For the best experience, open
https://m.samyuktakarnataka.in
on your mobile browser.

ಪರೀಕ್ಷೆ ಬಂತೆಂಬ ಭಯ ಬೇಡ…

01:00 AM Feb 19, 2024 IST | Samyukta Karnataka
ಪರೀಕ್ಷೆ ಬಂತೆಂಬ ಭಯ ಬೇಡ…

ವಿದ್ಯೆಯೆಂಬುದು ಪರೀಕ್ಷೆ ಇಟ್ಟು ಕಲಿಕೆಯನ್ನು ಕಲಿಸುವುದಾಗಿದೆ. ಮಾರ್ಚ್ ತಿಂಗಳೆಂದರೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಸಂಭ್ರಮದಲ್ಲಿರುತ್ತಾರೆ. ಶಾಲಾ ಕಾಲೇಜುಗಳಲ್ಲಿ ವರ್ಷಪೂರ್ತಿ ಕಲಿತದ್ದು ಓರೆಗೆ ಹಚ್ಚುವ ಸಮಯವಾಗಿದೆ. ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ನೆರವಾಗುವ ಸೇತುವೆಯೆಂದರೆ ಪರೀಕ್ಷೆ. ಪರೀಕ್ಷೆ ಎಂದೊಡನೆ ಶೇಕಡಾ ೮೦ ರಷ್ಟು ವಿದ್ಯಾರ್ಥಿಗಳು ಭಯಪಡುತ್ತಾರೆ. ಭಯದಿಂದ ಮಾನಸಿಕ ಒತ್ತಡ ಹೆಚ್ಚುವ ಸಾಧ್ಯತೆಯಿರುತ್ತದೆ. ಕೆಲವು ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿ ಸಮೀಪಿಸುತ್ತಿದ್ದಂತೆ ಮನಸ್ಸು ಖಾಲಿಯಾಗಿ ಪ್ರಶ್ನೆಗಳಿಗೆ ಉತ್ತರ ಬರೆಯಲಾಗುವುದಿಲ್ಲ. ಇಲ್ಲವಾದರೆ ಯಾವ ಪ್ರಶ್ನೆಗೆ ಯಾವ ಉತ್ತರ ಬರೆಯಬೇಕು ಎನ್ನುವ ಗೊಂದಲ ಪ್ರಾರಂಭವಾಗಬಹುದು.
ವಿದ್ಯಾರ್ಥಿಗಳು ಪರೀಕ್ಷೆ ಹತ್ತಿರ ಬಂದಾಗ ನಾನು, ನನ್ನ ಓದು, ನನ್ನ ಭವಿಷ್ಯವೆಂದು ದೃಢಸಂಕಲ್ಪ ಮಾಡಿಕೊಳ್ಳಬೇಕು. ಮನಸ್ಸಿನಲ್ಲಿ ವ್ಯಕ್ತವಾಗುವ ವ್ಯತಿರಿಕ್ತ ಭಾವಗಳನ್ನು ದೂರಮಾಡಿಕೊಳ್ಳುವುದು ಉತ್ತಮ. ಒಂದು ತಿಂಗಳ ಕಾಲ ಟಿ.ವಿ., ಮೊಬೈಲ್ ಬಳಕೆಯನ್ನು ತ್ಯಜಿಸಿ ಅಧ್ಯಯನದ ಕಡೆ ಸಂಪೂರ್ಣ ಗಮನ ಕೊಡಬೇಕು. ಏಕಾಗ್ರತೆಯನ್ನು ಸಾಧಿಸಬೇಕು. ಏಕಾಗ್ರತೆಯ ಕೊರತೆ, ಜ್ಞಾಪಕ ಶಕ್ತಿಯ ಕೊರತೆ ಎನ್ನುವುದನ್ನು ಮನಸ್ಸಿಗೆ ತಂದುಕೊಳ್ಳಬಾರದು. ಓದಿನಲ್ಲಿ ಆಸಕ್ತಿಯಿದ್ದರೆ ಏಕಾಗ್ರತೆ, ಜ್ಞಾಪಕಶಕ್ತಿ ಹೆಚ್ಚಾಗುತ್ತದೆ.
ಪಾಲಕರೇ ಗಮನಿಸಿ
ಕೆಲವು ಮಕ್ಕಳು ಪರೀಕ್ಷೆಯ ಅಧ್ಯಯನಕ್ಕೆ ತೊಡಗದೇ ನಷ್ಟವನ್ನು ಅನುಭವಿಸುವವರೂ ಇರುತ್ತಾರೆ. ಓದಿದ್ದು ಬರದೇ ಹೋದರೆ ಎಂಬ ಆತಂಕ ವಿದ್ಯಾರ್ಥಿಗಳಲ್ಲಿ ಕಾಡುವುದು ಸಹಜ. ಈ ಭಯ ನಿವಾರಣೆಗೆ ಪಾಲಕರು ಮತ್ತು ಶಿಕ್ಷಕರು ವಿದ್ಯಾರ್ಥಿಗಳಿಗೆ ನೆರವಾಗುವ ಅವಶ್ಯಕತೆಯಿದೆ. ಪರೀಕ್ಷೆ ಹತ್ತಿರವಾದಾಗ ಪಾಲಕರ ವರ್ತನೆ ಮಕ್ಕಳೊಂದಿಗೆ ಆತ್ಮೀಯವಾಗಿರಬೇಕು. ಓದಿಗೆ ಸಂಬಂಧಿಸಿದಂತೆ ಮಕ್ಕಳು ತೊಂದರೆ ಹೇಳಿಕೊಂಡಾಗ ತಾಳ್ಮೆಯಿಂದ ಕೇಳಿ ಪರಿಹರಿಸಲು ಪ್ರಯತ್ನಿಸಬೇಕು. ಮಕ್ಕಳು ನೆಪ ಹೇಳುವರೆಂದು ಭಾವಿಸಿ ಬಯ್ಯುವುದು, ದಂಡಿಸುವುದು ಸರಿಯಲ್ಲ. ಯಾವಾಗಲೂ ತಂದೆ-ತಾಯಿಯರ ಪ್ರೀತಿ, ಕಾಳಜಿ, ಗಮನ ಮಕ್ಕಳಿಗೆ ಚೈತನ್ಯ ನೀಡುತ್ತದೆ. ಓದುವುದರ ಬಗ್ಗೆ ಆತ್ಮವಿಶ್ವಾಸವನ್ನು ಗಟ್ಟಿಗೊಳಿಸಲು ಪಾಲಕರ ಪಾತ್ರ ಹಿರಿದಾಗಿದೆ. ಹೆಣ್ಣುಮಕ್ಕಳಿಗೆ ಪರೀಕ್ಷೆಯ ಸಮಯದಲ್ಲಿ ಆರೋಗ್ಯ, ಮುಟ್ಟಿನ ಸಮಯದ ಬಗ್ಗೆ ಪಾಲಕರು, ಶಿಕ್ಷಕರು ಸೂಕ್ತ ಮಾರ್ಗದರ್ಶನ ನೀಡುವುದು ಅವಶ್ಯಕವಾಗಿದೆ.