For the best experience, open
https://m.samyuktakarnataka.in
on your mobile browser.

ಪಾಕಿಸ್ತಾನಕ್ಕೆ ಮತ್ತೆ `ಮಿಸ್ಟರ್ ೧೦ ಪರ್ಸೆಂಟ್' ಅಧ್ಯಕ್ಷ

02:54 AM Feb 26, 2024 IST | Samyukta Karnataka
ಪಾಕಿಸ್ತಾನಕ್ಕೆ ಮತ್ತೆ  ಮಿಸ್ಟರ್ ೧೦ ಪರ್ಸೆಂಟ್  ಅಧ್ಯಕ್ಷ

ಇಸ್ಲಾಮಾಬಾದ್: ಆರು ಪಕ್ಷಗಳ ಮೈತ್ರಿಕೂಟ ಪಾಕಿಸ್ತಾನದಲ್ಲಿ ಅಸ್ತಿತ್ವಕ್ಕೆ ಬರಲು ಸಜ್ಜಾಗಿದೆ. ಆರು ಪಕ್ಷಗಳ ಮೈತ್ರಿ ಒಪ್ಪಂದದಂತೆ ಮಾರ್ಚ್ ೯ ಅಥವಾ ೧೦ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಪೀಪಲ್ಸ್ ಪಾರ್ಟಿ ಆಫ್ ಪಾಕಿಸ್ತಾನ್(ಪಿಪಿಪಿ)ನ ಅಸೀಫ್ ಅಲಿ ಜರ್ದಾರಿ, ಇನ್ನೊಂದು ಅವಧಿಗೆ ಅಧ್ಯಕ್ಷರಾಗುವುದು ಬಹುತೇಕ ಖಚಿತ. ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್(ಪಿಎಂಎಲ್-ಎನ್) ಪಾರ್ಟಿಯ ಶೆಹಬಾಜ್ ಷರೀಫ್ ಪ್ರಧಾನಿಯಾಗಲಿದ್ದಾರೆ.
ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರ ಪತಿ ಜರ್ದಾರಿ. ಝಲ್ಫೀಕರ್ ಅಲಿ ಭುಟ್ಟೋ ಅವರ ಅಳಿಯ. ಜನರಲ್ ಮುಷರಫ್ ರಾಜೀನಾಮೆ ನೀಡಿದ ನಂತರ ೨೦೦೮-೧೩ರ ಅವಧಿಯಲ್ಲಿ ಅವರು ಅಧ್ಯಕ್ಷರಾಗಿದ್ದರು. ಆ ಅವಧಿಯಲ್ಲಿ ಮಾಡಿದ್ದ ಭ್ರಷ್ಟಾಚಾರದಿಂದಾಗಿ `೧೦ ಪರ್ಸೆಂಟ್ ಅಧ್ಯಕ್ಷ' ಎನ್ನುವ ಕುಖ್ಯಾತಿಗೆ ಪಾತ್ರರಾಗಿದ್ದರು. ಅವರಿಗೆ ಮತ್ತೊಮ್ಮೆ ಅಧಿಕಾರ ಸಿಗುವುದು ಬಹುತೇಕ ಗ್ಯಾರಂಟಿ. ಐದು ವರ್ಷದ ಅವಧಿ ಪೂರ್ಣಗೊಳಿಸಿದ ಜನರಿಂದ ಆಯ್ಕೆಯಾದ ಪಾಕಿಸ್ತಾನದ ಮೂರು ಅಧ್ಯಕ್ಷರ ಪೈಕಿ ಜರ್ದಾರಿ ಒಬ್ಬರು.
೨೦೦೭ರಲ್ಲಿ ಬೆನಜೀರ್ ಭುಟ್ಟೋ ಹತ್ಯೆಯಾದಾಗ ಜರ್ದಾರಿ ದುಬೈನಲ್ಲಿದ್ದರು. ಸುದ್ದಿ ತಿಳಿದ ಕೂಡಲೆ ತಮ್ಮ ಮಕ್ಕಳಾದ ಬಿಲಾವಲ್, ಬಖ್ತಾವರ್ ಮತ್ತು ಅಸೀಫಾ ಅವರೊಂದಿಗೆ ಹಾರಿ ಬಂದಿದ್ದರು. ಬಿಲಾವಲ್‌ಗೆ ಆಗಿನ್ನೂ ೧೯ ವರ್ಷ ವಯಸ್ಸು. ಮೊದಲ ಸಭೆಯಲ್ಲಿ ಬೆನಜೀರ್ ಭುಟ್ಟೋ ಬರೆದಿದ್ದ ವಿಲ್ ಓದುವಂತೆ ಬಿಲಾವಲ್‌ಗೆ ಸೂಚಿಸಲಾಗಿತ್ತು. ಅದರಲ್ಲಿ ತಮ್ಮ ನಂತರ ಪಕ್ಷವನ್ನು ತಮ್ಮ ಪತಿ ಅಸೀಫ್ ಅಲಿ ಜರ್ದಾರಿ ಮುನ್ನಡೆಸಲಿದ್ದಾರೆ ಎಂದು ಬರೆಯಲಾಗಿತ್ತು. ಅಂದಿನಿಂದ ಇಂದಿನವರೆಗೆ ಪಕ್ಷದ ಚುಕ್ಕಾಣಿ ಹಿಡಿದಿದ್ದಾರೆ. ಒಂದು ಬಾರಿ ಪಾಕಿಸ್ತಾನದ ಅಧ್ಯಕ್ಷರಾಗಿದ್ದಾರೆ, ೧೧ ವರ್ಷ ಜೈಲು ಕಂಡಿದ್ದಾರೆ. ಆದರೆ ಪಿಪಿಪಿಯಲ್ಲಿ ಅವರನ್ನು ಮೀರಿಸುವಂಥ ಬೇರೊಬ್ಬ ನಾಯಕರು ಹುಟ್ಟಿಕೊಂಡಿಲ್ಲ.
ಬೆನಜೀರ್ ಎರಡು ಅವಧಿಗೆ ಅಲ್ಪಾವಧಿಯ ಪ್ರಧಾನಿ ಆಗಿದ್ದರು. ೧೯೮೮ರಲ್ಲಿ ಅವರು ಮೊದಲ ಬಾರಿ ಪ್ರಧಾನಿಯಾದಾಗ ಬೆನಜೀರ್ ಸೋದರ ಮುರ್ತಜಾ ಭುಟ್ಟೋ ಅಧಿಕಾರ ತಮಗೆ ತಪ್ಪಿಹೋಗಿದ್ದಕ್ಕೆ ಹಳಹಳಿಸಿದ್ದರು. ಆದರೆ ಝುಲ್ಫೀಕರ್ ಭುಟ್ಟೋ ಇಬ್ಬರು ಗಂಡು ಮಕ್ಕಳೂ ಕೊಲೆಯಾಗಿ ಹೋದ ನಂತರ ಹಕ್ಕು ಸಾಧಿಸಲು ಬೆನಜೀರ್ ಭುಟ್ಟೋ ಬಿಟ್ಟರೆ ಬೇರೆಯವರು ಉಳಿಯಲಿಲ್ಲ. ಈ ಸಂದರ್ಭದಲ್ಲಿ ಜರ್ದಾರಿ ಪಿಪಿಪಿಯ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದರು. ಬೆನಜೀರ್ ಹತ್ಯೆಯ ನಂತರ ಜರ್ದಾರಿಯೇ ಪಿಪಿಪಿಯ ಅದ್ವಿತೀಯ ನಾಯಕ.
ಪಾಕ್‌ನ ಆರ್ಥಿಕ ಮತ್ತು ಸಾಮಾಜಿಕ ದುಸ್ಥಿತಿ ಸರಿಪಡಿಸಲು ಜರ್ದಾರಿ ಏನು ಮಾಡಲಿದ್ದಾರೆ. ನೆರೆಯ ದೇಶಗಳೊಂದಿಗೆ ಸಂಬಂಧ ಸುಧಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುವರೇ ಎನ್ನುವ ಪ್ರಶ್ನೆಗೆ ನಂತರದ ದಿನಗಳಲ್ಲಿ ಉತ್ತರ ಸಿಗಬೇಕಾಗಿದೆ.