ಪರೋಟ ತಿಂದು ಗೂಗಲ್ ಪೇ ಮಾಡಿ ಸಿಕ್ಕಿಬಿದ್ದ ಆರೋಪಿ
ಮುಂಬೈ: ಬಾಲಿವುಡ್ ನಟ ಸೈಫ್ ಅಲಿಖಾನ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದ ಆರೋಪಿ, ಬಾಂಗ್ಲಾ ಪ್ರಜೆ ಮೊಹಮದ್ ಶರೀಪುಲ್ ಇಸ್ಲಾಂ ಶೆಹಜಾದ್ ಖಾನ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದು ಒಂದು ರೋಚಕ ಸಿನಿಮೀಯ ಕಥೆಯಂತಿದೆ.
ಸೈಫ್ ಮೇಲೆ ಹಲ್ಲೆ ನಡೆಸಿದ ಬಳಿಕ ಆರೋಪಿ ತನ್ನ ಮೊಬೈಲ್ ಸ್ವೀಚ್ ಆಫ್ ಮಾಡಿಕೊಂಡು ಪೊಲೀಸರ ೨೦ ತನಿಖಾ ತಂಡಗಳಿಗೆ ೨ ದಿನಗಳ ಕಾಲ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ. ಆದರೆ ಹೊಟ್ಟೆಹಸಿವು ತಾಳಲಾರದೆ ಪರೋಟ ತಿಂದು ಗೂಗಲ್ ಪೇ ಮಾಡಿದಾಗ ಸಿಕ್ಕಿಬಿದ್ದಿದ್ದಾನೆ.
೪೮ ಗಂಟೆಗಳ ಅವಧಿಯಲ್ಲಿ ಬಾಂದ್ರಾದಿಂದ ದಾದರ್‌ಗೆ, ಅಲ್ಲಿಂದ ವರ್ಲಿಗೆ ಹೋದ ನಂತರ ಅಂಧೇರಿಗೆ, ಆ ಬಳಿಕ ದಾದರ್‌ಗೆ ಹೋಗುತ್ತಾ ಆಗಾಗ ಸ್ಥಳಗಳನ್ನು ಬದಲಾಯಿಸುತ್ತಿದ್ದ. ಎಲ್ಲಿಯೂ ಹೆಚ್ಚು ಸಮಯ ಒಂದೇ ಕಡೆ ನೆಲೆಸದೇ ಓಡಾಡಿಕೊಂಡಿರುತ್ತಿದ್ದ. ಆದರೆ ಪರೋಟ ತಿಂದ ನಂತರ ಮೊಬೈಲ್ ಆನ್ ಮಾಡಿ ಗೂಗಲ್ ಪೇ ಮಾಡಿರುವುದು ಪೊಲೀಸರಿಗೆ ಆತನಿರುವ ಸ್ಥಳವನ್ನು ಬಹಿರಂಗಪಡಿಸಿದ್ದು ಬಂಧನಕ್ಕೊಳಗಾಗುವಂತೆ ಮಾಡಿತ್ತು.
ನದಿ ದಾಟಿ ಬಂದಿದ್ದ
೧೨ನೇ ತರಗತಿಯವರೆಗೆ ಓದಿರುವ ಉದ್ಯೋಗ ಅರಸಿ ಕೊಂಡು ೭ ತಿಂಗಳ ಹಿಂದೆ ಮೇಘಾಲಯದ ದೌಕಿ ನದಿ ದಾಟಿ ಪಶ್ಚಿಮಬಂಗಾಳಕ್ಕೆ ಅಕ್ರಮವಾಗಿ ಪ್ರವೇಶ ಮಾಡಿದ್ದ. ಅಲ್ಲಿಯ ನಿವಾಸಿ ಫಕೀರ್ ಹೆಸರಿನ ಆಧಾರ್ ಕಾರ್ಡ್ ಬಳಕೆ ಮಾಡಿ ಸಿಮ್ ಕಾರ್ಡ್ ಖರೀದಿಸಿದ್ದ. ಆಧಾರ್ ಕಾರ್ಡ್ ಮಾಡಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ.