ಪರಿಹಾರ ಕೈಸೇರಿದರೆ ದೀಪಾವಳಿ ನೆಮ್ಮದಿಯಿಂದ ಆಚರಿಸಲು ಸಹಕಾರಿ
ಫ್ರೂಟ್ಸ್ ತಂತ್ರಾಂಶದಲ್ಲಿ ಸಮಸ್ಯೆ ಇದೆ, ಆಧಾರ್ ಲಿಂಕ್ ಆಗಿಲ್ಲ ಎಂದು ಕುಂಟು ನೆಪವೊಡ್ಡಿ ಪರಿಹಾರ ವಿತರಣೆಯಲ್ಲಿ ವಿಳಂಬ ಮಾಡದೆ ರೈತರ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡಬೇಕು.
ಬೆಂಗಳೂರು: ಅಕಾಲಿಕ ಮಳೆಯಿಂದ ಅಪಾರ ಬೆಳೆ ಹಾನಿಯಾಗಿ ರಾಜ್ಯಾದ್ಯಂತ ರೈತರು ಸಂಕಷ್ಟ ಎದುರಿಸುತ್ತಿರುವುದನ್ನ ವಿಪಕ್ಷಗಳು ಗಮನಕ್ಕೆ ತಂದ ಮೇಲೆ ಪ್ರಗಾಢ ನಿದ್ದೆಯಿಂದ ಎದ್ದಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ ನಿನ್ನೆ ಜಿಲ್ಲಾಡಳಿತಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಕಳೆದ ವರ್ಷ ಬರ ಪರಿಹಾರ ವಿತರಣೆ ವೇಳೆ, ಈ ವರ್ಷ ಮುಂಗಾರು ಬೆಳೆ ಹಾನಿ ಪರಿಹಾರ ವಿತರಣೆ ವೇಳೆ ಉಂಟಾದ ಎಡವಟ್ಟುಗಳು ಮರುಕಳಿಸದಂತೆ ಸರ್ಕಾರ ಈ ಬಾರಿಯಾದರೂ ಎಚ್ಚರ ವಹಿಸಬೇಕು. ಬೆಳೆ ಹಾನಿ ಸಮೀಕ್ಷೆಯನ್ನ ಸಮರೋಪಾದಿಯಲ್ಲಿ ನಡೆಸಿ, ಒಂದು ವಾರದೊಳಗೆ ಪರಿಹಾರದ ಹಣ ರೈತರ ಕೈಸೇರುವಂತೆ ಕ್ರಮ ಕೈಗೊಳ್ಳಬೇಕು. ಫ್ರೂಟ್ಸ್ ತಂತ್ರಾಂಶದಲ್ಲಿ ಸಮಸ್ಯೆ ಇದೆ, ಆಧಾರ್ ಲಿಂಕ್ ಆಗಿಲ್ಲ ಎಂದು ಕುಂಟು ನೆಪವೊಡ್ಡಿ ಪರಿಹಾರ ವಿತರಣೆಯಲ್ಲಿ ವಿಳಂಬ ಮಾಡದೆ ಈಗಲೇ ಪೂರ್ವಸಿದ್ಧತೆ ಮಾಡಿಕೊಂಡು, ಸಮೀಕ್ಷೆ ವರದಿ ಕೈಸೇರುತ್ತಿದ್ದಂತೆ ಡಿಬಿಟಿ ಮೂಲಕ ರೈತರ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡಬೇಕು. ಕಳೆದ 2 ವರ್ಷದಿಂದ ಸತತವಾಗಿ ಬರ, ನೆರೆ ಹಾವಳಿಯಿಂದ ಹೈರಾಣಗಿರುವ ರೈತರು ವಾರದೊಳಗೆ ಪರಿಹಾರ ಹಣ ಕೈಸೇರಿದರೆ ದೀಪಾವಳಿ ಹಬ್ಬವನ್ನಾದರೂ ನೆಮ್ಮದಿಯಿಂದ ಆಚರಿಸಲು ಸಹಕಾರಿಯಾಗುತ್ತದೆ ಎಂದಿದ್ದಾರೆ.