For the best experience, open
https://m.samyuktakarnataka.in
on your mobile browser.

ಪಾಕ್ ಮಣಿಸಿದ ಭಾರತೀಯ ಸೇನಾ ಸಾಮರ್ಥ್ಯ

12:26 PM Dec 16, 2023 IST | Samyukta Karnataka
ಪಾಕ್ ಮಣಿಸಿದ ಭಾರತೀಯ ಸೇನಾ ಸಾಮರ್ಥ್ಯ

ವಿಜಯ್ ದಿವಸ್ ಅಥವಾ ಗೆಲುವಿನ ದಿನವನ್ನು ಪ್ರತಿ ವರ್ಷವೂ ಡಿಸೆಂಬರ್ ೧೬ರಂದು ಭಾರತ ಮತ್ತು ಬಾಂಗ್ಲಾದೇಶದ ಜಂಟಿ ಸೇನಾಪಡೆಗಳು ಪಾಕಿಸ್ತಾನದ ವಿರುದ್ಧ ೧೯೭೧ರ ಯುದ್ಧದಲ್ಲಿ ಗೆಲುವು ಸಾಧಿಸಿದ್ದನ್ನು ಸ್ಮರಿಸಲು ಆಚರಿಸಲಾಗುತ್ತದೆ. ೧೩ ದಿನಗಳ ಕಾಲ ನಡೆದ ಈ ಯುದ್ಧದಲ್ಲಿ, ಪಶ್ಚಿಮ ಪಾಕಿಸ್ತಾನದ ಕಪಿಮುಷ್ಟಿಯಲ್ಲಿ ನಲುಗುತ್ತಿದ್ದ ಪೂರ್ವ ಪಾಕಿಸ್ತಾನ ಸ್ವತಂತ್ರಗೊಂಡು, ಬಾಂಗ್ಲಾದೇಶದ ನಿರ್ಮಾಣವಾಯಿತು. ಈ ದಿನದಂದು ಭಾರತ ಮತ್ತು ಬಾಂಗ್ಲಾದೇಶದ ಜನರು ಸ್ವಾತಂತ್ರ‍್ಯ ಮತ್ತು ನ್ಯಾಯಕ್ಕಾಗಿ ತಮ್ಮ ಪ್ರಾಣಾರ್ಪಣೆ ಮಾಡಿದ ವೀರ ಯೋಧರಿಗೆ ಗೌರವ ನಮನಗಳನ್ನು ಸಲ್ಲಿಸುತ್ತಾರೆ.

೧೯೭೧ರಲ್ಲಿ ನಡೆದ ಯುದ್ಧ, ೧೦೦೦ ಮೈಲಿಗೂ ಹೆಚ್ಚಿನ ಅಂತರ ಹೊಂದಿದ್ದ, ಭಾರತೀಯ ಭೂಭಾಗದಿಂದ ಪ್ರತ್ಯೇಕಿಸಲ್ಪಟ್ಟಿದ್ದ ಪಾಕಿಸ್ತಾನದ ಎರಡು ವಿಭಾಗಗಳ ನಡುವೆ ದೀರ್ಘ ಕಾಲದಿಂದ ಇದ್ದ ಸಮಸ್ಯೆಯ ಪರಾಕಾಷ್ಠೆಯಾಗಿತ್ತು. ಬಹುತೇಕ ಬಂಗಾಳಿಗಳೇ ಇದ್ದ ಪೂರ್ವ ಪಾಕಿಸ್ತಾನದ ಪ್ರಜೆಗಳನ್ನು ಪಂಜಾಬಿ ಬಹುಸಂಖ್ಯಾತ ಪಶ್ಚಿಮ ಪಾಕಿಸ್ತಾನದ ಮೇಲ್ವರ್ಗದ ಜನರು ನಿರಂತರವಾಗಿ ಆರ್ಥಿಕ ಶೋಷಣೆ, ರಾಜಕೀಯ ನಿರ್ಲಕ್ಷ್ಯ ಹಾಗೂ ಸಾಂಸ್ಕೃತಿಕ ನಿಗ್ರಹಗಳಿಗೆ ಒಳಗಾಗಿಸಿದ್ದರು. ಆದರೆ ೧೯೭೦ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಶೇಖ್ ಮುಜಿಬುರ್ ರೆಹಮಾನ್ ಅವರ ನೇತೃತ್ವದ ಜಾತ್ಯತೀತ, ರಾಷ್ಟ್ರೀಯವಾದಿ ಆವಾಮಿ ಲೀಗ್ ಪಕ್ಷ ಭಾರಿ ಬಹುಮತ ಗಳಿಸಿತು. ಆದರೆ, ಜನರಲ್ ಯಾಹ್ಯಾ ಖಾನ್ ನೇತೃತ್ವದ ಪಾಕಿಸ್ತಾನದ ಮಿಲಿಟರಿ ಆವಾಮಿ ಲೀಗ್ ಪಕ್ಷಕ್ಕೆ ಪಾಕಿಸ್ತಾನದ ಸರ್ಕಾರ ರಚಿಸಲು ಅನುಮತಿ ನೀಡಲು ನಿರಾಕರಿಸಿತು. ಈ ವೇಳೆಗೆ ಪರಿಸ್ಥಿತಿ ಉಲ್ಬಣಿಸಿ, ಆವಾಮಿ ಲೀಗ್ ಪೂರ್ವ ಪಾಕಿಸ್ತಾನಕ್ಕೆ ಸ್ವಾಯತ್ತತೆ ನೀಡುವಂತೆ ಆಗ್ರಹಿಸಿತು. ಆದರೆ ಪಾಕಿಸ್ತಾನಿ ಸೇನೆ ಬೆಂಗಾಲಿ ಜನರ ಮೇಲೆ ಭೀಕರ ದಾಳಿ ನಡೆಸಿ, ಲಕ್ಷಾಂತರ ನಾಗರಿಕರ ಹತ್ಯೆ ನಡೆಸಿ, ಮಾನವೀಯ ಬಿಕ್ಕಟ್ಟಿಗೆ ಹಾದಿ ಮಾಡಿತು.
ಪ್ರಧಾನಿ ಇಂದಿರಾ ಗಾಂಧಿಯವರ ನೇತೃತ್ವದಲ್ಲಿ, ಭಾರತ ಮುಕ್ತಿ ಬಾಹಿನಿ ಎಂಬ ಹೆಸರಿನ ಬಂಗಾಳಿ ಪ್ರತಿರೋಧ ಚಳವಳಿಗೆ ಅವಶ್ಯಕ ನೈತಿಕ ಮತ್ತು ವಸ್ತು ಬೆಂಬಲ ಒದಗಿಸಿತು. ಪೂರ್ವ ಪಾಕಿಸ್ತಾನದಲ್ಲಿ ನಡೆಯುತ್ತಿದ್ದ ಹತ್ಯಾಕಾಂಡದಿಂದ ಬಚಾವಾಗಲು ಓಡಿ ಬರುತ್ತಿದ್ದ ನಿರಾಶ್ರಿತರನ್ನು ರಕ್ಷಿಸುವ ನಿಟ್ಟಿನಲ್ಲಿ ಭಾರತ ತನ್ನ ಗಡಿಯನ್ನು ತೆರೆಯಿತು. ಭಾರತ ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ, ಹತ್ಯಾಕಾಂಡವನ್ನು ಸ್ಥಗಿತಗೊಳಿಸುವಂತೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿಕೊಂಡಿತು. ಆದರೆ ಪಾಕಿಸ್ತಾನವನ್ನು ಬೆಂಬಲಿಸಿದ್ದ ಚೀನಾ ಮತ್ತು ಅಮೆರಿಕಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದವು. ೧೯೬೪ರಲ್ಲೇ ತನ್ನ ಮೊದಲ ಅಣ್ವಸ್ತç ಪರೀಕ್ಷೆ ನಡೆಸಿದ್ದ ಚೀನಾ, ಈ ಸಂದರ್ಭದಲ್ಲಿ ಭಾರತಕ್ಕೂ ಅಣ್ವಸ್ತ್ರ ಬೆದರಿಕೆ ಒಡ್ಡಿತ್ತು.
ಈ ಎಲ್ಲ ಅಡ್ಡಿ ಆತಂಕಗಳ ಹೊರತಾಗಿಯೂ, ಸೋವಿಯತ್ ಒಕ್ಕೂಟದೊಡನೆ ಸ್ನೇಹ ಮತ್ತು ಸಹಕಾರದ ಒಪ್ಪಂದ ಮಾಡಿಕೊಂಡ ಬಳಿಕ, ಭಾರತ ಪಾಕಿಸ್ತಾನದ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಸುವ ಮಹತ್ವದ ನಿರ್ಧಾರ ಕೈಗೊಂಡಿತು. ಸೋವಿಯತ್ ಒಕ್ಕೂಟ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಪರವಾಗಿ ತನ್ನ ವೀಟೋ ಅಧಿಕಾರ ಬಳಸುವ ಭರವಸೆ ನೀಡಿತ್ತು. ಡಿಸೆಂಬರ್ ೩, ೧೯೭೧ರಂದು ಪಾಕಿಸ್ತಾನ ತಾನೇ ಮುಂದಾಗಿ ಭಾರತೀಯ ವಾಯುನೆಲೆಗಳ ಮೇಲೆ ವಾಯುದಾಳಿ ನಡೆಸಿ, ಪೂರ್ಣ ಪ್ರಮಾಣದ ಯುದ್ಧಕ್ಕೆ ನಾಂದಿ ಹಾಡಿತು.
ಇದಕ್ಕೆ ತೀಕ್ಷಣವಾಗಿ ಪ್ರತಿಕ್ರಿಯಿಸಿದ ಭಾರತ ಪೂರ್ವ ಮತ್ತು ಪಶ್ಚಿಮ ಎರಡೂ ದಿಕ್ಕುಗಳಲ್ಲಿ ದಾಳಿ ಆರಂಭಿಸಿ, ತನ್ನ ಗಡಿಗಳನ್ನು ಭದ್ರಪಡಿಸಿಕೊಂಡಿತು.
ಭಾರತೀಯ ಸೇನಾಪಡೆಗಳ ಪಾತ್ರ
ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳು ಅಸಾಧಾರಣ ಧೈರ್ಯ, ಕೌಶಲ ಮತ್ತು ಸಹಯೋಗ ಸಾಧಿಸಿ, ಯುದ್ಧ ತಂತ್ರವನ್ನು ಅತ್ಯಂತ ನಿಖರವಾಗಿ ಜಾರಿಗೆ ತಂದವು. ೧೯೭೧ರ ಯುದ್ಧದ ಅತ್ಯಂತ ಪ್ರಮುಖ ಸೇನಾ ನಾಯಕರಾಗಿದ್ದವರೆಂದರೆ ಆ ಸಂದರ್ಭದಲ್ಲಿ ಚೀಫ್ ಆಫ್ ದ ಆರ್ಮಿ ಸ್ಟಾಫ್ ಮತ್ತು ಸೇನಾಪಡೆಗಳ ಮುಖ್ಯಸ್ಥರ ಸಮಿತಿಯ ಅಧ್ಯಕ್ಷರಾಗಿದ್ದ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಶಾ. ಅವರನ್ನು ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಭಾರತದ ಗೆಲುವಿನ ಮತ್ತು ಬಾಂಗ್ಲಾದೇಶ ನಿರ್ಮಾಣದ ರೂವಾರಿ ಎಂದು ಕರೆಯಲಾಗಿದೆ. ಮಾಣಿಕ್ ಶಾ ಅವರು ಪೂರ್ವ ಪಾಕಿಸ್ತಾನದಲ್ಲಿದ್ದ ಪಾಕಿಸ್ತಾನಿ ಪಡೆಗಳಿಗೆ ಪೂರೈಕೆ ಸ್ಥಗಿತಗೊಳ್ಳುವಂತೆ ಮಾಡಿ, ಸೈನಿಕರಿಗೆ ಶರಣಾಗತಿಯ ಹೊರತು ಬೇರೆ ಯಾವುದೇ ಮಾರ್ಗವಿಲ್ಲದಂತೆ ಮಾಡಿದರು.
ಪಾಕಿಸ್ತಾನಿ ಸೇನೆಯ ಹತ್ಯಾಕಾಂಡ ಭೀತಿಯಿಂದ ಪೂರ್ವ ಪಾಕಿಸ್ತಾನದಿಂದ ಭಾರತಕ್ಕೆ ಓಡಿಬಂದಿದ್ದ ಒಂದು ಕೋಟಿ ನಿರಾಶ್ರಿತರ ಸುರಕ್ಷತೆ ಮತ್ತು ಭದ್ರತೆಯನ್ನು ಅವರು ಖಾತ್ರಿಪಡಿಸಿದರು.
ಸ್ಯಾಮ್ ಮಾಣಿಕ್ ಶಾ ಅವರು ತನ್ನ ವರ್ಚಸ್ವಿ ವ್ಯಕ್ತಿತ್ವ, ಬುದ್ಧಿವಂತಿಕೆಯ ಹಾಸ್ಯ ಮತ್ತು ವೃತ್ತಿಪರ ಬದ್ಧತೆಗೆ ಹೆಸರಾಗಿದ್ದರು. ಅವರನ್ನು ಅವರ ನಾಯಕತ್ವದಡಿ ಕಾರ್ಯಾಚರಿಸುವವರು, ಸಹೋದ್ಯೋಗಿಗಳು, ಹಿರಿಯರು ಸಮಾನವಾಗಿ ಗೌರವಿಸಿ, ಪ್ರೀತಿಸುತ್ತಿದ್ದರು. ಪೂರ್ವ ಪಾಕಿಸ್ತಾನವನ್ನು ಪಾಕಿಸ್ತಾನಿ ದುರಾಡಳಿತದಿಂದ ಮುಕ್ತಿಗೊಳಿಸಿದ್ದಕ್ಕೆ ಮಾಣಿಕ್ ಶಾ ಅವರನ್ನು ಭಾರತ ಮತ್ತು ಬಾಂಗ್ಲಾದೇಶದ ಜನರೂ ಸಹ ಅಪಾರವಾಗಿ ಪ್ರೀತಿಸುತ್ತಿದ್ದರು.
೧೯೭೩ರಲ್ಲಿ ಸೇನೆಯಿಂದ ನಿವೃತ್ತರಾದ ಮಾಣಿಕ್ ಶಾ ಅವರು ತಮಿಳುನಾಡಿನ ಕೂನೂರಿನಲ್ಲಿ ಪತ್ನಿ ಸಿಲೂ ಅವರೊಡನೆ ನೆಲೆಸಿದ್ದರು. ಅವರು ತನ್ನ ೯೪ನೇ ವಯಸ್ಸಿನಲ್ಲಿ, ಜೂನ್ ೨೭, ೨೦೦೮ರಂದು ನಿಧನರಾದರು.
೧೯೭೧ರ ಯುದ್ಧದಲ್ಲಿ ಭಾರತೀಯ ನೌಕಾಪಡೆಯೂ ಪ್ರಮುಖ ಪಾತ್ರ ನಿರ್ವಹಿಸಿದ್ದು, ಪೂರ್ವ ಪಾಕಿಸ್ತಾನಕ್ಕೆ ನೌಕಾ ದಿಗ್ಬಂಧನ ವಿಧಿಸಿ, ಪಾಕಿಸ್ತಾನಿ ಬಂದರುಗಳು ಮತ್ತು ಹಡಗುಗಳ ಮೇಲೆ ಭಾರಿ ದಾಳಿ ನಡೆಸತೊಡಗಿತು. ಇದರಲ್ಲಿ ಅತ್ಯಂತ ಗಮನಾರ್ಹ ನೌಕಾ ಕಾರ್ಯಾಚರಣೆ ಎಂದರೆ ಡಿಸೆಂಬರ್ ೪, ೧೯೭೧ರ ರಾತ್ರಿ ಕೈಗೊಂಡ ಆಪರೇಶನ್ ಟ್ರೈಡೆಂಟ್. ಇದರಲ್ಲಿ ಮೂರು ಭಾರತೀಯ ಕ್ಷಿಪಣಿ ಬೋಟ್‌ಗಳು, ಎರಡು ಫ್ರಿಗೇಟ್‌ಗಳು ಮತ್ತು ಒಂದು ಟ್ಯಾಂಕರ್ ಭಾಗವಹಿಸಿದ್ದವು.
ಈ ಕಾರ್ಯಾಚರಣೆಯಲ್ಲಿ ನಾಲ್ಕು ಪಾಕಿಸ್ತಾನಿ ನೌಕೆಗಳು ಮತ್ತು ಕರಾಚಿ ಇಂಧನ ಸಂಗ್ರಹಣಾ ಕೇಂದ್ರಗಳು ನಾಶಗೊಂಡವು. ಆದರೆ ಭಾರತ ಯಾವುದೇ ನಷ್ಟವನ್ನು ಅನುಭವಿಸಲಿಲ್ಲ. ಈ ಕಾರ್ಯಾಚರಣೆ ಎಷ್ಟರಮಟ್ಟಿಗೆ ಯಶಸ್ವಿಯಾಗಿತ್ತೆಂದರೆ, ಭಾರತ ಡಿಸೆಂಬರ್ ೪ನ್ನು ತನ್ನ ನೌಕಾಪಡೆಯ ದಿನವನ್ನಾಗಿ ಘೋಷಿಸಿತು.
ಭಾರತೀಯ ವಾಯುಪಡೆಯೂ ತನ್ನ ಪಾರಮ್ಯ ಮೆರೆದು, ಭಾರತೀಯ ಯುದ್ಧ ವಿಮಾನಗಳು ಪಾಕಿಸ್ತಾನಿ ವಾಯುನೆಲೆಗಳು, ರೇಡಾರ್ ಕೇಂದ್ರಗಳು ಮತ್ತು ಮಿಲಿಟರಿ ವ್ಯವಸ್ಥೆಗಳ ಮೇಲೆ ಕ್ಷಿಪ್ರ ಮತ್ತು ಕರಾರುವಾಕ್ ದಾಳಿಗಳನ್ನು ನಡೆಸಿದವು.
ಇದರಲ್ಲಿ ಅತ್ಯಂತ ಪ್ರಸಿದ್ಧ ವಾಯು ಕಾರ್ಯಾಚರಣೆ ಎಂದರೆ ಆಪರೇಶನ್ ಚೆಂಗಿಸ್ ಖಾನ್ ಎಂಬುದಾಗಿದ್ದು, ಈ ಹೆಸರಿನಲ್ಲಿ ಡಿಸೆಂಬರ್ ೩, ೧೯೭೧ರಂದು ಪಾಕಿಸ್ತಾನಿ ವಾಯುಪಡೆ ಭಾರತೀಯ ವಾಯುನೆಲೆಗಳ ಮೇಲೆ ದಾಳಿ ನಡೆಸಿ, ಪೂರ್ಣ ಪ್ರಮಾಣದ ಯುದ್ಧಕ್ಕೆ ಕಾರಣವಾಯಿತು.
ಇದಕ್ಕೆ ಪ್ರತಿಕ್ರಿಯಿಸಿದ ಭಾರತೀಯ ವಾಯುಪಡೆ ಅದೇ ರಾತ್ರಿ ಪಾಕಿಸ್ತಾನದ ಮೇಲೆ ಪ್ರತಿದಾಳಿ ಆರಂಭಿಸಿ, ೨೦ಕ್ಕೂ ಹೆಚ್ಚು ಪಾಕಿಸ್ತಾನಿ ಯುದ್ಧ ವಿಮಾನಗಳನ್ನು ನಾಶಪಡಿಸಿತು. ಈ ಪ್ರಕ್ರಿಯೆಯಲ್ಲಿ ಭಾರತ ಕೇವಲ ತನ್ನ ಎರಡು ಯುದ್ಧ ವಿಮಾನಗಳನ್ನು ಮಾತ್ರವೇ ಕಳೆದುಕೊಂಡಿತ್ತು. ಇದರೊಡನೆ, ಭಾರತೀಯ ವಾಯುಪಡೆ ಕಾರ್ಯಾಚರಣೆ ನಡೆಸುತ್ತಿದ್ದ ಭೂಸೇನೆ ಮತ್ತು ನೌಕಾಪಡೆಗಳಿಗೆ ವಾಯು ಬೆಂಬಲ ಒದಗಿಸಿತು ಮತ್ತು ಪೂರ್ವ ವಲಯಕ್ಕೆ ಪಡೆಗಳು ಮತ್ತು ಪೂರೈಕೆಗಳ ಏರ್ ಲಿಫ್ಟ್ ನಡೆಸಿತು.
ಬಾಂಗ್ಲಾದೇಶದ ಉದಯ
ಭಾರತೀಯ ಸೇನಾಪಡೆಗಳು ಮತ್ತು ಬಾಂಗ್ಲಾದ ಮುಕ್ತಿ ಬಾಹಿನಿ ಸೇನೆಗಳ ಸಂಯೋಜಿತ ದಾಳಿ ಪಾಕಿಸ್ತಾನಿ ಸೇನಾಪಡೆಗೆ ಭಾರೀಯಾಗಿ ಪರಿಣಮಿಸಿತು. ಪಾಕಿಸ್ತಾನಿ ಸೈನಿಕರು ಪೂರ್ವ ಪಾಕಿಸ್ತಾನದಲ್ಲಿ ಸಂಖ್ಯೆ, ಆಯುಧ ಎಲ್ಲದರಲ್ಲೂ ಹಿಂದುಳಿದು, ಏಕಾಂಗಿಯಾಗುವಂತಾಯಿತು. ಡಿಸೆಂಬರ್ ೧೬, ೧೯೭೧ರಂದು ಲೆಫ್ಟಿನೆಂಟ್ ಜನರಲ್ ಎಎಕೆ ನಯಾಜಿ ನೇತೃತ್ವದ ಪಾಕಿಸ್ತಾನಿ ಪಡೆಗಳು ಲೆಫ್ಟಿನೆಂಟ್ ಜನರಲ್ ಜಗ್‌ಜಿತ್ ಸಿಂಗ್ ನೇತೃತ್ವದ ಭಾರತೀಯ ಸೇನೆಯ ಮುಂದೆ ಢಾಕಾದ ರಾಮ್ನಾ ರೇಸ್ ಕೋರ್ಸ್ನಲ್ಲಿ ಅಪಾರ ಸಂಖ್ಯೆಯ ಬೆಂಗಾಲಿಗಳ ಸಮ್ಮುಖದಲ್ಲಿ ಶರಣಾದವು. ಈ ಶರಣಾಗತಿ ದಕ್ಷಿಣ ಏಷ್ಯಾದಲ್ಲೇ ಅತ್ಯಂತ ಬೃಹತ್ತಾಗಿದ್ದು, ೯೦,೦೦೦ಕ್ಕೂ ಹೆಚ್ಚು ಪಾಕಿಸ್ತಾನಿ ಸೈನಿಕರು ಯುದ್ಧ ಕೈದಿಗಳಾದರು.
ಮಾರ್ಚ್ ೧೯೭೧ರಲ್ಲಿ ಪಾಕಿಸ್ತಾನಿ ಸೇನೆ ಬಂಧಿಸಿ, ಪಶ್ಚಿಮ ಪಾಕಿಸ್ತಾನಕ್ಕೆ ಕರೆದೊಯ್ದಿದ್ದ ಶೇಖ್ ಮುಜಿಬುರ್ ರೆಹಮಾನ್ ಅವರ ನೇತೃತ್ವದಲ್ಲಿ ಅದೇ ದಿನದಂದು ತಾತ್ಕಾಲಿಕ ಬಾಂಗ್ಲಾದೇಶ ಸರ್ಕಾರ ಸ್ಥಾಪನೆಯಾಯಿತು. ಇದಾದ ಬಳಿಕ, ಬಾಂಗ್ಲಾದೇಶವನ್ನು ಸ್ವತಂತ್ರ ಮತ್ತು ಸಾರ್ವಭೌಮ ರಾಷ್ಟçವೆಂದು ಮೊದಲು ಗುರುತಿಸಿದ ರಾಷ್ಟç ಭಾರತವಾಗಿತ್ತು. ಡಿಸೆಂಬರ್ ೧೮, ೧೯೭೧ರಂದು ಭಾರತೀಯ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಇಂದಿರಾ ಗಾಂಧಿಯವರು ಯುದ್ಧ ಮುಕ್ತಾಯಗೊಂಡಿದೆ ಎಂದು ಘೋಷಿಸಿ, ಭಾರತ ಮಹತ್ವದ ಗೆಲುವ ಸಾಧಿಸಿದೆ ಎಂದು ಘೋಷಿಸಿದರು. ಅವರು ಬಾಂಗ್ಲಾದೇಶದ ಉದಯವನ್ನು ದಕ್ಷಿಣ ಏಷ್ಯಾದಲ್ಲಿ ನೂತನ ಬೆಳಗು ಎಂದು ಶ್ಲಾಘಿಸಿ, ಪ್ರಜಾಪ್ರಭುತ್ವ ಮತ್ತು ಜಾತ್ಯಾತೀತತೆಯ ಗೆಲುವು ಎಂದು ಬಣ್ಣಿಸಿದರು.
ವಿಜಯ ದಿವಸ ಎನ್ನುವುದು ಭಾರತ ಮತ್ತು ಬಾಂಗ್ಲಾದೇಶ ಎರಡೂ ರಾಷ್ಟ್ರಗಳಿಗೆ ಗೆಲುವು ಮತ್ತು ಕೃತಜ್ಞತೆಯ ದಿನವಾಗಿದ್ದು, ನ್ಯಾಯಯುತ ಕಾರಣಗಳಿಗೆ ಆರಂಭವಾದ ಯುದ್ಧ ಗೆಲುವಿನೊಂದಿಗೆ ಮುಕ್ತಾಯ ಕಂಡ ದಿನವೂ ಹೌದು. ೧೯೭೧ರ ಯುದ್ಧದಲ್ಲಿ ಭಾಗವಹಿಸಿ, ತಮ್ಮ ಪ್ರಾಣವನ್ನೇ ಅರ್ಪಿಸಿದ ಭಾರತೀಯ ಯೋಧರನ್ನು ಸ್ಮರಿಸುವ ಮತ್ತು ಪಾಕಿಸ್ತಾನಿ ದುರಾಡಳಿತಕ್ಕೆ ಬಲಿಯಾದ ಬಂಗಾಳಿಗಳಿಗೆ ಶ್ರದ್ಧಾಂಜಲಿ ಅರ್ಪಿಸುವ ದಿನವಿದು. ೧೯೭೧ರ ಯುದ್ಧ ಭಾರತೀಯ ಸೇನಾಪಡೆಗಳ ಧೈರ್ಯ, ಕೌಶಲ, ಮತ್ತು ಒಗ್ಗಟ್ಟಿನ ಉದಾಹರಣೆಯಾಗಿದ್ದು, ಭಾರತ ಸರ್ಕಾರದ ದೂರದೃಷ್ಟಿ, ನಾಯಕತ್ವ ಮತ್ತು ರಾಜತಾಂತ್ರಿಕ ಸಾಮರ್ಥ್ಯದ ಕೈಗನ್ನಡಿಯಾಗಿದೆ.
ಇದು ಅಂದಿನಿಂದಲೂ ಬಲವಾಗಿ ಬೆಳೆದುಬಂದಿರುವ ಭಾರತ ಬಾಂಗ್ಲಾದೇಶಗಳ ಸ್ನೇಹ ಸಂಬಂಧಗಳಿಗೆ ಸಾಕ್ಷಿಯಾಗಿದೆ. ಈ ದಿನದಂದು ೧೯೭೧ರ ಯುದ್ಧದ ಹೀರೋಗಳಿಗೆ ನಮನ ಸಲ್ಲಿಸುತ್ತಾ, ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸ್ಮರಿಸಬೇಕಿದೆ.