ಪಾಕ್ ಪರ ಘೋಷಣೆ ಕೂಗಿದ್ರೆ ನಾವೇ ಗುಂಡಿಟ್ಟು ಕೊಲ್ತೀವಿ
ಬಾಗಲಕೋಟೆ: ವಿಧಾನಸೌಧದಲ್ಲಿ ಪಾಕಿಸ್ತಾನ ಪರವಾಗಿ ಘೋಷಣೆ ಕೂಗಿದವರನ್ನು ಪೊಲೀಸರಿಗೆ ಒಪ್ಪಿಸುವ ಬದಲು ನಮಗೆ ಅಧಿಕಾರ ಕೊಡಿ, ನಾವೇ ಗುಂಡಿಟ್ಟು ಕೊಲ್ಲುತ್ತೇವೆ. ನಾವ್ಯಾರು ದೇಶದ ವಿರುದ್ಧವಿಲ್ಲ. ನಮ್ಮ ವಿರುದ್ಧ ಅಪಪ್ರಚಾರ ನಡೆದಿದೆ ಎಂದು ವಕ್ಫ್ ಮತ್ತು ಅಲ್ಪಸಂಖ್ಯಾತ ಖಾತೆ ಸಚಿವ ಜಮೀರ್ ಅಹ್ಮದ್‌ಖಾನ್ ಬೇಸರ ವ್ಯಕ್ತಪಡಿಸಿದರು.
ನಗರದ ಚರಂತಿಮಠ ಶಿವಾನುಭವ ಮಂಟಪದಲ್ಲಿ ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಂಡಿದ್ದ ಸ್ವಾಭಿಮಾನಿ ಮುಸ್ಲಿಂ ಸಮಾವೇಶದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯ ಶೇ. ೧೦೦ ಮತಗಳನ್ನು ಕಾಂಗ್ರೆಸ್‌ಗೆ ನೀಡಿದ್ದರ ಪರಿಣಾಮ ಸರ್ಕಾರ ರಚನೆ ಆಗಿದೆ. ಈ ಬಾರಿಯೂ ಮೊದಲ ಹಂತದಲ್ಲಿ ಮುಸ್ಲಿಂ ಸಮುದಾಯ ಸಂಪೂರ್ಣ ಕಾಂಗ್ರೆಸ್ ಪರವಾಗಿ ನಿಂತಿದೆ ಎಂದು ಹೇಳಿದರು. ನಾನು ಜನತಾದಳದಲ್ಲಿದ್ದ ಪರಿಣಾಮ ಕುಮಾರಸ್ವಾಮಿಯ ಅವರ ತಂತ್ರಗಾರಿಕೆ ಗೊತ್ತಿದೆ. ಈಗ ಬಿಜೆಪಿಗರಿಗಿಂತ ಕುಮಾರಸ್ವಾಮಿಯೇ ಮುಸ್ಲಿಂರ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಾರೆ ಎಂದು ದೂರಿದರು.
ಬಿಜೆಪಿ ಎಂದರೆ ಕ್ಯಾನ್ಸರ್ ಇದ್ದಂತೆ. ಅದು ಮೂರನೇ ಬಾರಿಗೆ ಬರಲು ಬಿಡಬಾರದು. ಬಿಟ್ಟರೆ ನಮಗೆ ಕಷ್ಟ ಎಂದು ವಾಗ್ದಾಳಿ ನಡೆಸಿದ ಅವರು, ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರಿಗೆ ಸಾಕಷ್ಟು ನೆರವು ನೀಡಿದ್ದಾರೆ. ಈ ಹಿಂದಿನ ಸರ್ಕಾರವಿದ್ದಾಗ ಬೆಂಗಳೂರಿನಲ್ಲಿ ಬೃಹತ್ ಆದ ಹಜ್‌ಭವನ ನಿರ್ಮಿಸಲಾಗಿತ್ತು ಎಂದು ಹೇಳಿದರು.