ಪಲ್ಲಕ್ಕಿ ಹೊರುವವರೇ ಬೇರೆ, ಉತ್ಸವ ಮೂರ್ತಿ ಆಗುವವರೇ ಬೇರೆ
ಬೆಂಗಳೂರು: ಪಕ್ಷದ ಪಲ್ಲಕ್ಕಿ ಹೊತ್ತು ಕಡೆಗೆ ಮೂಲೆ ಗುಂಪಾದವರ ಪಟ್ಟಿ ಬಹಳ ದೊಡ್ಡದಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ನಂತರ ರಾಜ್ಯದ ಮುಖ್ಯಮಂತ್ರಿ ಯಾರಾಗಬೇಕು ಎಂಬ ಚರ್ಚೆ ಕಾಂಗ್ರೆಸ್ ಪಕ್ಷದಲ್ಲಿ ಜೋರಾಗುತ್ತಿರುವ ನಡುವೆಯೇ, ಹೈಕಮಾಂಡ್ ಏಜೆಂಟ್‌ಗಳಾದ ರಂದೀಪ್ ಸಿಂಗ್ ಸುರ್ಜೇವಲಾ ಹಾಗು ಕೆ.ಸಿ.ವೇಣುಗೋಪಾಲ್ ಅವರಿಗೆ ಡಿಸಿಎಂ ಡಿ. ಕೆ. ಶಿವಕುಮಾರ ಅವರ ಮೇಲೆ ಅನುಮಾನ ಹುಟ್ಟಿಕೊಂಡಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಡಿಸಿಎಂ ಡಿ. ಕೆ. ಶಿವಕುಮಾರ ಅವರೇ, ಕಾಂಗ್ರೆಸ್ ಪಕ್ಷದ ಸಂಪ್ರದಾಯದಲ್ಲಿ ಪಲ್ಲಕ್ಕಿ ಹೊರುವವರೇ ಬೇರೆ, ಉತ್ಸವ ಮೂರ್ತಿ ಆಗುವವರೇ ಬೇರೆ. ಜೀವನವೆಲ್ಲಾ ಕಾಂಗ್ರೆಸ್ ಪಕ್ಷದ ಪಲ್ಲಕ್ಕಿ ಹೊತ್ತು ಕಡೆಗೆ ಮೂಲೆ ಗುಂಪಾದವರ ಪಟ್ಟಿ ಬಹಳ ದೊಡ್ಡದಿದೆ, ಜೋಪಾನ. ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಅವರಿಂದ ಹಿಡಿದು ಪಕ್ಕದ ಆಂಧ್ರ ಪ್ರದೇಶದ ಜಗನ್ ರೆಡ್ಡಿ ಅವರವರೆಗೂ ಅನೇಕ ನಾಯಕರು ಕಾಂಗ್ರೆಸ್ ಪಕ್ಷದಿಂದ ಹೊರಗೆ ಬಂದ ಮೇಲೆಯೇ ಮುಖ್ಯಮಂತ್ರಿ ಆಗಲಿಕ್ಕೆ ಸಾಧ್ಯವಾಗಿದ್ದು. ಇತಿಹಾಸದ ಅರಿವಿದ್ದವರಿಂದ ಮಾತ್ರ ಇತಿಹಾಸ ಸೃಷ್ಟಿಸಲು ಸಾಧ್ಯ. ಕಾಂಗ್ರೆಸ್ ಪಕ್ಷದ ಇತಿಹಾಸ ನಿಮಗೆ ಚೆನ್ನಾಗಿ ಗೊತ್ತಿದೆ ಎಂದು ಭಾವಿಸಿದ್ದೇನೆ ಎಂದಿದ್ದಾರೆ.