾರೆ.