ಪರೀಕ್ಷೆ ಬೇಕು-ಬೇಡ ನಡುವೆ ಭಯ ನಿವಾರಿಸಿ
೫ ಮತ್ತು ೮ನೇ ತರಗತಿಯಲ್ಲಿರುವ ಮಕ್ಕಳಿಗೆ ಪರೀಕ್ಷೆ ನಡೆಸಬೇಕೆ ಬೇಡವೆ ಎಂಬುದರ ಚರ್ಚೆ ಎಲ್ಲ ಕಡೆ ನಡೆಯುತ್ತಿದೆ. ಕೇಂದ್ರ ಸರ್ಕಾರ ಪರೀಕ್ಷೆ ಇರಲಿ ಎಂದು ಹೇಳಿದೆ. ಕೆಲವು ರಾಜ್ಯಗಳು ಪರೀಕ್ಷೆ ಬೇಕು ಎಂದರೆ ಮತ್ತು ಕೆಲವು ರಾಜ್ಯಗಳಲ್ಲಿ ಪರೀಕ್ಷೆ ಬೇಡ ಎಂಬ ವಾದ-ಪ್ರತಿವಾದ ನಡೆಯುತ್ತಿದೆ. ಈ ಚರ್ಚೆಯ ನಡುವೆ ಮೊದಲು ಮಕ್ಕಳಲ್ಲಿ ಪರೀಕ್ಷೆಯ ಬಗ್ಗೆ ಇರುವ ಭಯವನ್ನು ಹೋಗಲಾಡಿಸಬೇಕು. ಪರೀಕ್ಷೆಗಿಂತ ಪರೀಕ್ಷೆ ಭಯವೇ ಮಕ್ಕಳನ್ನು ಕುಗ್ಗಿಸಿ ಬಿಡುತ್ತಿದೆ. ಇದಕ್ಕೆ ತಂದೆತಾಯಿಗಳೇ ಹೆಚ್ಚಿನಹೊರೆ ಹೊರಬೇಕು. ಹೈಸ್ಕೂಲ್‌ವರೆಗೆ ಮಕ್ಕಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಬೆಳವಣಿಗೆ ಕಾಣುತ್ತಾರೆ. ಕೆಲವು ಮಕ್ಕಳು ದೈಹಿಕವಾಗಿ ದುರ್ಬಲರು. ಮಾನಸಿಕವಾಗಿ ಚುರುಕಾಗಿರುತ್ತಾರೆ. ಒಂದು ಮಗು ಮತ್ತೊಂದು ಮಗುವಿನ ರೀತಿ ಇರುವುದಿಲ್ಲ. ಮಕ್ಕಳಲ್ಲಿ ಒಬ್ಬರನ್ನು ಮತ್ತೊಬ್ಬರಿಗೆ ಹೋಲಿಸುವುದು ತಪ್ಪು. ಅದರಲ್ಲೂ ತಂದೆ-ತಾಯಿಗಳು ಮಕ್ಕಳನ್ನು ಬೇರೆಯವರಿಗೆ ಹೋಲಿಸುವುದನ್ನು ಮೊದಲು ಕೈಬಿಡಬೇಕು. ಪ್ರತಿಯೊಂದು ಮಗುವಿಗೂ ಎಲ್ಲದರಲ್ಲೂ ಚುರುಕುತನ ಇರುವುದಿಲ್ಲ. ಪರೀಕ್ಷೆಯಲ್ಲಿ ಗಳಿಸುವ ಅಂಕದ ಮೇಲೆ ಮಕ್ಕಳ ಭವಿಷ್ಯ ತೀರ್ಮಾನಿಸಲು ಹೋಗಬೇಡಿ. ಪ್ರತಿಯೊಂದು ಮಗುವಿಗೂ ಮುಕ್ತ ಅವಕಾಶ ಕಲ್ಪಿಸಿಕೊಡುವುಷ್ಟೇ ತಂದೆತಾಯಿಗಳ ಕೆಲಸ. ನನ್ನ ಮಗು ಎಂಜಿನಿಯರ್ ಆಗಲೇ ಬೇಕು, ಡಾಕ್ಟರ್ ಆಗಬೇಕು ಎಂದು ಬಯಸುವುದೇ ತಪ್ಪು. ಆ ಮಗುವಿಗೆ ಯಾವುದರಲ್ಲಿ ಆಸಕ್ತಿ ಇದೆ ಎಂದು ತಿಳಿದುಕೊಂಡು, ಅದರಲ್ಲೇ ಮುಂದುವರಿಯಲು ಅವಕಾಶ ಕಲ್ಪಿಸಿಕೊಡಬೇಕು. ಆಗ ಮಗುವಿನ ಪ್ರತಿಭೆ ತಂತಾನೇ ವಿಕಸನಗೊಳ್ಳುತ್ತದೆ. ಎಲ್ಲರೂ ಎಂಜಿನಿಯರ್, ಡಾಕ್ಟರ್, ಕಲಾವಿದ, ವಿಜ್ಞಾನಿ, ವಕೀಲ ಆಗಲು ಬರುವುದಿಲ್ಲ. ಹಾಗೆಂದು ಹಣೆಬರಹ ಇದ್ದಂತೆ ಆಗಲಿ ಎಂದು ಸುಮ್ಮನಿರುವುದಲ್ಲ. ಆ ಮಗುವಿಗೆ ಉತ್ತಮ ಶಿಕ್ಷಣ ಕೊಡಿಸುವುದಷ್ಟೇ ತಂದೆತಾಯಿಗಳ ಕರ್ತವ್ಯ. ಮಗು ಕೆಟ್ಟ ಅಭ್ಯಾಸ ಬೆಳೆಸಿಕೊಳ್ಳದಂತೆ ನೋಡಿಕೊಳ್ಳಬೇಕು. ಹಣದ ಬೆಲೆ ತಿಳಿಸಿಕೊಡಬೇಕು. ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವಂತೆ ಮಾಡಬೇಕು. ಆಗ ಆ ಮಗು ಉತ್ತಮ ಪ್ರಜೆಯಾಗಲು ಸಾಧ್ಯ. ಓದು-ವೃತ್ತಿ ಆ ಮಗುವಿನ ಆಸಕ್ತಿ ಮತ್ತು ಅವಕಾಶಗಳನ್ನು ಅವಲಂಬಿಸಿರುತ್ತದೆ. ಮಗು ತನ್ನ ಜೀವನದಲ್ಲಿ ಸ್ವತಂತ್ರವಾಗಿ ಬದುಕಲು ಬೇಕಾದ ಆತ್ಮಸ್ಥೈರ್ಯವನ್ನು ತುಂಬ ಬೇಕು. ಒಂದು ಪರೀಕ್ಷೆಯಲ್ಲಿ ಫೇಲಾದರೆ ಜೀವನವೇ ಮುಗಿದು ಹೋಯಿತು ಎಂದು ತಂದೆ-ತಾಯಿಗಳು ಮಗುವಿನ ಮೇಲೆ ಕೂಗಾಡಬಾರದು. ಮಗುವಿನಲ್ಲಿ ಆತ್ಮವಿಶ್ವಾಸ ತುಂಬಿ ಮತ್ತೆ ಪಾಸಾಗುವಂತೆ ಮಾಡಬೇಕು. ಈಗ ಇದು ನಡೆಯುತ್ತಿಲ್ಲ. ಚಿಕ್ಕಮಕ್ಕಳೂ ಆತ್ಮಹತ್ಯೆಗೆ ಶರಣಾಗುತ್ತಿರುವುದಕ್ಕೆ ವಾತಾವರಣ ಕಾರಣ. ಪರೀಕ್ಷೆಯಲ್ಲಿ ಹೆಚ್ಚು ಗಳಿಸಬೇಕು ಎಂಬುದು ಎಲ್ಲ ಮಕ್ಕಳ ಗುರಿ. ಆದರೆ ಕಡಿಮೆ ಅಂಕ ಬಂತು ಎಂದರೆ ಜೀವನವೇ ಮುಗಿದುಹೋಯಿತು ಎಂಬ ಧೋರಣೆ ಬೇಡ. ಮರು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸುವ ಹಾಗೆ ಛಲ ತುಂಬಬೇಕು. ಆಗ ಆ ಮಗು ಜೀವನದಲ್ಲಿ ಏನೇ ಕಷ್ಟ ಬಂದರೂ ಎದುರಿಸುವುದನ್ನು ಕಲಿಯುತ್ತದೆ. ಒಂದು ಹಂತಕ್ಕೆ ಮಾತ್ರ ಪರೀಕ್ಷೆಯ ಅಂಕಗಳು ಕೆಲಸಕ್ಕೆ ಬರುತ್ತದೆ. ಆಮೇಲೆ ಜೀವನದಲ್ಲಿ ನಿಷ್ಠೆ-ಪ್ರಾಮಾಣಿಕತೆ ಅಷ್ಟೆ ಕೆಲಸಕ್ಕೆ ಬರುತ್ತದೆ. ವೈದ್ಯರು ಓದುವಾಗ ಚಿನ್ನದ ಪದಕ ಪಡೆದಿದ್ದರೂ ರೋಗಿಗಳು ಅದನ್ನು ನೋಡುವುದಿಲ್ಲ. ಅದೇ ರೀತಿ ಎಂಜಿನಿಯರ್ ಹೇಗೆ ಕೆಲಸ ಮಾಡುತ್ತಾರೆ ಎಂಬುದು ಮುಖ್ಯವಾಗುತ್ತದೆಯೇ ಹೊರತು ಪರೀಕ್ಷೆಯಲ್ಲಿ ಗಳಿಸಿದ ಅಂಕ ಲೆಕ್ಕಕ್ಕೆ ಬರುವುದಿಲ್ಲ. ಪರೀಕ್ಷೆ ಆಯಾ ಕಾಲಕ್ಕೆ ಮಗು ಗಳಿಸಿರುವ ಜ್ಞಾನದ ಮಟ್ಟವನ್ನು ಅಳೆಯುವ ಒಂದು ಸಾಧನ ಮಾತ್ರ. ಅದೇ ಮಗುವಿನ ಭವಿಷ್ಯ ನಿರ್ಧರಿಸುವುದಿಲ್ಲ. ಪರೀಕ್ಷೆ ಯಾವ ರೀತಿ ನಡೆಸಬೇಕು ಎಂಬುದನ್ನು ತೀರ್ಮಾನಿಸುವುದು ಶಿಕ್ಷಣತಜ್ಞರು ಮತ್ತು ಶಿಕ್ಷಕರ ಕೆಲಸ. ಅದನ್ನು ಅವರಿಗೆ ಬಿಡೋಣ. ನಮ್ಮಲ್ಲಿ ಐಸಿಎಸ್‌ಇ, ಸಿಬಿಎಸ್‌ಇ, ಸ್ಟೇಟ್‌ಸಿಲಬಸ್ ಇದೆ. ಅವುಗಳಿಗೆ ಅನುಗುಣವಾಗಿ ವಿವಿಧ ರೀತಿಯ ಪರೀಕ್ಷ ವಿಧಾನಗಳಿವೆ. ಇವುಗಳಲ್ಲಿ ಓದುವ ಮಕ್ಕಳು ಪಿಯುಸಿಯಲ್ಲಿ ಒಂದುಗೂಡುತ್ತಾರೆ. ಆಗ ಅವರನ್ನು ಒಂದೇ ತಕ್ಕಡಿಯಲ್ಲಿ ಹಾಕಿ ತೂಗುತ್ತೇವೆ. ಕೆಲವು ಶಿಕ್ಷಣತಜ್ಞರು ಎಸ್‌ಎಸ್‌ಎಲ್‌ಸಿವರೆಗೆ ಯಾವ ಪರೀಕ್ಷೆಯೂ ಬೇಡ ಎಂದು ವಾದ ಮಾಡುತ್ತಾರೆ. ಮತ್ತೆ ಕೆಲವರು ಪ್ರಾಥಮಿಕ ಹಂತದಿಂದಲೇ ಸೆಮಿಸ್ಟರ್ ಪದ್ಧತಿ ಬೇಕು ಎನ್ನುತ್ತಾರೆ. ಪಬ್ಲಿಕ್ ಪರೀಕ್ಷೆ ಯಾವ ಹಂತದಲ್ಲಿರಬೇಕು ಎಂಬುದನ್ನು ಇನ್ನೂ ತೀರ್ಮಾನಿಸಲು ಸಾಧ್ಯವಾಗಿಲ್ಲ. ಎಲ್ಲ ಪಠ್ಯಕ್ರಮಗಳ ಮೂಲ ಉದ್ದೇಶ ಉತ್ತಮ ಪ್ರಜೆಯನ್ನು ಸಿದ್ಧಪಡಿಸುವುದು. ಉತ್ತಮ ಶಿಕ್ಷಣ ಪಡೆದವನು ಉತ್ತಮ ಪ್ರಜೆಯಾಗುತ್ತಾನೆ ಎಂಬುದು ಎಲ್ಲರ ನಂಬಿಕೆ. ಮಾನವ ಸಂಪನ್ಮೂಲ ಅಭಿವೃದ್ಧಿಗೆ ಶಿಕ್ಷಣ ಮೂಲ ಬಂಡವಾಳ. ಹೀಗಾಗಿ ನಮ್ಮ ದೇಶದ ಅಭಿವೃದ್ಧಿಗೆ ಬೇಕಾದ ಯುವಪಡೆಯನ್ನು ಸಿದ್ಧಪಡಿಸಲು ಬೇಕಾದ ಶಿಕ್ಷಣ ಪದ್ಧತಿ ಕಂಡುಕೊಳ್ಳುವುದು ಬಹಳ ಮುಖ್ಯ. ಪರೀಕ್ಷೆ ಅದರಲ್ಲಿ ಒಂದು ಅಂಗ ಮಾತ್ರ. ಅದೇ ಪ್ರಮುಖವಲ್ಲ. ನಮ್ಮ ಮಕ್ಕಳು ಪುಸ್ತಕದ ಹುಳ ಆಗಬಾರದು. ಸಮಾಜಕ್ಕೆ ಬೇಕಾದ ವ್ಯಕ್ತಿ ಆಗಬೇಕು. ಉಗ್ರವಾದಿಗಳೂ ಹೆಚ್ಚು ಓದಿರುತ್ತಾರೆ. ಅದರಿಂದ ಸಮಾಜಕ್ಕೆ ಉಪಯೋಗವೇನೂ ಆಗುವುದಿಲ್ಲ.